ಸ್ನಾತಕೋತ್ತರ ಪದವಿಯಲ್ಲಿನ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳು ಮತ್ತು ಅವರ ಅಭಿಪ್ರಾಯಗಳ ತುಲನಾತ್ಮಕ ಕಿರು ಸಂಶೋಧನೆ


{ಬೆಂಗಳೂರು ವಿಶ್ವಾವಿದ್ಯಾನಿಲಯದ ಸಹಯೋಗದೊಂದಿಗೆ}.

ಸಮಾಜ ಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಅಗತ್ಯ ಭಾಗಶಃ ಪೂರೈಕೆಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ಒಂದು ಕಿರು ನಿಬಂಧ.

ಸಂಶೋಧಕ: ಆನಂದ ಎಚ್.ಎನ್, ನಾಲ್ಕನೇ ಸೆಮಿಸ್ಟರ್ನ ಸಮಾಜಕಾರ್ಯ ವಿದ್ಯಾರ್ಥಿ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ

ಮಾರ್ಗದರ್ಶಕರು: ರೂಪರಾವ್.ಯು.
ಅಥಿತಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ

ಸ್ನಾತಕೋತ್ತರ ಪದವಿಯಲ್ಲಿನ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳು ಮತ್ತು ಅವರ ಅಭಿಪ್ರಾಯಗಳ ತುಲನಾತ್ಮಕ ಕಿರು ಸಂಶೋಧನೆ. {ಬೆಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ}.
ಅಧ್ಯಾಯ-1. ಪೀಠಿಕೆ:- (Introduction)
ಮಾನವ ಸಂಘ ಜೀವಿ. ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಲು ಪ್ರಯತ್ನಿಸುತ್ತಾನೆ. ಕುಟುಂಬ, ಸ್ನೇಹಿತರು, ಹಾಗೂ ಇತರರೊಂದಿಗೆ ಕಲೆತು-ಬೆರೆತು ಕೌಟುಂಬಿಕ ಜೀವನ ಸಾಗಿಸಲು ಯಾವುದಾದರು ವೃತ್ತಿಯಲ್ಲಿ ತೊಡಗಿರುತ್ತಾರೆ. ವಿಶಿಷ್ಟಚೇತನರೂ ಸಹ ಸಮಾಜದಿಂದ ವಿಮುಖಿಯಾಗಲಾರರು. ಅಂಗವೈಕಲ್ಯವು ಶಾಪವಲ್ಲ ಅದು ನೈಸರ್ಗಿಕ ಸೃಷ್ಟಿಯ ವೈವಿಧ್ಯತೆ ಮಾತ್ರ. ಇಂದು ನಮಗೆ ವಿಶ್ವದೆಲ್ಲೆಡೆ ವಿಶಿಷ್ಟಚೇತನ ವ್ಯಕ್ತಿಗಳು ಇರುವುದು ತಿಳಿದಿಯೇ ಇದೆ. ಅಂದಿನಿಂದ ಇಲ್ಲಿಯವರೆಗೂ ತಿಳಿದಿರುವವರು ನೈಸರ್ಗಿಕ ಸೃಷ್ಟಿಯನ್ನು ಒಪ್ಪದೆ ಅವರನ್ನು ಹೀನವಾಗಿ ಕಾಣುತ್ತಿರುವುದು ಒಂದು ರೀತಿಯ ಸಾಮಾಜಿಕ ಪಿಡುಗು ಎಂದರೆ ತಪ್ಪಲ್ಲ. ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಪದವಿ ಹಂತವನ್ನು ದಾಟಿ, ತಮ್ಮ ಅನೇಕ ಸಮಸ್ಯೆಗಳ ನಡುವೆಯೂ ಸ್ನಾತಕೋತ್ತರ ಪದವಿ ಮಾಡುತ್ತಿರುವ ಅನೇಕ ವಿಶಿಷ್ಟಚೇತನರನ್ನು ನಾವು ನೋಡಬಹುದು. ಇವರೆಲ್ಲರೂ ಅಕ್ಷರಸ್ಥರಾಗುವುದಕ್ಕಾಗಿ ತಮ್ಮ ದೈಹಿಕ ಸಮಸ್ಯೆಗಳನ್ನು ಸವಾಲೆಂದು ತಿಳಿದು ಛಲ ತೊಟ್ಟಿರುವುದು ಇವರಲ್ಲಿನ ಘನತೆಯ ಋಜುವನ್ನು ತೋರಿಸುತ್ತದೆ.
ಇಂದು ವಿಶಿಷ್ಟಚೇತನರಿಗೆ ಶಾಲೆಯ ಮಟ್ಟದಿಂದಲೆ ಅನೇಕ ಕಲ್ಯಾಣ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಜೊತೆಯಲ್ಲೆ ಅನೇಕ ಸರ್ಕಾರೇತರ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತೆಯೇ ಪಿ. ಯು. ಸಿ ಮತ್ತು ಪದವಿ ಹಂತಗಳಲ್ಲಿಯೂ ಅನೇಕ ಸೌಲಭ್ಯಗಳು ವಿಶಿಷ್ಟಚೇತನರಿಗೆ ಲಭ್ಯವಿದೆ. ಶಿಕ್ಷಣದ ವಿವಿಧ ಹಂತಗಳನ್ನು ಪೂರೈಸಿದ ನಂತರ, ತಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಲೆಕ್ಕಿಸದೆ ಸಾದಿಸುವ ಪಣ ತೊಟ್ಟು ಸ್ನಾತಕೋತ್ತರ ಪದವಿಯನ್ನು ಇಂದು ಸಾವಿರಾರು ವಿಶಿಷ್ಟಚೇತನರು ಮಾಡುತ್ತಿರುವುದು ಹೆಮ್ಮೆಯ ವಿಚಾರವಾದರೂ ಸಹ ಅವರಿಗೆ ಅಗತ್ಯ ಸೌಲಭ್ಯಗಳು ಲಭ್ಯವಿದೆಯೇ..? ಆ ಸೌಲಭ್ಯಗಳಿಂದ ಅವರಿಗೆ ಅನುಕೂಲವಾಗಿದೆಯೇ..? ಸರ್ಕಾರದಿಂದ ಹಾಗೂ ಇತರ ಸಂಸ್ಥೆಗಳಿಂದ ವಿಶಿಷ್ಟಚೇತನರಿಗೆ ಸಿಗುತ್ತಿರುವ ಕಲ್ಯಾಣ ಸೌಲಭ್ಯಗಳು ಅವರ ಅಬಿವೃದ್ದಿಗೆ ನಿಜಕ್ಕೂ ಸಹಕಾರಿಯಾಗಿದೆಯೇ..?ಆ ಸೌಲಭ್ಯಗಳಾದರೂ ಏನು..? ಇದರಿಂದ ವಿಶಿಷ್ಟಚೇತನರ ಕಲ್ಯಾಣ ಮತ್ತು ಸಬಲೀಕರಣ ಸಾದ್ಯವೇ? ಎಂಬುದರ ಸುಳಿವು ನೀಡಬಲ್ಲ ಚಿತ್ರಣವನ್ನು ಈ ಕಿರು ಸಂಶೋದನೆ ಒಳಗೊಂಡಿರುತ್ತದೆ ಎಂಬುದನ್ನು ಮೊದಲಿಗೆ ನಾನು ಇಲ್ಲಿ ಹೇಳಲು ಬಯಸುತ್ತೇನೆ.
ಇಂದು ಸ್ನಾತಕೋತ್ತರ ಪದವಿ ಓದುತ್ತಿರುವ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳು ವಿವಿಧ ಕಾರಣಗಳಿಂದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುವುದರ ಜೊತೆಗೆ, ಮಾನವ ಸಂಪನ್ಮೂಲ ಅಬಿವೃದ್ದಿಗೂ ದೊಡ್ಡ ಸವಾಲಾಗಿದೆ ಎಂದರೆ ತಪ್ಪಾಗಲಾರದು ಅಲ್ಲವೆ? ಅವರಿಗೆ ಅವರ ಕಲ್ಯಾಣಕ್ಕೆ ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ಆಯಾ ಸಂಬಂದಿಸಿದ ಕಾಲೇಜುಗಳು ಮತ್ತು ಸಂಸ್ಥೆಗಳು ಮಾಡುವುದು ಅತ್ಯಗತ್ಯ. ಇಂದು ಸರ್ಕಾರಗಳು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದಕ್ಕಾಗಿ ವಿಶಿಷ್ಟಚೇತನರ ಅಧಿನಿಯಮವನ್ನು ಸಹ ಜಾರಿಗೆ ತಂದು ಅನೇಕ ಕಲ್ಯಾಣ ಯೋಜನೆಗಳ ಮೂಲಕ ಅವರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ. ನಮ್ಮ ದೇಶದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಮತ್ತು ರಾಜ್ಯನೀತಿಯ ನಿರ್ದೇಶಕ ತತ್ತ್ವಗಳು ವಿಶಿಷ್ಟಚೇತನರ ಸಶಕ್ತಿಕರಣದ ಕಾರ್ಯಕ್ರಮಗಳಿಗೆ ಮಾರ್ಗದರ್ಶನವನ್ನು ನೀಡುತ್ತವೆ. ಪ್ರತಿಯೊಂದು ಕಾಲೇಜಿನ ಪ್ರವೇಶಾತಿಯಲ್ಲಿ 3% ರಷ್ಟು ಮೀಸಲಾತಿ ವಿಶಿಷ್ಟಚೇತನರಿಗೆ ಮೀಸಲಿಟ್ಟಿರುವುದು ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆಯೇ ಇವೆ. ಈ ಅಧಿನಿಯಮದಲ್ಲಿ ಅವರಿಗೆ ಪ್ರತ್ಯೇಕ ಗ್ರಂಥಾಲಯ{ಬ್ರೈಲ್ ಲಿಪಿಯಲ್ಲಿ} ಇರುವುದಕ್ಕೆ ಅವಕಾಶ ಕಲ್ಪಿಸಿದೆ. ಹಾಗೆಯೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಹಾಗೂ ವಿದ್ಯಾನಿಲಯದಲ್ಲೂ ಅವರಿಗೆ ಮೀಸಲಾತಿ ಕಲ್ಪಿಸುವಂತೆ ಈ ಅಧಿನಿಯಮದಲ್ಲಿ ತಿಳಿಸಲಾಗಿದೆ. ಅಲ್ಲದೆ ಅವರಿಗೆ ವಿದ್ಯಾರ್ಥಿ ವೇತನಗಳನ್ನು ಸಹ ನೀಡಲಾಗುತ್ತಿದೆ. ಅಗತ್ಯಬಿದ್ದಾಗ ಅವರಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ಸಹ ಒದಗಿಸಲಾಗುತ್ತಿದೆ. ಈ ತರಹದ ಅನೇಕ ಸೌಲಭ್ಯಗಳನ್ನು ಅವರಿಗೆ ಕಲ್ಪಿಸಲಾಗಿದೆ. ಕಲ್ಯಾಣ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸಿ ಅವುಗಳ ಪ್ರಯೋಜನ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬುದರ ಕುರಿತಾದದ್ದೇ ಈ ಸಂಶೋದನೆ.

ಈ ಹಿಂದೆ ವಿಶಿಷ್ಟಚೇತನರನ್ನು ಹಿಂಸಿಸಿ ಕೊಲ್ಲುವುದು ಹಾಗೂ ಹೊರಗೆ ಕಾಣಿಸದಂತೆ ಬಚ್ಚಿಡುವ ಪದ್ದತಿ ಜಾರಿಯಲ್ಲಿತ್ತು. ಇದರೊಂದಿಗೆ ಇವರು ಆತ್ಮಗೌರವ ಕಳೆದುಕೊಂಡು ಮಾನಸಿಕ ಹಿಂಸೆ ಅನುಭವಿಸಬೇಕಾಗಿತ್ತು. ಇದನ್ನು ತಪ್ಪಿಸಲು ಇಂದು ಅನೇಕ ಸೌಲಭ್ಯಗಳು ಲಭ್ಯವಿದೆ. ಈ ಸೌಲಭ್ಯಗಳ ಕುರಿತು ಜನತೆ, ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಕರು ಎಷ್ಟರಮಟ್ಟಿಗೆ ಅರಿವು ಹೊಂದಿದ್ದಾರೆ, ಅವರ ಸೌಲಭ್ಯಗಳು ಯಾವುವು ಎಂಬುದನ್ನು ತಿಳಿಸುವ ಮಹೋನ್ನತ ಧ್ಯೇಯವನ್ನು ಇಟ್ಟುಕೊಂಡು ಈ ಸಂಶೋಧನೆ ಕೈಗೊಳ್ಳಲಾಗಿದೆ. ಏನೆ ಆದರೂ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಪರಿಸ್ಥಿತಿಗಳು ಇಂದು ಸ್ವಲ್ಪಮಟ್ಟಿಗೆ ಸುಧಾರಣೆ ಆಗಿದ್ದರೂ ಅದು ಸಂಪೂರ್ಣವಾಗಿ ಸುಧಾರಣೆಯ ಹಂತ ತಲುಪಿಲ್ಲ. 'ಹಿಂದಿನ ಜನ್ಮದ ಪಾಪಗಳೆ ಅಂಗವಿಕಲತೆಗೆ ಕಾರಣ' ಎಂದು ಅನೇಕರು ಕೀಳರಿಮೆಯನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ಅನೇಕರು ಯಶಸ್ಸಿನ ಮೆಟ್ಟಿಲೇರಿ, ಸಾದನೆಯ ಹಾದಿಯಲ್ಲಿ ನಿಂತು ತಮ್ಮದೆ ಆದ ವರ್ಚಸ್ಸನ್ನು ಬೀರುತ್ತಿದ್ದಾರೆ. ವಿಶಿಷ್ಟಚೇತನರ ಸರ್ವ ಬೆಳವಣಿಗೆಗೆ ಕಾರಣವಾಗುವಂತಹ ಎಲ್ಲಾ ಸೌಲಭ್ಯಗಳನ್ನು ಕಲ್ಯಾಣ ಸೌಲಭ್ಯಗಳೆಂದು ನಾವು ಕರೆಯಬಹುದು. ಇದನ್ನು ಬಳಸಿಕೊಂಡು ಅವರೂ ತಮ್ಮ ವೈಯಕ್ತಿಕ ಬದಲಾವಣೆಗಳೊಂದಿಗೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ವಾವಲಂಬನೆ ಸಾದಿಸಲು ಸಾದ್ಯವಾಗುತ್ತದೆ.

ವಿಶಿಷ್ಟಚೇತನರು ಸಮಾಜದ ಒಂದು ಭಾಗ. ಅವರ ಕಲ್ಯಾಣವು ಸಹ ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶಿಷ್ಟಚೇತನರು ಉನ್ನತ ಶಿಕ್ಷಣದ ಹಂತಕ್ಕೆ ತಲುಪಿದಾಗ ಅವರಿಗೆ ಕೆಲವು ಅಗತ್ಯ ಸೌಲಭ್ಯಗಳನ್ನು ನೀಡುವುದು ಅತ್ಯಂತ ಅಗತ್ಯ ಹಾಗೂ ಅನಿವಾರ್ಯ. ಇಂದು ಪ್ರಪಂಚದಲ್ಲಿ 620 ಮಿಲಿಯನ್ ಜನರು ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ಒಟ್ಟು ಅಂಗವಿಕಲತೆಯ ಪೈಕಿ ಶೇ. 80 ರಷ್ಟು ಜನ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿಯೇ ಇದ್ದಾರೆ. ಭಾರತದಲ್ಲಿ 2011 ರ ಜನಗಣತಿಯ ಪ್ರಕಾರ ಶೇ. 5 ರಷ್ಟು ಮತ್ತು ಕರ್ನಾಟಕದಲ್ಲಿ 9,46,430 ಮಂದಿ ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಒಟ್ಟು ಅಂಗವಿಕಲತೆಯಲ್ಲಿ ಶೇ.2 ರಷ್ಟು ಅಂಗವಿಕಲರಿಗೆ ಮಾತ್ರ ಸೇವೆಗಳು ದೊರೆಯುತ್ತಿದ್ದು, ಸುಮಾರು ಶೇ.98 ರಷ್ಟು ಜನ ಸೇವೆಗಳಿಲ್ಲದೆ ವಂಚಿತರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳಿಗೆ ಅತಿ ಹೆಚ್ಚಿನ ಮಹತ್ವ ಇರುವುದನ್ನು ನಾವು ಕಾಣಬಹುದು. ಸೌಲಭ್ಯಗಳು ಇದ್ದರೆ ಸಾಲದು ಅವು ಅನುಷ್ಟಾನಕ್ಕೆ ಬರಬೇಕು. ಅದರಿಂದ ಆಗುವ ಎಲ್ಲ ಪ್ರಯೋಜನಗಳನ್ನು ವಿಶಿಷ್ಟಚೇತನರು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಆಗ ಮಾತ್ರ ವಿಶಿಷ್ಟಚೇತನರ ಕಲ್ಯಾಣ ಸಾದ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳು ಮತ್ತು ಅವುಗಳ ಅನುಷ್ಟಾನದ ಕುರಿತಾದ ಸಂಶೋಧನೆ ಅತ್ಯಂತ ಅಗತ್ಯವಾಗಿರುತ್ತದೆ.

ಅಧ್ಯಯನದ ದ್ಯೇಯೋದ್ದೆಶಗಳು (Objectives)
ವಿಶಿಷ್ಟಚೇತನರ ಕಲ್ಯಾಣ ಸೌಲಭ್ಯಗಳ ಕುರಿತು ತಿಳಿಯುವುದು.
ಕಲ್ಯಾಣ ಸೌಲಭ್ಯಗಳ ಅನುಷ್ಟಾನದ ಬಗ್ಗೆ ಅರಿವು ಮೂಡಿಸುವುದು.
ವಿಶಿಷ್ಟಚೇತನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳ ಅವಶ್ಯ ಇದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು.
ವಿಶಿಷ್ಟಚೇತನರ ಸಾಮಾಜಿಕ ಹಿನ್ನಲೆ ತಿಳಿಯುವುದು.
ವಿಶಿಷ್ಟಚೇತನರು ತಮ್ಮ ಕಾಲೇಜುಗಳಲ್ಲಿ ಕಲ್ಯಾಣ ಸೌಲಭ್ಯಗಳ ಬಗ್ಗೆ ಹೊಂದಿರುವ ತೃಪ್ತ ಮತ್ತು ಅತೃಪ್ತ ಅಂಶಗಳನ್ನು ತಿಳಿಯುವುದು.
ವಿಶಿಷ್ಟಚೇತನರಿಗೆ ಕೌಟುಂಬಿಕ ಸಹಾಯ ಹೇಗೆ ಸಿಗುತ್ತಿದೆ ಎಂಬುದನ್ನು ತಿಳಿಯುವುದು.
ವಿಶಿಷ್ಟಚೇತನರ ಜೀವನ ಶೈಲಿಯ ಚಲನಾತ್ಮಕ ಅಂಶಗಳನ್ನು ತಿಳಿಯುವುದು.


