ರಾಜಕೀಯ ರಂಗಕ್ಕೆ ಚದುರಂಗ


ಚದುರಂಗ ನಮ್ಮ ದೇಶದ ಅಪ್ಪಟ ಆಟ. ಅಂತೆಯೆ, ಅರಸರುಗಳಿಗೆ ಅಚ್ಚುಮೆಚ್ಚಿನ ಆಟ. ಅರಸರಿಗೆ ಚದುರಂಗ ಮಾತ್ರ ಅಚ್ಚುಮೆಚ್ಚು ಅಂತ ಹೇಳಬಹುದು. ಪಗಡೆ? ಅಂತ ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಇದೆ ಅಲ್ಲವೆ? ಊಊಊ! ಕಂಡಿತವಾಗ್ಯೂ ಸರಿ. ಅದೂ ಇದೆ. ತಮ್ಮ ನಾಡಿನ ಬವಿಶ್ಯವನ್ನು ಊಹಿಸಲು ರೂಪಿಸಿಕೊಂಡ ಆಟವಶ್ಟೇ ಪಗಡೆ. ಚದುರಂಗ ಯುದ್ದಗಳಲ್ಲಿ ಜಯ/ಅಪಜಯಗಳನ್ನು ಗುರುತಿಸಿಕೊಳ್ಳಲು ಒಂದು ಎಚ್ಚರಿಕೆಯ ಯೋಜನೆಗೆ ನೆರವಾಗುವ ಒಂದು ಆಟ. ಅದಕ್ಕಾಗಿಯೇ ಈ ಆಟವನ್ನು ಅರಸರು, ಮಂತ್ರಿಗಳು ಹಾಗೂ ಪಡೆಗಳ ಮುಂದಾಳುಗಳು ಆಡುತ್ತಿದ್ದದ್ದು.

ಈಗ ಯಾಕೆ ಇದನ್ನು ಈತ ಎಲ್ಲರಿಗೂ ತಿಳಿದಿರುವುದನ್ನು ಹೇಳುತ್ತಿದ್ದಾನೆ ? ಅಂತ ಯೋಚನೆ ಹತ್ತಿವೆಯೇ? ಚದುರಂಗದ ನಿಯಮಗಳನ್ನು ಬರೆಯದೆ ಚದುರಂಗವನ್ನು ರಾಜಕೀಯ ರಂಗಕ್ಕೆ ಬಳಸಬಹುದೆಂದು ನಾನು ನಿಮಗೆ ತಿಳಿಸಲು ಬಯಸಿದ್ದೇನೆ. ಅದರ ಬಗ್ಗೆ ಈ ಕೆಳಗೆ ಬರೆದಿದ್ದೇನೆ.

ಸಮವಾಗಿ ಕಪ್ಪು ಹಾಗೂ ಬಿಳಿಯ ಚವ್ಕಗಳಿಂದ ಕೂಡಿದ ೮*೮ ರ ಮಣೆಯಲ್ಲಿ ಆನೆಗಳು-೪, ಕುದುರೆಗಳು-೪, ಒಂಟೆಗಳು-೪, ಮಂತ್ರಿಗಳು-೨, ರಾಜರು-೨ ಹಾಗೂ ಸಯ್ನಿಕರು-೧೬. ಒಟ್ಟು ೩೨ ದಾಳಗಳು ಬೇಕಾಗಿದ್ದು ಅವುಗಳಲ್ಲಿ ಕಪ್ಪು ಹಾಗೂ ಬಿಳಿ ದಾಳಗಳು ೧೬ ಬೇಕಾಗುತ್ತವೆ. ಎರಡು ಪಡೆಗಳು ಕಾದಾಡುವ ಹಾಗೆ ಇಬ್ಬರು ಆಳುಗಳು ಈ ಮಣೆಯಲ್ಲಿನ ದಾಳಗಳನ್ನು ಅನುಕ್ರಮವಾಗಿ ಜೋಡಿಸಿಕೊಂಡು ಆಡಬೇಕು. ಇದು ಚದುರಂಗದ ಆಟಕ್ಕೆ ಮೊದಮೊದಲಿಗೆ ಬೇಕಾಗುವ ವಸ್ತುಗಳು. ಈ ಆಟದಲ್ಲಿ ಬಳಸುವ ದಾಳಗಳ ಬದಲಾಗಿ ಮನುಶ್ಯರೇ ಸಯ್ನಿಕ, ಕುದುರೆ, ಆನೆ, ಒಂಟೆ, ಗಳಾಗಿರಬೇಕು. ಮಂತ್ರಿ ಹಾಗೂ ಅರಸರುಗಳ ಪಾತ್ರವನ್ನು ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರು ನಿರ‍್ವಹಿಸಬೇಕು. ಈ ಈರ್ವರೇ ಉಳಿದ ದಾಳಗಳನ್ನು ನಡೆಸಬೇಕು.

