ಎಲ್ಲೆಲ್ಲೂ ಮೂಡ ನಂಬಿಕೆ?!

ಕವಿ/ಲೇಕಕ/ಹಾಡುಗಾರ… ಇವರು ಯಾವುದರ ಸಲುವಾಗಿ ಇದ್ದಾರೆ? ಒಂದು ತಮ್ಮ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳಲಿಕ್ಕೆ. ಮತ್ತೊಂದು ನೊಂದವರನ್ನು/ಸಮಾಜವನ್ನು ಸ್ಪೂರ್ತಿಯಾಗಿಸಲಿಕ್ಕೆ ತಾನೆ?
ಇವರು ಮಾಡಿದ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನು ಇಲ್ಲವಲ್ಲ? ಅಶ್ಟಕ್ಕೂ ಕವಿ/ಲೇಕಕ/ಹಾಡುಗಾರ… ಗಳವರು ಮಾಡಿದ ಪ್ರಯತ್ನಗಳನ್ನು ಆಸ್ವಾದಿಸುವವರಿಗೇನೇ ಬಿಡುವಂತೆ ವಿಜ್ಞಾನಿಗಳು ತಮ್ಮ ಪ್ರಯತ್ನದ ಶ್ರಮದ ಒತ್ತಡದಿಂದ ಹೊರಬರಲು ಕಣ್ಣಿಗೆ ಕಾಣದ ಶಕ್ತಿಯ ಮೊರೆ ಹೋಗುವುದರಲ್ಲಿ ತಪ್ಪು ಇಲ್ಲವೇ ಇಲ್ಲ ಮತ್ತು ಆ ತೆರನ ಪ್ರಯತ್ನದ ಹಿಂದಿನ ನಂಬಿಕೆಯನ್ನು ಮೂಡನಂಬಿಕೆ ಎನ್ನಲಾಗದು. ಒಂದು ವೇಳೆ ಹಾಗೆನ್ನುವವರೇ ಮೂಡರು!
ನೀವು ಶಿಕ್ಶಕರಾಗಿ ಈ ಹಿನ್ನಲೆಯಲ್ಲಿ ಯೋಚಿಸಿ ನೋಡಿ. ನೀವು ತರಗತಿಯಲ್ಲಿ ಪಾಟ ಎಶ್ಟೇ ಉತ್ತಮವಾಗಿ ಮಾಡಿರಬಹುದು. ಆದರೆ, ಈ ನಿಮ್ಮ ಪಾಟ ಎಲ್ಲಾ ವಿದ್ಯಾರ್ತಿಗಳ ಮಾನಸಿಕ ವಾತಾವರಣದಲ್ಲಿ ಸಮವಾಗಿ ಉಳಿದುಕೊಳ್ಳುತ್ತದೆಯೇ? ಅದಾಗ್ಯೂ ನೀವು ಕಾಣದ ಶಕ್ತಿಯನ್ನು ಎಲ್ಲರೂ ತೇರ್ಗಡೆಯಾಗುವಂತೆ ಕೇಳಿಕೊಳ್ಳುವುದಿಲ್ಲವೆ? ತರಗತಿಯಲ್ಲಿನ ವಿದ್ಯಾರ್ತಿಗಳ ಓದಿನ ವೈಕರಿ ಸಮವಾಗಿ ಇರಲಾಗದು ಅಲ್ಲವೆ? ಹಾಗೆಯೇ ವಿಜ್ಞಾನಿಗಳೂ ರೂಪಿಸಿದ ಯಾವುದೇ ತೆರನ ಯಂತ್ರಗಳು ಕೈಕೊಡಬಾರದೂ ಅಂತವೇನೂ ಇಲ್ಲವಲ್ಲ?

ಮಾನವನ ಮಾನಸಿಕ ಸ್ತಿತಿ ಹೇಗಿದೆ ಎಂದರೆ,
ಯುಕ್ತಿ/ಶಕ್ತಿ /ಇವೆರಡರ ಮೂಲಕ
“ಸಮರ್ತನೆಗೊಂದು ಸಮರ್ತನೆ/ ತೆಗಳಿಕೆಗೊಂದು ತೆಗಳಿಕೆ /ಪ್ರೇರಣೆಗೊಂದು ಪ್ರೇರಣೆ ಇವುಗಳಲ್ಲಿ ಪೈಪೋಟಿಗೆ ಇಳಿಯುವುದೇ ಆಗಿದೆ.”
ಈ ನಿಟ್ಟಿನಲ್ಲಿಯೇ ತನ್ನದೇ ಆದ ಅಹಮ್ಗೆ ಮಾನವ ಒತ್ತು ನೀಡುತ್ತಾ ಬೇರೆಯವರನ್ನು ಹತೋಟಿಗೆ/ಮೆಚ್ಚುಗೆಗೆ ಒಳಪಡಿಸಿಕೊಳ್ಳಲು ಹವಣಿಸುತ್ತಾ ಇರುವುದು.

