ಕುದುರೆ ಕುಡಿತ ಕುಡುಕ


ಹೆಂಡದ ಕೇಡಿನ ಕತೆಯನು ಹೇಳುವೆ
ಕೇಳಿರಿ ಮಕ್ಕಳೆ, ಕುಡಿತವ ತೊಲಗಿಸಿ
ನಿಮ್ಮಯ ಯುಕ್ತಿಯು ನಾಡಿಗೆ ಶಕ್ತಿಯು
ಹೊಳಪಿನ ಮಕ್ಕಳೆ, ಕುಡಿತವ ತೊಲಗಿಸಿ

ಕುದುರೆಯ ಸಾಕಿದ ಕುಡುಕನು ನಲಿವಲಿ
ಕುದುರೆಯ ಮೇಲಕೆ ಚಂಗನೆ ಕೂತನು
ಕುದುರೆಗೆ ಓಡಲು ಈತನು ಗದರಿದ
ಕುದುರೆಯು ಓಡದೆ ನಿಂತಿತು ಹೆಂಡಕೆ

ಕುದುರೆಗೆ ಕುಡುಕನು ಕುಡಿಸಿದ ಹೆಂಡವ
ಕುದುರೆಯು ನಲಿವಲಿ ನೆಗೆಯಿತು ನಿಂತಿತು
ಕುದುರೆಗೆ ಕೋಪದಿ ಈತನು ಗದರಿದ
ಕುದುರೆಯು ಚಂಗನೆ ಹಾರಿತು ಪಕ್ಕಕೆ

ಕುದುರೆಯು ಕುಡುಕನ ಮೇಲಕೆ ಕೂರಲು
ಕುದುರೆಯ ಬಾರಕೆ ಕುಡುಕನು ಸತ್ತನು
ಮಕ್ಕಳೆ ಕತೆಯು ಇಲ್ಲಿಗೆ ಮುಗಿಯಿತು
ಕತೆಬಲು ಪುಟ್ಟದು, ಕಾಡುವ ತೊಂದರೆ ದೊಡ್ಡದು

ಕುಡುಕರು ಇರುವರು ಕುಡಿತವು ಇರುವುದು
ಕುಡಿತವು ಕುಡುಕರ ಮನಮನೆ ಸುಟ್ಟರೆ
ಕುಡುಕರು ಎಲ್ಲರ ನೆಮ್ಮದಿ ಸುಡುವರು
ನೆಮ್ಮದಿ ಇದ್ದರೆ ಉಳಿವುದು ಬಾರತ

ಕುಡಿತವ ಬಿಡಿಸಲು ಅರಿವನು ಹೊಂದಿರಿ
ಕುಡಿತವ ಬಿಡಿಸಿರಿ, ಮನಮನೆ ಬೆಳಗಿರಿ
ಅಳಿಯದ ನೆಮ್ಮದಿ ನಾಡನು ಕಟ್ಟಲು
ಜೊತೆಜೊತೆ ಸಮಸಮ ಅನುದಿನ ಸಾಗಿರಿ

ಕೋಪ ಹಿಂಸೆ ಕೇಡ ಬಿಟ್ಟು


|ಪ|
ಕೋಪ ಹಿಂಸೆ ಕೇಡ ಬಿಟ್ಟು
ಒಲವ ಕಡೆಗೆ ಗಮನ ಕೊಟ್ಟು
ಮದುರ ಬಾಳ ಕಡೆಗೆ ನಡೆದು
ನಿನ್ನ ಬಳಿಗೆ ಮರಳಿ ಬರುವೆ

|1|
ತಪಸ ಬದಲು ಕೆಲಸ ದೇವ
ಹರಸು ನಿನ್ನ ಮನೆಗೆ ಬರಲು
ಹೂವು ಹಣ್ಣು ಕಾಯಿ ಕೊಡೆನು
ಅವೂ ನನ್ನ ಹಾಗೆ ದೇವ

|2|
ಬೆಂಕಿ ಬದುಕ ನೀಡ ಬೇಡ
ಕೊಂಕು ನಡತೆ ಬಿಡುವೆ ದೇವ
ಬೆಳಕು ಗಾಳಿ ನೀರು ಊಟ
ನೀಡಿ ಮುಕುತಿ ನೀಡು ದೇವ