ಚದುರಂಗವನ್ನು ತಮ್ಮ ಪಕ್ಶಕ್ಕೆ ನೆರವಾಳುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ/ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಈ ಆಟವನ್ನು ಅವರು ಬಳಸಿಕೊಳ್ಳುವುದಾದರೆ ಮಡಿ-ಮಯ್ಲಿಗೆಯನ್ನು ಇಲ್ಲವಾಗಿಸಿಕೊಳ್ಳಬೇಕು. ಗೊಡ್ಡು ನೀತಿಗಳನ್ನು ಹೊಂದದೆ ನಾಡ ಒಳಿತಿಗೆ ಕಾರಣಿಗಳಾಗುವ ಮನಸ್ಸು ಮಾಡಬೇಕು. ಹಿಂಸೆಯ ದೋರಣೆಗಳನ್ನು ಬಿಟ್ಟು ಬಿಡಬೇಕು. ಬಳಿಕ ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಬೇಕು.

ಆಟಕ್ಕೂ ಮುನ್ನ:
೧. ಪಕ್ಶದಲ್ಲಿ ನಾಯಕನಾಗಲು ಆಸಕ್ತರಾಗುವಂತಹ ಆಳುಗಳನ್ನು ಆ ಪಕ್ಶದವರು ಗುರುತಿಸಿಕೊಳ್ಳಬೇಕು.
೨. ಯಾರು ಹೆಚ್ಚು ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಚದುರಂಗವನ್ನು ಕಲಿಸುತ್ತಾರೋ ಮತ್ತು ಗೆಲ್ಲುತ್ತಾರೋ ಅವರೇ ನಾಯಕನೆಂದು ಸದರಿ ಪಕ್ಶದವರು ಗೋಶಿಸಬೇಕು.
೩. ಗುರುತಿಸಿದ ಆಳುಗಳಿಗೆ ದರ‍್ಮ/ಜಾತಿಗಳ ಬೇದವಿಲ್ಲದೆ ಎಲ್ಲಾ ವಯಸ್ಸಿನ ಹೆಣ್ಣು ಗಂಡುಗಳನ್ನು ಆಟಕ್ಕೆ ಹೊಂಚಿಕೊಳ್ಳುವಂತೆ ಸೂಚಿಸಬೇಕು.
೪. ಹೊಂಚಿಕೊಂಡ ಬಳಿಕ ಅವರಿಗೆ ಚದುರಂಗ ಆಟದ ಬಗ್ಗೆ ತಿಳಿಸಬೇಕು.

ಆಟವಾಡುವಾಗ:
೧. ಎತ್ತರದ ನೆಲದಲ್ಲೇ ಚದುರಂಗದ ಅಂಗಣವನ್ನು ಸಜ್ಜುಗೊಳಿಸಿದ ಬಳಿಕ ಆಟವನ್ನು ನೋಡುವವರಿಗೆ ಇಂತಿಶ್ಟು ಹಣವನ್ನು ನಿಗದಿಪಡಿಸಿ ಜನರನ್ನು ಸೇರಿಸಿ ಹಣವನ್ನು ಕೂಡಿಸಿಕೊಳ್ಳಬೇಕು.
ಆಟದ ಮೊದಲಿಗೆ ಎನ್.ಸಿ.ಸಿ ಹಾಗೂ ಸಯ್ನಿಕರು ಬಳಸುವಂತಹ ವಾದ್ಯಗಳನ್ನು ಬಾರಿಸುತ್ತಾ/ನುಡಿಸುತ್ತಾ ನಾಡ ಹಾಡನ್ನು ಆಡಬೇಕು ಮತ್ತು ನೆಲದವ್ವಳಿಗೆ ವಂದಿಸಬೇಕು.
೨. ಸಯ್ನಿಕರು, ಅರಸರು ಮತ್ತು ಮಂತ್ರಿಗಳನ್ನು ಬಿಂಬಿಸುವಂತಹ ಟೋಪಿಗಳನ್ನು ಹಾಕಿಕೊಳ್ಳುವುದರ ಜೊತೆಗೆ ಕುದುರೆ, ಆನೆ, ಒಂಟೆ ಇವುಗಳ ಬದಲಿಗೆ ಈಗ ಯುದ್ದಗಳಲ್ಲಿ ಬಳಕೆಯಾಗುತ್ತಿರುವ ವಸ್ತುಗಳನ್ನು ಬಿಂಬಿಸುವ ಟೋಪಿಗಳನ್ನು ಹಾಕಿಕೊಳ್ಳಲು ಆಟಕ್ಕೆ ದಾಳವಾದವರಿಗೆ ಹೇಳಬೇಕು.
೩. ದಾಳವನ್ನು ಕಳೆದುಕೊಂಡ ಗುಂಪು ರೋದಿಸಬೇಕು. ದಾಳವನ್ನು ಉರುಳಿಸಿದ ಗುಂಪು ಸಂತೋಶದಲ್ಲಿ ಬೀಗಬೇಕು. ಮತ್ತು ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
೪. ಗೆದ್ದ ಗುಂಪು ನಗುವಿನಲ್ಲಿಯೂ ಸೋತ ಗುಂಪು ಅಳುಮೋರೆಯಲ್ಲಿಯೂ ಮುಳುಗಬೇಕು. ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
೫. ಗೆದ್ದ ಗುಂಪಿನಲ್ಲಿ ದಾಳವಾಗಿ ಬಳಕೆಯಾದವರಿಗೆ ಹಣದ ನೆರವನ್ನು ನೀಡಬೇಕು.

