ಮನುಜ ಹಿಂಗೆ ಮಾಡಿ ನೋಡ


||ಪ|| ಮನುಜ ಹಿಂಗೆ ಮಾಡಿ ನೋಡ
ನೀನು ಮುಕುತಿ ಪಡೆವೆ ನೋಡ

||1|| ಜಂಬ ತೋರಿ ಬದುಕ ಬ್ಯಾಡ
ಇರುಳ ಒಳಗೆ ಬದುಕ ಬ್ಯಾಡ
ಅರಿವ ಹಂಚಿ ಬದುಕಿ ನೋಡ
ನಲಿವ ನೀನು ಪಡೆವೆ ನೋಡ

||2|| ಹಣದ ಹಿಂದೆ ಓಡ ಬ್ಯಾಡ
ಸುಮ್ನೆ ಕುಂತು ಇರಲು ಬ್ಯಾಡ
ಬುದ್ದಿ ಬಳಸಿ ದುಡಿದು ನೋಡ
ಮನಕೆ ಹರುಶ ಪಡೆವೆ ನೋಡ

||3|| ಸುಳ್ಳು ನಂಜು ಮುಟ್ಟ ಬ್ಯಾಡ
ಬೇದ ಮಾಡಿ ಸಾಯ ಬ್ಯಾಡ
ದಿಟದ ಹೆಜ್ಜೆ ಹಾಕಿ ನೋಡ
ತಿರುಳ ಬದುಕ ಪಡೆವೆ ನೋಡ

||4|| ಸುಮ್ನೆ ಹೊತ್ತ ಕಳೆಯ ಬ್ಯಾಡ
ಕಳೆಯ ತಿಂದು ಕೊಳೆಯ ಬ್ಯಾಡ
ಗುರಿಗೆ ಕಣ್ಣು ನೆಟ್ಟಿ ನೋಡ
ಯಶವ ಪಡೆವೆ ನೀನು ನೋಡ

||5|| ಹುಚ್ಚು-ಕಿಚ್ಚು ಹಚ್ಚ ಬ್ಯಾಡ
ದಿಗಿಲ ಕದವ ತೆರೆಯ ಬ್ಯಾಡ
ಸ್ನೇಹ ಜೀವಿ ಆಗಿ ನೋಡ
ಮುಕ್ತಿ ಪಡೆವೆ ನೀನು ನೋಡ

ಉತ್ತರ ಹೇಳಿರೋ ಅವನ ಸತ್ಯದ ಬುಗ್ಗೆಯ ಪತ್ತೆಮಾಡಿರೋ



(ಉತ್ಪಲಮಾಲಾ ವ್ರುತ್ತದಲ್ಲಿ)

ಉತ್ತರ ಹೇಳಿರೋ ಅವನ ಸತ್ಯದ ಬುಗ್ಗೆಯ ಪತ್ತೆಮಾಡಿರೋ

ಆಗಸದಲ್ಲಿ ಸೂರ್ಯನಿಗೆ ಅಡ್ವಿರೊ ಗೋಡೆಯ ಕಂಡು ಹೇಳಿರೋ
ಬೂಮಿಯೊಳಕ್ಕೆ ನೀ ತೆರಳಿ ಮಾಗುವೆಯೋ ನರನೇ ತಿಳಿಸ್ಬಿಡೋ
ಗಾಳಿಯ ಹಿಡ್ದು ನಾವ್ ಉಸಿರು ಇಲ್ಲದೆ ಬಾಳಲು ಬಿಡ್ಸಿ ಹೇಳಿರೋ
ಹೂವು ನಗೋದ ಹೇಳಿಕೊಡು ಮಾನವ ಬೇಡದ ಜಾಣ್ಮೆ ಬೇಡವೋ

ಸಾವಿಗೆ ಸೆಡ್ಡುಹೊಡ್ದವರ ಹೆಜ್ಜೆಯ ತೋರಿಸು ಪೂಜೆಮಾಡುವೇನ್
ಕಾಣದ ಬೆಂಕಿಯಿಂದ್ ಬಿಡಿಸು ನಮ್ಮನು ಮಾನವ ಪೂಜೆಮಾಡುವೇನ್
ಜಂಬವ ತೋರಿ ನೀ ಒಲವ ಬಿತ್ತದೆ ಮೋಸವ ಬೆಳ್ದೆ ಹೇಗೆ ಹೇಳ್
ಆಕಳು ನೀಡುವಂತ ಸಿರಿ ನೀಡುವ ಜಾಣ್ಮೆಯ ತೋರುಮನ್ಶನೇ

ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ


|ಪ| ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ
ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ
ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ
ತುಸು ಕರುಣೆಯ ತೋರಯ್ಯ ಮಳೆರಾಯ

|1| ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ
ಗೆದ್ಲು ಸೋಕಿದ್ ಮರ‍್ದಂಗೆ ಮೂಳೆ ಆಗ್ತಯ್ತೆ
ಹೊಟ್ಟೆ ಬೆನ್ಗೆ ತಾಕ್ತಯ್ತೆ
ನೀನು ಮಳೆಯ ಸುರ‍್ಸಿ ಬೆಳೆಯ ನೀಡು ಮಳೆರಾಯ

|2| ನೆಲವ ಕೊರ‍್ದು ನೀರ‍್ನೆಲ್ಲಾ ಹೀರ‍್ದೆ
ಮೋಡವ ಕರ‍್ಗುಸಿ ಆಗಸನ ವಣಗರ‍್ಬ ಮಾಡ್ದೆ
ನೀ ಬರೋ ದಾರಿಗಳ ಮುಚ್ಚಿ ನಾನ್ ದರ‍್ಪ ತೋರ‍್ದೆ
ಇನ್ ಮ್ಯಾಗೆ ಹಿಂಗೆ ಮಾಡಾಕಿಲ್ಲ ನನ್ನ ಕ್ಸಮಿಸಯ್ಯ ಮಳೆರಾಯ

|3| ಪ್ರಾಣಿ ಪಕ್ಸಿಗೂ ತೊಂದ್ರೆ ಕೊಟ್ಬಿಟ್ಟೆ
ದುರಾಸೆಬಿದ್ ನಿನ್ನನ್ ತುಳಿಯೋದ ಮಾಡ್ಬಿಟ್ಟೆ
ನನ್ನನ್ನು ನರ‍್ಕಕ್ಕೆ ಹಾಕಿ ಅವಕೆ ಸುಕನಾದ್ರೂ ನೀಡಲು ಬಾರಯ್ಯ
ನನ್ನನ್ನು ನಿನ್ನ ಗುಲಾಮನನ್ನಾಗಿ ಮಾಡಲು ಓ ಮಳೆರಾಯ ಬಾರಯ್ಯ

ನಾವು ನಿಮ್ಮೊಂದಿಗೆ


|ಪ| ನಾವು ನಿಮ್ಮೊಂದಿಗೆ
ನೀವು ನಮ್ಮೊಂದಿಗೆ
ಎಲ್ಲರು ಎಲ್ಲರೊಂದಿಗೆ
ಒಡಬೆರೆತು ನಾಡಲ್ಲಿ ಬದುಕೋಣ

|1| ಇಲ್ಲಿ ಯಾರೂ ಕೀಳಲ್ಲ
ಇಲ್ಲಿ ಯಾರೂ ಮೇಲಲ್ಲ
ಹುಟ್ಟಿದ್ ಮೇಲೆ ಸಾವಿನ್ ಬಲೆಗೆ ಎಲ್ರು ಸಿಲುಕ್ಲೇಬೇಕು
ಬದುಕೋದ್ ಬದುಕ್ತೀವಿ ಎಲ್ರಿಗಾಗಿ ಬದ್ಕೋಣ

|2| ಏಲ್ರಿಗೂ ಊನ ಇದ್ದದ್ದೆ
ಸಿಟ್ಟಿಂದ ಗೊಣಗೋದು ಯಾತಕ್ಕೆ
ಹೀಗೆಳೆಯೋದ ಬಿಡೋಣ
ಹೆಗಲಿಗೆ ಹೆಗಲ ಕೊಟ್ಟು ಬದುಕೋಣ

|3| ಗಟ್ಟಿ ಮನಸ್ಸು ಮಾಡೋಣ
ತರತಮದ ನಾಡ ಅಳಿಸೋಣ
ಹಸಿರ ನೆರಳಲಿ ಬದುಕೋಣ
ಬೇದ ತೋರದೆ ಎಲ್ಲರ ನಡುವೆ ಬಾಳೋಣ.

ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ


|ಪ| ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ
ಬೇದವ ಮಾಡದೆ, ಎರಡನು ಬಗೆಯದೆ
ಜನರೊಳು ಬೆರೆಯುವೆ, ನಿನ್ನಲಿ ಸೇರುವೆ

|1| ಕಶ್ಟವೆ ಅಪ್ಪಲಿ ನಿನ್ನೊಳು ಇರುವೆನು
ಸುಕವೆ ತಬ್ಬಲಿ ನಿನ್ನೊಳು ಇರುವೆನು
ನೆಮ್ಮದಿ ಬದುಕಿಗೆ ಜಗಳವ ಆಡೆನು
ತಾಳ್ಮೆಯ ತಂತಿಯ ಮೇಲೆಯೆ ಇರುವೆನು

|2| ದುಡ್ಡಿನ ಕಾಲಿಗೆ ಬೀಳದೆ ಬದುಕುವೆ
ಸುಗುಣದ ನೆರಳಲಿ ಅನುದಿನ ಬದುಕುವೆ
ಲೋಕದ ನೆನಪಲಿ ಅಳಿಯದೆ ಉಳಿಯುವೆ
ನಿನ್ನಯ ಊರಿಗೆ ನಲಿವಲಿ ಸೇರುವೆ

ಆರು ವೃತ್ತಗಳಲ್ಲಿ ನಾ ಬರೆದ ನಾಲ್ಕು ಸಾಲುಗಳ ಪದ್ಯಗಳು


1. ಮತ್ತೇಭವಿಕ್ರೀಡಿತ ವೃತ್ತ:

(ಕೂಡಿಸಿದ ಪದ್ಯ)
ಮನಸನ್ ನಿನ್ನೊಳು ಸೇರಿಸಲ್ ಕನಸು ನನ್ಮನ್ಸನ್ ಹಿಡೀದಪ್ಪಿತೇ
ಕನಸಿಂದ್ ಮನ್ಸನು ದೂರಿಡಲ್ ನನಸು ನಿನ್ನಿನ್ದಾಗದೇ ಹೋಯಿತೇ
ಬದುಕಲ್ ನೀನಿರದೇ ಸಲಕ್ ಸಲಕು ಹ್ರುದಯ್ ಪಟ್ಟನೇ ಇಂಗಿತೇ
ಬರದಿರ್ ನನ್ನೊಳು ನೀನು ನನ್ ಕೊರೆದು ನೆಲ್ದಲ್ ಹೂತು ಕುಶ್ಕುಶ್ನೆ ಬಾಳ್

ಗಣ: ಸ, ಭ, ರ, ನ, ಮ, ಯ, ಲ, ಗು
--

2. ಚಂಪಕಮಾಲಾ ವೃತ್ತ:

(ಕೂಡಿಸಿದ ಪದ್ಯ)
ಕಲಿಯುಗದಲ್ಲಿ ಯುಕ್ತಿಯನು ದುಡ್ಡಿಗೆ ಮಾರಿದ ನಾವು ಎದ್ದೆವಯ್
ಕಮುಸನ ಕೊಂದ ಕೌರವಿಗಳನ್ನು ಅಳಿಸ್ದ ಕಿಶೋರ ಬಿದ್ದನಯ್
ಕಟುಹಗೆಯಲ್ಲಿ ನಿನ್ನನು ಅಸೂಹೆ ಅದರ್ಮ ಗಳಿಂದ ಕೊಂದೆವೋ
ಕರಿವಡಲೋನೆ ನಮ್ಮಯ ಅಹಿಂಸೆ ಇರುಳ್ಗೆ ಗತೀಯ ಕಾಣಿಸಯ್

ಗಣ: ನ, ಜ, ಭ, ಜ, ಜ, ಜ, ರ
--

3. ಶಾರ್ದೂಲ ವಿಕ್ರೀಡಿತ ವೃತ್ತ:

(ಕೂಡಿಸಿದ ಪದ್ಯ)
ಅಂಬೇಡ್ಕರ್ ನಮಗಾಗಿ ಕಟ್ಳೆಯನು ಮಾಡ್ದಾಗಿಂದ ಎಲ್ಲಾರ್ಗು ಕುಶ್
ಕಾನೂನನ್ ಅಳಿಸೋರ ಕೈಗೆ ಮೊಳೆಯನ್ ಹಾಕ್ಬಿಟ್ಟು ನಿಲ್ಲಿಸ್ಬಿಡೋಣ್
ಏನೇಆಗಲಿ ನಾವ್ ಕಟುಕ್ರನು ಅಳಿಸ್ ನಾಡಲ್ಲಿ ಇದ್ದೇಬಿಡೋಣ್
ಎಲ್ಲರ್ಗಾಗಿ ಇದನ್ ಬರೆದ್ ಕೊಡುಗೆನೀಡ್ ದಂತೋರ್ಗೆ ನಾವ್ ಅರ್ಪಿತಮ್

ಗಣ: ಮ, ಸ, ಜ, ಸ, ತ, ತ, ಗು
--

4. ಉತ್ಪಲಮಾಲಾವೃತ್ತ:

(ಕೂಡಿಸಿದ ಪದ್ಯ)
ಆಗಸದಲ್ಲಿ ಸೂರ್ಯನಿಗೆ ಅಡ್ವಿರೊ ದಾರಿಯ ಕಂಡು ಹೇಳಿರೋ
ಬೂಮಿಯೊಳಕ್ಕೆ ನೀ ತೆರಳಿ ಮಾಗುವೆಯೋ ನರನೇ ತಿಳಿಸ್ಬಿಡೋ
ಗಾಳಿಯ ಹಿಡ್ದು ನಾವ್ ಉಸಿರು ಇಲ್ಲದೆ ಬಾಳಲು ಬಿಡ್ಸಿ ಹೇಳಿರೋ
ಹೂವು ನಗೋದ ಹೇಳಿಕೊಡು ಮಾನವ ಬೇಡದ ಜಾಣ್ಮೆ ಬೇಡವೋ

ಗಣ: ಭ, ರ, ನ, ಭ, ಭ, ರ, ಲ, ಗು
---

5. ಮಹಾಸ್ರಗ್ಧರಾವೃತ್ತ:

(ಕೂಡಿಸಿದ ಪದ್ಯ)
ಮನುವಿನ್ ಬುರ್ಡೇಲಿ ಕೇಡಂತೆ ವಿಕಲರುಗಳನ್ ಬಿಂಬಿಸಿದ್ ಚಂದವೇನ್ ಹೇಳ್
ಹೆಳವರ್ ಬೀದ್ಯಾಗೆ ಬಾಳೋದು ನರನು ದಿಟವಲ್ಲದ್ ಬದುಕ್ ಬಾಳಿದಂಗ್ ನೋಡ್
ನೆಲದವ್ಳಿಂದ್ ನಮ್ಮ ಬಾಳೆಂದು ನರಮನುಶ ತಿಳ್ಕೊಂಡುಬಿಟ್ ಬಾಳ್ವೆಮಾಡ್ಲೋ
ಎಲೆಯಂತ್ ನಾವೆಲ್ರು ಇರ್ವಾಗ ಕೊಳೆಯ ಬದುಕನ್ಬಿಟ್ ಒಳಿತ್ ಒಳ್ಗೆ ಬಾಳೋಣ್

ಗಣ: ಸ, ತ, ತ, ನ, ಸ, ರ, ರ, ಗು
--
6. ಸ್ರಗ್ಧರಾವೃತ್ತ:

(ಕೂಡಿಸಿದ ಪದ್ಯ)
ರಾಜ್ಕಾರ್ನೀನ್ ನಂಬಿ ಸೋತಾಯ್ತು ಕೊಲೆಗೆಡುಕರಿಂದ್ ಪಾಟ ಕಲ್ತಾಯ್ತು ಬಿಡ್ರೋ
ನೆಲ್ದವ್ಗೂ ಬಾನಿಗೂ ಈ ನರ ಹೊಣೆಯವನಾಗಿದ್ದು ತಪ್ಪಲ್ಲವೇನಯ್
ಹುಡ್ಕಾಡ್ದ್ರೂ ಸಾವಿಗಿಂದೂ ಸಹ ಗುಳುಗೆಯ ಕಾಣ್ಲಿಲ್ಲ ಸೋಲ್ನಲ್ಲಿ ಕುಂತ್ಯೋ
ಎಡ್ ಬಲ್ ಬಿಟ್ ದೇಶವನ್ ಕಟ್ಟಲು ತೊಡಗಿ ಮರುಳ್ಯೋಜನೇನ್ ಬಿಟ್ಟು ಆಳಯ್

ಗಣ: ಮ, ರ, ಭ, ನ, ಯ, ಯ, ಯ

ನಂಬಿಕೆಯ ಕೀಲಿಯೇ ಮುರಿದಿರುವ ಊರಲ್ಲಿ


ನಂಬಿಕೆಯ ಕೀಲಿಯೇ ಮುರಿದಿರುವ ಊರಲ್ಲಿ
ನಿಂತಿರುವ ಬೂಮಿಯೇ ಬಿರಿತಿರುವ ಲೋಕದಲಿ
ನೆಮ್ಮದಿಯ ಹುಡುಕಾಟ, ಬಣಬಣದ ಚೀರಾಟ

ಬಿಚ್ಚಿಡುವ ಬಯಕೆಯಲಿ ಸತ್ತಿರುವ ತುಡಿತಗಳು
ಹಚ್ಚನೆಯ ಬಾಯಿಯಲಿ ಬಗ್ಗಡದ ಮಾತುಗಳು
ಕೊಚ್ಚೆಯಲಿ ಮಲಗಿರುವ ದಿಟವಾದ ಹೆಜ್ಜೆಗಳು

ದಿಬ್ಬದಲಿ ಕೊಲೆಗೆಡುಕ ಕಂಡಾಗ ಕುರಿಯಾಗಿ
ದಬ್ಬಳವು ಚುಚ್ಚಿದರು ಬೇಡುವರು ನಲಿವನ್ನು
ಹಬ್ಬದಲಿ ತಳಿರಿಲ್ಲ ನೀರಸವೆ ಜೀವಾಳ