“ಕಾನೂನು ದರ್ಮವಾಗಿ ರಾಜಕೀಯ ಇದರ ಆದ್ಯಾತ್ಮವಾಗಿರಲಿ” ಎಂದುಕೊಂಡಿರುವವರು ಕಾಣುತ್ತಿರುವ ಸಮಾನತೆಯ ಕಲ್ಪನೆಯೇ ಮೂಡನಂಬಿಕೆ ತಾನೆ? ನಿಗಮ..ಆಯೋಗ ಪರಿಶತ್ತು ಹಾಗೂ ಇಲಾಕೆ ಈ ವ್ಯವಸ್ತೆಯಲ್ಲಿ ತಮ್ಮವರ ಪರವಾಗಿ ಲಾಬಿ ಮಾಡುವ ರೂಡಿ ಇದೆ. ಸರ್ಕಾರದ ವ್ಯವಸ್ತೆಯಲ್ಲಿ ಆಡಳಿತವನ್ನು ನಡೆಸಬೇಕಾಗಿರುವುದು ರಾಜಕೀಯ ಪಕ್ಶ ಇದು ಸರಿಯಾಗಿಯೇ ಇದೆ. ಆದರೆ ನಿಗಮ..ಪರಿಶತ್ತು ಈ ವ್ಯವಸ್ತೆಯನ್ನೇ ನೋಡಿ ಎಶ್ಟು ತಪ್ಪುಗಳಿವೆ. ಮೊದಲು ಅಂತಹ ತಪ್ಪುಗಳನ್ನು ಇಲ್ಲವಾಗಿಸಬೇಕಲ್ಲವೆ?
ದರ್ಮವೇನೋ ಮೊದಲು ಅನಕ್ಶರಸ್ತರಿಂದ ಅಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಇದರಲ್ಲಿ ತಪ್ಪುಗಳು ಇವೆ. ಆದರೆ ಕಾನೂನು ಅಕ್ಶರಸ್ತರಿಂದ ರೂಪಿಸಲ್ಪಟ್ಟು ಅನಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಲಿಕಿತದಲ್ಲಿದ್ದಾಗ್ಯೂ ಕಾನೂನನ್ನು ತಮ್ಮವರಿಗೆಂದು ತಿರಿಚಿಕೊಳ್ಳುವ ಹಿಂದಿನ ಗುಟ್ಟು ಕ್ಶಮಿಸಲಾರದ ತಪ್ಪು. ಕಾನೂನು ಹಾಗೂ ದರ್ಮಗಳೆರಡೂ ಹತೋಟಿಯ ತಂತ್ರಗಳೆ ತಾನೆ?
CBI ವಿಚರವನ್ನೇ ನೋಡಿ. ಲಿಕಿತದ ಪುರಾವೆ ಇದ್ದಾಗ್ಯೂ ನ್ಯಾಯಾಲಯಗಳು ಎರಡೆರಡು ತೆರನ ತೀರ್ಪನ್ನು ಕೊಡುತ್ತವೆ.
ಹೀಗೇನೆ ದರ್ಮದಲ್ಲೂ ಆಯಾ ಗುಂಪಿನವರಿಗೆ “ಅವರೇ ಹೇಳಿದ್ದು ಅವರಿಗೆ ಸರಿ” ಎನ್ನುವ ಮನಸ್ತಿತಿ ಇದೆ. ಕಾನೂನು ಯಾಕೆ ದೇಶ/ಬಾಶೆ/ವರ್ಗಕ್ಕೆ ಬೇರೆಬೇರೆ ಇದೆ? ಇದರ ರಚನೆಯೂ ಒಂದು ಮಾನಸಿಕ ಸ್ತಿತಿಗನುಗುಣವಾಗಿಯೇ ಇರೋದು ತಾನೆ?
ಗಲ್ಲು ಶಿಕ್ಶೆಗೆ ಸಂಬಂದಪಟ್ಟಂತೆ ಕಾನೂನಿನಲ್ಲಿರುವವರೇ ಬೇರೆಬೇರೆ ನಿಲುವನ್ನು ತಾಳುತ್ತಾರೆ. ಒಂದು ತಪ್ಪು ಆಗಿದೆ ಎಂದ ಮೇಲೆ ಆ ತಪ್ಪನ್ನು ಇಲ್ಲವಾಗಿಸಬೇಕು ಅಲ್ಲವೆ? ಕಂಪ್ಯೂಟರ್ನಲ್ಲಿ ವೈರಸ್ ಇದೆ. ಅದನ್ನು ಡಿಲಿಟ್ ಮಾಡದೆ ಕೇವಲ ಹತೋಟಿ ಮಾಡಿದರೆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತದೆಯೇ?
ಹೀಗೇನೆ, ಸಮಾಜವೆಂಬ ಕಂಪ್ಯೂಟರ್ನಲ್ಲಿ ಡಿಲಿಟ್ ಇರಬೇಕು ಜೊತೆಗೆ ನಿಯಂತ್ರಣವೂ ಇರಬೇಕು.
ಮೂಡನಂಬಿಕೆ ಮತ್ತು ನಂಬಿಕೆಗೆ ಈ ಗಾದೆಮಾತನ್ನು ತುಸು ನೆನಪಿಗೆ ತಂದುಕೊಳ್ಳಿ.
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಇದರಲ್ಲಿ ಎಲ್ಲರೂ
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ”
ಎಂಬುವುದನ್ನು ಯಾವ ವಾದವಿಲ್ಲದೆ ಒಪ್ಪಿಬಿಡುತ್ತಾರೆ.
ಆದರೆ
“ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಎಂಬುವುದನ್ನು ದರ್ಮ ಒಪ್ಪಲಾರದು ಆದರೆ ದರ್ಮದೊಳಗಿರುವ ತೀರಾ ಕಡಿಮೆ ಮಂದಿ ಒಪ್ಪುವರು ಇದ್ದಾರೆ. ಈ ಗಾದೆಯನ್ನು ಒಬ್ಬ ವ್ಯಕ್ತಿ ಆಯಾ ವಯೋಗನುಗುಣವಾಗಿ ಸಮರ್ತನೆ ನೀಡುತ್ತಾನೆ. ಯುವಕರಾದ ನಮ್ಮಂತವರಿಗೆ ಆಶ್ಚರ್ಯ/ಒಪ್ಪಲಾರದ/ೊಪ್ಪುವ/ ನಗೆಯ ಸಾಲು. ಇನ್ನು ಮದುವೆಯಾದವರಿಗೆ ಅನುಮಾನ, ವೃದ್ದರಿಗೆ ಬುದ್ದಿ ಮಾತನ್ನು ಹುಟ್ಟಿಸುವ ಸಾಲು.
ಕಾನೂನಿನಲ್ಲಂತೂ ಗೊಂದಲ. ಒಂದು ದೇಶದಲ್ಲಿ ನಿಯಂತ್ರಣ ಮತ್ತೊಂದರಲ್ಲಿ ವಯಕ್ತಿಕ ನೆಲೆಯದ್ದು ಆಗಿದೆ.
ಗಾದೆ ಮಾತುಗಳಲ್ಲಿ ಈ ಮೇಲೆ ಬರೆದ ಗಾದೆಯನ್ನು ಸಮರ್ತಿಸುವ ಇನ್ನುಳಿದ ಗಾದೆಗಳು ಇವೆ. ಅಂತೆಯೇ ಈ ಗಾದೆಯನ್ನು ನಿಯಂತ್ರಿಸುವ ಗಾದೆ ಮಾತುಗಳೂ ಇವೆ.
ನನ್ನ ಪ್ರಕಾರ ಮೂಡನಂಬಿಕೆ ಎಂದರೆ,
ಪರ ಹಾಗೂ ವಿರೋದದ ನಂಬಿಕೆಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ವರ್ತನೆಯೇ ‘ಮೂಡನಂಬಿಕೆ’ ಯಾಗಿದೆ.
ಕೊನೆಯದಾಗಿ,
ಒಂದು ದೃಶ್ಟಿಕೋನವನ್ನು ನಂಬುವುದನ್ನೋ/ಪ್ರಶ್ನಿಸುವುದನ್ನೋ ಯಾರು ಮಾಡುತ್ತಿರುತ್ತಾರೋ ಅವರು ಅಶ್ಟೇ ಬೌದ್ದಿಕ ಕುಬ್ಜರಾಗುತ್ತಾರೆ. ಅಂತವರು ಈ ಬೌದ್ದಿಕ ಕುಬ್ಜರಾಗದಿರಲು ಇರುವ ಒಂದೆ ಮಾರ್ಗವೆಂದರೆ
ಎಲ್ಲಾ ತೆರನ ವೈವಿದ್ಯತೆಗೆ ತೆರೆದುಕೊಳ್ಳಬೇಕು ಮತ್ತು ವಿಶಾಲವಾಗಿ ಯೋಚಿಸುವುದನ್ನು ಮಾಡಬೇಕು. ಅದಕ್ಕೂ ಮುನ್ನ ಸಮಾನತೆಯ ಕಲ್ಪನೆಯನ್ನು ಬಿಟ್ಟು ಅಸಮಾನತೆಯ ನಿಯಂತ್ರಣಕ್ಕೆ ಪ್ರಯತ್ನಿಸುವ ಆಲೋಚನೆಯನ್ನು ಮಾಡಬೇಕು.
‘ಸಮಾನತೆ’ ಇದು ಪರಿಪೂರ್ಣದ ಸಂಕೇತ. ಆದರೆ ಪ್ರಕೃತಿ ನಿರ್ಮಿತದಲ್ಲಿ ಸಮಾನತೆಯೇ ಇಲ್ಲ. ಮಾನವ ಈ ಪ್ರಕೃತಿಯ ಅಸಮಾನತೆಯನ್ನು ತನ್ನ ಜಾಣ್ಮೆಯಿಂದ ಇಲ್ಲವಾಗಿಸಲು ಯತ್ನಿಸುತ್ತಿದ್ದಾಗ್ಯೂ ಪ್ರಾಕೃತಿಕ ಕಾರಣಗಳಿಂದಾಗ್ಇ ಸಮಾನತೆಯನ್ನು ಗಳಿಸಲು ಆಗುತ್ತಿದೆಯೇ?
ಇನ್ನು ಮಾನವನೇ ಒಂದು ವಿಚಿತ್ರ. ಮನಸ್ಸಿಗೆ ಚಿತ್ರಿಸಿಕೊಂಡದ್ದನ್ನು ಬೇರೆಯವರ ಮೇಲೆ ಗೀಚುವ ಹಂಬಲದವನೂ. ಇಂತಹ ಮನಸ್ತಿತಿಯ ಮನುಶ್ಯನಿಂದ ಸಮಾನತೆಯನ್ನು ಗಳಿಸಲು ಆಗುವುದೇ?