|3|
ಮನಸ ಊರ ಬೆಳಗು ನೀನು
ಮೋಸ ಕೆಂಡ ಎರಚ ಲಾರೆ
ಬೆಳಕ ಹಂಚಿ ಸುಕದಿ ಇರಲು
ಅರಿವ ಹೊಳೆಯ ತೋರು ದೇವ

ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ


|ಪ|
 ಒಳಗೊಳಗೆ ಸುಳ್ಳನು ಬೆಳಗಿಸಿ
ಮಂದಿಗಳೆದರು ಸತ್ಯವ ಗುನುಗುವ ನೀನು
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|1|
ದೇವರನ್ ಮೆಚ್ಚಿಸ್ದೆ, ಮಂದಿಗಳನ್ ಮೆಚ್ಚಿಸ್ದೆ
ಕೆಟ್ಟುದ್ರಲ್ಲೇ ಮುಳ್ಗಿ ಕೇಡುಗಳನ್ ಎಬ್ಬಿಸ್ದೆ
ಕೇಡುಗಳನ್ ಎಬ್ಬೀಸಿ, ಒಳ್ಳೆದನ್ ಕಸವ ಮಾಡಿ
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|2|
 ಮಳೆನ್ ನಿಲ್ಸ್ದೆ, ಬೆಳೆಯನ್ನೂ ನಿಲ್ಸ್ದೆ
ಹಣ್ದಲ್ಲೇ ಮುಳ್ಗಿ ರೋಗ್ವನ್ ಎಬ್ಬಿಸ್ದೆ
ರೋಗ್ವನ್ ಎಬ್ಬೀಸಿ, ಬಾಳ್ವೆಯನ್ ಸಾವ್ಗೆ ನೂಕಿ
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

|3|
 ನಾಡನ್ ಕಟ್ಲಾರ್ದೆ, ನೆಲ್ದವ್ಗೂ ಬೇಡ್ವಾದೆ
ಅದಿಕಾರ್ರೆಕ್ಕೇಲಿ ಹಾರ್ಯಾಡಿ ಜಗಳದ್ ಬೆಂಕಿ ಹಬ್ಬೀಸ್ದೆ
ಜಗಳದ್ ಬೆಂಕಿ ಹಬ್ಬೀಸಿ, ಮಂದಿ ಮಿಡಿತವ ಕಯ್ಗೆ ಎಳ್ಕೊಂಡು
ಗಂಜಿ ಗಂಜ್ಲುಕ್ ಇರೋ ಬೆಲೇಗೂ ಬಾಳ್ನಾರ್ದೆ, ಲೋಕ್ದಲ್ಲಿ ಲೋಕ್ವಾಗ್ದೆ
ಸತ್ತಂಗೆ ಬದುಕಿದೆ ಯಾಕೋ ಬಡಬಡುಕ
ಒಳ್ಳೆಯದನ್ ಹೊಳಿಸೋ ಯೇಯ್ ಬಡಬಡುಕ

ಚಾಣಕ್ಯನ ನೀತಿಸೂತ್ರಗಳಲ್ಲಿನ ಕೆಲವು ಹೇಳಿಕೆಗೆ ನನ್ನ ಅಸಮದಾನಗಳು


ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿರುವ `ಚಾಣಕ್ಯನ ನೀತಿಸೂತ್ರಗಳು' ಎಂಬ ಹೊತ್ತಗೆಯಲ್ಲಿರುವ ಚಾಣಕ್ಯ ನೀಡಿರುವ ಕೆಲವು ನೀತಿಸೂತ್ರಗಳನ್ನು ನೀವು ನೋಡಿದರೆ ಅವರು ಹೇಳಿದ್ದರ ಕುರಿತು ಅಸಮದಾನಗಳು ತಮಗೂ ಆಗಬಹುದು. ಇಲ್ಲಿ ಕೆಲವು ನೀತಿಸೂತ್ರಗಳಿಗೆ ನಾನು ನನ್ನ ಅಸಮದಾನಗಳನ್ನೊಳಗೊಂಡ ಪ್ರಶ್ನೆಗಳನ್ನು ಬರೆದಿದ್ದೇನೆ.