ಗಿಡಗಳಲಿ ತೇವವಿಲ ಹೊಟ್ಟೆಯಲಿ ರಕ್ತವಿಲ
ಗೆಳೆತನದ ಸಂಬಂದ ಗೆದ್ದಲಿನ ಗೂಡಾಗಿ
ಹಗೆಮೋಸ ನಂಬಿಕೆಯ ದೀಪವನು ಕರಗಿಸಿದೆ

ನೆಮ್ಮದಿಯ ಬಾಳುವೆಗೆ ಕೆಟ್ಟವನು ಅಳಿಸೋಣ
ನಂಬಿಕೆಯ ಕೀಲಿಯನು ನೆಮ್ಮದಿಯ ಬೀಗಕ್ಕೆ
ಹೊಂದಿಸುವ, ಒಡಬೆರೆತು ಒಂತನದಿ ಬದುಕೋಣ

ಕುದುರೆ ಕುಡಿತ ಕುಡುಕ


ಹೆಂಡದ ಕೇಡಿನ ಕತೆಯನು ಹೇಳುವೆ
ಕೇಳಿರಿ ಮಕ್ಕಳೆ, ಕುಡಿತವ ತೊಲಗಿಸಿ
ನಿಮ್ಮಯ ಯುಕ್ತಿಯು ನಾಡಿಗೆ ಶಕ್ತಿಯು
ಹೊಳಪಿನ ಮಕ್ಕಳೆ, ಕುಡಿತವ ತೊಲಗಿಸಿ

ಕುದುರೆಯ ಸಾಕಿದ ಕುಡುಕನು ನಲಿವಲಿ
ಕುದುರೆಯ ಮೇಲಕೆ ಚಂಗನೆ ಕೂತನು
ಕುದುರೆಗೆ ಓಡಲು ಈತನು ಗದರಿದ
ಕುದುರೆಯು ಓಡದೆ ನಿಂತಿತು ಹೆಂಡಕೆ

ಕುದುರೆಗೆ ಕುಡುಕನು ಕುಡಿಸಿದ ಹೆಂಡವ
ಕುದುರೆಯು ನಲಿವಲಿ ನೆಗೆಯಿತು ನಿಂತಿತು
ಕುದುರೆಗೆ ಕೋಪದಿ ಈತನು ಗದರಿದ
ಕುದುರೆಯು ಚಂಗನೆ ಹಾರಿತು ಪಕ್ಕಕೆ

ಕುದುರೆಯು ಕುಡುಕನ ಮೇಲಕೆ ಕೂರಲು
ಕುದುರೆಯ ಬಾರಕೆ ಕುಡುಕನು ಸತ್ತನು
ಮಕ್ಕಳೆ ಕತೆಯು ಇಲ್ಲಿಗೆ ಮುಗಿಯಿತು
ಕತೆಬಲು ಪುಟ್ಟದು, ಕಾಡುವ ತೊಂದರೆ ದೊಡ್ಡದು

ಕುಡುಕರು ಇರುವರು ಕುಡಿತವು ಇರುವುದು
ಕುಡಿತವು ಕುಡುಕರ ಮನಮನೆ ಸುಟ್ಟರೆ
ಕುಡುಕರು ಎಲ್ಲರ ನೆಮ್ಮದಿ ಸುಡುವರು
ನೆಮ್ಮದಿ ಇದ್ದರೆ ಉಳಿವುದು ಬಾರತ

ಕುಡಿತವ ಬಿಡಿಸಲು ಅರಿವನು ಹೊಂದಿರಿ
ಕುಡಿತವ ಬಿಡಿಸಿರಿ, ಮನಮನೆ ಬೆಳಗಿರಿ
ಅಳಿಯದ ನೆಮ್ಮದಿ ನಾಡನು ಕಟ್ಟಲು
ಜೊತೆಜೊತೆ ಸಮಸಮ ಅನುದಿನ ಸಾಗಿರಿ

ಕೋಪ ಹಿಂಸೆ ಕೇಡ ಬಿಟ್ಟು


|ಪ|
ಕೋಪ ಹಿಂಸೆ ಕೇಡ ಬಿಟ್ಟು
ಒಲವ ಕಡೆಗೆ ಗಮನ ಕೊಟ್ಟು
ಮದುರ ಬಾಳ ಕಡೆಗೆ ನಡೆದು
ನಿನ್ನ ಬಳಿಗೆ ಮರಳಿ ಬರುವೆ

|1|
ತಪಸ ಬದಲು ಕೆಲಸ ದೇವ
ಹರಸು ನಿನ್ನ ಮನೆಗೆ ಬರಲು
ಹೂವು ಹಣ್ಣು ಕಾಯಿ ಕೊಡೆನು
ಅವೂ ನನ್ನ ಹಾಗೆ ದೇವ

|2|
ಬೆಂಕಿ ಬದುಕ ನೀಡ ಬೇಡ
ಕೊಂಕು ನಡತೆ ಬಿಡುವೆ ದೇವ
ಬೆಳಕು ಗಾಳಿ ನೀರು ಊಟ
ನೀಡಿ ಮುಕುತಿ ನೀಡು ದೇವ

|3|
ಮನಸ ಊರ ಬೆಳಗು ನೀನು
ಮೋಸ ಕೆಂಡ ಎರಚ ಲಾರೆ
ಬೆಳಕ ಹಂಚಿ ಸುಕದಿ ಇರಲು
ಅರಿವ ಹೊಳೆಯ ತೋರು ದೇವ

ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ


|ಪ|
 ಒಳಗೊಳಗೆ ಸುಳ್ಳನು ಬೆಳಗಿಸಿ
ಮಂದಿಗಳೆದರು ಸತ್ಯವ ಗುನುಗುವ ನೀನು
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|1|
ದೇವರನ್ ಮೆಚ್ಚಿಸ್ದೆ, ಮಂದಿಗಳನ್ ಮೆಚ್ಚಿಸ್ದೆ
ಕೆಟ್ಟುದ್ರಲ್ಲೇ ಮುಳ್ಗಿ ಕೇಡುಗಳನ್ ಎಬ್ಬಿಸ್ದೆ
ಕೇಡುಗಳನ್ ಎಬ್ಬೀಸಿ, ಒಳ್ಳೆದನ್ ಕಸವ ಮಾಡಿ
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|2|
 ಮಳೆನ್ ನಿಲ್ಸ್ದೆ, ಬೆಳೆಯನ್ನೂ ನಿಲ್ಸ್ದೆ
ಹಣ್ದಲ್ಲೇ ಮುಳ್ಗಿ ರೋಗ್ವನ್ ಎಬ್ಬಿಸ್ದೆ
ರೋಗ್ವನ್ ಎಬ್ಬೀಸಿ, ಬಾಳ್ವೆಯನ್ ಸಾವ್ಗೆ ನೂಕಿ
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|3|
 ನಾಡನ್ ಕಟ್ಲಾರ್ದೆ, ನೆಲ್ದವ್ಗೂ ಬೇಡ್ವಾದೆ
ಅದಿಕಾರ್ರೆಕ್ಕೇಲಿ ಹಾರ್ಯಾಡಿ ಜಗಳದ್ ಬೆಂಕಿ ಹಬ್ಬೀಸ್ದೆ
ಜಗಳದ್ ಬೆಂಕಿ ಹಬ್ಬೀಸಿ, ಮಂದಿ ಮಿಡಿತವ ಕಯ್ಗೆ ಎಳ್ಕೊಂಡು
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

ಚಾಣಕ್ಯನ ನೀತಿಸೂತ್ರಗಳಲ್ಲಿನ ಕೆಲವು ಹೇಳಿಕೆಗೆ ನನ್ನ ಅಸಮದಾನಗಳು


ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿರುವ `ಚಾಣಕ್ಯನ ನೀತಿಸೂತ್ರಗಳು' ಎಂಬ ಹೊತ್ತಗೆಯಲ್ಲಿರುವ ಚಾಣಕ್ಯ ನೀಡಿರುವ ಕೆಲವು ನೀತಿಸೂತ್ರಗಳನ್ನು ನೀವು ನೋಡಿದರೆ ಅವರು ಹೇಳಿದ್ದರ ಕುರಿತು ಅಸಮದಾನಗಳು ತಮಗೂ ಆಗಬಹುದು. ಇಲ್ಲಿ ಕೆಲವು ನೀತಿಸೂತ್ರಗಳಿಗೆ ನಾನು ನನ್ನ ಅಸಮದಾನಗಳನ್ನೊಳಗೊಂಡ ಪ್ರಶ್ನೆಗಳನ್ನು ಬರೆದಿದ್ದೇನೆ.