ಹೀಗೆ ಪಕ್ಶಗಳು ಚದುರಂಗವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಇದು ಕೇವಲ ರಾಜಕೀಯ ಪಕ್ಶಗಳಿಗೇನೆ ಇರುವ ಆಟವಶ್ಟೆ ಎಂದು ಅಂದುಕೊಳ್ಳದಿರಿ. ಈ ಆಟ ಎಲ್ಲಾ ಕ್ಶೇತ್ರಗಳಿಗೂ ಹೊಂದಿಕೆಯಾಗಬಲ್ಲ ಆಟವಾಗಿದೆ. ಕ್ರೀಡಾ ಇಲಾಕೆಯವರು/T.V ಗಳು/ಚೆಸ್ ಕಲಿಸುವ ಕೇಂದ್ರಗಳು ಈ ಆಟವನ್ನು ಮಂದಿ ಮೆಚ್ಚುಗೆಯ ಆಟವಾಗಿಸಬಹುದು. ಚದುರಂಗ ಒಂದು ನಾಡನ್ನು ಕಟ್ಟಲೋಸುಗ ಅರಸರಿಗೆ ಪೂರಕವಾಗಿದ್ದ ಆಟವಾಗಿದ್ದರಿಂದ ಇಂದಿನ ಸನ್ನಿವೇಶಕ್ಕೆ ಈ ಆಟದ ಬಳಕೆಯನ್ನು ಜನಪ್ರೀಯಗೊಳಿಸಲಿಕ್ಕಾಗಿಯಶ್ಟೇ ಈ ಕಲ್ಪನೆಯನ್ನು ಬರೆದಿದ್ದೇನೆ. ನಾಡು ಎಂದ ಮೇಲೆ ರಾಜಕೀಯ ಇದ್ದೇ ಇರುತ್ತಾದ್ದರಿಂದ ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರಿಗೆ ಪ್ರಾಕ್ಟಿಕಲ್ ಟಾಸ್ಕ್ಗೆ ಈ ಆಟವನ್ನು ಬಳಸಿಕೊಳ್ಳುವುದು ಸರಿಯಾಗಿಯೇ ಇದೆ ಎಂದೇ ನನ್ನ ಅನಿಸಿಕೆ.

ಇದರ ಆಶಯ:
ಸವಾಲಿಗೊಂದು ಸವಾಲ್ ಇದ್ದೇ ಇರುತ್ತದೆ. ಅದಕ್ಕಾಗಿಯೇ ಎಲ್ಲರು ಸವಾಲಿಗೆ ತೆರೆದುಕೊಳ್ಳಬೇಕು. ಆಗಲ್ಲ ಎಂದು ಕಯ್ಚೆಲ್ಲುವವರು ಯಾರಿಗೂ ತೊಂದರೆ ನೀಡದೆ ಸವಾಲಿಗೆ ಸವಾಲನ್ನು ಒಡ್ಡುವವರಿಗೆ ದಾರಿ ಬಿಟ್ಟುಕೊಡಬೇಕು.

ಈ ಆಟದಲ್ಲಿ ತಪ್ಪು ಕಂಡಿತವಾಗಿಯೂ ಇಲ್ಲ. ಆದರೆ ರಾಜಕೀಯದವರು ಈ ಆಟವನ್ನು ಈಗ ನಾನು ವಿವರಿಸಿದಂತೆ ಬಳಸಿಕೊಂಡಲ್ಲಿ ತಪ್ಪನ್ನು ಅಂಟಿಸುವ ಸಾದ್ಯತೆ ಇರುತ್ತದೆ. ದಯವಿಟ್ಟು ಈ ಆಟದ ಹುರುಳಿಗೆ ತಪ್ಪನ್ನು ಅಂಟಿಸಬೇಡಿ ಎಂದು ತಮ್ಮಲ್ಲಿ ಮನವಿ.

ಈಗಲಾದರು ಒಗ್ಗೂಡೋಣ


ಬ್ರಿಟೀಶರಿಗೆ ನಮ್ಮ ನಾಡಿನಲ್ಲಿ ಕಾಲು ಊರಲು ಅನುಕೂಲವಾಗಿದ್ದು ನಮ್ನಮ್ಮ ನಡುವೆ ಇದ್ದ ಕಿತ್ತಾಟ.
ಬ್ರಿಟೀಶರಿಗೂ ಮುಂಚೆ ಬಂದವರು ಇಲ್ಲುಳಿಯಲು ಸಾದ್ಯವಾಗಿದ್ದು ನಮ್ನಮ್ಮಲ್ಲಿದ್ದ ಏಕತೆಯ ಕೊರತೆ.
ಈಗ ನಾವು ಅವರುಗಳ ಆಕ್ರಮಣಗಳಿಂದ ಕಲಿತದ್ದು ಏನು?
ಮತ್ತೇ ಅದೆ!
ಕಿತ್ತಾಟ, ಬೈದಾಟ, ಅಹಾ! ಆಟ ಬರೀ ಡೋಂಗಿ ಆಟ!

