ಕಾಲೆಳೆವರ ನಡುವೆಯೂ ದೇಶವನ್ನು ಕಟ್ಟಲು ಅರಳೋಣ


ನಾಡ ನಾಡಿಯಾಗಿ ಕಾರ್ಯನಿರ್ವಹಿಸಲು ಪ್ರಕೃತಿಯ ಭಾಗವಾಗಿರುವ ಎಲ್ಲಾ ಮನುಜರೂ ಶಕ್ತರೆ. ಆದರೆ, ಬಹುತೇಕ ಪಕ್ಷಗಳು ಇದನ್ನರಿಯದೆ ಅಧಿಕಾರದ ಆಸೆಗಾಗಿ ಅಂಧರನ್ನೂ ಸಹ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಾನ್ಮಿಲ್ಟನ್ ರವರು ಜಗತ್ತಿನಲ್ಲಿಯೇ ಮೊದಲ ಸಲ ಸಾರ್ವಜನಿಕವಾಗಿ "ಜನತೆಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಸ್ವಾತಂತ್ರ ತುಂಬಾ ಅವಶ್ಯಕ" ಎಂದು ಹೇಳಿದ್ದು ನಿಮಗೂ ತಿಳಿದಿರಬಹುದು. ಅಂಥ ವ್ಯಕ್ತಿಯೇ ಜನರ ಪರವಾಗಿ ನಿಂತ ಮೇಲೆ ಅವರ ಹಾಗೆ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಲೇಬೇಕು ಎಂದು ಅಂಧರಿಗೂ ಅನಿಸುವುದಿಲ್ಲವೆ?

ಸಮಾಜಮುಖಿಯಾಗಿರುವ ಪಕ್ಷ ಯಾವುದೆಂದು ಇಂದು ಗುರುತಿಸಲು ಯಾರಿಗೂ ಒಂದು ಸುಳಿವೂ ಸಹ ಸಿಗುತ್ತಿಲ್ಲ. ಹಣ ಮತ್ತು ಅಧಿಕಾರಕ್ಕಾಗಿ ವಿವಿಧ ದಾರಿಗಳನ್ನು ಕಂಡುಕೊಂಡು ಎಲ್ಲವನ್ನು ಸಾಧಿಸಿದ ಬಳಿಕ ತಮ್ಮ ಹಿಡನ್ ಅಜೆಂಡವನ್ನು ಜನರ ಬದುಕಿನ ಮೇಲೆ ಒತ್ತಿಬಿಡುತ್ತಾರೆ. ರಾಜಕೀಯ ಕ್ಷೇತ್ರಕ್ಕೆ ಹಣವಿರದ ಯುಕ್ತಿ ಇರುವ ಅಂಗವಿಕಲರೇನು ಸಾಮಾನ್ಯರೂ ಸಹ ಬರಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ನಿಲ್ಲಲು ಮನಸ್ಸು ಮಾಡುವ ಅಂಧರು ರಾಜಕೀಯ ಪಕ್ಷದವರನ್ನು ಭೇಟಿ ಮಾಡಿ ಅವಕಾಶವನ್ನು ಕೇಳಿದಾಗ ಅವರು "ನಾವೆ ನಿಂತು ಗೆಲ್ಲಲು ಕಷ್ಟವಾಗಿರುವುದರಿಂದ ನಿಮಗೆ ಆಗುತ್ತದೆಯೇ? ನಿನ್ನ ಬಳಿ ಎಷ್ಟು ಹಣವಿದೆ? ನೀನು ಎಷ್ಟು ಜನರನ್ನು ಹೊಂದಿದ್ದೀಯೇ?" ಎಂದು ಹೀಗೆಳೆಯುವವರು ಇದ್ದಾಗ್ಯೂ , ಜೇ.ಡಿ.ಎಸ್ ಬೀದರ್ ಜಿಲ್ಲೆ, ಮಂದಕನಳ್ಳಿ ತಾಲೂಕು, ಕಾಡವಾದ ಗ್ರಾಮದ ದಿಲೀಪ್ ಕಾಡವಾದ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿತ್ತು. ಇನ್ನು ಕೋಲ್ಕತ್ತಾದಿಂದ ಒಂದು ಸಲ ಸಿ.ಪಿ.ಎಂ ಪಕ್ಷದವರೂ ಸಹ ಅಂಧರೊಬ್ಬರಿಗೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿ ಅವರನ್ನು ಗೆಲ್ಲಿಸಲು ಯತ್ನಿಸಿ ಯಶ ಕಂಡಿತು. ಈ ಎರಡೂ ಪಕ್ಷಗಳು ಕಾಳಜಿ ಪೂರ್ವಕ ಪ್ರಯತ್ನವನ್ನು ಮಾಡಿವೆ. ಹೀಗೆ ಕೆಲವೇ ಪಕ್ಷಗಳು ಅಂಧರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೂ ಅಂಧರು ಪಕ್ಷೇತರರಾಗಿ ನಿಂತು ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರುವುದು ಸಂತೋಷವೇ ಆಗಿದೆ.