ಗೊಂದಲನ ಸೋಂಕು


ಗೊಂದಲ ಹುಟ್ಟಿದ ಬಳಿಕ ತಂದೆ ತಾಯಿಗಳೊಡನೆ ತನ್ನ ಅಮ್ಮನ ತವರಿನಿಂದ ತಂದೆಯ ತವರಿಗೆ ಬರುವಾಗ ದೋಣಿಯ ಮೂಲಕ ಬರಬೇಕಾಗಿತ್ತು. ಅಂತೆಯೇ ಆ ದಿನ ಈ ಮೂವರು ಇತರೆ ಜನರೊಡನೆ ದೋಣಿ ಮೂಲಕ ಬರುವಾಗ ಪ್ರವಾಹದಲ್ಲಿ ಕೊಚ್ಚಿ ಹೋದರು. ಗೊಂದಲ ತಂದೆ-ತಾಯಿಗಳಿಲ್ಲದ ಮಗುವಾದ. ತಂದೆ ತಾಯಿ ಸತ್ತರೆಂದು ಭಾವಿಸದಿರಿ. ದೋಣಿ ನೀರಿನಲ್ಲಿ ಮುಳುಗಿದಾಗ ತಾತ್ಕಾಲಿಕವಾಗಿ ಮೂವರೂ ಎರಡು ದಿಕ್ಕಾದರು. ಈ ಗೊಂದಲನ ಸ್ವಭಾವವೇ ಬೇರೆಯವರನ್ನು ಗೊಂದಲಕ್ಕೆ ಈಡು ಮಾಡುವುದು. ಆದಿನ ಅಂಬಿಗನನ್ನೂ ಸಹ ಗೊಂದಲಕ್ಕೆ ಈಡು ಮಾಡಿ ತಪ್ಪಿಸಬಹುದಾಗಿದ್ದ ಅವಘಡವನ್ನು ಆಗಿಸಿದ. ಗೊಂದಲನ ಹಾಲು ಮತ್ತು ಬಾಳು ಈಗ ಸರ್ಕಾರದ ಶಿಶು ಪಾಲನಾ ಕೇಂದ್ರದ ಹೆಗಲಿಗೆ ಬಿತ್ತು. ಶಿಶು ಪಾಲನಾ ಕೇಂದ್ರದವರೂ ತಮ್ಮ ಅಧೀನಕ್ಕೆ ಗೊಂದಲನನ್ನು ಪಡೆಯುವುದಕ್ಕೂ ಮುನ್ನ ಯಾರಾದರೂ ಗೊಂದಲನನ್ನು ಸಾಕಲು ಬಂದರೆ ಅವರಿಗೆ ಸಂಪೂರ್ಣ ಆರ್ಥಿಕ ನೆರವನ್ನೂ ಹಾಗೂ ಉದ್ಯೋಗವನ್ನೂ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದರು. ಇಷ್ಟೆಲ್ಲಾ ಪ್ರಯತ್ನ ಕೈಗೂಡದಕ್ಕಾಗಿ ಶಿಶು ಪಾಲನ ಕೇಂದ್ರದವರೇ ಗೊಂದಲನ ಆಸರೆಗೆಂದು ನಿಲ್ಲಬೇಕಾಯಿತು. ಅಂತೂ ಗೊಂದಲನು ಪ್ರಾಥಮಿಕ ಶಿಕ್ಷಣದಿಂದ ಪದವಿಯ ತನಕದ ಶಿಕ್ಷಣವನ್ನು ಸರ್ಕಾರದ ನೆರವಿನಿಂದ ಸರ್ಕಾರಿ ಶಾಲಾ-ಕಾಲೇಜಿನಲ್ಲಿಯೇ ಮುಗಿಸಿದ.

ಎಲ್ಲಾ ಹಂತದ ಶಿಕ್ಷಣದ ಪರೀಕ್ಷೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಕೆಲವು ಸಾಲುಗಳಲ್ಲಿ ಉತ್ತರವನ್ನು ಚೆನ್ನಾಗಿ ಬರೆದು ಉಳಿದ ಸಾಲುಗಳಲ್ಲಿ ಬೇಕಾಬಿಟ್ಟಿ ಗೀಚೀಗೀಚೀ ಮೌಲ್ಯಮಾಪಕರನ್ನೇ ಗೊಂದಲಕ್ಕೆ ಈಡು ಮಾಡಿ ಅಂತೂ ತೇರ್ಗಡೆಯಾಗಿದ್ದ ಗೊಂದಲನು ಈಗ ಕೆಲಸಕ್ಕೆ ಗಾಳ ಹಾಕಿದ. ಕೆಲಸವೆಂದರೆ ಕೆಲಸ ಅಮೃತವನ್ನು ಅಮೃತದೊಡನೆ ಕಲಸಿ ತಿನ್ನುವಷ್ಟು ಸಂಬಳ ಸಿಗುವ ಕೆಲಸ ಅವನಿಗೆ ಬೇಕಾಗಿತ್ತು! ಗೊಂದಲ ಯೋಚಿಸಿದ ನ್ಯಾಯದ ಮಾರ್ಗವನ್ನು ತುಳಿಯಲೇ ಅಥವಾ ಅವನ ವಿರೋಧಿಯ ಪಥ ಒಳ್ಳೆಯದೆ ಎಂದು. ಏನೂ ತಿಳಿಯದೆ ಗಾಳಿಯ ಗಾಲಿಯಲ್ಲವೆ ನಾನು? ಗಾಳಿ ಬೀಸಿದಂತೆ ತಿರುಗುವುದೇ ಸರಿ ಎಂದು ಭಾವಿಸಿದನು. ಆಗಷ್ಟೆ ರಾಜ್ಯದ ಪ್ರಥಮ ಶ್ರೇಣಿಯ ಹುದ್ದೆಗಳಿಗೆ ಅರ್ಜಿಯನ್ನು ಹಾಕುವ ಅವಕಾಶವೂ ಇದ್ದುದ್ದರ ಜೊತೆಗೆ ಬಹು ಚರ್ಚಿತ ವಿಷಯವೂ ಆಗಿದ್ದರಿಂದ ಓಹ್! ನಾನೂ ಯಾವುದಾದರೊಂದು ಇಲಾಖೆಯ ಪ್ರಥಮ ಶ್ರೇಣಿಯ ಹುದ್ದೆಗೆ ಸೇರಲೇ ಬೇಕೆಂದು ತಾನೂ ಸಹ ಅರ್ಜಿಯನ್ನು ಹಾಕಿಯೇ ಬಿಟ್ಟ. ಪ್ರಥಮ ಶ್ರೇಣಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಹಂತಗಳ ಪರೀಕ್ಷೆಗಳಲ್ಲಿಯೂ ಈ ಹಿಂದಿನ ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯಲು ಅನುಸರಿಸುತ್ತಿದ್ದ ವಿಧಾನವನ್ನೇ ಅನುಸರಿಸಿ ಅಂತೂ ಇಲ್ಲಿಯೂ ತೇರ್ಗಡೆಯಾದ! ಸದರಿ ಪರಿಕ್ಷೆಗಳನ್ನು ನಡೆಸುತ್ತಿದ್ದ ಆಯೋಗವು ಪರೀಕ್ಷೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಎರಡೆರಡು ಸಲ key answer ಗಳನ್ನು ಅಂತರ್ಜಾಲದ ಮೂಲಕ ಹಾಕುತ್ತಿದ್ದದ್ದು ಗೊಂದಲನ ಹಾಗೂ ಸೋಂಬೇರಿ ಎಂಬಾತನ ಪ್ರಭಾವದಿಂದಲೆ!