ಮಾನವನ ಸಮಾಜದಲ್ಲೇಕೆ ಇತರೆ ಪ್ರಾಣಿಗಳಲ್ಲೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪದ್ಧತಿಗಳಿವೆ. ಅಂದ ಮೇಲೆ ನಾವು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಯತ್ನಗಳ ತಪ್ಪಾದರೂ ಏನು?
ಜಾತಿ/ಧರ್ಮಗಳ ಅಸ್ಮಿತೆ? ಚೇಚೇ ಕಂಡಿತ ಅಲ್ಲ!
ನಾಡ ಏಳಿಗೆ, ಏಕತೆಯ ಹೊರತೆ ಇಂತಹ ಅಸ್ಮಿತೆ? ಹೌದು! ಹೌದು.
ಇದಕ್ಕಾಗಿಯಾದರೂ ಬಹಳ ಹತ್ತಿರದ ಸಿದ್ಧಾಂತವನ್ನು ಹೊಂದಿರುವ ರಾಜಕೀಯ ಪಕ್ಶವನ್ನು ಬೆಂಬಲಿಸುವುದರ ಮೂಲಕ ನಮ್ಮೆಲ್ಲರ ಏಕತೆಯನ್ನು ಕಟ್ಟಬೇಕಾಗಿದೆ.

ಎಡ ಪಕ್ಶಗಳು ನಾಯಕ ಗುಣವಿರುವ ವ್ಯಕ್ತಿಗಳನ್ನು ಹೊಮ್ಮಿಸುವುದರಲ್ಲಿ ಸೋತಿವೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕಾಗಿ ಪ್ರಜಾಪ್ರಭುತ್ವಕ್ಕೆ ಕುತಂತ್ರಗಳನ್ನು ಅಳವಡಿಸಿಕೊಂಡಿದೆ. ನಮ್ಮ ದೇಶ ಸ್ವತಂತ್ರಗೊಂಡಾಗಿನಿಂದ ಇಶ್ಟೂ ವರ್ಶ ಕಳೆದರೂ ಭಾರತವನ್ನು ಆಂತರಿಕವಾಗಿ ಕಟ್ಟಲು ಆಗಿಯೇ ಇಲ್ಲ.

ಇನ್ನು ಬಾಜಪ ಕುರಿತು ಹೇಳುವುದಾದರೆ ಕೇವಲ ಆದರ್ಶಗಳಿಗೆ ಸೀಮಿತಗೊಂಡಿರುವ ಪಕ್ಶವಾಗಿದೆ. ಭಾರತವನ್ನು ವಿವಿಧ ನೆಲೆಗಳಲ್ಲಿ ಅರಿತುಕೊಳ್ಳದೆ ಒಂದಕ್ಕೇನೆ ಅಂಟುಕೊಂಡು ಇದೆ. ರಾಜ್ಯಗಳಿಗೆ ಸೀಮಿತವಾಗಿರುವ ಪಕ್ಶಗಳಾವು ರಾಶ್ಟ್ರೀಯ ಪ್ರಜ್ಞೆಯಲ್ಲಿ ಒಂದಾಗುವ ಮನಸ್ಸನ್ನು ಮಾಡುತ್ತಿಲ್ಲ. ಹೊಸ ಪಕ್ಶಗಳು ಅಸ್ತಿತ್ವಕ್ಕೆ ಬರುತ್ತಿವೆಯಾದರೂ ಜನರನ್ನು ತಲುಪುವ ತಂತ್ರಗಳ ಕಡೆಗೆ ಗಮನ ನೀಡುತ್ತಿಲ್ಲವೇನೋ ಅನಿಸುತ್ತಿದೆ. ಹೀಗಾಗಿ ಬರಲಿರುವ ಲೋಕಸಭೆಯ ಚುನಾವಣೆಯ ನಿಟ್ಟಿನಲ್ಲಿ ಹೇಳುವುದಾದರೆ,
ಕಾಂಗ್ ಮತ್ತು ಬಾಜಪ ಈ ಎರಡೇ ರಾಶ್ಟ್ರೀಯ ಪಕ್ಶಗಳು ಪ್ರಧಾನಿಗಳಾಗಲು ಅರ್ಹವಿರುವವರೆಂದು ತಮ್ಮತಮ್ಮವರ ತಲೆಯಾಳುಗಳನ್ನು ಗೋಶಿಸಿದ್ದಾರೆ. ಗಟ್ಟಿತನ ಈ ಎರಡೂ ಪಕ್ಶಗಳಲ್ಲಿ ಎಶ್ಟರ ಮಟ್ಟಿಗೆ ಇದೆ ಎಂಬುವುದನ್ನು ಅವಲೋಕಿಸುವ ಮತ್ತು ಯಾರಲ್ಲಿ ಟೊಳ್ಳುತನ ಯತೇಚ್ಚವಾಗಿದೆ ಎಂಬುವುದರ ಕುರಿತು ಆ ಪಕ್ಶಗಳ ವ್ಯಕ್ತಿಗತ ನೆಲೆಗಟ್ಟಿನ ವಿಶ್ಲೇಶಣೆ ಅಗತ್ಯವಿದೆ.