 ಈ ಸಂಶೋಧನೆಗೆ ಅನ್ವೈಸಲಾದ ಪರಿಭಾಷೆಗಳು:
೧. 'ಅಂಗವಿಕಲ' ದೇಹದ ಯಾವುದಾದರು ಒಂದು ಅಥವಾ ಹೆಚ್ಚು ಅಂಗಗಳು 40 ಕ್ಕಿಂತ ಹೆಚ್ಚು ಊನವಾಗಿದ್ದು ಅದರಿಂದ ತನ್ನ ದೈನಂದಿನ ಚಟುವಟಿಕೆಗಳನ್ನು ಸ್ವತ ಮಾಡಿಕೊಳ್ಳಲು ಅಸಮರ್ಥನಾಗಿದ್ದರೆ ಆ ವ್ಯಕ್ತಿಯನ್ನು ಅಂಗವಿಕಲ ಎಂದು ಕರೆಯಬಹುದು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿನ ಕುಂಠಿತ ಮತ್ತು ದುರ್ಬಲತೆಯ ಕಾರಣಗಳಿಂದ ಬಳಲುವವನನ್ನೂ ಸಹ ಅಂಗವಿಕಲ ಎನ್ನಬಹುದು
೨. 'ವಿಶಿಷ್ಟಚೇತನ' ದೈಹಿಕ/ಮಾನಸಿಕ ನ್ಯೂನ್ಯತೆಯನ್ನು ಸವಾಲೆಂದು ತಿಳಿದು ತನ್ನ ಪ್ರತಿಭೆಯ ಮೂಲಕ ಅಂಗವಿಕಲೇತರರ ಸಮಾನವಾಗಿ ಬಾಳಲು ಯತ್ನಿಸುವವ ವಿಶಿಷ್ಟಚೇತನ.
೩. 'ಉನ್ನತ ಶಿಕ್ಷಣ' ಪ್ರಾಥಮಿಕ, ಮಾದ್ಯಮಿಕ, ಪ್ರೌಡ ಶಿಕ್ಷಣ ಮತ್ತು ಪಿ.ಯು.ಸಿ ಶಿಕ್ಷಣಗಳ ಹಂತಗಳಲ್ಲಿ ಪಡೆದ ಶಿಕ್ಷಣವನ್ನು ಗುರುಗಳ ಸಹಾಯದಿಂದ ಹಾಗೂ ತನ್ನ ಅನುಭವದ ಆಧಾರದಲ್ಲಿ ವಿಶ್ಲೇಷಣೆ, ತರ್ಕ ಮತ್ತು ಮುಂತಾದವುಗಳಿಂದ ಜ್ಞಾನದ ವಿಶಾಲತೆಯನ್ನು ಅರ್ಥಮಾಡಿಕೊಂಡು ಜ್ನಾನವನ್ನು ಅರ್ಜಿಸಿಕೊಂಡು ತನ್ನ ಕಾರ್ಯ ಕ್ಷೇತ್ರಕ್ಕೋ ಅಥವಾ ನಾಡಿನ ಒಳಿತಿಗೋ ಅನ್ವೈಕೆಯ ತಂತ್ರವನ್ನು ಅರಿಯುವ ವ್ಯವಸ್ಥಿತ ಶಿಕ್ಷಣದ ಹಂತ.
೪. 'ಕಲ್ಯಾಣ ಯೋಜನೆ', ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆಗಾಗಿ ರೂಪಿಸಿ ಜಾರಿಗೊಳಿಸುವ ಯೋಜನೆ.
೫. ಬೆಂಗಳೂರು ವಿಶ್ವವಿದ್ಯಾನಿಲಯ' ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳ ಬೌಗೋಳಿಕ ಎಲ್ಲೆಯೊಳಗೆ ಉನ್ನತ ಶಿಕ್ಷಣದ ಉಸ್ತುವಾರಿಗಾಗಿ ಸರ್ಕಾರ ಕರ್ನಾಟಕ ವಿಶ್ವವಿದ್ಯಾಲಯಗಳ ಅಧಿನಿಯಮದನ್ವಯ ನಿಯೋಜಿಸಿರುವ ವಿದ್ಯಾ ಸಂಸ್ಥೆ.

ವಿಶಿಷ್ಟಚೇತನರ ವರ್ಗಿಕರಣ-( Classification:
೧. ದೈಹಿಕ ವಿಶಿಷ್ಟಚೇತನರು-ಮೂಳೆಗಳು, ಕೀಲುಗಳು ಹಾಗೂ ಮಾಂಸ ಖಂಡಗಳ ದೋಷದಿಂದಾಗಿ ಅವುಗಳ ಚಲನೆಗೆ ತೊಂದರೆಗೆ ಒಳಗಾಗಿರುವವರು, ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗಿ ಇಲ್ಲವೆ ನರದೌರ್ಬಲ್ಯದಿಂದ ಚಲನೆಗೆ ತೊಂದರೆಗೆ ಒಳಪಟ್ಟಿರುವವರು.
೨. ದೃಷ್ಟಿದೋಷ ಉಳ್ಳವರು- ಪೂರ್ಣ ದೃಷ್ಟಿ ಶಕ್ತಿ ಇಲ್ಲದಿರುವವರು ಅಥವಾ ಕನ್ನಡಕ ಹಾಕಿಕೊಂಡಾಗಲೂ ದೃಷ್ಟಿ ಶಕ್ತಿ 6/60 ಅಥವಾ 20/200 ಸ್ನೆಲೇನ್ ಮೀರದ ದೃಷ್ಟಿಶಕ್ತಿ ಅಥವಾ 20 ಕೋನದಷ್ಟೇ ಕಾಣುತ್ತಿರುವವರು.
೩. ಶ್ರವಣದೋಷ ಉಳ್ಳವರು- ಪರಸ್ಪರ ಮಾತನಾಡುವ ಸಂದರ್ಭದಲ್ಲಿ 70 ಡೆಸಿಬಲ್ ಅಥವಾ ಅದಕ್ಕಿಂತ ಹೆಚ್ಚು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡವರು.
 ೪. ಬುದ್ದಿಮಾಂದ್ಯರು- ಮಾನಸಿಕ ಬೆಳವಣಿಗೆ ಕುಂಠಿತ ಅಥವಾ ಅಪೂರ್ಣವಾಗಿರುವ, ಬುದ್ದಿಶಕ್ತಿಯ ಮಟ್ಟ ಸಾಧಾರಣ ಮಟ್ಟಕ್ಕಿಂತ ಕಡಿಮೆ ಇರುವ ವ್ಯಕ್ತಿಗಳು.
 ೫. ಮಾನಸಿಕ ಅಸ್ವಸ್ಥರು -ಯಾವುದೇ ಇತರ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವವರು.
 ೬. ಬಹುವಿಧ ಅಂಗವಿಶಿಷ್ಟತೆಯುಳ್ಳವರು-ಒಂದಕ್ಕಿಂತ ಹೆಚ್ಚು ಬಗೆಯ ಅಂಗವಿಕಲತೆ ಹೊಂದಿರುವವರು.
 ೭. ಕುಷ್ಟರೋಗ ನಿವಾರಿತ ವಿಶಿಷ್ಟಚೇತನರು-ಕೈ ಕಾಲುಗಳಲ್ಲಿ ಊನತೆ ಉಳ್ಳವರು ಹಾಗೂ ಸಂವೇದನಾ ಶಕ್ತಿಹೀನರು.

 ವಿಶಿಷ್ಟಚೇತನರಿಗೆ ಸಂಬಂದಿಸಿದ ಇತರ ಪರಿಕಲ್ಪನೆಗಳು:
ವಿಶಿಷ್ಟಚೇತನರ ಅಧಿನಿಯಮ
ವಿಶಿಷ್ಟಚೇತನರಿಗೆ ಸಂಬಂದಿಸಿದ ನಿಯಮಗಳು
ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಸಬಲೀಕರಣ
ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಜೀವನ ಚಿತ್ರಣ
ಸಮಾಜದಲ್ಲಿ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಪಾತ್ರ

 ಬೆಂಗಳೂರು ವಿಶ್ವವಿದ್ಯಾಲಯದ ವಿಶಿಷ್ಟಚೇತನರಿಗಿರುವ ಸೌಲಭ್ಯಗಳು:-
ನಮ್ಮ ದೇಶದ ಸಂವಿಧಾನದ ಭಾಗ IV. ರಾಜ್ಯನೀತಿಯ ನಿರ್ದೇಶಕ ತತ್ವದ 46ನೆ ವಿಧಿಯಲ್ಲಿ ನಿರ್ದೇಶಿಸಲಾದಂತೆ ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿಗಳ ಸಂವರ್ಧನೆಗೆ ವಿಶ್ವವಿದ್ಯಾಲಯವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಸೌಲಭ್ಯಗಳನ್ನು ನೀಡಿದೆ. ಇದು ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳು ಸಾಮಾಜಿಕ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಮುಕ್ತರಾಗಲು ಕಾರಣವಾಗಿದೆ. ಈ ಕೆಳಗೆ ಈ ವಿಶ್ವವಿದ್ಯಾಲಯದಲ್ಲಿ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಬರೆಯಲಾಗಿದೆ.

 ವಸತಿ ಸೌಲಭ್ಯ:-
ವಿಶಿಷ್ಟಚೇತನರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರಿನ ಹೊರಬಾಗದ ಮತ್ತು ತೀರಾ ಅಗತ್ಯವಾದ ಪ್ರಶಿಕ್ಷಣಾರ್ಥಿಗಳು ಇಲ್ಲಿ ಪ್ರವೇಶ ಪಡೆಯಬಹುದು. ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಅಭ್ಯರ್ಥಿಗಳಿಗೆ ಕೇವಲ ಎರಡು ವರ್ಷಗಳಿಗೆ ಮಾತ್ರ ವಿದ್ಯಾರ್ಥಿನಿಲಯದಲ್ಲಿ ಸೌಲಭ್ಯವನ್ನು ಒದಗಿಸಲಾಗುವುದು. ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿಗಳನ್ನು ವಿದ್ಯಾರ್ಥಿ ಕ್ಷೇಮಾಭಿವೃದ್ದಿ ನಿರ್ದೇಶಕರ ಕಛೇರಿ, ಙ್ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆಯಬಹುದು. ಎಲ್ಲಾ ವಿದ್ಯಾರ್ಥಿನಿಲಯದ ವಸತಿಗರು ಕೈಪಿಡಿಯಲ್ಲಿ ಸೂಚಿಸಿದ ನಿಯಮಾವಳಿ ಮತ್ತು ಶಿಸ್ತಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರಕ್ಕೆ ಪ್ರವೇಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಸೌಲಭ್ಯ ದೊರಕುವುದಿಲ್ಲ.

 ಕ್ರೀಡೆಗಳಿಗೆ ಪ್ರೋತ್ಸಾಹ:-
ಬೆಂಗಳೂರು ವಿಶ್ವವಿದ್ಯಾನಿಲಯವು ಪ್ರಶಿಕ್ಷಣಾರ್ಥಿಗಳಲ್ಲಿ ವಿವಿಧ ಕ್ರೀಡೆಗಳ ಅವಶ್ಯಕತೆಗಳನ್ನು ಪೂರೈಸಲು ಜ್ಞಾನಭಾರತಿ ಆವರಣ ಮತ್ತು ಸೆಂಟ್ರಲ್ ಕಾಲೇಜು ಆವರಣಗಳಲ್ಲಿ ಸುಧಾರಿತ ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ. ಜ್ಞಾನಭಾರತಿ ಆವರಣದಲ್ಲಿ ಹೊರಾಂಗಣ ಆಟಗಳಾದ ಅಥ್ಲೆಟಿಕ್ಸ್, ಈಜು, ಹಾಕಿ, ಪುಟ್ಬಾಲ್, ವಾಲಿಬಾಲ್, ಕ್ರಿಕೆಟ್, ಹಾಗೂ ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಬ್ಯಾಟ್ ಮಿಟನ್, ಫಿಟ್ನೆಸ್ ಸೆಂಟರ‍್, ಯೋಗ, ಇತ್ಯಾದಿ ಕ್ರೀಡಾ ಸೌಲಭ್ಯಗಳಿವೆ, ಅದರ ಜೊತೆಗೆ ರಾಷ್ಟ್ರೀಯ ಹಾಗೂ ವಿಶ್ವ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದ ಕ್ರೀಡಾಪಟುಗಳಿಗೆ 'ನಗದು ಬಹುಮಾನ'ಹಾಗೂ ಸ್ವರ್ಣಪದಕಗಳನ್ನು ನೀಡಿ ಗೌರವಿಸಲಾಗುತ್ತದೆ. ಕ್ರೀಡೆಗಳಿಗೆ ಸಂಬಂದಿಸಿದ ಈ ಎಲ್ಲಾ ಸೌಲಭ್ಯಗಳು ವಿಶಿಷ್ಟಚೇತನರಿಗೂ ಲಭ್ಯವಿದೆ. ಇದರ ಸದುಪಯೋಗವನ್ನು ಅವರು ಪಡೆದುಕೊಳ್ಳಬಹುದು.

 ಗ್ರಂಥಾಲಯ ಸೌಲಭ್ಯ:-
ಬೆಂಗಳೂರು ವಿಶ್ವವಿದ್ಯಾನಿಲಯದ ಸುಧಾರಿತ ಗ್ರಂಥಾಲಯವು ಜ್ಞಾನಭಾರತಿ ಆವರಣ ಮತ್ತು ಸೆಂಟ್ರಲ್ ಆವರಣದಲ್ಲಿದ್ದು ಕ್ರಮವಾಗಿ ವಿವಿಧ ವಿಷಯಗಳಿಗೆ ಸಂಬಂದಿಸಿದಂತೆ ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳು, ನಿಯತಕಾಲಿಕೆಗಳು, ಸಂದರ್ಭ ಗ್ರಂಥಗಳು ಹಾಗೂ ಸಂಶೋಧನಾ ಮಹಾಪ್ರಬಂಧಗಳನ್ನು ಹೊಂದಿರುತ್ತದೆ. ವಿಶ್ವವಿದ್ಯಾನಿಲಯದ ಗ್ರಂಥಾಲಯವು 281 ವಿಷಯ ನಿಯತಕಾಲಿಕೆಗಳನ್ನು ಖರೀದಿಸುತ್ತಿದ್ದು, ಅವುಗಳಲ್ಲಿ ಸುಮಾರು 110 ನಿಯತಕಾಲಿಕೆಗಳು ವಿಶ್ವ ಮಟ್ಟದ ನಿಯತಕಾಲಿಕೆಗಳಾಗಿವೆ. ಇವುಗಳ ಜೊತೆಗೆ ಬ್ರೈಲ್ ಲಿಪಿಯಲ್ಲಿರುವ ಅನೇಕ ಪುಸ್ತಕಗಳು ಸಹ ಇದೇ ಗ್ರಂಥಾಲಯದಲ್ಲಿ ಲಭ್ಯವಿದೆ. ವಿಶಿಷ್ಟಚೇತನರಿಗೆ ಇನ್ನೂ ಅನುಕೂಲ ಆಗಲೆಂದು 'ಯುಜಿಸಿ ಇನ್ಪೋನೆಟ್' ಕಾರ್ಯಕ್ರಮದ ಅಡಿ ಕಂಪ್ಯೊಟರ‍್ ಸೌಲಭ್ಯ ಕಲ್ಪಿಸಲಾಗಿದೆ.

ಸಾರಿಗೆ ಸೌಲಭ್ಯ:-
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಪ್ರಶಿಕ್ಷಣಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಕಡೆಗಳಿಂದ ಅವಶ್ಯಕತೆಗಳಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ವಿಶಿಷ್ಟಚೇತನರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾನಿಲಯವು B. M. T. C. ಸೇವೆಯ ಮುಖಾಂತರ ನಗರದ ವಿವಿಧ ಸ್ಥಳಗಳಿಂದ ಜ್ಞಾನಭಾರತಿಗೆ ತಲುಪಲು ವ್ಯವಸ್ಥೆ ಮಾಡಿದೆ.

 ಮೀಸಲಾತಿ ಸೌಲಭ್ಯ:-
ವಿಶಿಷ್ಟಚೇತನರಿಗೆ ಕಾಲೇಜಿನ ಪ್ರವೇಶಾತಿಯಲ್ಲಿ 3% ಮಿಸಲಾತಿಯನ್ನು ಕಲ್ಪಿಸಲಾಗಿದೆ. ಇದು ಕಡ್ಡಾಯವಾದದ್ದು ಆಗಿದೆ. ವಿಶಿಷ್ಟಚೇತನರು ಅಂಗ ವೈಕಲ್ಯದ ಪ್ರಮಾಣಪತ್ರದ ಬಗೆಗೆ ಸರ್ಕಾರಿ ವೈದ್ಯರು / ಎಂ. ಒ. ಗಳಿಂದ ಪ್ರಮಾಣಪತ್ರವನ್ನು ಒದಗಿಸಿ ಈ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಇರುತ್ತದೆ.

 ವಿಶಿಷ್ಟಚೇತನರ ಕೋಟ:-
ಕರ್ನಾಟಕ ವಿದ್ಯಾರ್ಥಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ವಿಧ್ಯಾರ್ಥಿ ಮತ್ತು ಇದೇ ಅರ್ಥ ಬರುವಂತೆ ಹಂಚಿಕೊಂಡಿರುವ ವ್ಯಕ್ತಿಗಳು ಜೊತೆಗೆ ಅಶಕ್ತರಾದವರಿಗೆ ಈ ಕೋಟದಡಿಯಲ್ಲಿ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. (ಸೆಂಟ್ರಲ್ ಆಕ್ಟ್ 1 ಆಫ್ 1996)

ಬಿ. ಪಿ. ಎಲ್. ಪ್ರಶಿಕ್ಷಣಾರ್ಥಿಗಳಿಗೆ "ಮಾನ್ಯ ಕುಲಪತಿಗಳ ಶ್ರೇಷ್ಟತೆಯ ವಿದ್ಯಾರ್ಥಿವೇತನ":-ಶ್ರೇಷ್ಟತೆಯನ್ನು ಹೊಂದಿರುವ ಪ್ರಶಿಕ್ಷಣಾರ್ಥಿಗಳು ಬಡತನ ರೇಖೆಯ ಕೆಳಗೆ ಇದ್ದು ಇವರ ವಾರ್ಷಿಕ ಆದಾಯ ರೂ. 11. 500 ಯಿಂದ ಕಡಿಮೆ ಇರುವ ಪ್ರಶಿಕ್ಷಣಾರ್ಥಿಗಳಿಗೆ "ಮಾನ್ಯ ಕುಲಪತಿಗಳ ಶ್ರೇಷ್ಟತೆಯ ವಿದ್ಯಾರ್ಥಿವೇತನ" ವನ್ನು ಪ್ರತಿ ವರ್ಷ ಕೊಡಲಾಗುತ್ತದೆ. ಈ ಸೌಲಭ್ಯ ವಿಶಿಷ್ಟಚೆತನರು ಸೇರಿದಂತೆ ಎಲ್ಲರಿಗೂ ಲಭ್ಯವಿದೆ.

 ಅನುಲೇಖಕರ ಸೌಲಭ್ಯ:-
ವಿಶಿಷ್ಟಚೇತನರಿಗೆ ಅನುಕೂಲ ಆಗಲೆಂದು ಈ ಸೌಲಭ್ಯ ಕಲ್ಪಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಸಾಮಾನ್ಯ ಪ್ರಶಿಕ್ಷಣಾರ್ಥಿಗಳಿಗೆ 3 ಘಂಟೆಯ ಸಮಯ ನೀಡಿದರೆ, ವಿಶಿಷ್ಟಚೇತನರಿಗೆ ಪ್ರತಿ ಘಂಟೆಗೆ ೨೦ ಕಡಿಮೆಯಲ್ಲದಷ್ಟು ನಿಮಿಷಗಳ ಕಾಲ ಹೆಚ್ಚುವರಿ ಸಮಯ ನೀಡಿ ಅವರಿಗೆ ಅನುಕೂಲ ಮಾಡಿಕೊಡಲಾಗಿದೆ.