ಅಂತರರಾಷ್ಟ್ರೀಯದ ಮಟ್ಟದಲ್ಲಿ ಹೇಳುವುದಾದರೆ, ಜಮೈಕ ವು ತನ್ನ ಸೆನೆಟ್ಗೆ ಅಂಧರೊಬ್ಬರನ್ನು ಆಯ್ಕೆ ಮಾಡಿ ಅವರಿಗೆ ಸೆನೆಟ್ನ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಅವರ ಹೆಸರು Floyd Morris ಎಂದು. ಇನ್ನು ಜಾನ್ಮಿಲ್ಟನ್ ರವರ ನಾಡಿನಲ್ಲಂತೂ ಒಳ್ಳೆಯ ಪದವಿಯನ್ನು ಅಲಂಕರಿಸಿದವರ ಪಟ್ಟಿಯೇ ಇದೆ. ಅವರಲ್ಲಿ
Gordon Brown ಮಾಜಿ ಪ್ರಧಾನಿಯಾಗಿದ್ದರೆ, ಹುಟ್ಟು ಅಂಧರಾದ David Blunkett ಗೃಹ ಖಾತೆಯ ಕಾರ್ಯದರ್ಶಿಯಾಗಿದ್ದರು. ಇನ್ನು ಅಮೇರಿಕಾದಲ್ಲೂ ಸಹ ನ್ಯೂಯಾರ್ಕ್ಗೆ David Paterson ಮಾಜಿ ರಾಜ್ಯಪಾಲರಾಗಿದ್ದರು. ಹೀಗೆ ಕಾಲೆಳೆವರ ನಡುವೆಯೂ ಅಂಧರಾದ ಕೆಲ ವ್ಯಕ್ತಿಗಳು ಸಮಾಜಕ್ಕಾಗಿ ಸಾಧನೆ ಮಾಡಿರುವುದು ಭಾರತದಲ್ಲಿನ ನಮಗೆ ಯಾವುದು ಅಸಾಧ್ಯ ಹೇಳಿ? ಭಾರತದಲ್ಲಿ ಬಹುತೇಕ ರಾಜಕೀಯ ಮಂದಿಗಳು ಕಾಲನ್ನು ಎಳೆಯುತ್ತಾ ಕಾಲವನ್ನು ಹರಣ ಮಾಡುತ್ತಿದ್ದಾರೆ. ನಾವು ಇದಕ್ಕೆ ತಲೆಯನ್ನು ಕೆಡಿಸಿಕೊಳ್ಳದೆ ನಾಡನಾಡಿಯಾಗಿದ್ದುಕೊಂಡು ಕಾಲೆಳೆವರ ನಡುವೆಯೂ ನಾವು ದೇಶವನ್ನು ಕಟ್ಟಲು ಅರಳೋಣ.

ಮೂಢ ಅರಿವನೋ ಮನವ?


ಅರಿವೆನ ಗುಡಿ ಮುಂದೆ ಗುರುವಿನ ಸಿರಿಕಂಡೆ,
ಗುರು ಅರಿವ ಗುಡಿ ಸಿರಿಯ ಘನ ಘೋರ ಗದ್ದಲವು ಗರಿಗೆದರ ಹೊರಡಲಿದೆ
ಮೂಢ ಅರಿವನೋ ಮನವ?

ತಿರುಳು ತತ್ವದ ಕೊರಳು, ತಳವ ತಟ್ಟದೆ ಇರುಳು, ತರ್ಕ ತೆಕ್ಕೆಗೆ ಸಿಗದ ತಡೆವ ತೊಕ್ಕೊಂದಿರಲು ಮೂಢ ಅರಿವನೋ ಮನವ?

ಸಹನೆ ಸತ್ಯಕೆ ಸಿಂಧೂರ,
ತಾಳ್ಮೆ ತತ್ವಕೂ ಮುಂದು,
ಸಹನೆ ತಾಳ್ಮೆಯ ಸತ್ಯ ತತ್ವವೆ
ಮೂಢ ಅರಿವನೋ ಹಂ ಮನವ?