ಸಂದರ್ಶನದಲ್ಲೂ ಅವರಿವರಿಂದ ರಾಜಕೀಯ ಮತ್ತು ಹಣದ ಸಹಾಯ ಪಡೆದು ಸ್ವಲ್ಪ ಬುದ್ಧಿ ಬಳಸಿ ಗೆದ್ದ ಗೊಂದಲನಿಗೆ ಈಗ ಎಲ್ಲಿಲ್ಲದ ಸಂತೋಷ! ಆದರೆ, ಕೆಲವರು ತಮಗೆ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ಫಲ ಹಗರಣಗಳು ಹೊರಬರಲು ಸಾಧ್ಯವಾಯಿತು. ಗೊಂದಲನ ಉತ್ತರ ಪತ್ರಿಕೆಗಳೂ ಸಹ ತನಿಖೆಗೆ ಒಳಪಡುವ ಸಾಧ್ಯತೆ ಇದ್ದರಿಂದ ಗೊಂದಲ ಕೊಂಚ ಬುದ್ಧಿ ಬಳಸಿ ತನ್ನ ಉತ್ತರ ಪತ್ರಿಕೆಗಳನ್ನು ಹೇಗೋ ಬೇರೆಯವರ ನೆರವಿನಿಂದ ಸರಿಪಡಿಸಿದ. ತನಿಖೆಯಲ್ಲಿ ಈತನೂ ಸಹ ತಪ್ಪು ಮಾಡಿರುವುದು ಬೆಳಕಿಗೆ ಬಂದಿತು. ಆದರೆ ಪ್ರಭಾವ ಬಳಸಿ ಸರ್ಕಾರದ ಒಂದು ಇಲಾಖೆಯ ಕಾರ್ಯದರ್ಶಿಯಾದ.

ಈತ ಒತ್ತಡ ಮತ್ತು ವಂಚನೆ ಈ ಈರ್ವರ ನೆರವಿನಿಂದ ಸಿದ್ಧಪಡಿಸುತ್ತಿದ್ದ ಕಡತಗಳೂ ಮತ್ತು ಪತ್ರಗಳೂ ಯಾರಿಗೂ ಅರ್ಥವಾಗದಾಗ ಸರ್ಕಾರವೇ ಈತನನ್ನು ಮಾತ್ರ ಹುದ್ದೆಯಿಂದ ಕೇವಲ ಐದೇ ವರ್ಷಗಳಲ್ಲಿ ತೆಗೆದು ಹಾಕಿತು. ಗೊಂದಲ ಹುದ್ದೆಯಲ್ಲಿ ಮುಂದುವರಿಯಲು ಯಾವ ಪ್ರಯತ್ನವನ್ನು ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ರಾಜಕೀಯದ ಪ್ರಭಾವ ಗೊಂದಲನಿಗಿಲ್ಲದೇ ಇದ್ದದ್ದು.

ತಾನು ಸುಮ್ಮನಿರಲು ಸಾಧ್ಯವಿಲ್ಲ. ಈ ಮುಂಚೆಯೋ ಹೊಟ್ಟೆಗೆ ಮತ್ತು ಬಟ್ಟೆಗೆ ಸರ್ಕಾರವೇ ನೆರವಾಗುತ್ತಿತ್ತು. ಖಾಸಗಿ ಕ್ಷೇತ್ರಕ್ಕೆ ಹೋಗಿಬಿಟ್ಟರೆ ಉತ್ತಮ ಎಂದುಕೊಂಡವನೆ ಒಳ್ಳೆಯ ಕಂಪನಿಯಲ್ಲಿ ನೌಕರನಾದ. ಇಲ್ಲಿಯೂ ಗೊಂದಲನು ತನ್ನ ಹಿಂದಿನ ಸ್ನೇಹಿತರನ್ನು ಭೇಟಿ ಮಾಡಬೇಕಾಯಿತು. ಇವರಿಬ್ಬರೂ ತಮ್ಮ ಸ್ಥಾನಕ್ಕೆ ಬೇರೆ ಪಕ್ಷದ ಬೆಂಬಲವುಳ್ಳ ತಮ್ಮಂತಿರುವ ಬೇರೆಯವರು ಬಂದಿದ್ದಾರೆಂದು ಗೊಂದಲನಿಗೆ ಹೇಳಿದರು. ‘ಹಾಗಾದರೆ, ನಾನಿದ್ದ ಸ್ಥಾನಕ್ಕೆ’-ಗೊಂದಲನು ಎಂದಾಗ ಒತ್ತಡನು ‘ಅವನೂ ನಿನ್ನಂತೆಯೇ ಇದ್ದಾನೆ’ -ಎಂದು ಮೂವರು ಕುಶಲೋಪರಿಗಳನ್ನು ವಿನಿಮಯಿಸಿಕೊಂಡು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದರು.

ಕಂಪನಿಯವರಿಗೆ ತಡವಾಗಿ ಗೊಂದಲನ ಕಾರ್ಯಗಳು ಕಂಪನಿಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದನ್ನು ತಿಳಿದು ಗೊಂದಲನನ್ನು ಹೊರಹಾಕಲು ಕೆಲವು ಮಂದಿಗಳು ಪ್ರಯತ್ನವನ್ನು ಮಾಡಿದರು. ಈ ಕಂಪನಿಯಲ್ಲಿನ ಕೆಲವು ಮಂದಿಗಳ  ಪ್ರಯತ್ನದ ಫಲವಾಗಿ ಎಚ್ಚರನ ಬಟ್ಟೆಯನ್ನು ಧರಿಸಿದರೆ ಗೊಂದಲನ ಕಾಟದಿಂದ ತಪ್ಪಿಸಿಕೊಳ್ಳಬಹುದೆಂದು ಸಂಶೋಧನೆಯ ಮೂಲಕ ಎಲ್ಲರಿಗೂ ತಿಳಿಯಿತು. ಕಂಪನಿಯವರು ಈ ಎಚ್ಚರನ ಬಟ್ಟೆಯನ್ನು ಧರಿಸಿಯೇ ಗೊಂದಲನನ್ನು ಮತ್ತು ಅವನ ಸ್ನೇಹಿತರಿಬ್ಬರನ್ನು ಹೊರಹಾಕಿದರು. ಕಂಪನಿಯಿಂದ ಹೊರಬಿದ್ದ ತಕ್ಷಣ ಗೊಂದಲ ತನ್ನ ಇಬ್ಬರ ಸ್ನೇಹಿತರನ್ನು ಬಿಟ್ಟು ಭಿಕ್ಷೆ ಬೇಡಿ ಜೀವನವನ್ನು ಸಾಗಿಸ ತೊಡಗಿದ.