 ವಿಷಯದ ಸ್ಕಾಲರ‍್ ಶಿಪ್ ಗಳು:-
ಹಿಂದಿನ ವರ್ಷ ಅರ್ಹ ಪರೀಕ್ಷೆಯಲ್ಲಿ ಸಂಬಂದಿಸಿದ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಂದು ತರಗತಿಯ ಒಬ್ಬ ಪ್ರಶಿಕ್ಷಣಾರ್ಥಿಗೆ ಈ ಸ್ಕಾಲರ‍್ ಶಿಪ್ ಲಭ್ಯವಿದೆ. ಈ ಪ್ರಶಿಕ್ಷಣಾರ್ಥಿಗೆ ಶಿಕ್ಷಣದ ಪೀಸು, ಲ್ಯಾಬ್ ಪೀಸಿನಲ್ಲಿ ರಿಯಾಯಿತಿ ಇದ್ದು, ವರ್ಷಕ್ಕೆ 600 ರೂ. ಕೊಡಲಾಗುತ್ತದೆ. ಇದನ್ನು ವಿಶ್ವವಿದ್ಯಾನಿಲಯದ ಆಡಳಿತದ ಅಧೀನದಲ್ಲಿ ನೋಡಿಕೊಳ್ಳಲಾಗುತ್ತದೆ.

ವಿಶಿಷ್ಟಚೇತನರಿಗೆ ಸಾಧನ ಸಲಕರಣೆಗಳು:-
ಇಲ್ಲಿಯವರೆಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಯಾವುದೇ ಸಾಧನ ಸಲಕರಣೆಗಳನ್ನು ನೀಡುತ್ತಿರಲಿಲ್ಲ. ಆದರೆ ೨೦೧೨ ರಿಂದ ವಿಶಿಷ್ಟಚೇತನರಿಗೆ ತ್ರಿಚಕ್ರ ವಾಹನ ನೀಡುವ ಯೋಜನೆಯನ್ನು SC, ST ಘಟಕ ರೂಪಿಸುತ್ತಿದೆ. ಇದು ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಯೋಜನೆಯಾಗಿದೆ.

 ಕುಡಿಯುವ ನೀರಿನ ಸೌಲಭ್ಯ:-
 ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರು ಸೇರಿದಂತೆ ಎಲ್ಲರಿಗೂ ಅನುಕೂಲ ಆಗುವಂತಹ ಉತ್ತಮ ನೀರಿನ ಸೌಲಭ್ಯವನ್ನು ಎಲ್ಲಾ ವಿಭಾಗಗಳಲ್ಲಿಯೂ ಸಿಗುವಂತಹ ವ್ಯವಸ್ಥೆ ಮಾಡಿದೆ.

 ಭದ್ರತೆ ಮತ್ತು ಶೌಚಾಲಯದ ಸೌಲಭ್ಯ:-
 ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ 46 ವಿಭಾಗಗಳಲ್ಲಿಯೂ ಭದ್ರತೆ ಒಳಗೊಂಡಂತೆ, ಉತ್ತಮವಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಶೌಚಾಲಯಗಳನ್ನು ವಿಶಿಷ್ಟಚೇತನರು ಸುಲಭವಾಗಿ ಉಪಯೋಗಿಸಿಕೊಳ್ಳಲು ಅನುಕೂಲ ಆಗುವಂತೆ ನಿರ್ಮಿಸಲಾಗಿದೆ.
ಹೀಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಅನೇಕ ಕಲ್ಯಾಣ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಬಹುದು.

ಅಧ್ಯಾಯ-2. ಸಾಹಿತ್ಯ ಪುನರ‍್ ವಿಮರ್ಶೆ(Review of Literature)
ಈ ಅಧ್ಯಯನದಲ್ಲಿ ಸಾಹಿತ್ಯವನ್ನು ಪರಾಮರ್ಶಿಸುತ್ತಿರುವ ಉದ್ದೆಶವೆನೆಂದರೆ, ಇದಕ್ಕೆ ಸಂಬಂದಿಸಿದ ಹಲವಾರು ವಿಷಯಗಳನ್ನು ಸಂಗ್ರಹಿಸಿ ಅವುಗಳನ್ನು ಈ ಸಂಶೋದನೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಸಲುವಾಗಿ ಮತ್ತು ಮಾಹಿತಿಯ ಸತ್ಯವನ್ನು ಅರಿತು ಸಂಶೋಧನೆಯನ್ನು ಯಶಸ್ವಿಯಾಗಿಸುವುದೇ ಆಗಿದೆ.

ಮಾಹಿತಿ ಮೂಲಗಳು:-
ವಿಶಿಷ್ಟಚೇತನರ ಕಲ್ಯಾಣ ಇಲಾಖೆಯಲ್ಲಿ ದೊರೆತ ಅನೇಕ ಕೈಪಿಡಿಗಳು,
ವಿಶಿಷ್ಟಚೇತನರ ಮೇಲೆ ಬೆಳಕು ಚೆಲ್ಲುವ ಲೇಖನಗಳುಳ್ಳ ನಿಯತಕಾಲಿಕೆಗಳು,
 ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡ ಕೆಲವು ಲೇಖನಗಳು,
ವಿಶಿಷ್ಟಚೇತನರಿಗೆ ಸಂಬಂಧಿಸಿದ ಅಧಿನಿಯಮಗಳು,
ಬೆಂಗಳೂರು ವಿಶ್ವವಿದ್ಯಾಲಯದ ಯೋಜನಾ ಪತ್ರಿಕೆಗಳು.

ವಿಶಿಷ್ಟಚೇತನರ ಮೇಲೆ ಬೆಳಕು ಚೆಲ್ಲುವ ಲೇಖನಗಳುಳ್ಳ ನಿಯತಕಾಲಿಕೆಗಳು:
೧: ಸಮಾಜ ಕಾರ್ಯದ ಹೆಜ್ಜೆಗಳು ಎಂಬ ಮಾಸಿಕ ಪತ್ರಿಕೆಯ ಡಿಸೆಂಬರ‍್ ಸಂಚಿಕೆಯಲ್ಲಿ ವಿಶಿಷ್ಟಚೇತನರ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಅಂಕಣದಲ್ಲಿ ವಿಶಿಷ್ಟಚೇತನರಿಗೆ ಸಹಾಯ ಹಸ್ತದ ಕೊರತೆ ಇದೆ. ಅವರಿಗೆ ಇನ್ನೂ ಅನೇಕ ಕಲ್ಯಾಣ ಸೌಲಭ್ಯಗಳ ಅಗತ್ಯವಿದೆ ಎಂಬುದನ್ನು ಅವರು ಕೆಲವೊಂದು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಆ ಸಾಧಕರ ಅಂಗವೈಕಲ್ಯದ ಸ್ವರೂಪವನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.
(೧) ಪ್ಯಾರಡೈಸ್ ಲಾಸ್ಟ್ ಕೃತಿಯ ರಚನಕಾರ ಜಾನ್ ಮಿಲ್ಟನ್ ಒಬ್ಬ ಅಂದ.
(೨) ಅಮೇರಿಕಾದ ಪ್ರಖ್ಯಾತ ವಿಜ್ಞಾನಿ ಸ್ಟಿಫನ್ ಹಾಕಿನ್ಸ್ ಸಹ ಬಹುರೂಪಿ ಅಂಗವಿಶಿಷ್ಟದವರು.
(೩) ಅಮೇರಿಕಾದ ಮಾಜಿ ಅದ್ಯಕ್ಷ ಪ್ರಾಂಕ್ಲಿನ್ ಡಿ ರೂಸ್ ವೆಲ್ಟ್ ಸಹ ಪೋಲಿಯೋ ರೋಗಕ್ಕೆ ತುತ್ತಾಗಿದ್ದವರು.
(೪) ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಸಹ ವಿಶಿಷ್ಟಚೇತನರೇ ಆಗಿದ್ದರು.
(೫) ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಗಿರೀಶ್ ಸಹ ವಿಶಿಷ್ಟಚೇತನರೇ.
ಈ ಮಾಸಿಕ ಪತ್ರಿಕೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ ವಿಶಿಷ್ಟಚೇತನರಲ್ಲೂ ಸಾಧಿಸುವ ಛಲವಂತರಿದ್ದಾರೆ, ಅವರಿಗೆ ಸರಿಯಾದ ಸೌಲಭ್ಯಗಳು ಲಭ್ಯವಾಗಬೇಕು ಎಂಬುದನ್ನು ಒತ್ತಿ ಹೇಳಿದ್ದು ಔಚಿತ್ಯವಾಗಿತ್ತು ಎಂಬುವುದು.

೨: ಸಮಾಜ ಕಾರ್ಯದ ಹೆಜ್ಜೆಗಳು ಎಂಬ ಮಾಸಿಕ ಪತ್ರಿಕೆಯ ನವೆಂಬರ‍್ ಸಂಚಿಕೆಯಲ್ಲಿ ವಿಶಿಷ್ಟಚೇತನರ ಕಲ್ಯಾಣಕ್ಕೆ ಸಂಬಂದಿಸಿದಂತೆ CBR ನೆಟ್ ವರ್ಕ್ ಬಗ್ಗೆ ಲೇಖನ ಬರೆಯಲಾಗಿದೆ. ಅದರ ಜೊತೆಗೆ ಈ ಸಂಚಿಕೆಯಲ್ಲಿ ಡಾ: ಇಂದುಮತಿರಾವ್ ಎಂಬುವರ ಬಗ್ಗೆಯೂ ಬರೆಯಲಾಗಿದೆ.
 ಇವರು ವಿಶಿಷ್ಟಚೇತನರ ಕಲ್ಯಾಣಕ್ಕೆ ಮತ್ತು ಅವರ ಸೇವೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ ಎಂಬುದನ್ನು ಈ ಲೇಖನವನ್ನು ಓದಿದಾಗ ಎಂತವರಿಗೂ ಗೊತ್ತಾಗುತ್ತದೆ.
ವಿಶಿಷ್ಟಚೇತನರಿಗಾಗಿ ಕಾರ್ಯ ನಿರ್ವಹಿಸುತ್ತಿರುವ CBR ಎಂಬ ಸರ್ಕಾರೇತರ ಸಂಸ್ಥೆಯ ಕೆಲ ಕಾರ್ಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಅ. ವಿಶಿಷ್ಟಚೇತನರಿಗಾಗಿ ಅನೇಕ ತರಭೇತಿ ಕೋರ್ಸುಗಳನ್ನು ನಡೆಸುವುದು.
ಆ. ಸಂಶೋದನಾ ಕಾರ್ಯಕ್ರಮಗಳನ್ನು ಮಾಡುವುದು.
ಇ. ಗ್ರಾಮೀಣ ವಿಶಿಷ್ಟಚೇತನರ ನೋಂದಣಿ ಮಾಡುವುದು.
ಈ. ವಿಶಿಷ್ಟಚೇತನರಿಗಾಗಿ ಸಹಾಯವಾಣಿ {9880935130} ಸ್ಥಾಪಿಸಿ ಸಂಕಷ್ಟದಲ್ಲಿ ನೆರವಾಗುವುದು.
 ಹೀಗೆ ವಿಶಿಷ್ಟಚೇತನರ ಕಲ್ಯಾಣಕ್ಕೆ CBR ಸರ್ಕಾರೇತರ ಸಂಸ್ಥೆ ಶ್ರಮಿಸುತ್ತಿರುವುದನ್ನು ನಾವು ಕಾಣಬಹುದು.

೩: ವಿಶಿಷ್ಟಚೇತನರಿಗೆ ಕೌನ್ಸಲಿಂಗ್ ನೀಡುವುದರ ಮೂಲಕ ಅವರಲ್ಲಿ ದಕ್ಷತೆ ಹೇಗೆ ಹೆಚ್ಚಿಸಬಹುದು ಎಂಬುದನ್ನು ಕುರಿತು
ಸಮಾಜ ಕಾರ್ಯದ ಹೆಜ್ಜೆಗಳು ಎಂಬ ಮಾಸಿಕ ಪತ್ರಿಕೆಯ ಜೂನ್ 2012 ರ ಸಂಚಿಕೆಯಲ್ಲಿ ಒಂದು ಅಂಕಣವಾಗಿ ಬಂದಿದೆ. ಇಲ್ಲಿ ವಿಶಿಷ್ಟಚೇತನರಿಗೆ ಕೌನ್ಸಲಿಂಗ್ ನೀಡುವುದರ ಮೂಲಕ ಅವರ ಕಲ್ಯಾಣಕ್ಕೆ ಹೇಗೆ ಸಹಕರಿಸಬಹುದು ಹಾಗೂ ವಿಶಿಷ್ಟಚೇತನರ ಬಗ್ಗೆಯೂ ಸ್ವಲ್ಪ ಮಾಹಿತಿ ನೀಡಿದ್ದಾರೆ.

೪: ವಿಶಿಷ್ಟಚೇತನರಿಂದ ವಿಶಿಷ್ಟಚೇತನರಿಗಾಗಿ ಪ್ರಕಟವಾಗುತ್ತಿರುವ ಮಾಸಿಕ ಪತ್ರಿಕೆ "ಅಂತರಾಕ್ಷಿ" . ಈ ಪತ್ರಿಕೆ ವಿಶಿಷ್ಟಚೇತನರಿಗೆ ಸಂಬಂದಿಸಿದ ಮಾಹಿತಿಗಳನ್ನು ಒಳಗೊಂಡು ಪ್ರಕಟವಾಗುತ್ತಿದೆ. ಈ ಪತ್ರಿಕೆಯಲ್ಲಿ ವಿಶಿಷ್ಟಚೇತನರ ಪಾಲಿನ ಜೀವಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಿಷ್ಟಚೇತನರ ಆಯುಕ್ತರಾದ ಕೆ. ವಿ. ರಾಜಣ್ಣ ಅವರ ಬಗ್ಗೆ ಲೇಖನ ಫೆಬ್ರವರಿ 2013 ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣಕ್ಕೆ ಹಾಗೂ ಅವರಿಗೆ ಸಂಬಂದಿಸಿದ ಯಾವುದೇ ಸಮಸ್ಯೆಯ ಪರಿಹಾರಕ್ಕೆ ಕೆ. ವಿ. ರಾಜಣ್ಣ ಅವರನ್ನು ಸಂಪರ್ಕಿಸಿದರೆ ಅದಕ್ಕೆ ಖಂಡಿತಾ ಪರಿಹಾರ ಸಿಗುತ್ತದೆ ಎಂಬ ಪ್ರತಿಕ್ರಿಯೆ ಅಂತರಾಕ್ಷಿ ಎಂಬ ಪತ್ರಿಕೆಯ ಓದುಗರ ಅನಿಸಿಕೆಗಳಿಂದ ತಿಳಿಯುತ್ತದೆ.

೫: ವಿಶಿಷ್ಟಚೇತನರ ಕಲ್ಯಾಣಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವೃತ್ತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಡಾ.N. R. ಲಲಿತಾಂಬ ಎಂಬುವವರು ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗುವಂತೆ ಕೇಳು ಪುಸ್ತಕಗಳನ್ನು [AUDIO BOOKS] UGC ಯೋಜನೆಗಳ ಬೆಂಬಲದೊಂದಿಗೆ ರಚಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಇದು ವಿಶಿಷ್ಟಚೇತನರಿಗೆ ಅತ್ಯಂತ ಅನುಕೂಲಕರ ಎಂಬುದು ವಿಶಿಷ್ಟಚೇತನರ ಅಭಿಮಾನಪೂರ್ವಕ ಅನಿಸಿಕೆ. ಬ್ರೈಲ್ ಲಿಪಿಗಿಂತ ಈ ಕೇಳು ಪುಸ್ತಕಗಳು ಅರ್ಥ ಮಾಡಿಕೊಳ್ಳಲು ಅತಿ ಸುಲಭ ಎಂಬುದು ಅನೇಕ ವಿಶಿಷ್ಟಚೇತನರ ಅಬಿಪ್ರಾಯವಾಗಿದೆ. ಈ ಕೇಳು ಪುಸ್ತಕಗಳು ಆಡಿಯೋ [.MP3] ರೂಪದಲ್ಲಿ ಇರುವುದರಿಂದ ಎಲ್ಲಿ ಬೇಕಾದರೂ ಅದನ್ನು ಕೇಳಬಹುದು. ಆದ್ದರಿಂದ ಈ ರೀತಿಯ ಕೇಳುಪುಸ್ತಕಗಳು ಸಹ ಸ್ನಾತಕೋತ್ತರ ಪದವಿ ಹಾಗೂ ಎಲ್ಲಾ ಓದುಗರಿಗೂ ಅತ್ಯಂತ ಉಪಯೋಗಕಾರಿಯಾಗಿದೆ. ಡಾ.N. R. ಲಲಿತಾಂಬ ಅವರು ಈ ರೀತಿ ವಿಶಿಷ್ಟಚೇತನರ ಕಲ್ಯಾಣಕ್ಕೆ ಪ್ರತ್ಯಕ್ಷವಾಗಿ ಶ್ರಮಿಸುತ್ತಿದ್ದಾರೆ. ಈ ಮಾಹಿತಿಯನ್ನು "ಅಂತರಾಕ್ಷಿ" ಎಂಬ ಮಾಸಿಕ ಪತ್ರಿಕೆಯ ಫೆಬ್ರವರಿ ಸಂಚಿಕೆಯಿಂದ ಪಡೆದುಕೊಂಡದ್ದಾಗಿದೆ.

 ವಿಶಿಷ್ಟಚೇತನರ ಕಲ್ಯಾಣ ಇಲಾಖೆಯಲ್ಲಿ ದೊರೆತ ಅನೇಕ ಕೈಪಿಡಿಗಳು:
ವಿಶಿಷ್ಟಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ಸಹ ವಿಶಿಷ್ಟಚೇತನರಿಗೆ ಸಂಬಂದಿಸಿದಂತೆ ಅನೇಕ ಸೌಲಭ್ಯಗಳು ಇವೆ. ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಪ್ರಶಿಕ್ಷಣಾರ್ಥಿಗಳಿಗೂ ಸಹ ಅನೇಕ ಸೌಲಭ್ಯಗಳು ಇವೆ ಎಂಬುವುದು ಇಲಾಖಾ ಕೈಪಿಡಿಗಳಿಂದ ತಿಳಿಯಿತು. ಆ ಕೈಪಿಡಿಗಳನ್ನು ಆದರಿಸಿದ ಕೆಲವೊಂದು ಸೌಲಭ್ಯಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ-
ಅ. ವಿಶಿಷ್ಟಚೇತನರಿಗೆ ರೀಯಾಯಿತಿ ಬಸ್ ಪಾಸ್ {550 ರೂ ಸಂಪೂರ್ಣ ವಿಶಿಷ್ಟಚೇತನರನ್ನು ಹೊರತುಪಡಿಸಿ. ಸಂಪೂರ್ಣ ವಿಶಿಷ್ಟಚೇತನರಿಗೆ ಉಚಿತ ಪಾಸ್ ಸೌಲಭ್ಯವಿದೆ. ಮಾತ್ರ }.
ಆ. ಕ್ರೀಡೆಗಳಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ.
ಇ. ಸಾಧಕರಿಗೆ ಪ್ರಶಸ್ತಿಯನ್ನು ನೀಡುವ ಯೋಜನೆ.
ಈ. ಪ್ರಶಿಕ್ಷಣಾರ್ಥಿನಿಯರಿಗೆ ವಸತಿ ಸೌಲಭ್ಯ.
ಉ. ಶಿಷ್ಯವೇತನ ಹಾಗೂ ಪ್ರೋತ್ಸಾಹಧನ.
ಊ. ಬ್ರೈಲ್ ಮುದ್ರಣಾಲಯಗಳ ನಿರ್ವಹಣೆ.
ಋ. ಸ್ನಾತಕೋತ್ತರ ಪದವಿ ಪ್ರವೇಶಾತಿಯಲ್ಲಿ 3% ಮೀಸಲಾತಿ.
ೠ. ಉದ್ಯೋಗದಲ್ಲಿ ಮೀಸಲಾತಿ.
ಎ. ಓದಿ ನಿರುದ್ಯೋಗಿಯಾಗಿರುವ ವಿಶಿಷ್ಟಚೇತನರಿಗೆ ಸ್ವಂತ ಉದ್ಯೋಗ ಮಾಡಲು ಸಹಾಯಧನ[ಆಧಾರ ಯೋಜನೆ].
 ಈ ಮೇಲಿನ ಎಲ್ಲಾ ಸೌಲಭ್ಯಗಳು ವಿಶಿಷ್ಟಚೇತನರ ಕಲ್ಯಾಣಕ್ಕೆ ಎಂಬುದನ್ನು ಮರೆಯುವಂತಿಲ್ಲ.