೧. ನ ಸ್ತ್ರೀರತ್ನಸಮಂ ರತ್ನಂ
ಸ್ತ್ರೀ ರತ್ನಕ್ಕೆ ಸಮವಾದ ಬೇರೆ ರತ್ನವಿಲ್ಲ.
ಅಸಮದಾನ: ಇಲ್ಲಿ ಹೀಗೆ ಸ್ತ್ರೀ ಕುರಿತು ಹೇಳಿರುವ ಚಾಣಕ್ಯರು "ಸ್ತ್ರೀಷು ಕಿಂಚಿದಪಿ ನ ವಿಶ್ವಸೇತ್- ಸ್ತ್ರೀಯರಲ್ಲಿ ಎಳ್ಳಷ್ಟೂ ನಂಬಿಕೆ ಇಡಬಾರದು." ಅಂತ ಯಾಕೆ ಹೇಳಿದರು?

2. ನ ಸಮಾಧಿಃ ಸ್ತ್ರೀಷು ಲೋಕಜ್ಞತಾ ಚ
ಸ್ತ್ರೀಯರಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ಇರುವುದಿಲ್ಲ.
ಅಸಮದಾನ: "ಗುರೂಣಾಂ ಮಾತಾ ಗರೀಯಸೀ -ಗುರುಗಳೊಳಗೆ ತಾಯಿಯು ಹೆಚ್ಚಿನವಳು." ಹಾಗಾದರೆ ಗುರು ಎಂಬುವನಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ತುಸು ಕಡಿಮೆಯೇ ಇರುತ್ತದೆಂದು ಆಯಿತಲ್ಲವೆ?

3. ಪುತ್ರಾರ್ಥಾ ಹಿ ಸ್ತ್ರೀಯಃ
ಸ್ತ್ರೀಯರಿರುವುದು ಸಂತತಿಗಾಗಿಯೇ.
ಅಸಮದಾನ: ಇಸ್ಲಾಮ್ ಕೂಡ ಮಹಿಳೆಯರನ್ನು ಹುಟ್ಟಿಸುವ ಯಂತ್ರವನ್ನಾಗಿಯೇ ನೋಡಿದ್ದಾಗ್ಯೂ, ಇತ್ತೀಚಿನ ಮುಸಲ್ಮಾನರಲ್ಲಿ ಈ ಕುರಿತು ತುಸು ಬದಲಾವಣೆಯಾಗುತ್ತಿದ್ದರೂ, ಮತ್ ಯಾಕೆ ಕಟ್ಟಾ ಹಿಂದುಗಳು ಹಾಗೂ ಚಾಣಕ್ಯನ ನೆರಳಿನವರು ಈ ವಿಶಯಕ್ಕೆ ಮುಸಲ್ಮಾನರನ್ನು ಹಂಗಿಸುತ್ತಿರೋದು?

4. ಅಪಚಕ್ಷುಷಃ ಕಿಂ ಶರೀರೇಣ
ಕಣ್ಣಿಲ್ಲದವನಿಗೆ ಶರೀರದಿಂದ ಉಪಯೋಗವಿಲ್ಲ.
ಅಸಮದಾನ: ಶರೀರದಿಂದ ಉಪಯೋಗವಿಲ್ಲದಿರಬಹುದಾದರೂ ಗ್ನಾನದಿಂದ ಇದೆಯಲ್ಲವೆ? ಈ ಗ್ನಾನವನ್ನು ಬಳಸಲಿಕ್ಕೆ ಯಂತ್ರ ಬೇಕಾಗಿರುವುದರಿಂದ ಶರೀರದಿಂದ ಉಪಯೋಗವಿದೆ ಅಂತ ನನಗೆ ಅನಿಸಿದೆ. ನಿಮಗೆ?

5. ಯಥಾ ಶರೀರಂ ತಥಾ ಜ್ಞಾನಂ
ದೇಹದಂತೆ ಜ್ಞಾನವಿರುವುದು.
ಅಸಮದಾನ: ದೇಹದಂತೆ ಗ್ನಾನವಿದ್ದರೂ/ಗ್ನಾನದಂತೆ ದೇಹವಿದ್ದರೂ ಒಳ್ಳೆಯ ನಡವಳಿಕೆಗಳು ಪಡೆದ ಗ್ನಾನದ ಬಿಂಬಕ ಅಂತ ಮಾತ್ರ ಹೇಳಬಹುದಲ್ಲವೆ?

೬. ಕಥಂಚಿದಪಿ ಧರ್ಮಾಂ ನಿಷೇವೇತ
ಹೇಗಾದರೂ ಧರ್ಮವನ್ನು ಸೇವಿಸಬೇಕು.
ಅಸಮದಾನ: ದರ್ಮದ ನಶೆಯನ್ನು ಏರಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ ಈ ಹೇಳಿಕೆ ಅಲ್ಲವೆ?

7. ಸರ್ವಾವಸ್ಥಾಸು ಮಾತಾ ಭರ್ತವ್ಯಾ
ಎಲ್ಲ ಅವಸ್ಥೆಗಳಲ್ಲೂ ತಾಯಿಯನ್ನು ಭರಿಸಬೇಕು.
ಅಸಮದಾನ: "ಸ್ತ್ರೀನಾಮ ಸರ್ವಾಶುಭಾನಾಂ ಕ್ಷೇತ್ರಂ-ಎಲ್ಲಾ ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ತಾಯಿಯ ಕುರಿತು ಹೇಳಿದ ಇವರು ಹಿಂದು ದರ್ಮದಲ್ಲಿ ಮಹಿಳೆಗೆ ಸುಮಂಗಳಕರ ಸ್ತಾನ ಇದ್ದಾಗ್ಯೂ "ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ಅಂತ ಯಾಕೆ ಹೇಳಿದರು?

8. ನ ದಾನಸಮಂ ವಶಂ
ದಾನಕ್ಕೆ ಸಮವಾದ ವಶೀಕರಣವಿಲ್ಲ.
ಅಸಮದಾನ: ದಾನವನ್ನು ಕೆಟ್ಟ ಹಾಗೂ ಒಳ್ಳೆಯ ಹಿನ್ನೆಲೆಯಲ್ಲಿ ಎರಡು ತೆರನಾಗಿಸಿಕೊಂಡರೆ ಕೆಟ್ಟ ದಾನವನ್ನು ಮತ್ತೊಬ್ಬರನ್ನು ಗುಲಾಮಕ್ಕೆ ಒಳಗುಪಡಿಸಿಕೊಳ್ಳುವ ಶಕ್ತಿ ಹಾಗೂ ಮಾಟಮಂತ್ರದ ಮತ್ತೊಂದು ರೂಪ ಅನ್ನಬಹುದೆ?

--
 ಚಾಣಕ್ಯ ರೂಪಿಸಿದ ಮೌರ್ಯ ಸಾಮ್ಬ್ರಾಜ್ಯವು ಚಾಣಕ್ಯನ ನೀತಿಸೂತ್ರಕ್ಕನುಗುಣವಾಗಿಯೇ ಇದೆ ಮತ್ತು ಅಂದಿನ ಸಮಾಜದ ವ್ಯವಸ್ತೆಯನ್ನು ಇದು ತೋರ್ಪಡಿಸಿದೆ. ಚಾಣಕ್ಯ ಒಂದು ಸಾಮ್ಬ್ರಾಜ್ಯವನ್ನು ಕಟ್ಟಿದಾಗ್ಯೂ ಮಹಿಳೆಯರ ಕುರಿತು ಈ ಪರಿ ಕೆಳಮಟ್ಟದ ನಿಲುವನ್ನು ಹೊಂದಿದ್ದಾದರೂ ಯಾವುದರ ಹಿನ್ನೆಲೆ ಎಂಬುವುದನ್ನು ತಿಳಿದುಕೊಳ್ಳಬೇಕಿದೆ. ಅದರಲ್ಲೂ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಹಲವು ಬಗೆಯ ಅನಿಸಿಕೆಗಳು ಗಾದೆಗಳಲ್ಲಿ ಇರುವುದು ಸಹಜವಾದರೂ; ಬುದ್ದಿವಂತನೂ, ಯುಕ್ತಿಯನ್ನು ಬಳಸಿ ಹಲವಾರು ವ್ಯಕ್ತಿಗಳಲ್ಲಿನ ಶಕ್ತಿಗಳನ್ನು ಒಗ್ಗೂಡಿಸಿದ ವ್ಯಕ್ತಿ ಒಂದೇ ವಿಶಯವನ್ನು ಈ ಪರಿಯ ಗೊಂದಲದಲ್ಲಿ ಹೊಮ್ಮಿಸಿರುವುದು ಈತ ಬಳಸಿಕೊಂಡ ಯುಕ್ತಿಯಲ್ಲಿ ಅಡಗಿಸಿಕೊಂಡಿದ್ದ ಕೆಡುಕನ್ನು ತೋರ್ಪಡಿಸಿದೆ.

ಅಶೋಕನ ಕಾಲದಿಂದೀಚೆಗೆ ಸಮಾಜವು ಚಾಣಕ್ಯನ ನೀತಿಸೂತ್ರದ ಹತೋಟಿಯಿಂದ ಬಿಡಿಸಿಕೊಂಡು ಸಮಾಜದಲ್ಲಿ ಒಂದಶ್ಟು ಮಹಿಳೆಯರು, ಕೆಳಜಾತಿಯವರು ಹಾಗೂ ಒಟ್ಟಾರೆ ತುಳಿತಕ್ಕೆ ಒಳಗಾದವರು ಈ ನೀತಿಸೂತ್ರಕ್ಕಿಂತಲೂ ಸಾರಯುಕ್ತ ಒಳ್ಳೆಯದಾರಿಯನ್ನು ಹಾಕಬಲ್ಲ ಬರವಣಿಗೆಯನ್ನು ಹಾಗೂ ಬದುಕನ್ನು ಕಟ್ಟಿರುವುದು ಸಂತಸದ ಬೆಳವಣಿಗೆಯಾಗಿದೆ.