ಒಂದು ದಿನ ಗೊಂದಲನಿಗೆ ಭಿಕ್ಷೆ ಬೇಡಿದರೂ ಏನೂ ಧಕ್ಕಲೇ ಇಲ್ಲ. ಆಗ ಕಳುವು ಮಾಡಿಯಾದರೂ ಬದುಕಲೇಬೇಕು ಎಂದು ಕಳ್ಳತನಕ್ಕೆ ಇಳಿದ. ಪೋಲಿಸರಿಗೂ ಹಿಡಿಯಲು ಅಸಾಧ್ಯವಾಗುತ್ತಿತ್ತು. ಪೋಲಿಸರು ಎಚ್ಚರ ಹಾಗೂ ಪ್ರಜ್ಞೆ ಎಂಬಿಬ್ಬರ ಸಹಾಯದಿಂದ ಗೊಂದಲನನ್ನು ಬಂಧಿಸಿದರು. ಗೊಂದಲ ಕೆಲವು ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಹೊರಬಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಕೆಟ್ಟ ಮತ್ತು ಒಳ್ಳೆಯ ಅಂಶಗಳುಳ್ಳ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ತನ್ನಂತಿರುವವರು ಇದ್ದಾರೆಂದೂ, ಇಲ್ಲಿ ತನ್ನ ತಾಯಿ-ತಂದೆ ಸಿಗಲಾರರೆಂದು ಮನವರಿಕೆ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಿಗಿಂತ ಉತ್ತಮವಾದ ಮತ್ತು ಎಲ್ಲರಿಗೂ ಅಹಾರವನ್ನು ಒದಗಿಸುವ ಕ್ಷೇತ್ರವಾದ ಬೇಸಾಯ ಕ್ಷೇತ್ರಕ್ಕೆ ಹೋಗಿ ಬೇಸಾಯ ಮಾಡಿದರೆ ತನ್ನ ತಂದೆ-ತಾಯಿಯನ್ನು ಕಾಣಲು ಸಾಧ್ಯವಾಗಬಹುದೆಂದು ಯಾವುದೋ ಹಳ್ಳಿಗೆ ತೆರಳಿ ಅಲ್ಲಿಯೇ ಬೇಸಾಯ ಮಾಡುವುದನ್ನು ಕಲಿತು ಕೃಷಿಕನಾದ. ಈಗ ಗೊಂದಲನ ಆಟಾಟೋಪಗಳು ಕಡಿಮೆಯಾಗಿದ್ದವು. ಇದರ ಜೊತೆಗೆ ತನ್ನ ತಾಯಿ-ತಂದೆ ಸಿಗುವ ಸುಳಿವೂ ಸಹ ಮನಸ್ಸಿನಲ್ಲಿ ಆಗಾಗ ಮೂಡುತ್ತಿತ್ತು.

ಒಂದು ಸಂಜೆ ಗೊಂದಲನು ಉಳುಮೆ ಮಾಡಿ ತೋಟದಿಂದ ಮನೆಗೆ ಬಂದವನೆ ನೇಗಿಲನ್ನು ಮೂಲೆಯಲ್ಲಿಟ್ಟು ನೆಲದ ಮೇಲೆ ಕಣ್ಣೀರನ್ನು ಸುರಿಸುತ್ತಾ ಮಲಗಿ ತನ್ನ ತಂದೆ-ತಾಯಿ ಮತ್ತು ಈ ಹಿಂದಿನ ತನ್ನ ಕಾರ್ಯಗಳೆಲ್ಲವನ್ನು ನೆನೆದು ನೆನೆದೂ ತನ್ನ ಕಣ್ಣೀರಿನಿಂದಲೇ ಒದ್ದೆಯಾದ. ಈ ಹೊತ್ತಿಗೆ ಸಮಾಧಾನನು ಗೊಂದಲನ ಮನೆಗೆ ಬಂದು ಪ್ರಜ್ಞನ ತಪಸ್ಸನ್ನು ಮಾಡುವಂತೆ ತನಗೆ ತೋಚಿದ ಪರಿಹಾರಗಳನ್ನು ಹೇಳಿ ಹೋಗಿದ್ದ. ಸಮಧಾನನ ಮಾತನ್ನು ಕೇಳಿ ಗೊಂದಲನು ತುಸು ನಿರಾಳನಾಗಿಯೇ ಬಾಗಿಲನ್ನು ಹಾಕಿಕೊಂಡು ಊಟವನ್ನು ಮಾಡದೆಯೇ ‘ನ್ಯಾಯದ ಪಥನೋ?, ಅನ್ಯಾಯದ ಪಥನೋ? ಮತ್ತು ಒಳ್ಳೆಯ ಪಥ ಯಾವುದೋ?’ ಎಂದು ಯೋಚನೆಗಳನ್ನು ಮನಸ್ಸಿಗೆ ಹತ್ತಿಸಿಕೊಂಡು ಮಲಗಿ ನಿದ್ದೆಗೆ ಜಾರಿದ.