೧. ನ ಸ್ತ್ರೀರತ್ನಸಮಂ ರತ್ನಂ
ಸ್ತ್ರೀ ರತ್ನಕ್ಕೆ ಸಮವಾದ ಬೇರೆ ರತ್ನವಿಲ್ಲ.
ಅಸಮದಾನ: ಇಲ್ಲಿ ಹೀಗೆ ಸ್ತ್ರೀ ಕುರಿತು ಹೇಳಿರುವ ಚಾಣಕ್ಯರು "ಸ್ತ್ರೀಷು ಕಿಂಚಿದಪಿ ನ ವಿಶ್ವಸೇತ್- ಸ್ತ್ರೀಯರಲ್ಲಿ ಎಳ್ಳಷ್ಟೂ ನಂಬಿಕೆ ಇಡಬಾರದು." ಅಂತ ಯಾಕೆ ಹೇಳಿದರು?

2. ನ ಸಮಾಧಿಃ ಸ್ತ್ರೀಷು ಲೋಕಜ್ಞತಾ ಚ
ಸ್ತ್ರೀಯರಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ಇರುವುದಿಲ್ಲ.
ಅಸಮದಾನ: "ಗುರೂಣಾಂ ಮಾತಾ ಗರೀಯಸೀ -ಗುರುಗಳೊಳಗೆ ತಾಯಿಯು ಹೆಚ್ಚಿನವಳು." ಹಾಗಾದರೆ ಗುರು ಎಂಬುವನಲ್ಲಿ ಮನಸ್ಸಮಾಧಾನ ಮತ್ತು ಪ್ರಪಂಚ ಜ್ಞಾನಗಳು ತುಸು ಕಡಿಮೆಯೇ ಇರುತ್ತದೆಂದು ಆಯಿತಲ್ಲವೆ?

3. ಪುತ್ರಾರ್ಥಾ ಹಿ ಸ್ತ್ರೀಯಃ
ಸ್ತ್ರೀಯರಿರುವುದು ಸಂತತಿಗಾಗಿಯೇ.
ಅಸಮದಾನ: ಇಸ್ಲಾಮ್ ಕೂಡ ಮಹಿಳೆಯರನ್ನು ಹುಟ್ಟಿಸುವ ಯಂತ್ರವನ್ನಾಗಿಯೇ ನೋಡಿದ್ದಾಗ್ಯೂ, ಇತ್ತೀಚಿನ ಮುಸಲ್ಮಾನರಲ್ಲಿ ಈ ಕುರಿತು ತುಸು ಬದಲಾವಣೆಯಾಗುತ್ತಿದ್ದರೂ, ಮತ್ ಯಾಕೆ ಕಟ್ಟಾ ಹಿಂದುಗಳು ಹಾಗೂ ಚಾಣಕ್ಯನ ನೆರಳಿನವರು ಈ ವಿಶಯಕ್ಕೆ ಮುಸಲ್ಮಾನರನ್ನು ಹಂಗಿಸುತ್ತಿರೋದು?

4. ಅಪಚಕ್ಷುಷಃ ಕಿಂ ಶರೀರೇಣ
ಕಣ್ಣಿಲ್ಲದವನಿಗೆ ಶರೀರದಿಂದ ಉಪಯೋಗವಿಲ್ಲ.
ಅಸಮದಾನ: ಶರೀರದಿಂದ ಉಪಯೋಗವಿಲ್ಲದಿರಬಹುದಾದರೂ ಗ್ನಾನದಿಂದ ಇದೆಯಲ್ಲವೆ? ಈ ಗ್ನಾನವನ್ನು ಬಳಸಲಿಕ್ಕೆ ಯಂತ್ರ ಬೇಕಾಗಿರುವುದರಿಂದ ಶರೀರದಿಂದ ಉಪಯೋಗವಿದೆ ಅಂತ ನನಗೆ ಅನಿಸಿದೆ. ನಿಮಗೆ?