ಇವಶ್ಟೇ ಹೇಳಿಕೆಗಳು ನನ್ನನ್ನು ಅಸಮದಾನಕ್ಕೆ ಒಳಗುಪಡಿಸಿಕೊಂಡದ್ದು ಅಂತ ನೀವು ಅಂದುಕೊಳ್ಳದಿರಿ. ನೀವು ಈ ಹೊತ್ತಗೆಯಲ್ಲಿ ಬೇರೆಬೇರೆ ಕಡೆ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಬೇರೆಬೇರೆ ಹೇಳಿಕೆಗಳನ್ನು ಗಮನಿಸಿದರೆ ನಿಮ್ಮನ್ನೂ ಈ ನೀತಿಸೂತ್ರಗಳು ಅಸಮದಾನಕ್ಕೆ ಒಳಗುಪಡಿಸುತ್ತವೆ ಅನ್ನೋದು ನನ್ನ ನಿಲುವು. ಈ ನನ್ನ ಅನಿಸಿಕೆಗೆ ಸಂಬಂದಿಸಿದಂತೆ ನೀವು ನಿಮ್ಮ ನಿಲುವುಗಳನ್ನು ಹರಿಬಿಡುವ ಮೂಲಕ ನನ್ನ ಅರಿವಿನ ಎಲ್ಲೆಯನ್ನು ವಿಸ್ತರಿಸುವಿರೆಂಬ ವಿಶ್ವಾಸವಿದೆ.

ಮಕ್ಕಳಲ್ಲಿ ನುಡಿ ಅರಿಮೆ ಇಲ್ಲವೆಂಬುದು ಸುಳ್ಳು!


( ಡಬ್ಬಿಂಗ್ ಹಿನ್ನೆಲೆಯಲ್ಲಿ)
ಸುದ್ದಿ ಹಾಳೆ ಹಾಗೂ T.V ಗಳಲ್ಲಿ ಡಬ್ಬಿಂಗ್ ಕುರಿತು ಚರ‍್ಚೆಗಳು ನಡೆಯುತ್ತಿವೆ. ಈ ಡಬ್ಬಿಂಗ್ ಕಡೆ ಇಲ್ಲದವರು ವಾದಿಸುತ್ತಿರುವುದರಲ್ಲಿ ಒಂದನ್ನು ಮಾತ್ರ ಕಡೆಗಣಿಸಬೇಕಾಗಿದೆ. ಅದೇನೆಂದರೆ ಮಕ್ಕಳಲ್ಲಿ ನುಡಿ ಅರಿಮೆ ಇರದು ಎಂಬ ವಾದವೇ ಆಗಿದೆ. ಈ ಸತ್ಯವನ್ನು ಅರಿತುಕೊಳ್ಳಲು ನನ್ನ ಅಕ್ಕ ನಡೆಸುವ ಮನೆಪಾಟದ 1-7 ತರಗತಿಯ ಮೂರು ಹೆಣ್ಣು ನಾಲ್ಕು ಗಂಡು ಮಕ್ಕಳಿಗೆ ಒಂದಶ್ಟು ಕೇಳ್ವಿಗಳನ್ನು ಕೇಳಿದೆ. ಅವೆಂದರೆ,
1. ಯಾವ ಚಾನೆಲ್ ನೋಡುತ್ತೀರ?
2. ಅವು ಯಾವ ನುಡಿಯದ್ದು?
3. ಕನ್ನಡಕ್ಕೆ ಅವು ಬಂದರೆ ನೀವು ನೋಡುತ್ತೀರ?
4. ದೊಡ್ಡವರು ಕನ್ನಡಕ್ಕೆ ನೀವು ನೋಡುವ ಇಂಗ್ಲಿಶ್ ಚಾನಲ್ಗಳು ಬರಬಾರದು ಎನ್ನುತ್ತಿದ್ದಾರೆ. ಇದಕ್ಕೆ ನೀವು ಏನ್ ಅನ್ನುತ್ತಿರ?

ಈ ಕೇಳ್ವಿಗಳನ್ನು ಕೇಳಿದೆ. ಇದಕ್ಕೆ
ಇಬ್ಬರು ಗಂಡು ಮಕ್ಕಳು English ಚಾನಲ್ಗಳನ್ನು ಮಾತ್ರ ನೋಡುತ್ತೇವೆಂದು,
ನಾಲ್ಕು ಮಕ್ಕಳು ಕನ್ನಡಕ್ಕೆ ಬರಬೇಕೆಂದೂ
ಹಾಗೂ
ಒಬ್ಬ ಮಾತ್ರ ಸುಮ್ಮನೆ ಆಟವಾಡುವವನಂತೆ ಹೇಳುತ್ತಿದ್ದ.

ಇದರ ಒಟ್ಟಾರೆ ದೊರೆತ: ಮಕ್ಕಳಿಗೂ ತಮ್ಮ ನುಡಿಯಲ್ಲಿಯೇ ಜಾಗತಿಕ ವಿಚಾರಗಳು ದೊರೆಯಬೇಕೆಂದೇ ಆಗಿದೆ. ಅಂತೆಯೇ ನಮ್ಮ ಈ ಗೊಂದಲದ ಸುತ್ತಣದಿಂದಲೇ ಮಕ್ಕಳು ಕೂಡ ಗೊಂದಲದಲ್ಲಿಯೇ ಇರುವಂತೆ ಆಗಿದೆ ಎಂಬುವುದನ್ನು ಅರಿಯಲು ಆಯಿತು.

ಕೆಲವರು ಯಾತಕ್ಕಾಗಿ ಹೀಗೆ ಡಬ್ಬಿಂಗ್ಗೆ ವಿರೋದಿಸುತ್ತಾ ಒಂದು ನಿಲುವಿಗೆ ಅಂಟುಕೊಂಡಿದ್ದಾರೋ ತಿಳಿಯುತ್ತಲೇ ಇಲ್ಲ. ಯಾರು ಡಬ್ಬಿಂಗ್ ಬೇಡಾ ಅನ್ನುತ್ತಿದ್ದಾರೋ ಅವರು ಸುತ್ತಲಿನ ಮಕ್ಕಳ ನಿಲುವುಗಳು ಈ ಬಗೆಗೆ ಎಂತಹುದಿದೆ ಎಂಬುವುದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಲಿ ಆಗ ಅವರಿಗೆ ಸತ್ಯವೇನೆಂಬುದು ತಿಳಿಯುತ್ತದೆ.

ನಾಡ ಏಳಿಗೆಗೆ ಪೂರಕವಾದ ಎಲ್ಲಾ ತೆರನ ಅಂಶಗಳು ಡಬ್ಬಿಂಗ್ಗೆ ಒಳಪಡಬೇಕು. ಇದರಿಂದ ನಾವು ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮೊಳಗೂ ದೊರೆಯದ ಸಂಪತ್ತನ್ನು ನಮ್ಮೊಳಗೆ ತಂದುಕೊಳ್ಳುವ ನಿಟ್ಟಿನಲ್ಲಿ ಇದು ಪೂರಕವಾದ ಸವಲತ್ತು ಆಗಿದೆ. ಇದರಿಂದ ನಮ್ಮ ನುಡಿಯು ಚಳಕ, ಅರಿಮೆ, ಮನೋರಂಜನೆ, ಸಾಹಸ, ಕೆಲಸ, ಸೇವೆ ಹಾಗೂ ಇನ್ನುಳಿದ ನೆಲೆಗಳಲ್ಲಿ ಜಾಗತಿಕ ಸುತ್ತಣದಲ್ಲೂ ಗಟ್ಟಿಯಾಗಿ ನಿಲ್ಲಬಲ್ಲದು. ಒಂದು ವೇಳೆ ಪೂರ‍್ತಿಯಾಗಿ ಡಬ್ಬಿಂಗ್ನ ಒಪ್ಪಿಕೊಳ್ಳಲಾಗದಿದ್ದರೆ ೧೦೦ರಲ್ಲಿ ೩೦ ರಶ್ಟನ್ನಾದರೂ ಒಪ್ಪಿಕೊಂಡು ಕೆಟ್ಟ ದ್ರುಶ್ಯಗಳನ್ನು ಇಲ್ಲವಾಗಿಸಿ ಮಂದಿಗಳು ನೋಡುವ ಹಾಗೆ ಏರ‍್ಪಾಟು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನೋಡುವ ಮುಂದಿನ ದಿನಗಳಲ್ಲಿ ಯಾವ ನಿಲುವನ್ನು ಮಂದಿಗಳು ಬೆಂಬಲಿಸುವವರೆಂದು.