ಬರಲಿರುವ ಚುನಾವಣೆಯಲ್ಲಿ ಬಾಜಪ ಬರುವುದೇ ಒಳಿತು ಎಂದು ನನಗೆ ಅನಿಸಿದೆ. ಇದಕ್ಕೆ ಕಾರಣ ಕಾಂಗ್ ಹಗರಣಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಅವಿತುಕೊಂಡಿರುವ ಹಗರಣಗಳನ್ನು ಹೊರಗೆಡವಲೋಸುಗವಾದರೂ ಬಾಜಪ ಬರಬೇಕು. ಅಂದರೆ ಅದು ಮಾಡಿದ್ದನ್ನು ಇದು ತೊಳೆಯಲಿ ಇದು ಮಾಡಿದ್ದನ್ನು ಅದು ತೊಳೆಯಲಿ ಎನ್ನುವ ಹಂಬಲವಶ್ಟೆ. ಲೋಕ್ಸತ್ತಾ ಹಾಗೂ ಆಮ್ ಆದ್ಮಿ ಯನ್ನು ಬೆಂಬಲಿಸೋಣವೆಂದರೆ ಅವರು ಎಲ್ಲಾ ಲೋಕಸಭಾ ಕ್ಶೇತ್ರಗಳಲ್ಲಿ ತಮ್ಮವರ ವ್ಯಕ್ತಿಗಳನ್ನು ನಿಲ್ಲಿಸುವುದಿಲ್ಲ. ಇದರಿಂದ ಲೋಕಸಭೆಯಲ್ಲಿ ಮತ್ತೆ ಅದೇ ಬೆರಕೆ ಆಗುತ್ತದೆ. ಒಂದು ವೇಳೆ ಬಾಜಪ ಬಂತು ಎಂದುಕೊಳ್ಳಿ; ಜನರ ಒಳಿತಿಗೆ ಯೋಜನೆಗಳು ರೂಪುಗೊಳ್ಳದ ಪಕ್ಶದಲ್ಲಿ ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಆಂದೋಲನ ಮಾಡಬಹುದು. ಪ್ರಾಣ ಹಿಂಸೆಯನ್ನು ಬಾಜಪ, ಕಾಂಗ್ ಎರಡೂ ಮಾಡಿವೆ. ಕಾಂಗ್ ಇದರಲ್ಲಿ ಬಲೂ ಮೇಲು!

ಇಂದು ಕಮ್ಯೂನಿಸ್ಟ್ರು ಬಾಜಪ ದವರನ್ನು ಪ್ರಾಣ ಹಿಂಸೆಗೆನೇ ಸೀಮಿತಗೊಂಡು ಪದೇಪದೇ ಬರಹ, ಮಾತು ಹಾಗೂ ನಡತೆಗಳ ರೂಪದಲ್ಲಿ ವಾಚಾನುಗೋಚರವಾಗಿ ದಾಳಿ ಮಾಡುತ್ತಿವೆ. ಆದರೆ ಅವರು ನಂಬಿರುವ ಕಮ್ಯುನಿಸ್ಟ್ ಕೂಡ ಹಿಂಸಾತ್ಮಕ ಪಂಥಕ್ಕೆ ಸೇರಿದ್ದೂ ಎನ್ನುವಂತದ್ದನ್ನು ಮರೆತಿದ್ದಾರೆ. ಪ್ರತಿಯೊಂದು ಪಕ್ಶಗಳು ಎಡವಿದಾಗಲು ೧೦೦ ರಲ್ಲಿ ೧೦ರಶ್ಟಾದರನ್ನೂ ಏಳುವಿಕೆಗೆಗಾದರೂ ಶ್ರಮ ಹಾಕುತ್ತವೆ. ಹೀಗಾಗಿ ಆಳುವ ಪಕ್ಶ ವಿರೋಧ ಪಕ್ಶವಾಗಬೇಕು. ಅಂತೆಯೆ ವಿರೋಧ ಪಕ್ಶ ಆಳುವ ಪಕ್ಶವಾಗಲೇ ಬೇಕು. ಇಲ್ಲವಾದರೆ ಅದು ಪ್ರಜಾಪ್ರಭುತ್ವದ ಚೌಕಟ್ಟನ್ನು ಸೀಮಿತವಾಗಿಸುತ್ತದೆ. ಆಳುವ ಪಕ್ಶ ಆಳುತ್ತಾ ಇದ್ದರೆ ಸರ್ವಾಧಿಕಾರಿತ್ವದ ಮನೋಭಾವ ಜನರಿಗೆ ತಿಳಿಯದೆನೇ ಹಂತಹಂತವಾಗಿ ಪ್ರಜಾಪ್ರಭುತ್ವವನ್ನು ಆವರಿಸುತ್ತದೆ. ಆಗ ಪ್ರಜಾಪ್ರಭುತ್ವದಲ್ಲಿನ ವಿಕೇಂದ್ರೀತ ಅಧಿಕಾರವು ಕುಟುಂಬಪ್ರಭುಗಳ ತೆಕ್ಕೆಗೆ ಸೇರುತ್ತದೆ. ಹೀಗೆ ಆಗದಿರಲು ಪ್ರಜಾಪ್ರಭುತ್ವದ ಕಾಳಜಿ ಪ್ರಕಟವಾಗುವ ಅವಕಾಶ ಇನ್ನೇನು ಕೆಲವೇ ತಿಂಗಳಲ್ಲಿ ಮತ್ತೆ ದೊರೆಯಲಿದೆ. ದೊರೆತ ಈ ಅವಕಾಶವನ್ನು ಕುಟುಂಬ ಕೇಂದ್ರಿತ ಅಧಿಕಾರವನ್ನು ಬೆಂಬಲಿಸದಿರಲು ಮನಸ್ಸು ಮಾಡಬೇಕಾಗಿದೆ. ಚುನಾವಣೆಗೆ ನಿಂತ ಎಲ್ಲರನ್ನು ತಿರಸ್ಕರಿಸುವ ಅವಕಾಶವೂ ಜನಸ್ನೇಹಿಯಾಗಲಿದೆ. ಅದರ ಬಳಕೆಯಿಂದ ಲಂಚಿಗಳನ್ನು ಹಾಗೂ ಬ್ರಶ್ಟಿಗಳನ್ನು ಆಯ್ಕೆ ಮಾಡದಿರೋಣ.