5. ಯಥಾ ಶರೀರಂ ತಥಾ ಜ್ಞಾನಂ
ದೇಹದಂತೆ ಜ್ಞಾನವಿರುವುದು.
ಅಸಮದಾನ: ದೇಹದಂತೆ ಗ್ನಾನವಿದ್ದರೂ/ಗ್ನಾನದಂತೆ ದೇಹವಿದ್ದರೂ ಒಳ್ಳೆಯ ನಡವಳಿಕೆಗಳು ಪಡೆದ ಗ್ನಾನದ ಬಿಂಬಕ ಅಂತ ಮಾತ್ರ ಹೇಳಬಹುದಲ್ಲವೆ?

೬. ಕಥಂಚಿದಪಿ ಧರ್ಮಾಂ ನಿಷೇವೇತ
ಹೇಗಾದರೂ ಧರ್ಮವನ್ನು ಸೇವಿಸಬೇಕು.
ಅಸಮದಾನ: ದರ್ಮದ ನಶೆಯನ್ನು ಏರಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ ಈ ಹೇಳಿಕೆ ಅಲ್ಲವೆ?

7. ಸರ್ವಾವಸ್ಥಾಸು ಮಾತಾ ಭರ್ತವ್ಯಾ
ಎಲ್ಲ ಅವಸ್ಥೆಗಳಲ್ಲೂ ತಾಯಿಯನ್ನು ಭರಿಸಬೇಕು.
ಅಸಮದಾನ: "ಸ್ತ್ರೀನಾಮ ಸರ್ವಾಶುಭಾನಾಂ ಕ್ಷೇತ್ರಂ-ಎಲ್ಲಾ ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ತಾಯಿಯ ಕುರಿತು ಹೇಳಿದ ಇವರು ಹಿಂದು ದರ್ಮದಲ್ಲಿ ಮಹಿಳೆಗೆ ಸುಮಂಗಳಕರ ಸ್ತಾನ ಇದ್ದಾಗ್ಯೂ "ಅಶುಭಕ್ಕೂ ಸ್ತ್ರೀ ಎಂಬುವಳು ಉತ್ಪತ್ತಿಸ್ಥಾನ." ಅಂತ ಯಾಕೆ ಹೇಳಿದರು?

8. ನ ದಾನಸಮಂ ವಶಂ
ದಾನಕ್ಕೆ ಸಮವಾದ ವಶೀಕರಣವಿಲ್ಲ.
ಅಸಮದಾನ: ದಾನವನ್ನು ಕೆಟ್ಟ ಹಾಗೂ ಒಳ್ಳೆಯ ಹಿನ್ನೆಲೆಯಲ್ಲಿ ಎರಡು ತೆರನಾಗಿಸಿಕೊಂಡರೆ ಕೆಟ್ಟ ದಾನವನ್ನು ಮತ್ತೊಬ್ಬರನ್ನು ಗುಲಾಮಕ್ಕೆ ಒಳಗುಪಡಿಸಿಕೊಳ್ಳುವ ಶಕ್ತಿ ಹಾಗೂ ಮಾಟಮಂತ್ರದ ಮತ್ತೊಂದು ರೂಪ ಅನ್ನಬಹುದೆ?