ಮುಕ್ತ ಯತ್ನಕು ಮುಂದು ಯುಕ್ತ ಶಕ್ತಿಯ ತಂದು: ಮುಕ್ತ ಯುಕ್ತಿಗೆ ಯತ್ನ ಶಕ್ತಿಯೋ ಮನವೆ ಅರಿತೆಯಾ ಮೂಢ?

ಬರೆದವರು:--ಅಶೋಕ.ಕೆ
e-mail: ashoktejasvi.557@gmail.com

ಇದು ಆತನ ಸೃಷ್ಟಿ; ಇದು ಈತನ ಸೃಷ್ಟಿ


ಕೊಯ್ಂಕ-ಪೊಯ್ಂಕ-ಬುರುಂ-ಗಿರುಂ  ಬಸ್ಸು
ಈತನ ಸೃಷ್ಟಿ.
ದಡಬಡ-ಗಿಜಿಗಿಜಿ-ಲಜಿಗಿಜಿ  ಮನಸ್ಸು
ಇದು ಆತನ ಸೃಷ್ಟಿ.

ಕಣ್ಣಿಗೆ ಕಾಣುವವ ಈತ
ಕಣ್ಣಿಗೆ ಕಾಣದೆ ಎಲ್ಲವ ನೀಡುತ್ತಿರುವವ ಆತ
ಕಣಕಣಗಳ ಮೇಲೂ ಈರ್ವರ ಸೃಷ್ಟಿಯ ವೃಷ್ಟಿ ಅಚ್ಚೆ ಇವೆ.

"ಮುಟ್ಟುವೆ ಇನ್ನೇನು ಮುಟ್ಟುವೆ
ನಿನ್ನ ರಹಸ್ಯವ ಬಯಲು ಮಾಡುವೆ" ಎಂದು ನಿಂತಲ್ಲಿ ನಿಲ್ಲದೆ ಕೂತಲ್ಲಿ ಕೊಳೆಯದೆ ಛಲ ಬಿಡದ ಭೂತ ಈತ
"ನೀ ನನ್ನ ಮುಟ್ಟಲು ಮುರುಟಿ ಹಾಕುವೆ, ಸೊಕ್ಕಿ ನಲಿಯುತಿರುವೆ, ನೀ ಅಂದುಕೊಂಡ ಸಕ್ಕರೆಯ ಅಕ್ಕರೆಯದಿ ನೀಡಲಾರೆ" ಎಂದು ಆಗಾಗ ಎಚ್ಚರಿಸುತ್ತಾ ಸಲೀಲದಿ ಬುಸುಗುಟ್ಟುತ್ತಿರುವ ಆತ

ಈ ಈರ‍್ವರ ಸೃಷ್ಟಿಯಾಟದ ಪೈಪೋಟಿಯ ಫಲ
ಪೈಪು ತೊಟ್ಟಿಗೆ ಸೇರಿದ ಜಲ, ಗಾಳಿ, ಬೆಳಕು, ಕೊಳಕು, ಮತ್ತೊಂದೂ, ಮಗದೊಂದೂ, ವೀರ‍್ಯದ ಫಲ ಎಲ್ಲಾ ಲಾಲ

ನಾ ಸಿಗಲಾರೆ, ಕೊಡಲಾರೆ
ನಾ ಹುಡುಕಿಯೇ ತೀರುವೆ, ಪಡೆದಿಯೇ ತೀರುವೆ
ಎಂದು ಆತ ಈತ ಸೃಷ್ಟಿಯಾಟದ ಬಯಲಿಗಿಳಿದಿರುವವರು

ಜನನ-ಮರಣ ಈತನಿಗುಂಟು
ಆದರೆ,
ರಕ್ತರಕ್ಕಸನಂತೆ ಹುಟ್ಟುತ್ತಿರುವ ಈತನ ಸಂತತಿಯವರಲ್ಲಿ ಆತನನ್ನು ಹುಡುಕುವ ಛಲವನ್ನು ಬತ್ತದಂತೆ ಕಾಯ್ದುಕೊಳ್ಳುವ ಜಾಣ್ಮೆ ಈತನಿಗುಂಟು.
ಉಂಟು, ಉಂಟು ಈತನ ಕಬಳಿಕೆಯ ನೀತಿಗೆ ಕಡಿವಾಣ ಹಾಕುವ ಜಾಣ್ಮೆ  ಆತನಿಗೂ ಉಂಟು.