ದೇಶದ ಭದ್ರತೆಯ ವಿಚಾರದಲ್ಲಿ ಹೇಳುವುದಾದರೆ ಕಾಂಗ್ಗಿಂತ ಬಾಜಪವೇ ಒಳಿತು. ಈ ಹಿಂದಿನ ಗಂಡಾಂತರಗಳನ್ನು ಅವಲೋಕಿಸಿದರೆ ನಿಮಗೆ ತಿಳಿಯುತ್ತದೆ. ಇಂದು ಸೈನಿಕರು ಬಳಸುವ ಯಂತ್ರಗಳ ವಲಯ ವಿದೇಶಿಮಯವಾಗಿದೆ. ಒಂದು ವೇಳೆ ಆಪತ್ತು ಬಂದರೆ ವಿದೇಶವನ್ನೇ ಅವಲಂಭಿಸಬೇಕಾಗುತ್ತದೆ. ಅವಲಂಬಿತ ದೇಶಗಳು ನಮ್ಮ ಆಪತ್ತಿಗೆ ಒದಗದೇ ಇದ್ದಲ್ಲಿ ನಾವು ಇನ್ನಶ್ಟು ಗುಲಾಮಿಗೆ ಒಳಗಾಗುತ್ತೇವೆ.

ಕಾಂಗ್ ಭಾರತೀಯರ ಪ್ರತಿಭೆಗಳನ್ನು ಸರಿಯಾಗಿ ಗುರುತಿಸಲು ಪ್ರಯತ್ನಿಸಿಯೇ ಇಲ್ಲ. ಉದ್ಯೋಗದ ಸ್ರುಶ್ಟಿಯಲ್ಲಿ ಸೋತಿರುವುದೇ ಇದಕ್ಕೆ ಎತ್ತುಗೆಯಾಗಿದೆ.

ಗಾಂಧೀಜಿಯವರು ಸಾರಾಯಿಯ ವಿರೋಧಿ ಅಂತ ತಿಳಿದಿದ್ದರೂ ಕಾಂಗ್ ಅದರ ನಿಶೇಧಕ್ಕೆ ಬೆಂಬಲವಿರಲಿ ಕೊಂಚವೂ ಯತ್ನಿಸಿಯೇ ಇಲ್ಲ. ಅಂದಮೇಲೆ ಅದನ್ನು ಗಾಂಧೀಜಿ ಸಿದ್ಧಾಂತಗಳ ಪಕ್ಶ ಅಂತ ಅನ್ನುವುದಕ್ಕಿಂತ ಕೇವಲ ತೋರಿಕೆಗೆ ಇರುವ ಪಕ್ಶ ಎಂದರೆ ತಪ್ಪು ಆಗಲಾರದು ಅಲ್ಲವೆ?

ಇತ್ತೀಚೆಗಶ್ಟೆ ಮಂಡ್ಯಾದಲ್ಲಿ ಸೋನಿಯಾ ಬಂದು ಹೋಗುತ್ತಿದ್ದಂತೆ ಕಾಂಗ್ ಕರೆತಂದಿದ್ದ ಮಂದಿಗಳು ಸಾರಾಯಿ ಅಂಗಡಿಗೆ ಮುಗಿಬಿದ್ದು ಸಾರಾಯಿಯನ್ನು ಕೊಂಡು ಕುಡಿದ ಸಂಗತಿ ಎಲ್ಲರಿಗು ತಿಳಿದಿರಬಹುದು. ಸಮಾವೇಶಕ್ಕೆ ಮಂದಿಗಳನ್ನು ಸೆಳೆದುಕೊಳ್ಳಲು ಸಾರಾಯಿಯನ್ನೇ ಸೆಳೆದ್ರವವಾಗಿಸಿಕೊಂಡಿರುವ ಪರಿಯನ್ನ! ಬೇರೆ ಪಕ್ಶಗಳು ಸಾರಾಯಿಯನ್ನು ನೀಡುವುದಿಲ್ಲವೆಂದಲ್ಲ. ಕಾಂಗ್ ಗಾಂಧೀಜಿ ಸಿದ್ಧಾಂತವನ್ನು ಹೊಂದಿರುವ ಪಕ್ಶವೆಂದು ಗುರುತಿಸಿಕೊಂಡಿದೆಯಲ್ಲ ಅದಕ್ಕೇನೆ ಅಶ್ಟೆ!