ಅನ್ಯಾಯನು ರಭಸದಲ್ಲಿ ಬಂದು ಬಾಗಿಲನ್ನು ಬಡಿದು ಗೊಂದಲನನ್ನು ನಿದ್ದೆಯಿಂದ ಎಬ್ಬಿಸಿ ‘ನೀನು ನನ್ನ ಪಥದಲ್ಲಿ ನಡೆಯುವುದೇ ಉತ್ತಮ. ಈ ಜಗತ್ತಿನಲ್ಲಿ ನನ್ನ ಅನುಯಾಯಿಗಳೇ ಬಹು ಸಂಖ್ಯಾತರಿದ್ದಾರೆ. ನಿನಗೆ ಅಗತ್ಯವಾದಾಗ ಅವರು ನಿನ್ನ ನೆರವಿಗೆ ಬರುತ್ತಾರೆ’-ಎಂದು ತನ್ನ ತೆಕ್ಕೆಯಲ್ಲಿ ಗೊಂದಲನನ್ನು ಬಂಧಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಸೌಮ್ಯವಾಗಿ ಗೊಂದಲನ ಮನೆಯೊಳಗೆ ಬಂದು ನ್ಯಾಯನು ಅನ್ಯಾಯನಿಗೆ ಕೈಮುಗಿದು ‘ದಯವಿಟ್ಟು ಬಿಡಿ. ಅವರ ಪಾಡಿಗೆ ಇರಲು ಬಿಡಿ.’-ಎನ್ನುತ್ತಲೇ ಗೊಂದಲನಿಗೆ ‘ದಯವಿಟ್ಟು ಅನ್ಯಾಯನನ್ನು ನಂಬಬೇಡಿ ನೀವು ನೀವಾಗಿ ಯಾರಿಗೂ ತೊಂದರೆಯನ್ನು ನೀಡದೆ ಬದುಕಬೇಕೆಂದರೆ ನನ್ನ ಪಥಕ್ಕೆ ಬನ್ನಿ. ಇಲ್ಲಿ ಎಲ್ಲರಿಗೂ ಗೌರವವಿರುತ್ತದೆ. ಎಲ್ಲರ ನಡುವೆಯೂ ಹೊಂದಾಣಿಕೆ ಇರುತ್ತದೆ. ಈ ಅನ್ಯಾಯನ ಪಥ ಕೇವಲ ಕಿತ್ತು ತಿನ್ನುವ ಪಥ’-ಎಂದು ತನ್ನ ಮಾತನ್ನು ನಿಲ್ಲಿಸಿದನು. ಆಗ ಅನ್ಯಾಯನು ನ್ಯಾಯನ ಕಪಾಳಕ್ಕೆ ಹೊಡೆಯುತ್ತಾನೆ. ನ್ಯಾಯನು ಪ್ರಶಾಂತದಲ್ಲಿ ‘ನಿಮಗೆ ಹಿಂಸೆ ಇಷ್ಟವಾದರೆ ಅವನನ್ನು ಈಗಲೇ ಅಪ್ಪಿಕೊಳ್ಳಿ. ನಿಮಗೆ ತಾಯಿತಂದೆ ಬೇಕಿದ್ದರೆ ಈ ನಿಮ್ಮ ಮನೆಯನ್ನು ಅನ್ಯಾಯನಿಗೆ ಬರೆದುಕೊಟ್ಟು ನನ್ನೊಂದಿಗೆ ಬನ್ನಿ. ಖಂಡಿತವಾಗಿಯೂ ನಿಮ್ಮ ತಾಯಿತಂದೆ ಸಿಗುತ್ತಾರೆ.’-ಎಂದು ಗೊಂದಲನಿಗೆ ಭರವಸೆಗಳನ್ನು ತುಂಬುತ್ತಾನೆ. ವಾಸ್ತವದ ಮತ್ತು ಭಾವನಾತ್ಮಕ ಅಂಶಗಳನ್ನು ಗೊಂದಲನಿಗೆ ಮನವರಿಕೆ ಮಾಡಿಕೊಟ್ಟ ನ್ಯಾಯನನ್ನು ಕೊಲ್ಲಲು ಅನ್ಯಾಯನು ಮುಂದಾಗುತ್ತಾನೆ. ಇದೇ ಸಮಯಕ್ಕೆ ವಿವೇಕನು ಗೊಂದಲನ ಮನೆಗೆ ಬಂದು ಅನ್ಯಾಯನು ನಿಶ್ಚಯಿಸಿಕೊಂಡಿದ್ದ ಕೃತ್ಯವನ್ನು ತಡೆಗಟ್ಟುತ್ತಾನೆ. ವಿವೇಕನು ನ್ಯಾಯನಿಗೂ ಹಾಗೂ ಅನ್ಯಾಯನಿಗೂ ತಮ್ಮ ತಮ್ಮ ಬೆಂಬಲಿಗರನ್ನು ಕರೆತರುವಂತೆ ತಿಳಿಸುತ್ತಾನೆ. ತಾನೆ ಗೆಲ್ಲುವುದಾಗಿ ಭಾವಿಸಿ ದಡದಡನೆ ಅನ್ಯಾಯನು ತನ್ನ ಬೆಂಬಲಿಗರನ್ನು ಕರೆದು ನ್ಯಾಯನನ್ನು ಹಂಗಿಸುತ್ತಾನೆ. ನ್ಯಾಯನು ತನ್ನ ಪರವಾಗಿ ಧರ್ಮ ಮಾತ್ರ ಇರುವುದಾಗಿ ತಿಳಿಸುತ್ತಾನೆ. ವಿವೇಕನು ಗೊಂದಲನಿಗೆ ‘ಯಾರ ಪಥದಲ್ಲಿ ನಡೆಯಬೇಕೆಂದು ಈಗ ಎಲ್ಲರ ಮುಂದೆ ತಿಳಿಸಿ’-ಎಂದು ವಿನಂತಿಸಿಕೊಳ್ಳುತ್ತಾನೆ. ಗೊಂದಲನು ‘ಬಹುಸಂಖ್ಯೆಯಲ್ಲಿರುವ ಅನ್ಯಾಯನ ಪಥದಲ್ಲಿ ಇನ್ನುಮುಂದೆ ನನ್ನ ಪಯಣ’-ಎಂದು ತನ್ನ ತಲೆ ಮೇಲೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಹಾಕಿಕೊಳ್ಳುತ್ತಾನೆ. ಅನ್ಯಾಯನು ‘ನೀನು ನಿನ್ನ ಮೇಲೆ ಕಲ್ಲನ್ನು ಹಾಕಿಕೊಳ್ಳುವುದಲ್ಲ ನನ್ನ ಪಥ. ನೀನು ಚೆನ್ನಾಗಿರಲು ಬೇರೆಯವರ ಮೇಲೆ ಕಲ್ಲನ್ನು ಹಾಕಬೇಕು’-ಎಂದನು. ನ್ಯಾಯನು ‘ಈಗಾಗಲೆ ಜೈವಿಕವಾಗಿ, ನೈತಿಕವಾಗಿ ಮತ್ತು ಸಾಮಾಜಿಕವಾಗಿ ಅನ್ಯಾಯನ ಅಚ್ಚೆ ಬಹಳ ಇದೆ. ಇಂದು ನನ್ನ ಪಥದವರನ್ನು ಹುಡುಕುವುದು ಮರಳ ರಾಶಿಯಲ್ಲಿ ಸಾಸಿವೆಯ ಕಾಳೊಂದನ್ನು ಬಿಸಾಕಿ ಮತ್ತೆ ಅದನ್ನು ಹುಡುಕಿದಂತೆ ಆಗಿಬಿಟ್ಟಿದೆ. ದಯವಿಟ್ಟು ಸುಸ್ಥಿರದ ಬದುಕಿಗೆ ಅನುವಾಗುವಂತೆ ಒಂದು ವ್ಯವಸ್ಥೆಯನ್ನು ಕಲ್ಪಿಸು’-ಎಂದು ವಿವೇಕನನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ವಿವೇಕನು ಅನ್ಯಾಯನಿಗೂ ತಿಳಿಯದ ಹಾಗೆ ನ್ಯಾಯನ ಕಿವಿಯಲ್ಲಿ ‘ನಿನ್ನ ಅಸ್ತಿತ್ವವೇ ನನ್ನ ಅಸ್ತಿತ್ವ’-ಎಂದು ಹೇಳಿ, ಗೊಂದಲನಿಗೆ ‘ನೀನು ಈ ಇಬ್ಬರ ಮಾರ್ಗವನ್ನು ಬಿಟ್ಟು ಎಚ್ಚರನ ಬಟ್ಟೆಯನ್ನು ಧರಿಸಿ ಪ್ರಜ್ಞನ ತಪಸ್ಸು ಮಾಡಿ ಅವನು ತೋರಿಸಿದ ಪಥದಲ್ಲಿ ನಡೆ.’-ಎಂದು ತಿಳಿಸಿ ನ್ಯಾಯನ ಜೊತೆಗೆ ಹೋದನು. ಅನ್ಯಾಯನು ತನ್ನ ತೆಕ್ಕೆಗೆ ಬರಲು ಗೊಂದಲನನ್ನು ಪೀಡಿಸುತ್ತಾನೆ. ಆದರೆ ಗೊಂದಲ ಈತನ ಸಂಗಡ ಸೇರದೆ ವಿವೇಕನು ಹೇಳಿದಂತೆಯೇ ಅನುಸರಿಸುವುದಾಗಿ ಹೇಳುತ್ತಾನೆ. ಅನ್ಯಾಯನು ‘ಈಗ ನಾನು ಸೋತಿದ್ದೇನೆ. ಆದರೆ ಮುಂದೆ ನಿನ್ನನ್ನು ನಾನು ಬಂಧಿಸುತ್ತೇನೆ’-ಎಂದು ಶಪಥ ಮಾಡಿ ಬೆಂಬಲಿಗರೊಡನೆ ಮರೆಯಾಗುತ್ತಾನೆ.