ಇತ್ತಿಚೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ರಮೇಶ ಎಂಬ ಓಡಾಡಲು ಬಾರದ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗೆ ಮನೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿತು. ಇದು ಸಹ ವಿಶಿಷ್ಟಚೇತನರಿಗೆ ಪ್ರೋತ್ಸಾಹ ನೀಡುವ ಕ್ರಮ. ಅವರಿಗೆ ಆತ್ಮಸ್ಥೆರ್ಯ ತುಂಬುವಂತ ಪ್ರಯತ್ನ ಎಂದು ಸಂಶೋದಕನು ಭಾವಿಸಿರುತ್ತಾನೆ. ಈ ವಿಷಯ ಇಲ್ಲಿ ಪ್ರಸ್ಥಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣವೆನೆಂದರೆ ಆ ತರಹದ ಪ್ರಯೋಗಗಳು ಸ್ನಾತಕೋತ್ತರ ಪದವಿ ಹಂತದಲ್ಲೂ ಆಗಬೇಕಿದೆ. ಅಂತಹ ಕಲ್ಯಾಣದ ಯೋಜನೆಗಳನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲೂ ತಂದು ವಿಶಿಷ್ಟಚೇತನರ ಸರ್ವತೋಮುಖ ಅಭಿವೃದ್ದಿಗೆ ಶ್ರಮೀಸಬೇಕಾಗಿದೆ.

ಅಧ್ಯಾಯ-3. ಅಧ್ಯಯನ ವಿದಾನ{METHODOLOGY}
ಯಾವುದೆ ವಿಷಯ ಮತ್ತು ವಸ್ತುವಿನ ಬಗ್ಗೆ ವಿಮರ್ಷತ್ಮಾಕವಾಗಿ ವಿವರಣೆ ಮಾಡುವ ಮತ್ತು ಹೊಸ ಹೊಸ ಸಿದ್ದಾಂತಗಳನ್ನು ಬೆಳಕಿಗೆ ತರುವಂತಹ ಪ್ರಕ್ರಿಯೆಯೆ ಸಂಶೋದನೆಯಾಗಿದೆ. ಈ ತರಹದ ಸಂಶೋದನೆಯಿಂದಾಗಿ ಹಳೆಯ ಸಿದ್ದಾಂತಗಳನ್ನು ಬಳಕೆಗೆ ತಂದು ಹೊಸ ಹೊಸ ಸಂಗತಿಗಳಿಗೆ ಓರೆ ಹಚ್ಚಿ ನೋಡಬಹುದಾಗಿದೆ. ಹೊಸ ಹೊಸ ಸಿದ್ದಾಂತಗಳನ್ನು ಬಳಕೆಗೆ ತರುವುದಷ್ಟೆ ಅಲ್ಲದೆ ಒಂದು ವಿಷಯಕ್ಕೆ ಸಂಬಂದಿಸಿದಂತೆ ಜ್ಞಾನವನ್ನು ಅಭಿವೃದ್ದಿಪಡಿಸಲು ಸಹಾಯವಾಗುತ್ತದೆ.
WEBSTER ರವರು ಸಂಶೋದನೆಯನ್ನು ಕುರಿತು ತಮ್ಮ ಗ್ರಂಥವಾದ "INTERNATIONAL DICTIONARY"ಯಲ್ಲಿ ಈ ರೀತಿ ಹೇಳಿದ್ದಾರೆ. ಅದೇನೆಂದರೆ, "ಸಂಶೋದನೆಯು ಒಂದು ಜಾಗರೂಕತಾ ವಿಮರ್ಶತ್ಮಾಕ ವಿಚಾರಣೆ ಅಥವಾ ವಾಸ್ತವ ಅಂಶಗಳನ್ನು ಹುಡುಕುವ ಪರೀಕ್ಷೆ ಅಥವಾ ತತ್ವಗಳ ಯಾವುದೇ ಅಂಶವನ್ನು ತಿಳಿಯಲು ಇರುವ ವ್ಯಾಸಂಗವನ್ನು ಸಂಶೋದನೆ ಎಂದು ಅಬಿಪ್ರಾಯ ಪಟ್ಟಿದ್ದಾರೆ.
ಸಂಶೋದನೆಯ ಮೊದಲ ಹಂತ ಸಂಶೋದನೆಗಾಗಿ ವಿಷಯವನ್ನು ಆಯ್ಕೆ ಮಾಡುವುದು. ಆ ನಂತರದಲ್ಲಿ ಅಧ್ಯಯನದಲ್ಲಿ ಧ್ಯೇಯೋದ್ದೇಶಗಳನ್ನು ಗೊತ್ತುಪಡಿಸುವುದು. ತದನಂತರ ಸಂಶೋದನೆಯ ವಿನ್ಯಾಸ ರಚನೆ, ಪ್ರಾಕಲ್ಪನೆಗಳ ಸೃಷ್ಟಿ, ಸೂಕ್ತ ಮಾದರಿ ವಿಧಾನ ಅಳವಡಿಕೆ, ಸೂಕ್ತ ಸಂಶೋದನಾ ಮಾದರಿ, ಆಯ್ಕೆಯ ಅದ್ಯಾಯ, ಪ್ರತಿವಾದಿಗಳ ಸಂಖ್ಯೆಗಳ ಆಯ್ಕೆ, ಅವಶ್ಯಕ ಮಾಹಿತಿ ಸಂಗ್ರಹಣೆಗಾಗಿ ಸೂಕ್ತ ಮಾಹಿತಿ ಸಂಗ್ರಹಣಾ ಉಪಕರಣಗಳ ರಚನೆ ಮತ್ತು ಬಳಕೆ ಹಾಗೂ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ವರ್ಗಿಕರಣ ಮತ್ತು ವಿಶ್ಲೇಷಣೆ, ಇವುಗಳನ್ನು ಆಧರಿಸಿ ಸಂಶೋದನಾ ವರದಿಯ ರಚನೆ ಇವುಗಳು ಸಂಶೋದನೆಯ ಪ್ರಮುಖ ಹಂತಗಳು ಮತ್ತು ಅವಿಭಾಜ್ಯ ಅಂಗಗಳು ಆಗಿವೆ. ವಿಶಿಷ್ಟಚೇತನರ ಕಲ್ಯಾಣ ಸೌಲಭ್ಯಗಳ ಕುರಿತು ಪ್ರಸಕ್ತ ಅಧ್ಯಯನದಲ್ಲಿನ ವಿಧಿವಿದಾನಗಳನ್ನು ಈ ಅಧ್ಯಾಯದಲ್ಲಿ ಪ್ರಸ್ಥಾಪಿಸಲಾಗುವುದು.

 ಅದ್ಯಯನದ ಅವಶ್ಯಕತೆ:-
ವಿಶಿಷ್ಟಚೇತನರ ಸಬಲಿಕರಣ ಅತ್ಯಂತ ಅವಶ್ಯಕವಾದುದು. ಆದ್ದರಿಂದ ಅವರಿಗೆ ಕೆಲವು ಸೌಲಭ್ಯಗಳು ಅನಿವಾರ್ಯ. ಅನೇಕ ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿದ್ದರು ಸಹ ಇನ್ನೂ ಹೆಚ್ಚಿನ ಸೌಲಭ್ಯಗಳು ಅಗತ್ಯವಾಗಿ ಬೇಕಾಗಿದೆ. ಆ ಸೌಲಭ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ನೇರ ಕ್ಷೇತ್ರಕ್ಕಿಳಿದು ಅವಶ್ಯಕತೆಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡುವುದು ಅವಶ್ಯವಾದ್ದರಿಂದ ಈ ಅಧ್ಯಯನ ಅತ್ಯಂತ ಅವಶ್ಯಕ ಎಂದು ಹೇಳಬಹುದು. ಕೆಲವು ನೈಜತೆಯ ಅರಿವಿಗೆ ಅವಶ್ಯಕವಾದ ಅಂಶಗಳನ್ನು ಗುರುತಿಸಿಕೊಂಡು ಅದರಂತೆ ಅಧ್ಯಯನ ನಡೆಸಲಾಗಿದೆ. ಆ ಅವಶ್ಯಾಂಶಗಳೆಂದರೆ
೧. ವಿಶಿಷ್ಟಚೇತನರಿಗೆ ಕಲ್ಯಾಣ ಸೌಲಭ್ಯಗಳನ್ನು ಸರಿಯಾಗಿ ಒದಗಿಸಲಾಗುತ್ತಿದೆಯೇ?/ಇಲ್ಲವೆ ಯನ್ನು ಅರಿಯುವ ಅವಶ್ಯಕತೆ.
೨. ಸೌಲಭ್ಯಗಳ ಮಾಹಿತಿಯ ಕೊರತೆ ಯಾರಲ್ಲಿದೆ? ಎಂಬುವುದನ್ನು ಅರಿಯುವ ಅವಶ್ಯಕತೆ.
೩. ಕಲ್ಯಾಣ ಸೌಲಭ್ಯಗಳ ಫಲ ವಿಫಲಗಳ ಮತ್ತು ಯೋಜನೆಗಳ ರೂಪುರೇಷೆಯನ್ನು ಅರಿಯುವ ಅವಶ್ಯಕತೆ.
೪. ಸರ್ಕಾರದಿಂದ ಇನ್ನೂ ಹೆಚ್ಚಿನ ಸಹಕಾರದ ಕುರಿತು ಅರಿಯುವ ಅವಶ್ಯಕತೆ.
೫. ವಿಶಿಷ್ಟಚೇತನರ ಬಗೆಗೆ ಕುಟುಂಬ, ಶಾಲೆ, ಕಾಲೇಜು ಮತ್ತು ಸರ್ಕಾರ ಈ ನಿಯೋಗಿಗಳಲ್ಲಿ ಯಾವುದು ಅತೀ ಅವಶ್ಯಕ ಎಂಬುವುದನ್ನು ತುಲನೆ ಮಾಡುವಲ್ಲಿನ ಅವಶ್ಯಕತೆ.
೬. ಸರ್ಕಾರೇತರ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ಅರಿಯುವಲ್ಲಿನ ಅವಶ್ಯಕತೆ.
೭. ಜನರು ವಿಶಿಷ್ಟಚೇತನರ ಭಾವನೆಗಳಿಗೆ ಸ್ಪಂದಿಸುತ್ತಿರುವ ಚಲನಾತ್ಮಕ ಅಂಶಗಳನ್ನು ಅರಿಯುವಲ್ಲಿನ ಅವಶ್ಯಕತೆ.

ಅದ್ಯಯನ ಜಗತ್ತು:-(Universe of the Study)
ಬೆಂಗಳೂರಿನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸ್ನಾತಕೋತ್ತರ ಕಾಲೇಜುಗಳಲ್ಲಿ ಓದುತ್ತಿರುವ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳನ್ನು ಗುರಿಯಾಗಿಸಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದ ವಿಭಾಗ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಲವು ಕಾಲೇಜುಗಳನ್ನು ತನ್ನ ಅದ್ಯಯನ ಕ್ಷೇತ್ರವಾಗಿ ಸಂಶೋಧಕನು ಆರಿಸಿಕೊಂಡಿದ್ದಾನೆ.

 ಮಿತಿಗಳು ( LIMITATIONS)
1 ಸಂಶೋಧಕನು ಸಂಶೋದನೆ ಮಾಡಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂದಿಸಿದಂತೆ
ವಿಶಿಷ್ಟಚೇತನರು ಮತ್ತು ಅವರ ಆಪ್ತರಲ್ಲಿ ಕಂಡುಬಂದ ಮಾಹಿತಿಯ ಕೊರತೆ.
2 ಸಂಶೋಧನೆಗೆ ಅವಶ್ಯಕವಾದ ಆಧಾರ ಗ್ರಂಥಗಳ ಕೊರತೆ.
3 ವಿಶಿಷ್ಟಚೇತನರು ಓದುತ್ತಿರುವ ಕಾಲೇಜುಗಳಲ್ಲಿ ಅಗತ್ಯವಾದ ಮಾಹಿತಿ ಸಂಗ್ರಹಣೆ ಇಲ್ಲದ್ದು.
4 ಈ ಸಂಶೋಧನೆ ಹೊಂದಿದ್ದ ಗುರಿಯನ್ನು ತಲಪಲು ಸಾದ್ಯವಾಗದೇ ಇದ್ದದ್ದು.

ಸಂಶೋಧನಾ ವಿನ್ಯಾಸ [RESEARCH DESIGN]
ಸಂಶೋಧನಾ ವಿನ್ಯಾಸವು ಸಂಶೋಧನಾ ಕಾರ್ಯದಲ್ಲಿನ ಬಹಳ ಮುಖ್ಯವಾದ ಒಂದು ಹಂತವಾಗಿದೆ. ಇದುಸಂಶೋಧನಾ ಕಾರ್ಯದ ಬಗ್ಗೆ ಸಾಕಷ್ಟು ಸಮಗ್ರವಾದ ಮಾಹಿತಿ ನೀಡುವ ನೀಲಿ ನಕಾಶೆ ಎನ್ನಬಹುದು.
ಸಂಶೋಧನೆಯ ಉದ್ದೇಶವನ್ನು ಪೂರೈಸಿಕೊಳ್ಳುವ ಸಲುವಾಗಿ ಸಂಶೋದಕನು ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಆಲೋಚಿಸಿ ತಯಾರಿ ಮಾಡಿದ ಯೋಜನೆಯನ್ನು ಸಂಶೋಧನಾ ವಿನ್ಯಾಸ ಎಂದು ಕರೆಯುವರು. ಇಲ್ಲಿ ಮಾರ್ಗದರ್ಶಕರು ಸೂಚಿಸಿದಂತೆ ಸಂಶೋಧನೆಯನ್ನು ವಿನ್ಯಾಸಗೊಳಿಸಿ ಮಂಡಿಸಲಾಗಿದೆ.

ಸದರಿ ಸಂಶೋಧನೆಗೆ ಅಳವಡಿಸಿಕೊಂಡ ಸಂಶೋಧನಾ ವಿನ್ಯಾಸದ ಪ್ರಕಾರ:-
ಸಂಶೋಧನೆಯಲ್ಲಿ ಹಲವಾರು ರೀತಿಯ ರಾಚನಿಕ ಮತ್ತು ತಾರ್ಕಿಕ ಪ್ರಕಾರಗಳಿವೆ. ಅವುಗಳೆಂದರೆ,
1 ಪರಿಶೋಧನಾತ್ಮಕ ಸಂಶೋಧನಾ ವಿನ್ಯಾಸ
2 ವಿವರಣಾತ್ಮಕ ಸಂಶೋಧನಾ ವಿನ್ಯಾಸ
3 ಪ್ರಯೋಗಾತ್ಮಕ ಸಂಶೋಧನಾ ವಿನ್ಯಾಸ
 ಈ ಮೂರು ವಿಧಾನಗಳಲ್ಲಿ ಈ ಅಧ್ಯಯನಕ್ಕೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದೆ. ಈ ವಿನ್ಯಾಸದಲ್ಲಿ ವ್ಯಕ್ತಿ ಅಥವಾ ಒಂದು ಸಮೂಹ ಅಥವಾ ಒಂದು ಘಟನೆಗೆ ಸಂಬಂದಿಸಿದ ಲಕ್ಷಣಗಳ ಬಗ್ಗೆ ನಿರ್ದಿಷ್ಟ ಭವಿಷ್ಯ ಸೂಚನೆಗಳ ಬಗ್ಗೆ ನಡೆಸಬಹುದಾದ ಅಧ್ಯಯನವಾಗಿದೆ. ಈ ಸದರಿ ಸಂಶೋಧನಾ ವಿಷಯಕ್ಕೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವು ಅನ್ವೈಕೆಗೆ ಯೋಗ್ಯವಾಗಿದೆ. ಇದಕ್ಕೆ ಕೆಳಗಿನ ಅಂಶಗಳು ಪ್ರಮುಖವಾಗಿವೆ.
 1. ಅಧ್ಯಯನದ ಗುರಿ ಉದ್ದೇಶ ಏನೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
 2. ಮಾಹಿತಿ ಸಂಗ್ರಹಣೆಯ ತಂತ್ರ ವಿಧಾನಗಳು ಸೂಕ್ತವಾದವು ಯಾವುವು ಎಂದು ಖಚಿತವಾಗಿ ನಿರ್ಧರಿಸುತ್ತವೆ.
 3. ಬೃಹತ್ ವಿಶ್ವದಿಂದ ಔಚಿತ್ಯವಾದ ಮಾದರಿಯನ್ನು ಆಯ್ದುಕೊಳ್ಳಲು ಸುಲಭ.
 4. ಮಾಹಿತಿ ಸಂಗ್ರಹಣೆ ಕಷ್ಟವಿದ್ದರೂ ಮಾಹಿತಿ ಎಲ್ಲಿ ದೊರೆಯುವುದು ಅದಕ್ಕೆ ಎಷ್ಟು ಸಮಯ ಬೇಕಾಗಬಹುದು ಮತ್ತು ಅದನ್ನು ಯಾವ ಕಾಲಮಾನಕ್ಕೆ ಅನ್ವಯಗೊಳಿಸಬೇಕು ಎಂದು ಖಚಿತವಾಗಿ ತಿಳಿದುಕೊಳ್ಳಬಹುದು.
 5. ಮಾಹಿತಿ ಕ್ರೋಡೀಕರಣ ಹಾಗೂ ವಿಶ್ಲೇಷಣೆ ಸರಳ.
 6. ಸಂಶೋಧನಾ ಪಲಿತಾಂಶದ ವರದಿ ಪರಿಣಾಮಕಾರಿಯಾಗಿರುತ್ತದೆ.
 ಈ ಎಲ್ಲಾ ಕಾರಣಗಳಿಂದ ಸಂಶೋಧಕನು ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳ ಕುರಿತು ಸಂಶೋದನೆ ನಡೆಸಲು ನಿರ್ಧರಿಸಿರುತ್ತಾನೆ.