ಇನ್ನು ಸ್ವಿಸ್ ಬ್ಯಾಂಕ್ ವಿಚಾರದ ಬಗ್ಗೆ ಹೇಳುವುದಾದರೆ ಕಾಂಗ್ ಪ್ರಯತ್ನವನ್ನು ಮಾಡಿಯೇ ಇಲ್ಲವೆನ್ನಬಹುದು. ಆದರೆ ಬಾಜಪ ಈ ವಿಚಾರದಲ್ಲಿ ಕೊಂಚವಾದರೂ ಪ್ರಯತ್ನಗಳನ್ನು ಮಾಡುವ ಭರವಸೆ ಹೊಮ್ಮಿಸಿದೆ. ನಾವು ಪರೋಕ್ಶ ಸಾಲದಿಂದ ಮುಕ್ತರಾದರೆ ಒಂದಶ್ಟು ದಿನಗಳ ಕಾಲ ಗುಲಾಮಿತನದಿಂದ ತಪ್ಪಿಸಿಕೊಳ್ಳಬಹುದು. ಆದರೆ ಕಾಂಗ್ ಹಾಗೆ ಹಾಗದಿರಲು ಯತ್ನಿಸುತ್ತಾ ಇದೆ ಎನ್ನಬಹುದು. ಸಾಲಕ್ಕೆ ಕುರಿತಂತೆ ಇವರ ಮನೋಭಾವ ಹೇಗಿದೆ ನೋಡಿ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ‘ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ನೀಡುವ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ’ ಎಂದು ಹೇಳಿದ್ದಾರೆ ಅಂದಮೇಲೆ ಸರ್ಕಾರಕ್ಕೆ ಸಾಲದ ಹೊರೆಯಾದರೆ ಅದು ಒದಗುವ ಗಂಡಾಂತರದ ಸೂಚನೆ ಎಂಬುವುದು ಇವರಿಗೆ ತಿಳಿದಿಲ್ಲವೆ? ಈ ರೀತಿಯ ಮನೋಭಾವ ಉಳ್ಳವರಿಂದ ನಾವು ನಮ್ಮ ದೇಶವನ್ನು ಸಾಲ ನೀಡುವವರಿಗೆ ಅಡವಿಟ್ಟು ಕಳೆದುಕೊಳ್ಳಬೇಕೆ?