ಬಾವಾನುವಾದ= ರಿ-ಮೇಕ್
ಯತಾನುಬವ=ಡಬ್ಬಿಂಗ್
ಸಾಹಿತ್ಯವಿರಲಿ ಸಿನಿಮವೇ ಇರಲಿ
ಚಳಕವೇ ಆಗಿರಲಿ,
ಸರಕು ಸೇವೆಗಳೇ ಆಗಿರಲಿ
ಒಳ್ಳೆಯವೆಲ್ಲವು
ಹಿರಿಯರಿಂದ ಕಿರಿಯರಿಗೆ,
ಕಿರಿಯರಿಂದ ಹಿರಿಯರಿಗೆ
ನುಡಿಯಿಂದ ಮತ್ತೊಂದು ನುಡಿಗೆ
ಒಳಗೂ-ಹೊರಗೂ ಹರಿವು ಎಂದೆಂದಿಗೂ ಇದ್ದೇ ಇರಲಿ.
ಎಚ್ಚರವೊಂತೂ ನಮ್ಮಲ್ಲಿ ಅಳಿಯದಂತೆ ಇರಿಸಿಕೊಂಡು ಡಬ್ಬಿಂಗ್ ವಿಚಾರದಲ್ಲಿ ನುಡಿಯ ಒಳಿತಿಗಾದರೂ ಕೆಲಸ ಮಾಡುವ.
--
ನನ್ನ ಅಕ್ಕ ನಡೆಸುವ ಮನೆಪಾಟದ ಹುಡುಗರೊಡನೆ Phone ಮೂಲಕ ಮಾತನಾಡಿದ ಕಡತವನ್ನು ತುಸು ತಿದ್ದುಪಡಿಗೊಳಿಸಿ ಈ ಕೆಳಗೆ ಕಡತದ ಕೊಂಡಿಯನ್ನು ನೀಡಿದ್ದೇನೆ. ಅದನ್ನು ಒಮ್ಮೆ ಕೇಳಿ.

http://www.solidfiles.com/d/7c9124451e/makkaLa_jote_sandarshna.mp3

ಕೇಳಿದ ಕೂಡಲೆ ಅನಿಸಿಕೆಯನ್ನು ಬರೆಯಬೇಕೆಂದು ಮನವಿ.

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ


ಕೇಳೀರ್ ಕೇಳ್ರಣ್ಣ ಕೇಳ್ರವ್ವೋ
ಕೇಳೀರ್ ಕೇಳ್ರವ್ವ ಕೇಳ್ರಣ್ಣೋ
ಇರೋದನ್ ಹೇಳ್ತೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ |ಪ|
ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು
ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು |1|
ನಾಲ್ಕು ವರ‍್ಣಾಶ್ರಮ್ನ ಸಾಯ್ಸಿ ನಾಲ್ಕು ಕೆಲ್ಸುದ್ ಗುಂಪನ್ ಹುಟ್ಸುದ್ರು
ಅವ್ವವೇ ಕೆಲ್ಸ ತುಸು ಬ್ಯಾರೆ ಮಾಡಿ ಬ್ಯಾರೆ ಹೆಸ್ರುನ್ ಇಟ್ರು |2|
ವಿದ್ಯೆ ಅಕ್ಸರದಿಂದ್ ಬರುತ್ ಎಂದ್ರು
ನಮ್ ನೆಲ ಅಕ್ಸರದಿಂದ್ ದುಡ್ಡನ್ ಕೀಳೋ ಬೀಡಾಯ್ತು |3|
ಅವ್ರು ಇವ್ರುನ್ ಕೊಲ್ತಾರೆ
ಇವ್ರು ಅವ್ರುನ್ ಕೊಲ್ತಾರೆ
ಅವ್ರು ಅವ್ರನ್ನೇ ಕೊಲ್ತಾರೆ
ಇವ್ರು ಇವ್ರನ್ನೇ ಕೊಲ್ತಾರೆ
ಹುಟ್ಸೋದು ಸಾಯ್ಸೋದು ಇಲ್ಲಿ ಕಸುಬ್ ಆಗಯ್ತೆ |4|
ಜಾತಿ ದರ‍್ಮಕೂ ಕತ್ತಿ
ನುಡಿ ಗುಡಿಗೂ ಕತ್ತಿ
ಮರ ಕಡಿಲಾಕೂ ಕತ್ತಿ
ನಾಡು ನಾಡಿಯನ್ ಬ್ಯಾರೆ ಮಾಡೋಕು ಕತ್ತಿ |5|
ಬೆಳ್ಕಿಂದ್ ಕೊಳ್ಕು ಕಾಣ್ಸ್ತಾವೋ
ಕೊಳ್ಕಿಂದ್ ಕತ್ಲು ಕಾಣ್ಸ್ತಾವೋ
ಗೊತ್ತು ಗೊತ್ತಿದ್ರು ಕತ್ಲಿಗ್ ಬೀಳ್ತಾವ್ರೋ |6|
ಕಾಡು ನಾಡಿಗೆ ಪಿರಾಣ ಅಂತಾವ್ರೋ
ಪಿರಾಣವನ್ನೆ ಬರ‍್ಬಾತ್ ಮಾಡ್ತಾವ್ರೋ
ಉಸ್ರಿಗೂ ಊಸೇ ಮಾಡೋವ್ರೋ |7|
ಬಡ್ತನ ಗಿಡ್ತನ ಏನೂ ಇರಂಗಿಲ್ಲ್ ಅಂತಾರೋ
ಗೆಲ್ಸೀ ಗೆಲ್ಸಿ ಅಂತ್ ಬೇಡ್ತಾರೋ
ಯುವ್ವೇ! ಗೆದ್ ಮ್ಯಾಗೆ ಗಿಡುಗನಿಗಿಂತ್ ಅತ್ಲತ್ತಾನೋ |8|
ತಬ್ಬು ತಬ್ಬಿಗೂ ಚಿನ್ನಾ ರನ್ನಾ ಎಂದ್ ಗುನುಗುತಾರೋ
ಮೋಜಿನ ಹಣ್ಣು ಬಿಡೋ ಹೊತ್ನಾಗೆ
ಇವ್ನ್/ ಇವ್ಳ್ದೆ ತಪ್ಪೆಂದು ತಿಪ್ಪೆ ಬಳಿತಾರೋ
ಜಗಳ್ ಬಯ್ಗುಳ್ ಆಗ್ತಯ್ತ್ರೋ /
ಒಪ್ಪುದ್ರೆ ನಂಟಿನ್ ಗಂಟ್ ಕುದುರ‍್ತಯ್ತ್ರೋ /
ಇಲ್ವೆ ದುಡ್ಡಿನ್ ಗಂಟ್ ಬಿಚ್ಬೇಕ್ರೋ
ಇಲ್ಲಿ ಮೂಲ್ಮೂಲೆಗೂ ಮಾಮೂಲ್ ಆಗಯ್ತ್ರೋ |9|
ಸಮಾನತೆ ತರೋಣ್ ಬಂದ್ರೋ ಅವರ‍್ನ್ ನಂಬ್ ಬ್ಯಾಡ್ರೋ
ಯೇ ಸಮಾನತೆ ಕನ್ಸಿನ್ ಮಾತೋ ಅವರ‍್ನ್ ನಂಬ್ ಬ್ಯಾಡ್ರೋ
ಅಂತ್ ಕೂಗ್ ಕೂಗಿ ತಲೆ ಕೆಡ್ಸ್ತಾವ್ರೋ |10|
ನಿನ್ ಪಾಡ್ ನಿನ್ಗೆ
ನನ್ ಪಾಡ್ ನನ್ಗೆ
ಅಂತ್ ಗಂಡ್ಹೆಂಡೀರ್ ಕೂಸ್ನ ಬಿಕಾರಿ ಮಾಡ್ತಾವ್ರೋ |11|
ಯಾರ‍್ನ್ ನಂಬ್ ಯಾರ್ ತೆಕ್ಕೆಗ್ ಬೀಳ್ತಾವ್ರೋ
ಒಂದೂ ತಿಳಿದಂಗ್ ಆಗಯ್ತ್ರೋ
ಇವರದ್ ಮೋಸ್ದ್ ಮೋರೆ ನೋಡ್ರೋ |12|
ಇರೋದನ್ ಹಾಂಗೆ ಹೇಳೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ
ಅಯ್ಯಾ ಅಕ್ಕಾ
ತಪ್ ಇದ್ರೆ ತಿದ್ ನಡ್ಸ್ರೋ
ಕಲಿ ಯುಗ್ದಾಗೆ ಕಲಿಲೇಬೇಕ್ರೋ
ಇನ್ನೂ ಅದಾವ್ ಕಾಣ್ರೋ
ಕಂಡಾಗ್ ಹಾಂಗೆ ತಿಳ್ಸ್ತೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ |13|