ಅಧ್ಯಯನದ ಪ್ರಾಕಲ್ಪನೆ:-(Hypothesis)
ಸಂಶೋದನಾ ವಿಷಯವು ಇನ್ನೂ ಪೂರ್ಣವಾದ ತನಿಖೆಗೆ ಒಳಪಡುವ ಮೊದಲು ಅದರ ಸತ್ಯಾಸತ್ಯತೆಯ ನಿಷ್ಕರ್ಷ ಇನ್ನೂ ಆಗದೇ ಇರುವುದರಿಂದ ಅದರ ಸತ್ಯಾಂಶವು ಹೀಗಿರಬಹುದೆಂದು ಸಂಶೋದಕನು ಊಹಿಸಿಕೊಳ್ಳುತ್ತಾನೆ. ಪ್ರಾಕಲ್ಪನೆಯು ಆಯಾ ಕಾಲದ ಸಂಶೋಧನಾ ವಿಷಯಕ್ಕೆ ಸಂಬಂದಿಸಿದ ಆರಂಬಿಕ ಪ್ರಸ್ಥಾವನೆ ಅಷ್ಟೆ. ಇದು ಸಂಶೋಧನೆಯನ್ನು ಕೈಗೊಳ್ಳಲು ಅಮೂರ್ತ ಹಾದಿಯಾಗಿದೆ. ಈ ಮೊದಲು ಸಂಶೋಧಕನು ಈ ಸಂಶೋಧನೆಗೆ ಅಗತ್ಯ ಸಾಹಿತ್ಯಾಧಾರಗಳು ಸಿಗುತ್ತವೆ ಎಂದು ನಂಬಿದ್ದನು, ಅದರಂತೆ ಲಭ್ಯವಾದ ಮಾಹಿತಿಗಳಿಂದ ಬೌಧಿಕ ಜ್ಞಾನದ ಹರವನ್ನು ವಿಸ್ತರಿಸಿ ಸಂಶೋಧಕನು ಈ ಸಂಶೋಧನೆಯನ್ನು ಯಶಸ್ವಿಯಾಗಿ ಕೈಗೊಳ್ಳಲು ಸಂಶೋಧನಾ ನೀಲಿ ನಕಾಶೆಯ ತಂತ್ರಗಳನ್ನು ಅನ್ವೈಕೆ ಮಾಡಿಕೊಂಡಿರುತ್ತಾನೆ.

ಸಂಶೋದನಾ ಮಾದರಿ {RESEARCH SAMPLING}
ಮಾದರಿ ಎಂದರೆ ದೊಡ್ಡ ವಸ್ತುವಿನ ಸಣ್ಣ ಪ್ರತಿರೂಪ ಎಂದರ್ಥ. ಈ ವಿಧಾನವು ಸಂಶೋಧನೆಯಲ್ಲಿ ಅನುಸರಿಸಲಾಗುತ್ತಿರುವ ಮುಖ್ಯ ಕ್ರಮಗಳಲ್ಲಿ ಒಂದು. ವಿಶಿಷ್ಟಚೇತನರ ಕಲ್ಯಾಣಕ್ಕೆ ಸಂಬಂದಿಸಿದ ಸಂಶೋಧನಾ ಕ್ಷೇತ್ರ ಬಹಳ ವಿಶಾಲವಾದುದರಿಂದ ಈ ಕ್ಷೇತ್ರದಲ್ಲಿರುವ ಪ್ರತಿಯೊಂದು ಭಾಗವನ್ನು ಬಿಡಿ ಬಿಡಿಯಾಗಿ ಅಧ್ಯಯನ ಮಾಡುವುದು ಕಷ್ಟಕರ. ಅದರಲ್ಲೂ ಸ್ನಾತಕೋತ್ತರ ವ್ಯಾಸಂಗದ ಅವಧಿ ಸೀಮಿತವಾಗಿರುವುದರಿಂದ ಸಂಶೋಧನೆಯ ಮಾದರಿ ವಿಧಾನವನ್ನು ಅಳವಡಿಸಿಕೊಳ್ಳಲು ಸೂಕ್ತವೆಂದು ಸಂಶೋಧಕನು ತೀರ್ಮಾನಿಸಿದ್ದಾನೆ.

ವಿವಿಧ ಮಾದರಿ ವಿದಾನಗಳು:-
೧. ಯಾಧೃಚಿಕ ಮಾದರಿ ವಿಧಾನ-ಮೂಲ ಗುಂಪಿನ ಪ್ರತಿಭಾಗವು ಮಾದರಿಯಲ್ಲಿ ಆಯ್ಕೆಯಾಗುವ ನಮೂನೆ ಸಂಭವನಿಯತೆಯನ್ನು ಹೊಂದಿರುವ ರೀತಿಯಲ್ಲಿ ಆಯ್ಕೆ ಮಾಡುವ ಕ್ರಮವನ್ನು ಯಾಧೃಚಿಕ ಮಾದರಿ ಎಂದು ಕರೆಯಬಹುದು.
೨. ವ್ಯವಸ್ಥಿತ ಮಾದರಿ ವಿದಾನ-ವ್ಯವಸ್ಥಿತ ವಿಧಾನವು ಮಾರ್ಗದರ್ಶನ ಮಾದರಿ ವಿಧಾನದ ರೂಪವೇ ಆಗಿರಬಹುದು. ಮೊದಲೆ ಸಿದ್ದಪಡಿಸಿದ ಪಟ್ಟಿಯಿಂದ ಕ್ರಮವಾದ ಅಂತರದಲ್ಲಿ ಮಾದರಿಯಲ್ಲಿ ಆಯ್ಕೆ ಮಾಡುವ ವಿಧಾನವನ್ನು ವ್ಯವಸ್ಥಿತ ಮಾದರಿ ವಿಧಾನ ಎನ್ನುತ್ತೆವೆ.
೩. ವಿಭಾಗೀಯ ಮಾದರಿ ವಿಧಾನ-ವಿಭಾಗೀಯತೆಯ ಯಾದೃಚೈಕತಾ ನಿಯಮಕ್ಕೆ ಅಷ್ಟೇನು ಹೊರತಾಗಿರುವುದಿಲ್ಲ. ಇಲ್ಲಿನ ಮುಖ್ಯ ವಿಷಯ ಯಾವುದೇ ಆಯ್ಕೆಗೆ ಮೂಲ ಗುಂಪನ್ನು ಹಲವಾರು ಸಮೀಪದ ಅಂಶಗಳಾಗಿ ಇಲ್ಲವೇ ವಿಧಗಳಾಗಿ ನಂತರ ಯಾದೃಚಿಕ ಮಾದರಿ ಆಯ್ಕೆ ಮಾಡುವುದೆ ಆಗಿದೆ.
೪. ವಿವಿಧ ಮಜಲು ಮಾದರಿ-ಆಯ್ಕೆಯಾದ ಒಂದು ಮಾದರಿಯ ಬಗ್ಗೆ ಸಂಗ್ರಹಿಸಿದ ಮಾಹಿತಿಯ ಜೊತೆಗೆ ಅದರ ಉಪ ವಿಭಾಗ ಇಲ್ಲವೆ ಉಪ ಮಾದರಿಯ ಬಗ್ಗೆ ವಿಶಿಷ್ಟ ಬಗೆಯ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ವಿಧಾನಕ್ಕೆ ವಿವಿಧ ಮಜಲು ಮಾದರಿ ಎಂದು ಕರೆಯಬಹುದು.
೫. ಪಾಲು ಮಾದರಿ ವಿಧಾನ- ಸಂಶೋಧನಾ ಕ್ಷೆತ್ರವನ್ನು ಇಲ್ಲವೇ ಮೂಲ ಗುಂಪನ್ನು ಲಕ್ಷಗಳ ಆಧಾರದ ಮೇಲೆ ವಿಭಾಗಿಸಿ ಪ್ರತಿಯೊಂದು ವಿಭಾಗದಲ್ಲಿ ನಿಶ್ಚಿತ ಸಂಖ್ಯೆಯಲ್ಲಿ ಮಾದರಿಯನ್ನು ಆಯ್ಕೆ ಮಾಡುವ ಕ್ರಮವನ್ನು ಪಾಲು ಮಾದರಿ ವಿಧಾನ ಎನ್ನುತ್ತೆವೆ.
೬. ಸಮುದಾಯ ಮಾದರಿ ವಿಧಾನ-ಸಂಶೋಧನಾ ಕ್ಷೇತ್ರ ಬಹಳ ವಿಶಾಲವಾಗಿದ್ದಾಗ ಸಮುದಾಯ ಮಾದರಿ ವಿಧಾನವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. ಸಮುದಾಯ ಮಾದರಿ ವಿಧಾನದಲ್ಲಿ ಸಂಶೋಧನಾ ಕ್ಷೇತ್ರವನ್ನು ಹಲವು ಸಮುದಾಯಗಳಿಗಾಗಿ, ಕೆಲವು ಸಮುದಾಯಗಳನ್ನು ಯಾದೃಚ್ಚಿಕವಾಗಿ ಆಯ್ಕೆ ಮಾಡಿ ಇಡೀ ಸಮುದಾಯವನ್ನು ಅಧ್ಯಾಯನ ಮಾಡಲಾಗುವುದು.
೭. ಲಾಟರಿ ವಿಧಾನ- ಸರಳ ಯಾದೃಚಿಕ ಮಾದರಿ ಆಯ್ಕೆಯಲ್ಲಿ ಲಾಟರಿ ವಿಧಾನವನ್ನು ಬಳಸಲಾಗುವುದು. ಈ ವಿಧಾನದಲ್ಲಿ ಜನಾಂಗ ಅಥವಾ ಘಟಕಕ್ಕೂ ಒಂದು ಸಂಖ್ಯೆಯನ್ನು ಕೊಡಲಾಗುತ್ತದೆ. ಪ್ರತಿಯೊಂದು ಸಂಖ್ಯೆಯನ್ನು ಪ್ರತ್ಯೇಕವಾಗಿ ಬರೆಯಲಾಗುವುದು. ಚೀಟಿಗಳ ಆಕಾರ ಬಣ್ಣ ಮತ್ತಿತರ ಲಕ್ಷಣಗಳು ಒಂದೇ ರೀತಿಯಾಗಿರುತ್ತದೆ. ಅನಂತರ ಕಣ್ಣು ಮುಚ್ಚಿ ವ್ಯಕ್ತಿಯು ತೆಗೆಯುತ್ತಾನೆ. ತೆಗೆದು ಪ್ರತಿಯೊಂದು ಚೀಟಿಯ ಸಂಶೋದಕನ ಆಯ್ಕೆ ಮಾಡಿದಂತೆ ಒಂದು ಘಟಕವಾಗಿ ಪರಿಣಮಿಸಿದೆ. ಅಧ್ಯಾಯನ ವಿಷಯಕ್ಕೆ ಲಾಟರಿ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತದೆ.
ಇಲ್ಲಿ ಸಂಶೋಧಕನು ಯಾದೃಚಿಕ ಮಾದರಿ ವಿದಾನವನ್ನು ಬಳಸಿ ತನ್ನ ಸಂಶೋಧನೆಯ ಮಾಹಿತಿಯನ್ನು ಸಂಗ್ರಹಿಸಿರುತ್ತಾನೆ.

 ಮಾಹಿತಿ ಸಂಗ್ರಹಣೆ:
 ಸಂಶೋಧನೆಗಾಗಿ ಆಯ್ಕೆ ಮಾಡಿರುವ ವಿಷಯದ ಬಗ್ಗೆ ವಿವಿಧ ವಿಷಯ ಮೂಲಗಳಿಂದ ರೂಢಿಯಲ್ಲಿರುವ ಸಂಶೋಧನಾ ತಂತ್ರಗಳನ್ನು ಉಪಯೋಗಿಸಿ ವಿಷಯವನ್ನು ಸಂಗ್ರಹಿಸುವ ಕ್ರಮಕ್ಕೆ ಮಾಹಿತಿ ಸಂಗ್ರಹಣೆ ಎನ್ನಲಾಗಿದೆ.
ಸದರಿ ವಿಷಯದ ಸಂಶೋಧನಾ ಕಾರ್ಯದಲ್ಲಿ ಮಾಹಿತಿ ಸಂಗ್ರಹಣೆ ಬಹಳ ಪ್ರಮುಖವಾಗಿದೆ. ಸಂಗ್ರಹಿತ ಮಾಹಿತಿಯು ವಿಶಿಷ್ಟಚೇತನರ ಕಲ್ಯಾಣ ಸೌಲಭ್ಯಗಳ ಬಗ್ಗೆ ಹೆಚ್ಚು ಜ್ಞಾನವನ್ನು ನೀಡಿ ಅರಿವನ್ನು ಹೆಚ್ಚಿಸುತ್ತದೆ. ಸಂಗ್ರಹಿಸಿದ ಮಾಹಿತಿಗಳು ಹೆಚ್ಚು ವಿಶ್ವಾಸಯೋಗ್ಯವಾಗಿದ್ದರೆ ಅವುಗಳ ಮೇಲೆ ನಡೆಯುವ ಸಂಶೋಧನಾ ಫಲಿತಾಂಶಗಳು ಕೂಡ ಹೆಚ್ಚು ವಿಶ್ವಾಸಯೋಗ್ಯವಾಗಿರುತ್ತದೆ.

ಸಂಶೋಧನಾ ಮಾಹಿತಿಯನ್ನು ಸಾಮಾನ್ಯವಾಗಿ ಎರಡು ಮೂಲಗಳಿಂದ ಸಂಗ್ರಹಿಸಲಾಗುದು-ಅವುಗಳೆಂದರೆ-
ಪ್ರಾಥಮಿಕ ಮೂಲ- ಮಾಹಿತಿ ಸಂಗ್ರಹಣೆಗಾಗಿ ಪ್ರಾಥಮಿಕವಾಗಿ ಅವಲೋಕನ ವಿಧಾನ, ಸಂದರ್ಶನ ವಿಧಾನ, ಪ್ರಶ್ನಾವಳಿ ವಿಧಾನವಾಗಿ, ಅನುಸೂಚಿ ವಿಧಾನ ಮುಂತಾದವುಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇಲ್ಲಿ ಸಂಶೋಧಕನು ನೇರವಾಗಿ ಸಂಬಂದಪಟ್ಟ ಇಲಾಖೆಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿರುತ್ತಾನೆ.
ಮಾದ್ಯಮಿಕ ಮೂಲಗಳು- ಮಾಹಿತಿ ಸಂಗ್ರಹಣೆಗಾಗಿ ಮಾದ್ಯಮಿಕ ಮೂಲಗಳಿಂದ ವ್ಯಕ್ತಿ ಅಧ್ಯಯನ, ದಿನ ಪತ್ರಿಕೆ, ವೃತ್ತ ಪತ್ರಿಕೆ, ಹಾಗೂ ಮುಂತಾದವುಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸಂಶೋಧಕನು ಮಾಹಿತಿ ಸಂಗ್ರಹಣೆಗಾಗಿ ಪ್ರಶ್ನಾವಳಿಯನ್ನು ತಯಾರಿಸಿಕೊಂಡು ಸಂದರ್ಶನದ ಮೂಲಕ ಸ್ವತ ತಾನೇ ಮಾಹಿತಿಯನ್ನು ಸಂಗ್ರಹಿಸಿರುತ್ತಾನೆ.ಹಾಗೂ ದಿನ ಪತ್ರಿಕೆ, ವೃತ್ತ ಪತ್ರಿಕೆಗಳಿಂದಲೂ ಸಂಶೋಧಕನು ಮಾಹಿತಿ ಸಂಗ್ರಹಿಸಿರುತ್ತಾನೆ.

ಅಧ್ಯಾಯ-4. ಮಾಹಿತಿ ವಿಶ್ಲೇಷಣೆ ಮತ್ತು ದತ್ತಾಂಶ ವರ್ಗೀಕರಣ
ಪ್ರಸ್ತುತ ಅಧ್ಯಯನದಲ್ಲಿ ಸಂಗ್ರಹಿಸಿದ (ಮಾಹಿತಿ) ದತ್ತಾಂಶಗಳನ್ನು ಮತ್ತು ಅಧ್ಯಯನದ ಸಮಯದಲ್ಲಿ ಅವಲೋಕಿಸಿದಂತಹ ಮಾಹಿತಿಗಳನ್ನು ವಿವರಿಸಲಾಗಿದೆ.
ಒಂದು ಸಂಶೋದನೆಯಲ್ಲಿ ಪ್ರಸ್ಥಾವನೆ, ಅಧ್ಯಯನ, ವಿಧಾನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ದತ್ತಾಂಶಗಳ ವರ್ಗೀಕರಣ ಮತ್ತು ಮಾಹಿತಿ ವಿಶ್ಲೇಷಣೆಯೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.
ವಿಶ್ಲೇಷನೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂಬ ಅರ್ಥ. ಸಂಶೋದಕನು ಸಂಶೋಧನಾ 'ವಿಷಯಕ್ಕನುಸರಿಸಿ' ತನಗೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಾ ಬರುವನು. ಈ ಕ್ರೊಡೀಕೃತವಾದ ಎಲ್ಲಾ ಅಂಶಗಳನ್ನು ಸರಿಯಾಗಿ ಕ್ರಮಬದ್ದವಾಗಿ ಮತ್ತು ಕಾರ್ಯಕಾರಣಗಳ ಪರಸ್ಪರ ಸಂಬಂಧವನ್ನು ವಿಂಗಡಿಸುವುದೇ ವಿಶ್ಲೇಷಣೆಯಾಗಿದೆ.
ಅಂಕಿ ಅಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮತ್ತು ಈ ರೀತಿಯ ವಿಶ್ಲೇಷಣೆಯಿಂದ ಪರಿಣಾಮಗಳನ್ನು ಸರಿಯಾಗಿ ಅರ್ಥೈಸುವುದು ಸಂಶೋದನೆಯಲ್ಲಿ ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಆದುದರಿಂದ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ, ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಯಬಹುದಾಗಿದೆ.
ಈ ಅಧ್ಯಯನದಿಂದ ಪಡೆದಂತಹ ದತ್ತಾಂಶಗಳನ್ನು ಪಟ್ಟಿಗಳ ಮೂಲಕ ಕ್ರಮಾನುಕ್ರಮವಾಗಿ ವಿಶ್ಲೇಷಣೆಗೊಳಪಡಿಸಲಾಗಿದೆ. ಅವುಗಳು ಈ ಕೆಳಕಂಡಂತೆ ಇವೆ.

ವಿಶಿಷ್ಟಚೇತನರ ವಯಸ್ಸಿನ ಹಂಚಿಕೆಯ ಸೂಚಿಕೆಯ ಮಾಹಿತಿ-1
ವಿಶಿಷ್ಟಚೇತನರ ವಯಸ್ಸಿನ ಹಂಚಿಕೆಯಲ್ಲಿ 22-23 ವರ್ಷ ವಯಸ್ಸಿನ ವಿಶಿಷ್ಟಚೇತನರು ಶೇ.32.5 ರಷ್ಟು ಹಾಗೂ 24-26 ವರ್ಷದ ವಯಸ್ಸಿನ ವಿಶಿಷ್ಟಚೇತನರು ಶೇ.67.5 ರಷ್ಟು ಆಗಿದ್ದಾರೆ.
ಇಲ್ಲಿ ಪ್ರತಿವಾದಿಗಳು ಹೆಚ್ಚಾಗಿ 24 ರಿಂದ 26 ವರ್ಷದ ವಯೋಮಾನದವರಾಗಿರುವುದನ್ನು ನಾವು ಕಾಣಬಹುದು.

ವಿಶಿಷ್ಟಚೇತನರ ಲಿಂಗದ ಹಂಚಿಕೆಯ ಸೂಚಿಕೆಯ ಮಾಹಿತಿ-2
ವಿಶಿಷ್ಟಚೇತನರ ಲಿಂಗದ ಹಂಚಿಕೆಯಲ್ಲಿ ಶೇ.82.5 ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.17.5 ರಷ್ಟು ವಿದ್ಯಾರ್ಥಿನಿಯರು ಇದ್ದಾರೆ.
ಇಲ್ಲಿ ಪ್ರತಿವಾದಿಗಳು ಹೆಚ್ಚಾಗಿ ವಿದ್ಯಾರ್ಥಿಗಳು ಆಗಿದ್ದಾರೆ. ಈ ಸಂಶೋದನೆಯಲ್ಲಿ ಶೇ.82.5% ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ವಿಶಿಷ್ಟಚೇತನರ ಅದ್ಯಯನ ವಿಭಾಗದ ಸೂಚಿಕೆಯ ಮಾಹಿತಿ-3
ಶೇ.75 ರಷ್ಟು ಪ್ರತಿವಾದಿಗಳು ಕಲಾ ವಿಭಾಗಗಕ್ಕೂ ಮತ್ತು ಶೇ.12.5 ರಷ್ಟು ಪ್ರತಿವಾಧಿಗಳು ವಾಣಿಜ್ಯ ವಿಭಾಗಗಕ್ಕೂ ಹಾಗೂ ಶೇ.12.5 ರಷ್ಟು ಪ್ರತಿವಾದಿಗಳು ತಾಂತ್ರಿಕ ವಿಭಾಗಗಕ್ಕೂ ಸೇರಿದವರಾಗಿರುತ್ತಾರೆ.
ಇಲ್ಲಿ ಪ್ರತಿವಾದಿಗಳು ಹೆಚ್ಚಾಗಿ ಕಲಾ ವಿಭಾಗಗಕ್ಕೆ ಸೇರಿದವರು ಎಂದು ಹೇಳಬಹುದು. ಈ ಸಂಶೋದನೆಯಲ್ಲಿ ಶೇ.75 ರಷ್ಟು ಪ್ರತಿವಾದಿಗಳು ಕಲಾ ವಿಭಾಗದಿಂದ ಪಾಲ್ಗೊಂಡಿರುತ್ತಾರೆ.