ಕಾಂಗ್ ಆಳುವ ಪಕ್ಶವಾಗಿ ಮುಂದುವರಿದರೆ ಗುಲಾಮಿಗಳಾಗುವುದು ಖಂಡಿತ. ಕಾಂಗ್ ಯಾವಾಗಲು ಅಮೇರಿಕಾದ ಕಡೆಗೆನೇ ಮೋರೆ ತಿರುಗಿಸಿರುವ ಪಕ್ಶ. ಎಲ್ಲಿಯ ತನಕ ಎಲ್ಲಾ ಲೋಕಸಭೆಯ ಕ್ಶೇತ್ರಗಳಲ್ಲಿ ಬಾಜಪ ಮತ್ತು ಕಾಂಗ್ಗೆ ಸಾಟಿಯಾಗಿ ನಿಲ್ಲುವ ಹೊಸ ಪಕ್ಶ ಅಸ್ತಿತ್ವಕ್ಕೆ ಬರುವುದಿಲ್ಲವೋ ಅಲ್ಲಿಯ ತನಕ ಬಾಜಪವೇ ಕಾಂಗ್ಗಿಂತ ಉತ್ತಮ. ಬಾಜಪ.ದಲ್ಲಿ ಒಂದೇ ಕೊರತೆ. ಅದೇ ಹಿಂದೂ ಕೇಂದ್ರಿತ ಸಿದ್ಧಾಂತ! ತಪ್ಪು ಖಂಡಿತ ಅಲ್ಲ. ಆದರೆ ಬಹು ವಿಶಿಶ್ಟಗಳ ನಾಡಿನಲ್ಲಿ ಇಂತಹ ಸಿದ್ಧಾಂತ ಯಾವಾಗಲೋ ಅಸ್ತಿತ್ವದಲ್ಲಿದ್ದಿದ್ದರೆ ಇದಕ್ಕೊಂದು ಹುರುಳು ಇರುತ್ತಿತ್ತು. ಇಂದಿಗೆ ಇದು ಹುರುಳಿಲ್ಲವಾಗಿದೆ. ಬಾಜಪ.ದವರು ಈಗಲಾದರು ತಮ್ಮ ಚೌಕಟ್ಟನ್ನು ವಿಸ್ತರಿಸಿಕೊಳ್ಳುವ ಮನಸ್ಸನ್ನು ಮಾಡಬೇಕು. ಅಂತೆಯೆ, ಮಹಿಳೆಯರ ಸಬಲಕ್ಕೆ ಉತ್ತೇಜನಕಾರಿ ಯೋಜನೆಗಳನ್ನೂ ಹಾಗೂ ಅವಕಾಶಗಳನ್ನು ದೊರಕಿಸಬೇಕು.
ಕಾಂಗ್ನಲ್ಲಿ ಬಡವರ, ಎಲ್ಲಾ ವರ್ಗದವರ ಕಾಳಜಿ ಇದೆ. ಒಪ್ಪೋಣ. ಆದರೆ, ಆಬಗೆಗಿನ ಕಾಳಜಿ ಸಕರಾತ್ಮಕವಾಗಿದ್ದಿದ್ದರೆ ನಾವು ಇಶ್ಟು ಪರೋಕ್ಶದ ಸಾಲದ ಗುಲಾಮಿಗಳಾಗುತ್ತಿರಲಿಲ್ಲ. ಅವರಿಗೆ ನಮ್ಮಲ್ಲಿನ ಚಿಂತನೆಗಳಿಗಿಂತ ಬೇರೆ ನಾಡುಗಳ ಚಿಂತನೆಗಳೇ ಸೊಗಸಿನ ದಾರಿಗಳಾಗಿವೆ. ಇದರಿಂದ ನಮ್ಮ ಅಧಿಕಾರಗಳು ಬೇರೆ ನಾಡುಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ನಮ್ಮ ಯೋಜನೆಗಳನ್ನು ಬೇರೆ ನಾಡುಗಳಿಂದ ಅಣಿಗೊಳಿಸಿಕೊಳ್ಳುವ ಸನ್ನಿವೇಶವನ್ನು ಯಾರು ಉಂಟುಮಾಡಿದರು? ಎಂಬುವುದನ್ನು ನೋಡಿದರೆ ಕಾಂಗ್! ಎನ್ನುವ ಹೆಸರು ಮೊದಲು ಪ್ರಕಟಗೊಳ್ಳುತ್ತದೆ. ಇವೆಲ್ಲವು ಸರಿಯಾಗಬೇಕು. ಹೀಗಾಗಿ ಬದಲಾವಣೆಗೆ ತಾವೆಲ್ಲರು ತೆರೆದುಕೊಳ್ಳುವುದು ಅನಿವಾರ್ಯವೇ ಇದೆ.

ನೊಬೆಲ್ ಪಡೆದವರು ನಮ್ಮ ನಾಡಿಗೆ ಹೊಂದುವ ಆರ್ಥಿಕ ತಳಹದಿಯನ್ನು ಹಾಕದೆ !ಆ ನಾಡನ್ನೆ! ಬೆಂಬಲಿಸಲು ಸೂಚಿಸುತ್ತಾರೆ. ಇಂತವರಿಂದ ದೂರವಿದ್ದು ನಮ್ಮದೂನೂ ಇಂತಹ ಆರ್ಥಿಕ ನೀತಿಯಾಗಿದೆ. ಎಂದು ಧೈರ್ಯ ಮಾಡಿ ಜಗತ್ತಿಗೆ ಹೊಸತನವನ್ನು ತೋರಿಸುವಂತಹ ನಾಯಕನ ಕೊರತೆ ಕಾಂಗ್ನಲ್ಲಿ ಹೇರಳವಾಗಿದೆ. ಬಾಜಪ.ದಲ್ಲಿ ಒಂದಶ್ಟು ನಾಯಕರಿದ್ದಾರೇನೋ ಎನ್ನುವ ಭರವಸೆ ಮೂಡಿದೆ.

ಎಲ್ಲರ ಮನದೊಳಗಿನ ಇಂಗಿತವನ್ನು ಬಲ್ಲವರು ಯಾರು?
ತಿಳಿದಿಲ್ಲ.
ಆದರೆ, ಕಾಂಗ್ ಹೀಗೆಯೇ ಆಳುತ್ತಾ ಇದ್ದಲ್ಲಿ ನಾವು !ಆ ಅ ನಾಡೊಳಗೆ ಇನ್ನಶ್ಟೂ ಸೇರುವುದು ಖಂಡಿತ.
ಬಹುಜನರು ಕಾಂಗ್ ಪಕ್ಶವನ್ನು ಬೆಂಬಲಿಸಿದ ಮೇಲೆ ಬಹುಜನರ ಒಪ್ಪಿಗೆ !ಅ ನಾಡನ್ನು ಸೇರಲು ಬಯಸಿದ್ದಾರೆ ಅಂತ ತಾನೆ?
ಹಾಗೆ ಆಗದಿರಲು ಈಗಲಾದರು ಒಗ್ಗೂಡೋಣ.