ಬರಹ ತಂತ್ರಾಂಶದ ಮೂಲಕ ಆನ್ಸಿ ಪಟ್ಯವನ್ನು ಯುನಿಕೋಡ್ ಪಟ್ಯಕ್ಕೆ ಬದಲಿಸುವ ಬಗೆ


ಪ್ರಿಯ ಗೆಳೆಯರೆ,
ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸುಲಬವಾಗಿ ಆನ್ಸಿ ಪಟ್ಯವನ್ನು ಯುನಿಕೋಡ್ ಪಟ್ಯಕ್ಕೆ ಕನ್ನಡ ಬಾಶೆಯ ಪಟ್ಯವನ್ನು ಪರಿವರ‍್ತಿಸಬಹುದಾಗಿದೆ. ಪರಿವರ‍್ತನೆಗೆ ಸಂಬಂದಪಟ್ಟ  ನುಡಿ ತಂತ್ರಾಂಶದಲ್ಲಿರುವ ಲೋಪವನ್ನು ಈ ತಂತ್ರಾಂಶವು  ಹೊಂದಿಲ್ಲದಿರುವುದರಿಂದ ನೀವು ನಿಮ್ಮ ಗಣಕದಲ್ಲಿ ೧೦.೮ /ಅದಕ್ಕೂ ಮೇಲಣ ಆವ್ರುತ್ತಿಯ ಬರಹವನ್ನು ಅನುಸ್ತಾಪಿಸಿಕೊಂಡಿದ್ದಲ್ಲಿ  ಈ ಕೆಳಗಿನ ವಿದಾನವನ್ನು ಅನುಸರಿಸತಕ್ಕದ್ದು.
೧. ಪರಿವರ‍್ತಿಸಲು ಉದ್ದೇಶಿಸಿರುವ ಆನ್ಸಿ ಪಟ್ಯವನ್ನು notepad/wordpad/ms word/ಮತ್ತಿತರೆ ಟೆಕ್ಸ್ಟ್ ಎಡಿಟರ‍್ನಲ್ಲಿ ಪೇಸ್ಟ್ ಮಾಡಿ.
೨. ಪೇಸ್ಟ್ ಮಾಡಿದ ಕೂಡಲೆ ಆಯಾಯ ಬಾಶೆಯಲ್ಲಿನ ಪಟ್ಯವನ್ನು ಸದರಿ ಬಾಶೆಯ ಬೆಂಬಲಿತ ಪಾಂಟ್ಗೆ ನಿಯೋಜಿಸಿ.
ಉ: ನೀವು ಕನ್ನಡದ ಹಾಗೂ ಆಂಗ್ಲ ಪಟ್ಯವನ್ನು ಟೆಕ್ಸ್ಟ್ ಎಡಿಟರ‍್ಗೆ ಪೇಸ್ಟ್ ಮಾಡಿದ್ದಲ್ಲಿ ಕನ್ನಡ ಬೆಂಬಲಿತ ಆನ್ಸಿ ಪಾಂಟ್ ಆದ brh vijay ಗೆ ಕನ್ನಡದ ಪಟ್ಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಯೋಜಿಸಿ. ಹಾಗೆ ಆಂಗ್ಲ ಪಟ್ಯವನ್ನು Verdana ಪಾಂಟ್ಗೆ ನಿಯೋಜಿಸಿ. ನಿಯೋಜಿಸಿದ ಬಳಿಕ ಎಲ್ಲಾ ಪಟ್ಯವನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಕಾಪಿ/ಕಟ್ ಮಾಡಿಕೊಳ್ಳಿ.
೩. ಇದಾದ ಬಳಿಕ ಬರಹ ತಂತ್ರಾಂಶವನ್ನು ಚಾಲನೆಗೊಳಿಸಿರಿ ಮತ್ತು ಕಾಪಿ ಕಟ್ ಮಾಡಿಕೊಂಡ ಪಟ್ಯವನ್ನು ಬರಹ ತಂತ್ರಾಂಶದ ಕಾಲಿ ಪುಟದಲ್ಲಿ ಪೇಸ್ಟ್ ಮಾಡಿ.

ಸೂಚನೆ ೧: ನೀವು ಪೇಸ್ಟ್ ಮಾಡಿದ ಬಳಿಕ ಪ್ರತಿ ಬಾಶೆಯ ಆರಂಬಿಕ ಪದದ ಮೊದಲಿಗೆ ಬಾಶೆಯೊಂದಕ್ಕೆ ನಿಯೋಜಿಸಲಾಗಿರುವ  ಕೋಡ್ ಬರೆಯಲ್ಪಟ್ಟಿರುತ್ತದೆ. ನೀವು ಯಾವ ಕಾರಣಕ್ಕೂ ಅದನ್ನು ಡಿಲೀಟ್ ಮಾಡಬಾರದು.
ಉ: ಕನ್ನಡ ಬಾಶೆಯ ಪದವಾಗಿದ್ದಲ್ಲಿ ಮೊದಲಿಗೆ ಹೀಗೆ ಬರೆಯಲಾಗಿರುತ್ತದೆ.
<lang=kan>
ಒಂದು ವೇಳೆ ಆಂಗ್ಲ ಬಾಶೆಯ ಪಟ್ಯವಾಗಿದ್ದಲ್ಲಿ
<lang=eng>
ಎಂದು ಬರೆಯಲಾಗಿರುತ್ತದೆ.
ಸೂಚನೆ ೨: ಪೇಸ್ಟ್ ಮಾಡಿದ ಬಳಿಕ ಆಂಗ್ಲ ಬಾಶೆಯ ಪಟ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಬಾಶೆಯ ಪದಗಳು ಆಂಗ್ಲ ಬಾಶೆಯಲ್ಲಿ ಬರೆದಿರುವಂತೆ ಬದಲಾಗಿರುತ್ತದೆ.
ಉ: ಕನ್ನಡದ ಪದವಾದ "ನಿಮ್ಮ ಹೆಸರು" ಪದವು ಹೀಗೆ ಆಂಗ್ಲ ಶಯ್ಲಿಯಲ್ಲಿ ಬರೆದಿರುತ್ತದೆ.
nimma hesaru
ಹೀಗಾಗಿ ಯಾವುದೇ ಕಾರಣಕ್ಕು ಬದಲಾಯಿಸದಿರಿ.

೪. ಪೇಸ್ಟ್ ಮಾಡಲಾದ ಎಲ್ಲಾ ಪಟ್ಯವನ್ನು ಆಯ್ಕೆ ಮಾಡಿಕೊಂಡು ಎಡಿಟ್ ಮೆನುನಲ್ಲಿರುವ ಕನ್ವರ‍್ಟ್ ಮೇಲೆ ಎಂಟರ್ ಕೀಲಿಯನ್ನು ಹೊತ್ತಿರಿ ಮತ್ತು ೧೦ರಿಂದ ೧೫ ಸೆಕೆಂಡ್ ವರೆಗೆ ನಿರೀಕ್ಶಿಸಿರಿ. 
೫. ಪಟ್ಯವು ಪರಿವರ‍್ತನೆಯಾದ ಬಳಿಕ ಪಯ್ಲ್ ಮೆನುನಲ್ಲಿರುವ Export... ಇದರ ಮೇಲೆ ಎಂಟರ್ ಕೀಲಿಯನ್ನು ಹೊತ್ತಿ ಮತ್ತು ಎಕ್ಸ್ಪೋರ‍್ಟ್ ಟಯ್ಪ್ ಟ್ಯಾಬ್ನಲ್ಲಿ RTf unicode / text ಇವೆರಡರಲ್ಲಿ ಯಾವುದಾದರೊಂದು ಕಡತದ ಪ್ರಕಾರವನ್ನು ಆಯ್ಕೆ ಮಾಡಿ ಎಂಟರ್ ಕೀಲಿಯನ್ನು ಹೊತ್ತಿ.
೬. ಈಗ file ಮೆನುವಿನಲ್ಲಿರುವ save as ಆಪ್ಶನ್ ಆರಿಸಿಕೊಳ್ಳಿ. ಕಡತಕ್ಕೆ ಒಂದು ಹೆಸರನ್ನು ಬರೆದು ಕಡತವನ್ನು ಎಲ್ಲಿ ಉಳಿಸಬೇಕೆಂದು ಲೊಕೇಶನ್ ಆಯ್ಕೆ ಮಾಡಿದ ಬಳಿಕ save ಬಟನ್ ಮೇಲೆ ಎಂಟರ್ ಕೀಲಿಯನ್ನು ಹೊತ್ತಿ ಮತ್ತು ಪ್ರೋಸೆಸ್ ಆಗುವವರೆಗೂ ನಿರೀಕ್ಶಿಸಿ.