ವಿಶಿಷ್ಟಚೇತನರು ತಮ್ಮ ವಿದ್ಯಾರ್ಥಿವೇತನದ ಬಗ್ಗೆ ಹೊಂದಿರುವ ಅಬಿಪ್ರಾಯಗಳನ್ನು ಸೂಚಿಸುವ ಮಾಹಿತಿ-4
ಇದರಿಂದ ನಿಮಗೆ ಅನುಕೂಲ ಆಗಿದೆಯೇ..? ಎಂಬ ಪ್ರಶ್ನೆಗೆ ಶೇ.82.5 ರಷ್ಟು ಪ್ರತಿವಾದಿಗಳು ಹೌದು ಎಂದು ಹಾಗೂ ಶೇ.17.5 ರಷ್ಟು ಇಲ್ಲ ಎಂದು ತಮ್ಮ ಮನೋಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಪ್ರತಿವಾದಿಗಳು ಹೆಚ್ಚಾಗಿ ವಿದ್ಯಾರ್ಥಿ ವೇತನದಿಂದ ತಮಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.82.5% ರಷ್ಟು ಪ್ರತಿವಾದಿಗಳು ಹೌದು ಎಂದು ಉತ್ತರ ಕೊಟ್ಟಿರುವುದನ್ನು ಕಾಣಬಹುದು.

ವಿಶಿಷ್ಟಚೇತನರ ಭದ್ರತೆಯನ್ನು ಸೂಚಿಸುವ ಮಾಹಿತಿ- 5
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭದ್ರತೆ ಇದೆಯೇ.. ಎಂಬುದಕ್ಕೆ ಶೇ.60 ರಷ್ಟು ಪ್ರತಿವಾದಿಗಳು ಹೌದು ಎಂದು ಹಾಗೂ ಶೇ.40 ರಷ್ಟು ಇಲ್ಲ ಎಂದು ಹೇಳಿದ್ದಾರೆ ಇಲ್ಲಿ ಪ್ರತಿವಾದಿಗಳು ಹೆಚ್ಚಾಗಿ ಭದ್ರತೆ ಇದೆ ಎಂದು ಹೇಳಿದ್ದಾರೆ.

ವಿಶಿಷ್ಟಚೇತನರು ಪಡೆದಿರುವ ಇತರೆ ಕೋರ್ಸುಗಳ ಮಾಹಿತಿ-6
ಶೇ.77.5 ರಷ್ಟು ಪ್ರತಿವಾದಿಗಳು ಪಡೆದಿದ್ದೇವೆ ಎಂದು ಹಾಗೂ ಶೇ.22.5 ರಷ್ಟು ಪಡೆದಿಲ್ಲವೆಂದು ಹೇಳಿದ್ದಾರೆ.


ವಿಶಿಷ್ಟಚೇತನರ ಕುಡಿಯುವ ನೀರಿನ ಬಗೆಗಿನ ಅಬಿಪ್ರಾಯವನ್ನು ಸೂಚಿಸುವ ಮಾಹಿತಿ-7
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಡಿಯುವ ನೀರಿನ ಸೌಲಭ್ಯದ ತೃಪ್ತಿಯ ಬಗ್ಗೆ ಶೇ.72.5 ರಷ್ಟು ಪ್ರತಿವಾದಿಗಳು ತೃಪ್ತಿ ಇದೆ ಎಂದು ಹಾಗೂ ಶೇ.27.5 ರಷ್ಟು ಇಲ್ಲ ಎಂದು ಹೇಳಿದ್ದಾರೆ.

ವಿಶಿಷ್ಟಚೇತನರಿಗೆ ಅಭಿಪ್ರೇರಣಾ ಕಾರ್ಯಕ್ರಮಗಳ ಅರಿವಿನ ಮಾಹಿತಿ-8
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಇರುವ ಅಭಿಪ್ರೇರಣಾ ಕಾರ್ಯಕ್ರಮಗಳ ಅರಿವಿನ ಬಗ್ಗೆ ಶೇ.55 ರಷ್ಟು ಪ್ರತಿವಾದಿಗಳು ಅರಿವು ಇದೆ ಎಂದು ಹಾಗೂ ಶೇ.45 ರಷ್ಟು ಇಲ್ಲ ಎಂದು ಹೆಳಿದ್ದಾರೆ.

ವಿಶಿಷ್ಟಚೇತನರು ಕ್ಯಾಂಟೀನ್ ಊಟದ ಬಗೆಗೆ ಹೊಂದಿರುವ ನಿಲುವುಗಳು- 9
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇರುವ ಕ್ಯಾಂಟೀನ್ ಸೌಲಭ್ಯದ ತೃಪ್ತಿಯ ಬಗ್ಗೆ ಶೇ.75 ರಷ್ಟು ಪ್ರತಿವಾದಿಗಳು ತೃಪ್ತಿ ಇದೆ ಎಂದು ಹಾಗೂ ಶೇ.25 ರಷ್ಟು ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇದೆಯೇ? ಎಂಬ ಸೂಚಿಕೆ- 10
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶೌಚಾಲಯ ಸೌಲಭ್ಯದ ತೃಪ್ತಿಯ ಬಗ್ಗೆ ಶೇ.70 ರಷ್ಟು ಪ್ರತಿವಾದಿಗಳು ಶೌಚಾಲಯದ ವ್ಯವಸ್ಥೆ ಉತ್ತಮಾವಾಗಿದೆ ಎಂದು ಹಾಗೂ ಶೇ.30 ರಷ್ಟು ಇಲ್ಲ ಎಂದು ಹೆಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲ್ಯಾಣ ಸೌಲಭ್ಯಗಳ ಕುರಿತು ವಿಶಿಷ್ಟಚೇತನರು ಹೊಂದಿರುವ ಅಬಿಪ್ರಾಯವನ್ನು ಸೂಚಿಸುವ ಮಾಹಿತಿ- 11
ವಿಶಿಷ್ಟಚೇತನರಿಗೆ ಇಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳು ಕೊಡುತ್ತಿದ್ದಾರೆಯೇ... ಇಲ್ಲವೇ.. ಎಂಬುದರ ಬಗ್ಗೆ ಶೇ.75 ರಷ್ಟು ಪ್ರತಿವಾದಿಗಳು ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ನಮಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿದ್ದಾರೆ ಎಂದು ಹಾಗೂ ಶೇ.25 ರಷ್ಟು ಇಲ್ಲ ಎಂದು; ಎಲ್ಲಾ ಸೌಲಭ್ಯಗಳು ಕೊಡುತ್ತಿಲ್ಲ. ಸೌಲಭ್ಯಗಳ ಕೊರತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಶಿಷ್ಟಚೇತನರ ಜೀವನಮಟ್ಟ ಮತ್ತು ಶಿಕ್ಷಣಮಟ್ಟದ ಬಗ್ಗೆ ಸ್ವತಃ ಹೊಂದಿರುವ ಅಭಿಪ್ರಾಯಗಳ ಸೂಚಿಕೆಯ ಮಾಹಿತಿ- 12
ವಿಶಿಷ್ಟಚೇತನರ ಜೀವನಮಟ್ಟ ಮತ್ತು ಶಿಕ್ಷಣಮಟ್ಟವನ್ನು ಸುಧಾರಿಸಲು ಇನ್ನೂ ಹೆಚ್ಚಿನ ಸೌಲಭ್ಯಗಳು ಅಗತ್ಯವಿದೆಯೇ ಎಂಬುದರ ಕುರಿತು ಸ್ವತಃ ಹೊಂದಿರುವ ಅಭಿಪ್ರಾಯ ಬಗ್ಗೆ ಶೇ.80 ರಷ್ಟು ಪ್ರತಿವಾದಿಗಳು ಇನ್ನೂ ಹೆಚ್ಚಿನ ಸೌಲಭ್ಯಗಳ ಅಗತ್ಯ ಇದೆ ಎಂದು ಹಾಗೂ ಶೇ.20 ರಷ್ಟು ಇಲ್ಲ ಎಂದು ಹೇಳಿದ್ದಾರೆ.

ಕಲ್ಯಾಣ ಸೌಲಭ್ಯಗಳ ಸಮರ್ಪಕ ಅನುಷ್ಟಾನದ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ತೃಪ್ತಿಯನ್ನು ತೋರಿಸುವ ಮಾಹಿತಿ-13
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರ ಎಲ್ಲಾ ಅಗತ್ಯ ಸೌಲಭ್ಯಗಳು ಅನುಷ್ಟಾನವಾಗಿದೆಯೇ... ಇಲ್ಲವೇ.. ಪ್ರಶ್ನೆಗೆ ಶೇ.75 ರಷ್ಟು ಪ್ರತಿವಾದಿಗಳು ಎಲ್ಲಾ ಸೌಲಭ್ಯಗಳು ಅನುಷ್ಟಾನಕ್ಕೆ ಬಂದಿವೆ ಎಂದು ಹಾಗೂ ಶೇ.25 ರಷ್ಟು ಇಲ್ಲ ಸರಿಯಾಗಿ ಅನುಷ್ಟಾನಕ್ಕೆ ಬರುತ್ತಿಲ್ಲ ಎಂದು ಉತ್ತರಿಸಿದ್ದಾರೆ.

ಶಿಕ್ಷಣದ ಕಡೆ ಗಮನ ಕೊಡುವ ವಾತಾವರಣದ ಬಗ್ಗೆ ವಿಶಿಷ್ಟಚೇತನರ ಅಭಿಪ್ರಾಯವನ್ನು ತಿಳಿಸುವ ಮಾಹಿತಿ-14
ಇಲ್ಲಿ ವಿಶಿಷ್ಟಚೇತನರಿಗೆ ಶಿಕ್ಷಣದ ಕಡೆಗೆ ಗಮನ ಕೊಡುವಂತಹ ವಾತವರಣ ಇದೆಯೇ... ಇಲ್ಲವೇ.. ಎಂಬುದರ ಬಗ್ಗೆ ಶೇ.85 ರಷ್ಟು ಪ್ರತಿವಾದಿಗಳು ಉತ್ತಮವಾದ ವಾತವರಣ ಇದೆ ಎಂದು ಹಾಗೂ ಶೇ.15 ರಷ್ಟು ಪ್ರತಿವಾದಿಗಳು ಅಂತಹ ವಾತವರಣ ಇಲ್ಲ ಎಂದು ಹೇಳಿದ್ದಾರೆ.

ಗ್ರಂಥಾಲಯ ಸೌಲಭ್ಯದ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ತೃಪ್ತಿಯ ಮಾಹಿತಿ-15
ಇಲ್ಲಿ ವಿಶಿಷ್ಟಚೇತನರಿಗೆ ಪ್ರತ್ಯೇಕ ಗ್ರಂಥಾಲಯ ಸೌಲಭ್ಯ ಕಲ್ಪಿಸಲಾಗಿದೆ.ಅವರು ಅದರ ಬಗ್ಗೆ ಎಷ್ಟರಮಟ್ಟಿಗೆ ತೃಪ್ತಿ ಹೊಂದಿದ್ದಾರೆ ಎಂಬುದರ ಬಗ್ಗೆ ಶೇ.90 ರಷ್ಟು ಪ್ರತಿವಾದಿಗಳು ತೃಪ್ತಿಯನ್ನು ಹೊಂದಿದ್ದಾರೆ ಹಾಗೂ ಶೇ.10 ರಷ್ಟು ಇಲ್ಲ ಎಂದೂ ಎಲ್ಲಾ ಪುಸ್ತಕಗಳು ಲಭ್ಯವಿಲ್ಲ ಎಂದು ಹೇಳಿದ್ದಾರೆ ಹಾಗೂ ಹಲವು ಪುಸ್ತಕಗಳ ಕೊರತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ಅಭಿಪ್ರಾಯದ ಮಾಹಿತಿ-16
ಶೇ.92.5 ರಷ್ಟು ಪ್ರತಿವಾದಿಗಳು ಶಿಕ್ಷಕರ ಮನೋಭಾವನೆ ಉತ್ತಮಾವಾಗಿದೆ ಎಂದು ಹಾಗೂ ಶೇ.7.5 ರಷ್ಟು ಇಲ್ಲ ಎಂದು ಹೇಳಿದ್ದಾರೆ.

ಕ್ರೀಡಾಳುಗಳಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ಆಗುತ್ತಿರುವ ಅನುಕೂಲದ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ಅಭಿಪ್ರಾಯದ ಮಾಹಿತಿ17
ಶೇ.35 ರಷ್ಟು ಪ್ರತಿವಾದಿಗಳು ಅನುಕೂಲ ಆಗಿದೆ ಎಂದು ಹಾಗೂ ಶೇ.35 ರಷ್ಟು ಇಲ್ಲ ಎಂದು ಮತ್ತು ಶೇ.30 ರಷ್ಟು ಪ್ರತಿವಾಧಿಗಳು ಆಗಿದ್ದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.

ಸ್ನಾತಕೋತರ ಪದವಿ ಹೊಂದಿರುವ ಇತರ ಕಾಲೇಜುಗಳಿಗಿಂತ ನಮ್ಮ ಕ್ಯಾಂಪಸ್ ಉತ್ತಮವೇ.... ಎಂಬುದಕ್ಕೆ ವಿಶಿಷ್ಟಚೇತನರ ಅಭಿಪ್ರಾಯ-18
ಶೇ.57.5 ರಷ್ಟು ಪ್ರತಿವಾದಿಗಳು ಬೇರೆ ಕಾಲೇಜುಗಳೇ ಉತ್ತಮ ಎಂದು ಹಾಗೂ ಶೇ.42.5 ರಷ್ಟು ಇಲ್ಲ ಎಂದಿದ್ದಾರೆ.

ವಿಶಿಷ್ಟಚೇತನರ ಮತ್ತು ಶಿಕ್ಷಕರ ನಡುವಿನ ಸಂಬಂದದ ಹಂಚಿಕೆಯನ್ನು ತಿಳಿಸುವ ಮಾಹಿತಿ- 20
ಶೇ.92.5 ರಷ್ಟು ಪ್ರತಿವಾದಿಗಳು ತೃಪ್ತಿ ತಂದಿದೆ ಎಂದು ಹಾಗೂ ಶೇ.7.5 ರಷ್ಟು ತೃಪ್ತಿ ಇಲ್ಲ ಎಂದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡುತ್ತಿರುವುದರ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ಅರಿವಿನ ಪರಿಮಣಾತ್ಮಕ ಮಾಹಿತಿ-21
ಶೇ.90 ರಷ್ಟು ಪ್ರತಿವಾದಿಗಳು ಅರಿವಿದೆ. ಶೇ.10 ರಷ್ಟು ಇಲ್ಲ ಎಂದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವುದರಿಂದ ಜ್ಞಾನ/ಕೌಶಲ್ಯ ವೃದ್ದಿಯಾಗುತ್ತದೆ ಎಂಬುವುದರ ಪರಿಮಣಾತ್ಮಕ ಮಾಹಿತಿ-22
ಶೇ.90ರಷ್ಟು ಪ್ರತಿವಾದಿಗಳು ಆಗುತ್ತದೆ ಎಂದು ಹಾಗೂ ಶೇ.10 ರಷ್ಟು ಆಗುವುದಿಲ್ಲ ಎಂದಿದ್ದಾರೆ.

ಪದವಿ ಆದ ನಂತರ ಉದ್ಯೋಗ ಸಿಗುತ್ತದೆಯೇ ಎಂಬುದರ ಪರಿಮಣಾತ್ಮಕ ಮಾಹಿತಿ-23
ಶೇ.77.5 ರಷ್ಟು ಪ್ರತಿವಾದಿಗಳು ಸಿಗುತ್ತದೆ ಎಂದು ಹಾಗೂ ಶೇ.12.5 ರಷ್ಟು ಇಲ್ಲ ಎಂದು ಮತ್ತು ಶೇ.10 ರಷ್ಟು ಪ್ರತಿವಾಧಿಗಳು ಹೇಳಲು ಸಾದ್ಯವಿಲ್ಲ ಎಂದಿದ್ದಾರೆ.

ಸ್ವ-ಉದ್ಯೋಗಕ್ಕೆ ಸರ್ಕಾರದಿಂದ ಧನಸಹಾಯ ಸಿಗುವುದರ ಬಗ್ಗೆ ವಿಶಿಷ್ಟಚೇತನರು ಹೊಂದಿರುವ ಅರಿವಿನ ಪರಿಮಣಾತ್ಮಕ ಮಾಹಿತಿ-24
ಶೇ.47.5 ರಷ್ಟು ಪ್ರತಿವಾದಿಗಳು ಅರಿವು ಇದೆ ಎಂದು ಹಾಗೂ ಶೇ.52.5 ರಷ್ಟು ಇಲ್ಲ ಎಂದಿದ್ದಾರೆ.

ವಿಶಿಷ್ಟಚೇತನರು ಮೇಲಾಧಿಕಾರಿಗಳೊಂದಿಗೆ ಚರ್ಚಿಸುವ ವಿಷಯವಾಗಿ ವ್ಯಕ್ತವಾದ ಪರಿಮಣಾತ್ಮಕ ಮಾಹಿತಿ-25
ಶೇ.62.5 ರಷ್ಟು ಪ್ರತಿವಾದಿಗಳು ಹೌದು ಎಂದು ಹಾಗೂ ಶೇ.12.5 ರಷ್ಟು ಇಲ್ಲ ಎಂದು ಮತ್ತು ಶೇ.25 ರಷ್ಟು ಪ್ರತಿವಾಧಿಗಳು ಪ್ರಯತ್ನ ಪಡ್ತೀವಿ ಎಂದಿದ್ದಾರೆ.

ಇನ್ನೂ ಹೆಚ್ಚಿನ ಸೌಲಭ್ಯದ ಅವಶ್ಯಕತೆ ಇದೆಯೇ-26
ಶೇ.50 ರಷ್ಟು ಪ್ರತಿವಾದಿಗಳು ಬೇಕು ಎಂದು ಹಾಗೂ ಶೇ.50 ರಷ್ಟು ಬೇಡ ಎಂದಿದ್ದಾರೆ.

ಇತರ ಸಿಬ್ಬಂದಿಯಿಂದ ಸರಿಯಾದ ಪ್ರೋತ್ಸಾಹ ಇದೆಯೇ...-27
ಶೇ.62.5 ರಷ್ಟು ಪ್ರತಿವಾದಿಗಳು ಇದೆ ಎಂದು ಹಾಗೂ ಶೇ.20 ರಷ್ಟು ಇಲ್ಲ ಎಂದು ಮತ್ತು ಶೇ.17.5 ರಷ್ಟು ಪ್ರತಿವಾಧಿಗಳು ಪರವಾಗಿಲ್ಲ ಎಂದಿದ್ದಾರೆ.