ವಿವೇಕನು ಹೇಳಿದಂತೆ ಗೊಂದಲನು ಅನುಸರಿಸಿದ. ಇದರ ಫಲವಾಗಿ ಪ್ರಜ್ಞನು ಗೊಂದಲನ ಮನೆಗೆ ಬಂದು ‘ಮೊದಲು ಈ ಮನೆಯನ್ನು ಬಿಟ್ಟು ನೈತಿಕನ ಮನೆಗೆ ಹೋಗು. ಬಳಿಕ ನಿನ್ನ ತಂದೆ-ತಾಯಿ ತಾವಾಗಿಯೇ ಬರುವರು. ಅವರು ಹೇಳಿದ ಹೆಸರನ್ನಿಟ್ಟುಕೊಂಡು ಸೂಚಿಸಿದ ಹುಡುಗಿಯೊಂದಿಗೆ ಮದುವೆಯಾಗು. ಎಚ್ಚರನ ಬಟ್ಟೆಯನ್ನು ಸದಾ ಧರಿಸಿಯೇ ಇರು. ಕಾನೂನಿನ ಮನೆಗೂ ಆಗಾಗ್ಗೆ ಹೋಗಿ ಬಾ. ಆದರೆ ಅಲ್ಲಿಯೇ ಉಳಿಯದಿರು. ನೈತಿಕನ ಮನೆಯೇ ಕಾನೂನಿನ ಮನೆಗಿಂತ ಉತ್ತಮ ಮತ್ತು ಸತ್ವಯುತವಾದದ್ದು. ಅದು ಹೇಗೆ ನಿನ್ನ ಬಳಿ ಅನ್ಯಾಯನೂ ಮತ್ತು ಅವನ ಬೆಂಬಲಿಗರು ಬರುತ್ತಾರೆ ನೋಡಿಯೇ ಬಿಡೋಣ’ ಎಂದು ತನಗೆ ತೋಚಿದ್ದನ್ನು ಹೇಳಿ ಪ್ರಜ್ಞ ಹೊರಟು ಹೋದ.

ಪ್ರಜ್ಞನು ಹೇಳಿದ್ದ ಎಲ್ಲವನ್ನು ಚಾಚೂ ತಪ್ಪದೆ ಪಾಲಿಸಿದ್ದಕ್ಕಾಗಿ ಗೊಂದಲನ ತಾಯಿಯಾದ ನೆಮ್ಮದಿ ಮತ್ತು ತಂದೆಯಾದ ಸಂತೋಷ ಬಂದರು. ಇಷ್ಟು ದಿನ ತಾವು ಪ್ರಜ್ಞನ ಆಸರೆಯಲ್ಲಿದ್ದೇವೆಂದು ಮಗನಿಗೆ ತಿಳಿಸಿ ಘಟನೆಯನ್ನು ನೆನೆದು ಮೂವರು ಅತ್ತು ಬೆಸೆದುಕೊಂಡರು. ಈ ಮೂವರು ಮಾತನಾಡಿಕೊಳ್ಳುತ್ತಿರುವಾಗ ಸಮಾಧಾನನು ಬಂದು ಎಲ್ಲರನ್ನು ಆಶೀರ್ವಾದಿಸಿ ಹೊರಟು ಹೋದ. ಕೆಲವು ದಿನಗಳ ಬಳಿಕ ತಂದೆ-ತಾಯಿ ಸೂಚಿಸಿದ ಸಂತೃಪ್ತಿ ಎಂಬ ಹೆಸರನ್ನಿಟ್ಟುಕೊಂಡು ಶ್ವೇತ ಎಂಬ ಹುಡುಗಿಯನ್ನು ಮದುವೆಯಾಗಿ ಸುಖ ಜೀವನವನ್ನು ಈತ ನಡೆಸಿದನು.

ಶ್ವೇತ ತುಂಬಾ ಪಾರದರ್ಶಕವಾಗಿ ಎಲ್ಲವನ್ನು ಎಲ್ಲರಿಗೂ ತಿಳಿಸುವ ಜಾಣ್ಮೆಯ ಹುಡುಗಿ. ಇರುವುದನ್ನು ಇದ್ದ ಹಾಗೆ ಹೇಳುವ ಧೈರ್ಯ ಅವಳಿಗಿತ್ತು. ಗಂಡ ದುರಾಸೆಯ ಬಳಿ ಹೋಗಲು ಆಸಕ್ತನಾಗಿರುವುದಾಗಿ ತನ್ನ ಮಾವ ಮತ್ತು ಅತ್ತೆಗೆ ಒಂದು ದಿನ ಹೇಳಿದಳು. ‘ಈಗ ಕಾಯ್ದು ನೋಡುವ ತಂತ್ರವನ್ನು ಅನುಸರಿಸೋಣ. ಒಂದು ವೇಳೆ ಆತನೇ ನಮ್ಮನ್ನು ನಿರ್ಲಕ್ಷಿಸಲು ಆರಂಭಿಸಿದರೆ ಮೂವರು ಹೊರಡೋಣ’-ಎಂದು ಮಾವ ಹೇಳಿದಾಗ ಅವಳೂ ಮತ್ತು ಅತ್ತೆಯು ಒಪ್ಪಿದರು.

 ಕೆಲವು ವರ್ಷಗಳಾದ ಬಳಿಕ ದುರಾಸೆ ಎಂಬುವನ ಮಾತನ್ನು ಕೇಳಿ ಸಂತೃಪ್ತಿ ಹೆಸರು ಸರಿಯಾಗಿಲ್ಲವೆಂದು ಗೊಂದಲನು ತನ್ನನ್ನು ನಿಜವಾದ ಹೆಸರಿನಿಂದಲೇ ಕರೆಯುವಂತೆ ಸುತ್ತಲಿನವರಿಗೆ ಆಗ್ರಹಪಡಿಸುತ್ತಾನೆ. ತಾಯಿ-ತಂದೆ ಮತ್ತು ಹೆಂಡತಿಯನ್ನು ನಿರ್ಲಕ್ಷಿಸಲು ಗೊಂದಲನು ಆರಂಭಿಸುತ್ತಾನೆ. ಇದೂ ಅಲ್ಲದೆ ಎಚ್ಚರನ ಬಟ್ಟೆಯನ್ನು ಹರಿದು ಬೂದಿ ಮಾಡುತ್ತಾನೆ. ಇದನ್ನರಿತ ತಂದೆ-ತಾಯಿ ಮತ್ತು ಹೆಂಡತಿ ಈತನನ್ನು ಬಿಟ್ಟು ಪ್ರಜ್ಞನ ಮನೆಗೆ ಹೋಗುತ್ತಾರೆ. ನೈತಿಕನು ಆಶ್ರಯ ನೀಡಿದ್ದಕ್ಕಾಗಿ ಮರುಗುತ್ತಾನೆ. ಗೊಂದಲ ನೈತಿಕನು ಕೂಡ ನನ್ನ ವಶವಾಗಿದ್ದಾನೆ. ಇನ್ನು ಕಾನೂನನ್ನು  ಕೂಡ ನಾನು ವಶಪಡಿಸಿಕೊಂಡುಬಿಟ್ಟರೆ ಜಗತ್ತಿನಲ್ಲಿ ಎಲ್ಲರು ನನ್ನವರೇ ಆಗುತ್ತಾರೆಂದುಕೊಂಡು ಕಾನೂನಿನ ಮನೆಗೂ ಹೋಗಿ ಕೆಲವು ಕಾಲ ಅಲ್ಲಿಯೇ ಇದ್ದು ಅಲ್ಲಿನ ಮಂದಿಗಳನ್ನು ಮನವಲಿಸಿ ತನ್ನ ವಶಕ್ಕೆ ಒಳಪಡಿಸಿಕೊಂಡು ಕಾನೂನನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ದುರಾಸೆ ಗೊಂದಲನಿಗೆ ತುಂಬಾ ಆಪ್ತನಾಗುವುದಶ್ಟೇ ಅಲ್ಲದೆ, ಗೊಂದಲನ ಸೋಂಕಿನ ಜೊತೆ ತನ್ನ ಸೋಂಕನ್ನು ಬೆರೆಸಿಬಿಡುತ್ತಾನೆ..

ಮತ್ತೆ ಅನ್ಯಾಯನು ಬಂದು ‘ನನ್ನ ಶಪಥ ಕೈಗೂಡಿತು. ದುರಾಸೆ ನನ್ನ ಬೆಂಬಲಿಗ’-ಎಂದು ತನ್ನ ಬೆಂಬಲಿಗರಿಗೆ ಗೊಂದಲನ ಆಸ್ತಿಯನ್ನು ಹಂಚಿಕೊಳ್ಳಲು ಆಜ್ಞೆ ಮಾಡುತ್ತಾನೆ.