ಈ ಎಲ್ಲಾ ಹಂತಗಳನ್ನು ನೀವು ಅನುಸರಿಸಿದ ಬಳಿಕ ಉಳಿಸಲಾದ ಕಡತವನ್ನು ತೆರದು ನೋಡಿ. ಆನ್ಸಿ ಪಟ್ಯವು ಯುನಿಕೋಡ್ಗೆ ಪರಿವರ‍್ತನೆಯಾಗಿರುವುದನ್ನು ನೀವು ಕಚಿತಪಡಿಸಿಕೊಳ್ಳುವಿರಿ.
---
ನುಡಿ ತಂತ್ರಾಂಶದಲ್ಲಿ ಈ ಸವ್ಲಬ್ಯವಿಲ್ಲವಾದ್ದರಿಂದ ನೀವು ಈ ತಂತ್ರಾಂಶದ ಮೂಲಕ ಸುಲಬವಾಗಿ ಸರ‍್ಕಾರಿಯ ಅನುಸೂಚನೆಗಳನ್ನು/ಆನ್ಸಿ ಪಟ್ಯವನ್ನು ಯುನಿಕೋಡ್ಗೆ ಬದಲಾಯಿಸಿಕೊಂಡು ನೀವು ನಿಮ್ಮ ಜ್ನಾನದ ಮತ್ತು ಮಾಹಿತಿಯ ಆಸೆಯನ್ನು ಪೂರಯ್ಸಿಕೊಳ್ಳಿ.
ಸರ‍್ಕಾರಿ ಸೇವೆಗಳಲ್ಲಿರುವವರಿಗೆ ಈ ಮಾಹಿತಿಯನ್ನು ದಯವಿಟ್ಟೂ ತಲುಪಿಸಬೇಕೆಂದು ತಮ್ಮಲ್ಲಿ ಕಳಕಳೀಯ ಮನವಿ.
ಅಂತೆಯೆ ಈ ಮೇಲೆ ತಿಳಿಸಲಾದ  ಆನ್ಸಿ ಪಟ್ಯದಿಂದ ಯುನಿಕೋಡ್ ಪಟ್ಯಕ್ಕೆ ಸಂಬಂದಪಟ್ಟ ಪರಿವರ‍್ತನೆಯ  ವಿದಾನವನ್ನು ಕಚಿತಪಡಿಸಿಕೊಂಡು ಬಳಿಕ ಆಂಗ್ಲ ಬಾಶೆಗೆ ತರ‍್ಜುಮೆ ಮಾಡಿ ಇತರರಿಗೂ ತಿಳಿಯುವಂತೆ ಮಾಡಿ.

ಬರಹ ಪ್ಯಾಡ್ ಬಳಸಿ ಆನ್ಸಿ ಪಟ್ಯದಿಂದ ಯುನಿಕೋಡ್ ಪಟ್ಯಕ್ಕೆ


ನನ್ನಯ ಗೆಳೆಯರೆ,
ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸುಲಬವಾಗಿ ಕನ್ನಡ ಬಾಶೆಯ ಆನ್ಸಿ ಪಟ್ಯದಿಂದ ಯುನಿಕೋಡ್ ಪಟ್ಯಕ್ಕೆ ಪರಿವರ‍್ತಿಸಬಹುದಾಗಿದೆ. ಪರಿವರ‍್ತನೆಗೆ ಸಂಬಂದಪಟ್ಟ  ನುಡಿ ತಂತ್ರಾಂಶದಲ್ಲಿರುವ ಲೋಪವನ್ನು ಈ ತಂತ್ರಾಂಶವು  ಹೊಂದಿಲ್ಲದಿರುವುದರಿಂದ ನೀವು ನಿಮ್ಮ ಗಣಕದಲ್ಲಿ ೧೦.೮/ಅದಕ್ಕೂ ಮೇಲಣ ಆವ್ರುತ್ತಿಯ ಬರಹವನ್ನು ಅನುಸ್ತಾಪಿಸಿಕೊಂಡಿದ್ದಲ್ಲಿ  ಈ ಕೆಳಗಿನ ವಿದಾನವನ್ನು ಅನುಸರಿಸತಕ್ಕದ್ದು.
೧. ಪರಿವರ‍್ತಿಸಲು ಉದ್ದೇಶಿಸಿರುವ ಆನ್ಸಿ ಪಟ್ಯವನ್ನು notepad/wordpad/ms word ಅತವಾ ಮತ್ತಿತರೆ ಟೆಕ್ಸ್ಟ್ ಎಡಿಟರ‍್ನಲ್ಲಿ ಪೇಸ್ಟ್ ಮಾಡಿ.
೨. ಪೇಸ್ಟ್ ಮಾಡಿದ ಕೂಡಲೆ ಆಯಾಯ ಬಾಶೆಯಲ್ಲಿನ ಪಟ್ಯವನ್ನು ಸದರಿ ಬಾಶೆಯ ಬೆಂಬಲಿತ ಪಾಂಟ್ಗೆ ನಿಯೋಜಿಸಿ.
ಉ: ನೀವು ಕನ್ನಡದ ಹಾಗೂ ಆಂಗ್ಲ ಪಟ್ಯವನ್ನು ಟೆಕ್ಸ್ಟ್ ಎಡಿಟರ‍್ಗೆ ಪೇಸ್ಟ್ ಮಾಡಿದ್ದಲ್ಲಿ ಕನ್ನಡ ಬೆಂಬಲಿತ ಆನ್ಸಿ ಪಾಂಟ್ ಆದ brh vijay ಗೆ ಕನ್ನಡದ ಪಟ್ಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಯೋಜಿಸಿ. ಹಾಗೆ ಆಂಗ್ಲ ಪಟ್ಯವನ್ನು Verdana ಪಾಂಟ್ಗೆ ನಿಯೋಜಿಸಿ. ನಿಯೋಜಿಸಿದ ಬಳಿಕ ಎಲ್ಲಾ ಪಟ್ಯವನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಕಾಪಿ ಅತವಾ ಕಟ್ ಮಾಡಿಕೊಳ್ಳಿ.
೩. ಇದಾದ ಬಳಿಕ ಬರಹ ಪ್ಯಾಡನ್ನು ಚಾಲನೆಗೊಳಿಸಿರಿ ಮತ್ತು ಕಾಪಿ ಅತವಾ ಕಟ್ ಮಾಡಿಕೊಂಡ ಪಟ್ಯವನ್ನು ಬರಹ ಪ್ಯಾಡ್ನಲ್ಲಿ ಪೇಸ್ಟ್ ಮಾಡಿ.
೪. ಪೇಸ್ಟ್ ಮಾಡಲಾದ ಎಲ್ಲಾ ಪಟ್ಯವನ್ನು ಆಯ್ಕೆ ಮಾಡಿಕೊಂಡು ಟೂಲ್ ಮೆನುನಲ್ಲಿರುವ ಕನ್ವರ‍್ಟ್ ಸಬ್ಮೆನುವಿನಿಂದ ಬಾಶೆಯನ್ನು ಆಯ್ಕೆ ಮಾಡಿಕೊಂಡು ಎಂಟರ್ ಕೀಲಿಯನ್ನು ಹೊತ್ತಿರಿ.
ಈ ಎಲ್ಲಾ ಹಂತಗಳನ್ನು ನೀವು ಅನುಸರಿಸಿದ ಬಳಿಕ ಆನ್ಸಿ ಪಟ್ಯವು ಯುನಿಕೋಡ್ಗೆ ಪರಿವರ‍್ತನೆಯಾಗಿರುವುದನ್ನು ನೀವು ಕಚಿತಪಡಿಸಿಕೊಳ್ಳುವಿರಿ.
೫. save as ಆಪ್ಶನ್ ಬಳಸಿಕೊಂಡು ಕಡತಕ್ಕೆ ಒಂದು ಹೆಸರನ್ನು ಬರೆದು ಕಡತವನ್ನು ಎಲ್ಲಿ ಉಳಿಸಬೇಕೆಂದು ಲೊಕೇಶನ್ ಆಯ್ಕೆ ಮಾಡಿದ ಬಳಿಕ save ಬಟನ್ ಮೇಲೆ ಎಂಟರ್ ಕೀಲಿಯನ್ನು ಹೊತ್ತಿ ಮತ್ತು ಪ್ರೋಸೆಸ್ ಆಗುವವರೆಗೂ ನಿರೀಕ್ಶಿಸಿ.
--
ನುಡಿ ತಂತ್ರಾಂಶದಲ್ಲಿ ಈ ಸವ್ಲಬ್ಯವಿಲ್ಲವಾದ್ದರಿಂದ ನೀವು ಈ ತಂತ್ರಾಂಶದ ಮೂಲಕ ಸುಲಬವಾಗಿ ಸರ‍್ಕಾರಿಯ ಅನುಸೂಚನೆಗಳನ್ನು ಅತವಾ ಆನ್ಸಿ ಪಟ್ಯವನ್ನು ಯುನಿಕೋಡ್ಗೆ ಬದಲಾಯಿಸಿಕೊಂಡು ನೀವು ನಿಮ್ಮ ಜ್ನಾನದ ಮತ್ತು ಮಾಹಿತಿಯ ಆಸೆಯನ್ನು ಪೂರಯ್ಸಿಕೊಳ್ಳಿ.
ಸರ‍್ಕಾರಿ ಸೇವೆಗಳಲ್ಲಿರುವವರಿಗೆ ಈ ಮಾಹಿತಿಯನ್ನು ದಯವಿಟ್ಟೂ ತಲುಪಿಸಬೇಕೆಂದು ತಮ್ಮಲ್ಲಿ ಕಳಕಳೀಯ ಮನವಿ.
ಅಂತೆಯೆ ಈ ಮೇಲೆ ತಿಳಿಸಲಾದ  ಆನ್ಸಿ ಪಟ್ಯದಿಂದ ಯುನಿಕೋಡ್ ಪಟ್ಯಕ್ಕೆ ಸಂಬಂದಪಟ್ಟ ಪರಿವರ‍್ತನೆಯ  ವಿದಾನವನ್ನು ಕಚಿತಪಡಿಸಿಕೊಂಡು ಬಳಿಕ ಆಂಗ್ಲ ಬಾಶೆಗೆ ತರ‍್ಜುಮೆ ಮಾಡಿ ಇತರರಿಗೂ ತಿಳಿಯುವಂತೆ ಮಾಡಿ.