--
 ಚಾಣಕ್ಯ ರೂಪಿಸಿದ ಮೌರ್ಯ ಸಾಮ್ಬ್ರಾಜ್ಯವು ಚಾಣಕ್ಯನ ನೀತಿಸೂತ್ರಕ್ಕನುಗುಣವಾಗಿಯೇ ಇದೆ ಮತ್ತು ಅಂದಿನ ಸಮಾಜದ ವ್ಯವಸ್ತೆಯನ್ನು ಇದು ತೋರ್ಪಡಿಸಿದೆ. ಚಾಣಕ್ಯ ಒಂದು ಸಾಮ್ಬ್ರಾಜ್ಯವನ್ನು ಕಟ್ಟಿದಾಗ್ಯೂ ಮಹಿಳೆಯರ ಕುರಿತು ಈ ಪರಿ ಕೆಳಮಟ್ಟದ ನಿಲುವನ್ನು ಹೊಂದಿದ್ದಾದರೂ ಯಾವುದರ ಹಿನ್ನೆಲೆ ಎಂಬುವುದನ್ನು ತಿಳಿದುಕೊಳ್ಳಬೇಕಿದೆ. ಅದರಲ್ಲೂ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಹಲವು ಬಗೆಯ ಅನಿಸಿಕೆಗಳು ಗಾದೆಗಳಲ್ಲಿ ಇರುವುದು ಸಹಜವಾದರೂ; ಬುದ್ದಿವಂತನೂ, ಯುಕ್ತಿಯನ್ನು ಬಳಸಿ ಹಲವಾರು ವ್ಯಕ್ತಿಗಳಲ್ಲಿನ ಶಕ್ತಿಗಳನ್ನು ಒಗ್ಗೂಡಿಸಿದ ವ್ಯಕ್ತಿ ಒಂದೇ ವಿಶಯವನ್ನು ಈ ಪರಿಯ ಗೊಂದಲದಲ್ಲಿ ಹೊಮ್ಮಿಸಿರುವುದು ಈತ ಬಳಸಿಕೊಂಡ ಯುಕ್ತಿಯಲ್ಲಿ ಅಡಗಿಸಿಕೊಂಡಿದ್ದ ಕೆಡುಕನ್ನು ತೋರ್ಪಡಿಸಿದೆ.

ಅಶೋಕನ ಕಾಲದಿಂದೀಚೆಗೆ ಸಮಾಜವು ಚಾಣಕ್ಯನ ನೀತಿಸೂತ್ರದ ಹತೋಟಿಯಿಂದ ಬಿಡಿಸಿಕೊಂಡು ಸಮಾಜದಲ್ಲಿ ಒಂದಶ್ಟು ಮಹಿಳೆಯರು, ಕೆಳಜಾತಿಯವರು ಹಾಗೂ ಒಟ್ಟಾರೆ ತುಳಿತಕ್ಕೆ ಒಳಗಾದವರು ಈ ನೀತಿಸೂತ್ರಕ್ಕಿಂತಲೂ ಸಾರಯುಕ್ತ ಒಳ್ಳೆಯದಾರಿಯನ್ನು ಹಾಕಬಲ್ಲ ಬರವಣಿಗೆಯನ್ನು ಹಾಗೂ ಬದುಕನ್ನು ಕಟ್ಟಿರುವುದು ಸಂತಸದ ಬೆಳವಣಿಗೆಯಾಗಿದೆ.

ಇವಶ್ಟೇ ಹೇಳಿಕೆಗಳು ನನ್ನನ್ನು ಅಸಮದಾನಕ್ಕೆ ಒಳಗುಪಡಿಸಿಕೊಂಡದ್ದು ಅಂತ ನೀವು ಅಂದುಕೊಳ್ಳದಿರಿ. ನೀವು ಈ ಹೊತ್ತಗೆಯಲ್ಲಿ ಬೇರೆಬೇರೆ ಕಡೆ ಒಂದೇ ವಿಶಯಕ್ಕೆ ಸಂಬಂದಿಸಿದಂತೆ ಬೇರೆಬೇರೆ ಹೇಳಿಕೆಗಳನ್ನು ಗಮನಿಸಿದರೆ ನಿಮ್ಮನ್ನೂ ಈ ನೀತಿಸೂತ್ರಗಳು ಅಸಮದಾನಕ್ಕೆ ಒಳಗುಪಡಿಸುತ್ತವೆ ಅನ್ನೋದು ನನ್ನ ನಿಲುವು. ಈ ನನ್ನ ಅನಿಸಿಕೆಗೆ ಸಂಬಂದಿಸಿದಂತೆ ನೀವು ನಿಮ್ಮ ನಿಲುವುಗಳನ್ನು ಹರಿಬಿಡುವ ಮೂಲಕ ನನ್ನ ಅರಿವಿನ ಎಲ್ಲೆಯನ್ನು ವಿಸ್ತರಿಸುವಿರೆಂಬ ವಿಶ್ವಾಸವಿದೆ.