ಎಲ್ಲರು ತನ್ನ ಆಸ್ತಿಗಾಗಿ ಹೊಡೆದಾಟ ಆರಂಭಿಸಿದ್ದನ್ನು ಕಂಡು ಗೊಂದಲನಿಗೆ ಸಾವು ಹತ್ತಿರವಾಗುತ್ತದೆ. ಕೊನೆಗಾಲದಲ್ಲೂ ಎಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸಿಯೇ ಸಾವಿಗೆ ಶರಣಾಗಲು ತಂತ್ರವನ್ನು ಹೆಣೆಯುತ್ತಾನೆ. ಅನ್ಯಾಯನು ಗೊಂದಲನಿಗೆ ‘ಏನೋ ಸಾಯುವ ಹೊತ್ತೆಂದು ಭಯ ಅಲ್ಲವೆ ನಿನಗೆ?’ ಎಂದು ಗರ್ಜಿಸುತ್ತಾನೆ. ಮನನೊಂದ ಗೊಂದಲನು ಸ್ವತಃ ಬೆಂಕಿ ಹಚ್ಚಿಕೊಂಡು ‘ಗಾಳಿಯ ಗಾಲಿ ನಾನು; ಗಾಳಿ ಬೀಸಿದಂತೆ ತಿರುಗುವುದೇ ಸರಿ’-ಎಂದು ಅನ್ಯಾಯನ ಮತ್ತು ಅನ್ಯಾಯನ ಬೆಂಬಲಿಗರ ಸುತ್ತ ಗಾಲಿಯಾಗಿ ಗಾಳಿ ಬೀಸಿದಂತೆ ತಿರುಗುವಾಗ, ವಿವೇಕನು ಮತ್ತು ನ್ಯಾಯನು ಬೆಂಬಲಿಗರೊಡನೆ ಕಟ್ಟೆಚ್ಚರನ ಬಟ್ಟೆ ಧರಿಸಿ ಬರುತ್ತಾರೆ. ಗೊಂದಲನು ಎಷ್ಟೇ ನ್ಯಾಯನ ಹಾಗೂ ವಿವೇಕನ ಸುತ್ತ ಸುತ್ತಲು ಪ್ರಯತ್ನಿಸಿದರೂ ಅವರನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ. ಆದರೆ, ಇನ್ನೇನು ಗೊಂದಲನು ಬೂದಿಯಾಗಿಬಿಡುವ ಎಂದು ಬಿಸಿಯ ಝಳಕ್ಕೆ ಬೆವತು ಹೋಗಿದ್ದ ನ್ಯಾಯನು ತಾಳ್ಮೆಯನ್ನು ಕಳೆದುಕೊಂಡು ಕಟ್ಟೆಚ್ಚರನ ಬಟ್ಟೆಯನ್ನು ತೆಗೆದುಬಿಡುತ್ತಾನೆ. ಈ ಸುಳಿವನ್ನರಿತ ಗೊಂದಲನು ನ್ಯಾಯನ ದೇಹವನ್ನು ಸ್ಪರ್ಶಿಸಿಯೇ ಸಾಯುತ್ತಾನೆ. ಕೊನೆ ಪಕ್ಷ ಅನ್ಯಾಯನನ್ನು ನ್ಯಾಯನ ಹತ್ತಿರ ಬಿಡಬಾರದೆಂದು ವಿವೇಕನೇ ಕಟ್ಟೆಚ್ಚರನ ಬಟ್ಟೆಯನ್ನು ಜರೂರಾಗಿ ಧರಿಸುವಂತೆ ಹೇಳುತ್ತಾನೆ. ಅಂತೆಯೇ ನ್ಯಾಯನು ಕಟ್ಟೆಚ್ಚರನ ಬಟ್ಟೆಯನ್ನು ಧರಿಸುತ್ತಾನೆ.

ನ್ಯಾಯನು ಬೇಸರದಿಂದ ‘ನಾನೂ ಸಹ ಗೊಂದಲನ ನೆರಳಿನಲ್ಲಿರಬೇಕಾಯಿತಲ್ಲವೆ?’-ಎಂದು ವಿವೇಕನನ್ನು ಕೇಳುತ್ತಾನೆ. ವಿವೇಕನು ‘ನನ್ನನ್ನು ಮತ್ತು ಪ್ರಜ್ಞನನ್ನು ಬಿಟ್ಟು ಎಲ್ಲರೂ ಸಹ ಈ ಗೊಂದಲನಂತೆ ಗಾಲಿಯಾಗಿದ್ದೀರಿ. ಗಾಳಿ ಬೀಸಿದಂತೆ ತಿರುಗುತ್ತಾ ಇದ್ದೀರಿ’-ಎಂದು ನ್ಯಾಯನಿಗೆ ಹೇಳಿ ನ್ಯಾಯ ಮತ್ತು ಅನ್ಯಾಯರ ನಡುವೆ ಸಣ್ಣನೆಯ ಅನಂತವಾದ ರಂಧ್ರವನ್ನು ಕೊರೆದು ‘ನೀನು ನನ್ನ ಆಪ್ತ ನಿನ್ನನ್ನು ಯಾರು ತಪಸ್ಸು ಮಾಡಿ ನಿನ್ನ ಕೃಪೆಗೆ ಒಳಗಾಗುವರೋ ಅವರಿಗೆ ಮಾತ್ರ ನಾನು ಸಿಗುತ್ತೇನೆ’-ಎಂದು ಪ್ರಜ್ಞನಿಗೆ ರಂಧ್ರದ ಬಳಿ ವಾಸಿಸಲು ಹೇಳಿದನು. ಪ್ರಜ್ಞನೂ ಸಹ ಒಪ್ಪಿದ. ‘ನಮ್ಮಿಬ್ಬರ ನಡುವೆ ನೀನು?’-ಎಂದು ಅನ್ಯಾಯನು ಕೇಳಿದಾಗ ವಿವೇಕನು ‘ಸಮಾಜದ ಅಸ್ತಿತ್ವದ ದೃಷ್ಟಿಯಿಂದ ನನ್ನ ಅವಶ್ಯಕತೆ ಇದೆ. ಜೊತೆಗೆ ನೀವು ಗೊಂದಲನ ಸೋಂಕಿಗೆ ಒಳಪಟ್ಟಿರುವಿರಿ. ನೀವಿಬ್ಬರು ವಿರುದ್ಧಿಗಳು; ವಿರುದ್ಧ ಮುಖಿಯಾಗಿ ಚಕ್ರೀಯವಾಗಿ ಚಲಿಸಲು ಹೋಗಿ’-ಎಂದು ಇಬ್ಬರಿಗೂ ತಿಳಿಸಿ ರಂಧ್ರದ ಒಳಕ್ಕೆ ಹೋದನು. ಪ್ರಜ್ನನು ರಂಧ್ರದ ಬಳಿ ಅಮೂರ್ತವಾಗಿ ಆದರೆ ಸೂಕ್ಷ್ಮವಾಗಿ ನೋಡುವವರಿಗೆ ದೊಡ್ಡ ಹಣತೆಯಂತೆ ರೂಪತಳೆದು ನಿಂತನು. ನ್ಯಾಯ ಮತ್ತು ಅನ್ಯಾಯರು ವಿವೇಕನ ಮಾತನ್ನು ಒಪ್ಪಿ ಕಾಲನ ಲೋಕದಲ್ಲಿ ವಿರುದ್ಧ ಮುಖಿಯಾಗಿ ಚಕ್ರದಂತೆ ತಿರುಗಲು ಆರಂಭಿಸಿದರು.