ಇರುವ ಸೌಲಭ್ಯಗಳನ್ನು ಬಳಸಿಕೊಂಡು IAS ಮಾಡುವ ಗುರಿ ಇದೆಯೇ..-28
ಶೇ.65 ರಷ್ಟು ಪ್ರತಿವಾದಿಗಳು ಹೌದು ಎಂದು ಹಾಗೂ ಶೇ.35 ರಷ್ಟು ಇಲ್ಲ ಎಂದಿದ್ದಾರೆ.

ಅಗತ್ಯವಾದ ಸೌಲಭ್ಯಗಳು ಅಗತ್ಯವಾದ ಸಂದರ್ಭದಲ್ಲಿ ಸಿಗುವುದಿಲ್ಲ.-29
ಶೇ.52.5 ರಷ್ಟು ಪ್ರತಿವಾದಿಗಳು ಹೌದು ಎಂದು ಹಾಗೂ ಶೇ.47.5 ರಷ್ಟು ಇಲ್ಲ ಎಂದಿದ್ದಾರೆ.

ಅಧ್ಯಾಯ-5. ಸಂಶೋಧನೆಯ ಫಲ ( Findings )
ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳು ಇಲ್ಲಿ ಹೆಚ್ಚಾಗಿ 24 ರಿಂದ 26 ವರ್ಷದ ವಯೋಮಾನದವರಾಗಿರುವುದು ತಿಳಿದು ಬರುತ್ತದೆ.
ಈ ಸಂಶೋದನೆಯಲ್ಲಿ ಶೇ.82.5% ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿರುತ್ತಾರೆ.
ಇಲ್ಲಿ ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಕಲಾ ವಿಭಾಗಗಕ್ಕೆ ಸೇರಿದವರು. ಈ ಸಂಶೋದನೆಯಲ್ಲಿ ಶೇ.75 ರಷ್ಟು ವಿಶಿಷ್ಟಚೇತನರು ಕಲಾ ವಿಭಾಗದಿಂದ ಪಾಲ್ಗೊಂಡಿರುತ್ತಾರೆ. ಹೆಚ್ಚಾಗಿ ವಿದ್ಯಾರ್ಥಿ ವೇತನದಿಂದ ತಮಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.82.5% ರಷ್ಟು ವಿಶಿಷ್ಟಚೇತನರು ವಿದ್ಯಾರ್ಥಿ ವೇತನದಿಂದ ಶಿಕ್ಷಣಕ್ಕೆ ನೆರವಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಶೇ.60% ರಷ್ಟು ಪ್ರತಿವಾದಿಗಳು ಭದ್ರತೆ ಇದೆ ಎಂದು ಉತ್ತರ ನೀಡಿದ್ದಾರೆ. ಇಲ್ಲಿ ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ನಾವು ಇತರ ಯಾವುದೇ ಕೋರ್ಸು ಮಾಡಿಲ್ಲ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.77.5% ರಷ್ಟು ಪ್ರತಿವಾದಿಗಳು ಯಾವುದೇ ಕೋರ್ಸು ಮಾಡಿಲ್ಲ. ಇಲ್ಲಿರುವ ಕುಡಿಯುವ ನೀರಿನ ಸೌಲಭ್ಯದ ಬಗ್ಗೆ ನಮಗೆ ತೃಪ್ತಿ ಆಗಿದೆ ಎಂದು ಹೇಳಿದ್ದಾರೆ.
ಈ ಸಂಶೋದನೆಯಲ್ಲಿ ಶೇ.75 ರಷ್ಟು ವಿಶಿಷ್ಟಚೇತನರು ಹೌದು ಎಂದು ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿರುವ ಶೌಚಾಲಯ ಸೌಲಭ್ಯದ ಬಗ್ಗೆ ನಮಗೆ ತೃಪ್ತಿ ಆಗಿದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.70 ರಷ್ಟು ಪ್ರತಿವಾದಿಗಳು ಹೌದು ಎಂದು ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.75% ರಷ್ಟು ಪ್ರತಿವಾದಿಗಳು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ಉತ್ತರ ಕೊಟ್ಟಿರುವುದು ಕಂಡು ಬರುತ್ತದೆ. ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ತಮ್ಮ ಜೀವನಮಟ್ಟ ಮತ್ತು ಶಿಕ್ಷಣಮಟ್ಟ ಸುಧಾರಿಸಲು ಇನ್ನೂ ಹೆಚ್ಚಿನ ಸೌಲಭ್ಯಗಳು ಬೇಕು ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.80 ರಷ್ಟು ಪ್ರತಿವಾದಿಗಳು ಅನೇಕ ಸೌಲಭ್ಯಗಳ ಅವಶ್ಯಕತೆ ಇದೆ ಎಂದು ಹೇಳಿರುವುದು ಕಂಡು ಬರುತ್ತದೆ.
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ಎಲ್ಲಾ ಸೌಲಭ್ಯಗಳು ಅನುಷ್ಟಾನಕ್ಕೆ ಬಂದಿವೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.75% ರಷ್ಟು ಪ್ರತಿವಾದಿಗಳು ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ ಎಂದು ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು.
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ಶಿಕ್ಷಣ ಮಾಡುವಂತ ಉತ್ತಮ ವಾತವರಣ ಇದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.85 ರಷ್ಟು ಪ್ರತಿವಾದಿಗಳು ಸೂಕ್ತ ವಾತವರಣ ಇದೆ ಎಂದು ಹೇಳಿದ್ದಾರೆ.
ಇಲ್ಲಿ ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿರುವ ಗ್ರಂಥಾಲಯದ ಬಗ್ಗೆ ತೃಪ್ತ ಭಾವನೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.90 ರಷ್ಟು ವಿಶಿಷ್ಟಚೇತನರು ಉತ್ತಮ ಸೌಲಭ್ಯಗಳಿಂದ ಕೂಡಿರುವ ಗ್ರಂಥಾಲಯ ನಮಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ.
ಈ ಸಂಶೋಧನೆಯಲ್ಲಿ ವಿಶಿಷ್ಟಚೇತನರು ಹೆಚ್ಚಾಗಿ ಇಲ್ಲಿರುವ ಶಿಕ್ಷಕರ ಮನೋಭಾವದ ಬಗ್ಗೆ ನಮಗೆ ತೃಪ್ತಿ ಆಗಿದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.92.5 ರಷ್ಟು ವಿಶಿಷ್ಟಚೇತನರು ಶಿಕ್ಷಕರ ಪರ ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು
 ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾಳುಗಳಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ಆಗುತ್ತಿರುವ ಅನುಕೂಲದ ಬಗ್ಗೆ ವಿಶಿಷ್ಟಚೇತನ ವಿದ್ಯಾರ್ಥಿಗಳು ಹೊಂದಿರುವ ಅಭಿಪ್ರಾಯದ ಬಗ್ಗೆ ವಿಶಿಷ್ಟಚೇತನರು ಯಾವುದೇ ಆಯ್ಕೆಗೆ ಹೆಚ್ಚಿನ ಪ್ರಾಶಸ್ಥ್ಯ ನೀಡದೆ ಇರುವುದನ್ನು ನಾವು ಕಾಣಬಹುದು.ಇಲ್ಲಿ ವಿಶಿಷ್ಟಚೇತನರು ಆಗಿದೆ,ಆಗಿಲ್ಲ,ಆಗುತ್ತಿದೆ ಎಂದು ಎಲ್ಲಾ ಆಯ್ಕೆಗಳನ್ನು ಸಮಾನವಾಗಿ ಗುರುತಿಸಿ ಉತ್ತರ ಕೊಟ್ಟಿರುವುದು ಕಂಡು ಬರುತ್ತದೆ.
 ವಿಶಿಷ್ಟಚೇತನ ವಿದ್ಯಾರ್ಥಿಗಳು ಇಲ್ಲಿ ಶೇ.57.5 ರಷ್ಟು ಹೆಚ್ಚಿನ ಪ್ರಾಶಸ್ಥ್ಯ ಬೇರೆ ಕಾಲೇಜುಗಳಿಗೆ ನೀಡಿರುವುದನ್ನು ನಾವು ಕಾಣಬಹುದು.ನಮ್ಮ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಕಳಪೆ ಶಿಕ್ಷಣದ ನೀತಿಯೇ ಹಾಗೂ ಶಿಸ್ತಿನ ಕೊರತೆಯೇ ಇದಕ್ಕೆ ಕಾರಣ ಎಂಬುದು ವಿಶಿಷ್ಟಚೇತನರ ಅಭಿಪ್ರಾಯವಾಗಿದೆ.
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಶಿಕ್ಷಕರ ಮನೋವೃತ್ತಿ ತೃಪ್ತಿ ತಂದಿದೆ ಎಂದು ಹೇಳಿಕೆ ನೀಡಿರುವುದನ್ನು ನಾವು ಕಾಣಬಹುದು. ಇಲ್ಲಿ ಶೇ.85 ರಷ್ಟು ಪ್ರತಿವಾದಿಗಳು ಶಿಕ್ಷಕರ ಪರವಾಗಿ ಹೇಳಿಕೆ ನೀಡುತ್ತಿರುವುದು ಕಂಡು ಬರುತ್ತದೆ.
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಶಿಕ್ಷಕರ ನಡುವಿನ ಸಂಬಂದ ತೃಪ್ತಿ ತಂದಿದೆ ಎಂದು ಹೇಳಿಕೆ ನೀಡಿರುವುದನ್ನು ನಾವು ಕಾಣಬಹುದು. ಇಲ್ಲಿ ಶೇ.92.5 ರಷ್ಟು ಪ್ರತಿವಾದಿಗಳು ಶಿಕ್ಷಕರ ಪರವಾಗಿ ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು.
ಇಲ್ಲಿ ಹೆಚ್ಚಾಗಿ ( ಅರ್ಧಕ್ಕೂ ಹೆಚ್ಚು) ಅಂದರೆ ಶೇ.90 ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ಇಲ್ಲಿ ಕೊಡುತ್ತಿರುವ ಸ್ಪರ್ಧಾತ್ಮಕ ಪರೀಕ್ಚೆಗಳಿಗೆ ತರಬೇತಿಯ ಬಗ್ಗೆ ನಮಗೆ ಅರಿವು ಇದೆ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.90 ರಷ್ಟು ಪ್ರತಿವಾದಿಗಳು ಅರಿವಿದೆ ಎಂದು ಹೇಳಿರುವುದನ್ನು ನಾವು ಕಾಣಬಹುದು.
ವಿಶಿಷ್ಟಚೇತನ ವಿದ್ಯಾರ್ಥಿಗಳು ಹೆಚ್ಚಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿಯತ್ತಿರುವುದರಿಂದ ಜ್ಞಾನ/ಕೌಶಲ್ಯ ವೃದ್ದಿಯಾಗುತ್ತದೆ ಎಂದು ಹೇಳಿಕೆ ನೀಡಿರುವುದನ್ನು ನಾವು ಕಾಣಬಹುದು. ಇಲ್ಲಿ ಶೇ.90 ರಷ್ಟು ವಿಶಿಷ್ಟಚೇತನರು ಜ್ಞಾನ/ಕೌಶಲ್ಯ ವೃದ್ದಿಯಾಗುತ್ತದೆ ಎಂದು ಹೇಳಿರುವುದು ಕಂಡು ಬರುತ್ತದೆ.
ಇಲ್ಲಿ ವಿಶಿಷ್ಟಚೇತನ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಆದ ನಂತರ ಉದ್ಯೋಗ ಸಿಗುತ್ತದೆ ಎಂದು ಹೇಳಿದ್ದಾರೆ.ಇಲ್ಲಿ ಶೇ.77.5 ರಷ್ಟು ಪ್ರತಿವಾದಿಗಳು ಉದ್ಯೋಗ ಸಿಗುತ್ತದೆ ಎಂಬ ಆಶಾವಾದವನ್ನು ಹೊಂದಿದ್ದಾರೆ ಎಂದು ತಿಳಿಯಬಹುದು .
ಇಲ್ಲಿ ಹೆಚ್ಚಾಗಿ ( ಅರ್ಧಕ್ಕೂ ಹೆಚ್ಚು) ಅಂದರೆ ಶೇ.52.5 ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ಸ್ವ-ಉದ್ಯೋಗಕ್ಕೆ ಸರ್ಕಾರದಿಂದ ಧನಸಹಾಯ ಸಿಗುವುದರ ಬಗ್ಗೆ ನಮಗೆ ಅರಿವು ಇಲ್ಲ ಎಂದು ಹೇಳಿದ್ದಾರೆ. ಈ ಸಂಶೋದನೆಯಲ್ಲಿ ಶೇ.52.5 ರಷ್ಟು ಪ್ರತಿವಾದಿಗಳು ಗೊತ್ತಿಲ್ಲ ಎಂದಿರುವುದು ಕಂಡು ಬರುತ್ತದೆ.
ಇಲ್ಲಿ ಶೇ.62.5ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸುವ ಶಕ್ತಿ ಇದೆ ಉತ್ತರ ಕೊಟ್ಟಿರುವುದನ್ನು ನಾವು ಕಾಣಬಹುದು
ಇಲ್ಲಿ ಶೇ.50 ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ನಮಗೆ ಇನ್ನೂ ಸೌಲಭ್ಯಗಳು ಬೇಕಾಗಿವೆ ಎಂದು ಹಾಗೂ ಇನ್ನೂಳಿದವರು ನಮಗೆ ಯಾವುದೆ ಬೇರೆ ಸೌಲಭ್ಯ ಬೇಡ, ಇರುವ ಸೌಲಭ್ಯಗಳು ಸರಿಯಾಗಿ ಜಾರಿಯಾದರೆ ಸಾಕು ಎಂದು ಹೇಳಿರುವುದನ್ನು ಕಂಡು ಬರುತ್ತದೆ.
ಇಲ್ಲಿ ಶೇ.62.5ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ನಮಗೆ ಇತರ ಸಿಬ್ಬಂದಿಯಿಂದ ಪ್ರೋತ್ಸಾಹ ಇದೆ ಎಂದು ಹೇಳಿರುವುದು ಕಂಡು ಬರುತ್ತದೆ.
ಇಲ್ಲಿ ಶೇ.65 ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು IAS ಮಾಡುವ ಗುರಿಯನ್ನು ಹೊಂದಿರುವುದನ್ನು ನಾವು ಕಾಣಬಹುದು
ಇಲ್ಲಿ ಶೇ.52.5 ರಷ್ಟು ವಿಶಿಷ್ಟಚೇತನ ವಿದ್ಯಾರ್ಥಿಗಳು ಅಗತ್ಯವಾದ ಸೌಲಭ್ಯಗಳು ಅಗತ್ಯವಾದ ಸಂದರ್ಭದಲ್ಲಿ ಸಿಗುವುದಿಲ್ಲ ಎಂದು ಹೇಳಿರುವುದು ಕಂಡು ಬರುತ್ತದೆ.
ಒಟ್ಟಾರೆ ಈ ಮೇಲಣ ಶೇಕಡಗಳಿಂದ ತಿಳಿದು ಬಂದದ್ದು ಏನೆಂದರೆ ಬಹುತೇಕರಲ್ಲಿ ಗೊಂದಲಗಳು ಮತ್ತು ಶಿಕ್ಷಣದ ಕಡೆಗೆ ಆಸಕ್ತಿ ಇರುವುದು.

ಉಪಸಂಹಾರ ಮತ್ತು ಸಲಹೆಗಳು
ಉಪಸಂಹಾರ Conclusion:-
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ "ಸ್ನಾತಕೋತ್ತರ ಪದವಿ ಓದುತ್ತಿರುವ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳ ಕಲ್ಯಾಣ ಸೌಲಭ್ಯಗಳು ಮತ್ತು ಅವರ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಒಂದು ಕಿರು ಸಂಶೋದನೆ" ಎಂಬ ವಿಷಯದ ಮೇಲೆ ಕೈಗೊಂಡ ಸಂಶೋಧನೆಯಿಂದ ಅನೇಕ ಹೊಸ ವಿಷಯಗಳು, ಸತ್ಯಾಂಶಗಳು ಬೆಳಕಿಗೆ ಬಂದಿದೆ. ಯಾವುದೇ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳಂತೆ ವಿಶಿಷ್ಟಚೇತನ ಪ್ರಶಿಕ್ಷಣಾರ್ಥಿಗಳು ಎಂದು ಭಾವಿಸಬೇಕು, ಆದರೆ ಇತರ ಪ್ರಶಿಕ್ಷಣಾರ್ಥಿಗಳಂತೆ ಅವರನ್ನೂ ಅಳತೆ ಮಾಡಿ ನೋಡಬಾರದು. ವಿಶಿಷ್ಟಚೇತನರು ಅನೇಕ ವಿಷಯಗಳಲ್ಲಿ ಹಿಂದುಳಿದಿರುತ್ತಾರೆ. ಆದರೆ, ಆ ಹಿಂದುಳಿದಿರುವಿಕೆಗೆ ಅವರು ಯಾವತ್ತೂ ಕಾರಣವಾಗಿರುವುದಿಲ್ಲ. ಅವರ ಅಂಗವೈಕಲ್ಯತೆ ಅವರ ದೌರ್ಬಲ್ಯಕ್ಕೆ ಕಾರಣವೇ ಹೊರತು, ಅವರಿಗೆ ಸಾಮರ್ಥ್ಯ ಇಲ್ಲ ಎಂದು ತಿಳಿಯಬಾರದು.
ಈ ಸಂಶೋಧನಾ ಅದ್ಯಯನದಲ್ಲಿ ಈಗಾಗಲೆ ಚರ್ಚಿಸಿರುವಂತೆ ವಿಶಿಷ್ಟಚೇತನರಿಗೆ ಅನೇಕ ಯೋಜನೆಗಳು (ಕಲ್ಯಾಣ ಸೌಲಭ್ಯಗಳ ಮೂಲಕ) ಜಾರಿಯಾಗಿವೆ. ಹಲವಾರು ಸೌಲಭ್ಯಗಳನ್ನು ಅನೇಕರೂ ಪಡೆಯುತ್ತಿರುವುದು ನಿಜವೇ ಆದರೂ ಅವುಗಳ ಅನುಷ್ಟಾನದಲ್ಲಿ ಸ್ವಲ್ಪ ಹಿನ್ನಡೆ ಆಗುತ್ತಿವೆ ಎಂದು ಹೇಳಬಹುದು. ವಿಶಿಷ್ಟಚೇತನರು ದೇವರ ಮಕ್ಕಳು, ಅವರಿಗೂ ಮಕ್ಕಳಿಗೂ ಯಾವುದೆ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಅವರಿಗೆ ಲಭ್ಯವಿರುವ ಸೌಲಭ್ಯಗಳನ್ನು ಜಾರಿಗೆ ತರುವಲ್ಲಿ ಯಾವುದೆ ಹಿನ್ನಡೆ ಆಗಬಾರದು. ಎಲ್ಲಾ ಸೌಲಭ್ಯಗಳು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಅರ್ಹ ವಿಶಿಷ್ಟಚೇತನರಿಗೆ ದೊರೆಯುವಂತಾದರೆ ಈ ಅದ್ಯಯನ ಸಾರ್ಥಕ ಎಂದು ಅನಿಸುತ್ತದೆ.

