ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ


|ಪ| ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ
ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ
ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ
ತುಸು ಕರುಣೆಯ ತೋರಯ್ಯ ಮಳೆರಾಯ

|1| ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ
ಗೆದ್ಲು ಸೋಕಿದ್ ಮರ‍್ದಂಗೆ ಮೂಳೆ ಆಗ್ತಯ್ತೆ
ಹೊಟ್ಟೆ ಬೆನ್ಗೆ ತಾಕ್ತಯ್ತೆ
ನೀನು ಮಳೆಯ ಸುರ‍್ಸಿ ಬೆಳೆಯ ನೀಡು ಮಳೆರಾಯ

|2| ನೆಲವ ಕೊರ‍್ದು ನೀರ‍್ನೆಲ್ಲಾ ಹೀರ‍್ದೆ
ಮೋಡವ ಕರ‍್ಗುಸಿ ಆಗಸನ ವಣಗರ‍್ಬ ಮಾಡ್ದೆ
ನೀ ಬರೋ ದಾರಿಗಳ ಮುಚ್ಚಿ ನಾನ್ ದರ‍್ಪ ತೋರ‍್ದೆ
ಇನ್ ಮ್ಯಾಗೆ ಹಿಂಗೆ ಮಾಡಾಕಿಲ್ಲ ನನ್ನ ಕ್ಸಮಿಸಯ್ಯ ಮಳೆರಾಯ

|3| ಪ್ರಾಣಿ ಪಕ್ಸಿಗೂ ತೊಂದ್ರೆ ಕೊಟ್ಬಿಟ್ಟೆ
ದುರಾಸೆಬಿದ್ ನಿನ್ನನ್ ತುಳಿಯೋದ ಮಾಡ್ಬಿಟ್ಟೆ
ನನ್ನನ್ನು ನರ‍್ಕಕ್ಕೆ ಹಾಕಿ ಅವಕೆ ಸುಕನಾದ್ರೂ ನೀಡಲು ಬಾರಯ್ಯ
ನನ್ನನ್ನು ನಿನ್ನ ಗುಲಾಮನನ್ನಾಗಿ ಮಾಡಲು ಓ ಮಳೆರಾಯ ಬಾರಯ್ಯ

ನಾವು ನಿಮ್ಮೊಂದಿಗೆ


|ಪ| ನಾವು ನಿಮ್ಮೊಂದಿಗೆ
ನೀವು ನಮ್ಮೊಂದಿಗೆ
ಎಲ್ಲರು ಎಲ್ಲರೊಂದಿಗೆ
ಒಡಬೆರೆತು ನಾಡಲ್ಲಿ ಬದುಕೋಣ

|1| ಇಲ್ಲಿ ಯಾರೂ ಕೀಳಲ್ಲ
ಇಲ್ಲಿ ಯಾರೂ ಮೇಲಲ್ಲ
ಹುಟ್ಟಿದ್ ಮೇಲೆ ಸಾವಿನ್ ಬಲೆಗೆ ಎಲ್ರು ಸಿಲುಕ್ಲೇಬೇಕು
ಬದುಕೋದ್ ಬದುಕ್ತೀವಿ ಎಲ್ರಿಗಾಗಿ ಬದ್ಕೋಣ

|2| ಏಲ್ರಿಗೂ ಊನ ಇದ್ದದ್ದೆ
ಸಿಟ್ಟಿಂದ ಗೊಣಗೋದು ಯಾತಕ್ಕೆ
ಹೀಗೆಳೆಯೋದ ಬಿಡೋಣ
ಹೆಗಲಿಗೆ ಹೆಗಲ ಕೊಟ್ಟು ಬದುಕೋಣ

|3| ಗಟ್ಟಿ ಮನಸ್ಸು ಮಾಡೋಣ
ತರತಮದ ನಾಡ ಅಳಿಸೋಣ
ಹಸಿರ ನೆರಳಲಿ ಬದುಕೋಣ
ಬೇದ ತೋರದೆ ಎಲ್ಲರ ನಡುವೆ ಬಾಳೋಣ.

ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ


|ಪ| ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ
ಬೇದವ ಮಾಡದೆ, ಎರಡನು ಬಗೆಯದೆ
ಜನರೊಳು ಬೆರೆಯುವೆ, ನಿನ್ನಲಿ ಸೇರುವೆ

|1| ಕಶ್ಟವೆ ಅಪ್ಪಲಿ ನಿನ್ನೊಳು ಇರುವೆನು
ಸುಕವೆ ತಬ್ಬಲಿ ನಿನ್ನೊಳು ಇರುವೆನು
ನೆಮ್ಮದಿ ಬದುಕಿಗೆ ಜಗಳವ ಆಡೆನು
ತಾಳ್ಮೆಯ ತಂತಿಯ ಮೇಲೆಯೆ ಇರುವೆನು

|2| ದುಡ್ಡಿನ ಕಾಲಿಗೆ ಬೀಳದೆ ಬದುಕುವೆ
ಸುಗುಣದ ನೆರಳಲಿ ಅನುದಿನ ಬದುಕುವೆ
ಲೋಕದ ನೆನಪಲಿ ಅಳಿಯದೆ ಉಳಿಯುವೆ
ನಿನ್ನಯ ಊರಿಗೆ ನಲಿವಲಿ ಸೇರುವೆ