ಸಲಹೆಗಳು(Suggestions):-
1) ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಸೌಲಭ್ಯಗಳು ಕಡಿಮೆ ಎಂದು ಹೇಳಬಹುದು. ಆದ್ದರಿಂದ ಇನ್ನೂ ಹೆಚ್ಚಿನ ಅಗತ್ಯ ಸೌಲಭ್ಯಗಳು ಜಾರಿಯಾದರೆ ಅನುಕೂಲವಾಗುತ್ತದೆ.
2) ಈ ಅದ್ಯಯನದಲ್ಲಿ ತಿಳಿದು ಬರುವ ಸಂಶೋಧನ ಫಲದ ಪ್ರಕಾರವೇ ಹೇಳುವುದಾದರೆ, ಇತರ ಕಾಲೇಜುಗಳ ಆವರಣಕ್ಕಿಂತ ಜ್ಞಾನಭಾರತಿ ಕ್ಯಾಂಪಸ್ ಉತ್ತಮ ಎಂದು ವಿಶಿಷ್ಟಚೇತನರೇ ಹೇಳಿರುವುದರಿಂದ ಶಿಕ್ಷಣದ ಪದ್ದತಿಯಲ್ಲಿ ಸುಧಾರಣೆ ಆಗುವುದು ಅವಶ್ಯಕವಾಗಿದೆ.
3) ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೋಪವನ್ನೆಸಗುವವರನ್ನು ಶಿಸ್ತಿನ ಕ್ರಮಕ್ಕೆ ಸರಿಯಾಗಿ ಒಳಪಡಿಸುತ್ತಿಲ್ಲ. ಕೆಲವೊಂದು ಕಠಿಣ ಶಿಸ್ತಿನ ಕ್ರಮಗಳು ಜಾರಿಗೆ ಬಂದರೆ ಒಳ್ಳೆಯದು.
4) ವಿಶಿಷ್ಟಚೇತನರಿಗೆ ಇನ್ನೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ.
5) ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟಚೇತನರಿಗೆ ಪ್ರತ್ಯೇಕ ಸಶಕ್ತಿಕರಣದ ಘಟಕ ಸ್ಥಾಪಿಸಿ, ಅವರ ಕಲ್ಯಾಣಕ್ಕೆ ಅಗತ್ಯ ಯೋಜನೆಗಳನ್ನು ಈ ಮೂಲಕ ರೂಪಿಸುವ ಅಗತ್ಯವಿದೆ.
6) ವಿಶಿಷ್ಟಚೇತನರ ಅಧಿನಿಯಮದನ್ವಯ ಪ್ರತ್ಯೇಕ ಗ್ರಂಥಾಲಯ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲೂ ಸ್ಥಾಪನೆಯಾಗಬೇಕು.
7) ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಗತ್ಯ ಸೌಲಭ್ಯಗಳು ಅಗತ್ಯ ಸಂದರ್ಭದಲ್ಲಿ ದೊರಕುವುದಿಲ್ಲ ಎಂಬ ಅಭಿಪ್ರಾಯ ಹೆಚ್ಚಾಗಿ ಕೇಳಿ ಬಂದಿದೆ. ಅದು ನಿಜವೂ ಆಗಿರುವುದರಿಂದ ಅಗತ್ಯ ಸೌಲಭ್ಯಗಳು ಸರಿಯಾಗಿ ಜಾರಿಯಾಗಬೇಕಾದ ಅನಿವಾರ್ಯತೆ ಇದೆ.
8) ವಿಶಿಷ್ಟಚೇತನರಿಗೂ IAS ಮಾಡುವ ಆಸೆ ಇದೆ ಎಂದು ಈ ಸಂಶೋಧನೆಯಿಂದ ತಿಳಿದು ಬರುತ್ತದೆ. ಆದರೆ ಇಂದು ಸಿವಿಲ್ ಸರ್ವಿಸ್ ಪರೀಕ್ಷೆಗಳಲ್ಲಿ (IAS ನಂತಹ) ಯಶಸ್ಸನ್ನು ಸಾದಿಸುವುದು ವಿಶಿಷ್ಟಚೇತನರಿಗೆ ಸುಲಭದ ಮಾತಲ್ಲ. ಅವರಿಗೆ ಸಹಾಯ, ಪ್ರೋತ್ಸಾಹ ಮತ್ತು ತರಭೇತಿಗಳ ಅವಶ್ಯಕತೆ ಇದೆ. ಇದಕ್ಕೆ ಸಂಬಂಧಿಸಿದ ಯೋಜನೆಗಳು ಆದಷ್ಟು ಬೇಗ ಜಾರಿಗೊಳಿಸುವ ಅಗತ್ಯವಿದೆ.
9) ವಿಶಿಷ್ಟಚೇತನರಲ್ಲಿರುವ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಹೊರತರಲು ಹಲವು ಸೃಜನಶೀಲ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ.
10) ವಿಶಿಷ್ಟಚೇತನರ ಅಧಿನಿಯಮದಲ್ಲಿರುವ ಇನ್ನೂ ಅನೇಕ ಸೌಲಭ್ಯಗಳು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೆ ಬಂದಿಲ್ಲ. ಅವುಗಳ ಅನುಷ್ಟಾನಕ್ಕೆ ಸಂಬಂದಪಟ್ಟವರು ಶ್ರಮಿಸುವ ಅಗತ್ಯವಿದೆ.

 ಆಧಾರ ಗ್ರಂಥಗಳು Bibliography

1) ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಚಯ ಕೈಪಿಡಿ (2012-2013 ಸಾಲಿನ)
2) ವಿಶಿಷ್ಟಚೇತನರ ಅಧಿನಿಯಮ 1995.
3) ವಿಶಿಷ್ಟಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕೈಪಿಡಿಗಳು.
4) ಸಮಾಜ ಕಾರ್ಯದ ಹೆಜ್ಜೆಗಳು ( ಡಿಸೆಂಬರ್ ಮತ್ತು ನವೆಂಬರ್ ತಿಂಗಳ ಮಾಸ ಪತ್ರಿಕೆಗಳು)
5) ಪ್ರಜಾವಾಣಿ ಪತ್ರಿಕೆ.
6) ಅಂತರಾಕ್ಷಿ ಮಾಸಪತ್ರಿಕೆ ( ಫೆಬ್ರವರಿಯ ಸಂಚಿಕೆ)
7) ಭಾರತದ ಸಂವಿಧಾನ
 8) ದೆಹಲಿ ನ್ಯಾಯಾಲಯವು ಹೊರಡಿಸಿದ WP(C) No. 6771/2008 ರ ಆದೇಶ

ಪ್ರಶ್ನೆಗಳು:-
ವೈಯುಕ್ತಿಕ ವಿವರ
1 ಹೆಸರು -
2 ವಯಸ್ಸು -
3 ಲಿಂಗ -
4 ಅದ್ಯಯನ ವಿಭಾಗ -
 ಕಲಾ/ವಾಣಿಜ್ಯ/ತಾಂತ್ರಿಕ/ವೈದ್ಯಕೀಯ
5 ಇರುವ ಸ್ಥಳ -
6 ಮಾತೃಭಾಷೆ -
7 ಗೊತ್ತಿರುವ ಇತರೆ ಭಾಷೆಗಳು
 ಕನ್ನಡ/ಹಿಂದಿ/ತಮಿಳು/ತೆಲುಗು
8 ಧರ್ಮ
 ಹಿಂದೂ/ಮುಸ್ಲಿಂ/ಕ್ರೀಶ್ಛಿಯನ್/ಇತರೆ

ಶಿಕ್ಷಣ
9 ಮುಂದೆ ವಿದ್ಯಾಭ್ಯಾಸ ಮಾಡುವಿರಾ..?
 ಹೌದು/ಇಲ್ಲ
10 ಇದೇ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಬಯಸುವಿರಾ..?
 ಹೌದು/ಇಲ್ಲ
11 ನಿಮ್ಮದೇ ಆದ ಅಸೋಷಿಯೆಶನ್ ಏನಾದರೂ ಇದೆಯೆ..? {ಇದ್ದರೆ ಯಾವುದು}
 ಹೌದು/ಇಲ್ಲ
12 ನಿಮ್ಮ ಈತನಕದ ಸಾದನೆಗೆ ಸ್ಪೂರ್ತಿ ಯಾರು...?
 ನೀವೇ. . / ಯಾರು ಇಲ್ಲ / ಬೇರೆ
13 ನಿಮಗೆ ಸ್ನೇಹಿತರು ಏಕೆ ಬೇಕು ಅನಿಸುತ್ತದೆ. . . ?
 ಸಹಾಯಕ್ಕೆ / ಭಾವನೆಗಳ ಹಂಚಿಕೆಗೆ
14 ಕಾಲೇಜಿನಲ್ಲಿ ನೀವು ಎಲ್ಲರೊಂದಿಗೂ ಹೊಂದಿಕೊಂಡು ಹೋಗಲು ಬಯಸುವಿರಾ. . ?
 ಹೌದು/ಇಲ್ಲ
15. ಪರೀಕ್ಷೆಯಲ್ಲಿ ತೃಪ್ತಿಕರವಾಗಿ ಅಂಕವನ್ನು ಗಳಿಸಿದ ಸಂತೋಷವಿದೆಯೇ?
 ಹೌದು/ಇಲ್ಲ

ಕಲ್ಯಾಣ ಸೌಲಭ್ಯಗಳ ಮೇಲೆ / ಇತರ ಪ್ರಶ್ನೆಗಳು
16 ಬೆಂಗಳೂರು ವಿಶ್ವವಿಧ್ಯಾನಿಲಯದಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ನಿಮ್ಮ ಅಬಿಪ್ರಾಯ. .
 ಅತ್ಯುತ್ತಮ/ಉತ್ತಮ/ಸಾದಾರಣ/ಪರವಾಗಿಲ್ಲ
17 ಇಲ್ಲಿ ಓದಲು ಕಷ್ಟ ಅಂತ ನಿಮಗೆ ಎಂದಾದರೂ ಅನಿಸಿದೆಯೇ. . ?
 ಹೌದು/ಇಲ್ಲ
18 ಇಲ್ಲಿ ಕೊಡುವ ವಿಧ್ಯಾರ್ಥಿ ವೇತನದಿಂದ ನಿಮಗೆ ಅನುಕೂಲ ಆಗಿದೆಯೇ ಮತ್ತು ಅದರ ಬಗ್ಗೆ ನಿಮಗೆ ತೃಪ್ತಿ ಇದೆಯಾ. . ?
 ಹೌದು/ಇಲ್ಲ
19 ಬೆಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಭದ್ರತೆ ಇದೆ ಎಂದು ನಿಮಗೆ ಅನಿಸುತ್ತದೆಯೇ. . . ?
 ಹೌದು/ಇಲ್ಲ
20 ಇತರೆ ಯಾವುದಾದರೂ ಕೋರ್ಸು ಮಾಡಿದ್ದೀರಾ. . . . . . . ? {ಇದ್ದರೆ ಯಾವುದು}
 ಹೌದು/ಇಲ್ಲ
21 ಇಲ್ಲಿರುವ ಅಭಿಪ್ರೇರಣಾ ಕಾರ್ಯಕ್ರಮಗಳ ಬಗ್ಗೆ ನಿಮಗೆ ಗೊತ್ತ. . ?
 ಹೌದು/ಇಲ್ಲ
22 ಇಲ್ಲಿ ಕುಡಿಯುವ ನೀರಿನ ಬಗ್ಗೆ ನಿಮಗೆ ತೃಪ್ತಿ ಇದೆಯಾ. . . . . ?
 ಹೌದು/ಇಲ್ಲ
23 ಇಲ್ಲಿನ ಕ್ಯಾಂಟೀನ್ ಊಟದ ಬಗ್ಗೆ ನಿಮಗೆ ತೃಪ್ತಿ ಇದೆಯಾ. . ?
 ಹೌದು/ಇಲ್ಲ
24 ನಿಮ್ಮ ವಿಭಾಗದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿದೆಯೇ. . ?
 ಹೌದು/ಇಲ್ಲ
25 ನಿಮ್ಮ ಕಲ್ಯಾಣಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಕೊಡುತ್ತಿದ್ದಾರೆ ಎಂದು ಭಾವಿಸುವಿರಾ. . . ?
 ಹೌದು/ಇಲ್ಲ {ಇಲ್ಲ ಅಂದರೆ ನಿರ್ದಿಷ್ಟ ಕಾರಣ}
26 ನಿಮ್ಮ ಜೀವನಮಟ್ಟ/ಶಿಕ್ಷಣಮಟ್ಟ ಸುಧಾರಿಸಲು ಇನ್ನೂ ಹೆಚ್ಚಿನ ಕಲ್ಯಾಣ ಸೌಲಭ್ಯಗಳು ಅಗತ್ಯವಿದೆ ಎಂದು ನೀವು ಭಾವಿಸುವಿರಾ. . . . ?
 ಹೌದು/ಇಲ್ಲ
27 ಕಲ್ಯಾಣ ಸೌಲಭ್ಯಗಳ ಸರ್ಮಪಕ ಅನುಷ್ಟಾನದ ಬಗ್ಗೆ ನಿಮಗೆ ತೃಪ್ತಿ ಇದೆಯಾ. . . . . ?
 ಹೌದು/ಇಲ್ಲ { ಇಲ್ಲ ಅಂದರೆ ಕಾರಣ ಏನು}
28 ಕಲ್ಯಾಣ ಸೌಲಭ್ಯಗಳಿಂದ ಶಿಕ್ಷಣಕ್ಕೆ ಉತ್ತೇಜನ ಕೊಡಲು ಸಾದ್ಯ ಎಂದು ನೀವು ನಂಬುವಿರಾ. . . . ?
 ಹೌದು/ಇಲ್ಲ
29 ಇಲ್ಲಿ ನೀವು ನಿಮ್ಮ ಶಿಕ್ಷಣದ ಕಡೆ ಗಮನ ಕೊಡುವಂತಹ ವಾತಾವರಣ ಇದೆ ಅನಿಸಿದೆಯಾ. . . . ?
 ಹೌದು/ಇಲ್ಲ
30 ನಿಮಗೆ ಪ್ರತ್ಯೇಕ ಗ್ರಂಥಾಲಯ ಕಲ್ಪಿಸಲಾಗಿದೆ. ಅದರ ಬಗ್ಗೆ ನಿಮಗೆ ತೃಪ್ತಿ ಇದೆಯೇ. . . . . ?
 ಹೌದು/ಇಲ್ಲ
31 ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುತ್ತಿರುವುದರ ಬಗ್ಗೆ ನಿಮ್ಮ ಅಬಿಪ್ರಾಯ. . . ಅದರಿಂದ ವಿಶಿಷ್ಟಚೇತನರಿಗೆ ಅನುಕೂಲ ಆಗಿದೆಯೇ. . . ?
 ಆಗಿದೆ/ಆಗಿಲ್ಲ/ಆಗುತ್ತಿದೆ
32 ಇತರ ಸ್ನಾತಕೋತ್ತರ ಪದವಿ ಹೊಂದಿರುವ ಕಾಲೇಜುಗಳು ನಮ್ಮ ಕ್ಯಾಂಪಸ್ ಗಿಂತ ಉತ್ತಮ ಅಂತ ನಿಮಗೆ ಅನಿಸುತ್ತದೆಯೆ. . ?
 ಹೌದು/ಇಲ್ಲ {ಹೌದು ಅಂದರೆ ಹೇಗೆ}
33 ಶಿಕ್ಷಕರ ಮನೋಭಾವನೆ ನಿಮಗೆ ತೃಪ್ತಿ ತಂದಿದೆಯಾ. . ?
 ಹೌದು/ಇಲ್ಲ
34 ನಿಮ್ಮ ಶಿಕ್ಷಕರೊಂದಿಗೆ ನಿಮ್ಮ ಸಂಬದ. . . .
 ತೃಪ್ತಿ ತಂದಿದೆ/ತೃಪ್ತಿ ತಂದಿಲ್ಲ
35 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ಕೊಡುತ್ತಿರುವುದು ನಿಮಗೆ ಗೊತ್ತ. . . . ?
 ಗೊತ್ತಿದೆ/ಗೊತ್ತಿಲ್ಲ
36 ಇಲ್ಲಿ ಕಲಿಯುತ್ತಿರುವುದರಿಂದ ನಿಮ್ಮ ಜ್ಞಾನ/ಕೌಶಲ್ಯ ವೃದ್ದಿಯಾಗುತ್ತಿದೆ ಎಂದು ಭಾವಿಸುವಿರಾ . . . ?
 ಹೌದು/ಇಲ್ಲ {ಇಲ್ಲ ಅಂದರೆ ನಿರ್ದಿಷ್ಟ ಕಾರಣ}
37 ಈ ಪದವಿ ಆದ ನಂತರ ಉದ್ಯೋಗ ಸಿಗುತ್ತದೆ ಎಂಬ ಭರವಸೆ/ನಂಬಿಕೆ ನಿಮಗೆ ಇದೆಯೇ, , ?
 ಹೌದು/ಇಲ್ಲ/ಹೇಳಲು ಸಾದ್ಯವಿಲ್ಲ
38 ಉದ್ಯೋಗ ಸಿಕ್ಕದೆ ಇದ್ದ ಪಕ್ಷದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ನಿಮಗೆ ಧನಸಹಾಯ ಸಿಗುತ್ತದೆ. ಅದರ ಬಗ್ಗೆ ನಿಮಗೆ ಅರಿವು ಇದೆಯೇ. . ?
 ಹೌದು/ಇಲ್ಲ
39 ನಿಮ್ಮ ಶಿಕ್ಷಣಕ್ಕೆ ನಿಮ್ಮ ಮನೆಯವರ ಪ್ರೋತ್ಸಾಹ ಇದೆಯೇ. . . ?
 ಇದೆ/ಇಲ್ಲ
40 ನಿಮ್ಮ ಶಿಕ್ಷಣದ ಬದುಕಿನಲ್ಲಿ ನಿಮ್ಮ ಸ್ನೇಹಿತರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ. . ?
 ಹೌದು/ಇಲ್ಲ
41 ನಿಮಗೆ ಸಿಗಬೇಕಾದ ಕಲ್ಯಾಣ ಸೌಲಭ್ಯಗಳ ಕರಿತು ಚರ್ಚಿಸಲು ಅವಕಾಶ ಸಕ್ಕರೆ, ಮೇಲಾಧಿಕಾರಿಗಳೊಂದಿಗೆ ಚರ್ಚಿಸುವ ಶಕ್ತಿ ನಿಮ್ಮಲ್ಲಿದೆಯೇ. . ?
 ಇದೆ/ಇಲ್ಲ/ಪ್ರಯತ್ನ ಪಡ್ತೀವಿ.
42 ಈಗಿರುವ ಸೌಲಭ್ಯಗಳನ್ನು ಹೊರತುಪಡಿಸಿ, ನಿಮಗೆ ಬೇರೆ ಯಾವುದಾದರೂ ಸೌಲಭ್ಯದ ಅವಶ್ಯಕತೆ ಇದೆ ಎಂದು ನಿಮಗೆ ಅನಿಸಿದೆಯೇ. ?
 ಇದೆ/ಯಾವುದು ಇಲ್ಲ
43 ನಿಮ್ಮ ವಿಭಾಗದಲ್ಲಿ ಇತರೆ ಸಿಬ್ದಂದಿಯಿಂದ ನಿಮಗೆ ಎಲ್ಲಾ ರೀತಿಯ ಸಹಕಾರ ಪ್ರೋತ್ಸಾಹ ಇದೆಯಾ. . . ?
 ಇದೆ/ಇಲ್ಲ/ಪರವಾಗಿಲ್ಲ
44 ನಿಮಗೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು IAS ಮಾಡುವ ಗುರಿ ಏನಾದರೂ ಇದೆಯಾ. . ?
 ಇದೆ/ಇಲ್ಲ
45 ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಗತ್ಯವಾದ ಸೌಲಭ್ಯಗಳು ಅಗತ್ಯವಿದ್ದಾಗ ಸಿಗುವುದಿಲ್ಲ ಎಂದು ನಿಮಗೆ ಎಂದಾದರೂ ಅನಿಸಿದೆಯಾ...?
 ಹೌದು/ ಇಲ್ಲ { ಹೌದು ಅಂದರೆ ಹೇಗೆ}

No comments:

Post a Comment