ಕಾಯಬೇಕು ಈತನೇ ಕಾಯಬೇಕು
ಈಗಿಲ್ಲದಿದ್ದರೂ ನಮ್ಮ ಸಂತತಿಯವರು ತಾಳ್ಮೆಯ ತಂತಿ ಹಿಡಿದು ಕಾಯಬೇಕು
ಸೃಷ್ಟಿಯ ನಾವೆಯಲ್ಲಿ ಸಮಪಾಲು ಪಡೆಯದೆ ಬಹುಪಾಲನ್ನು ಪಡೆದು ವ್ಯರ್ಥದಿ  ಇರುವಾಗ
ಮುಂದೆ ಇರುವುದೆಲ್ಲ ಬತ್ತಿಹೋದಾಗ
ಜಗಳದಿ ಗಳಗಳ ಸುರಿಸುವ ಹಾಗೆ,  ನಾಲ್ಕೂ ಗಳ ದೊರೆಯದಂತೆ ಮಾಡುವತನ, ಆತ ಈತನನ್ನು ಸೋಲಿಸುವತನ ಕಾಯಬೇಕು.

ಈ ಮೇಲಣ ಸಾಲುಗಳು
ಆತನಿಂದ ಈತನಿಂದ ಸೃಷ್ಟಿಯಾದ ಗೋಜಗೋಜಲಾದ, ಈತನಿಗೂ ಅರ್ಥವಾಗದ ನಿಲುವುಗಳ ಸಾಲುಗಳು
ಇದನ್ನು ಅರ್ಥ ಮಾಡಿಕೊಳ್ಳಲು ಈತನ ಮನಹೃದಯಕ್ಕೆ ಹೊಕ್ಕಬೇಕಿದೆ ಆತನ ದಯೆಯ ಹುಳುಗಳು
ಅದಕ್ಕೂ ಮುನ್ನ ತೊಲಗಬೇಕು
ಈತನಲ್ಲಿನ ಗೊಡ್ಡುಗಳು, ಸಮಾಜಕ್ಕೆ ಮಾರಕವಾದ ಕೊಳಕುಗಳು

ಕನ್ನಡದ ಆತ್ಮ ನಮ್ಮ ಸ್ವಂತಿಕೆಯ ಅಭಿವ್ಯಕ್ತಿಗೆ


ಭಾಷೆ ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಹಿಸಲು ಸಾಧ್ಯವಿಲ್ಲ.
ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ ರೀತಿಯ ಸಂವಹನದ ಮೂಲಕ ಮತ್ತೊಬ್ಬ ಮಾನವನೊಡನೆ
ಸಂವಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ.

ಭಾಷೆ ಎಂಬುವುದು ಕೇವಲ ಸಂವಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿಯ
ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ. ಪ್ರಪಂಚದಲ್ಲಿ, ಅನೇಕ ಜನರು
ನಿರ್ದಿಷ್ಟವಾದ ಪ್ರದೇಶದೊಳಗೆ ಒಂದು ನಿರ್ದಿಷ್ಟವಾದ ಭಾಷೆಯ ಮೂಲಕ ದೈನಂದಿನ
ಚಟುವಟಿಕೆಗಳಿಗಾಗಿ ಮಾತು, ಬರಹಗಳ ಮೂಲಕ ವ್ಯವಹರಿಸುತ್ತಿದ್ದಾರೆ. ಇಂತಹ ಭಾಷೆಗಳಲ್ಲಿ
ಕನ್ನಡವೂ ಸಹ ಒಂದು.

‘ನಾಡು’ ಎಂದರೆ, ಒಂದು ಬೌಗೋಳಿಕ ಸೀಮೆ ಎಂದು. ‘ನುಡಿ’ ಎಂದರೆ, ಅಭಿವ್ಯಕ್ತಿಗೆ ಹಾಗು
ತನ್ನಂತಿರುವ ಜೀವಿಯೊಡನೆ ಸಂವಹನಕ್ಕಾಗಿ ಬಳಸುವ ಮಾಧ್ಯಮ ಎಂದು. ಇಂತಹ ಮಾಧ್ಯಮಗಳಲ್ಲಿ
ಒಂದು  ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ.
ಇಂದು ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ.
ನಮ್ಮ ‘ಕನ್ನಡ’ ಭಾಷೆಯು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಒಂದು ಬೌಗೋಳಿಕ
ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿ ಉಳಿಯ ಬೇಕೆಂದರೆ ಆ ಎಲ್ಲೆಯೊಳಗಿನ ಭಾಷೆ
ಅಸ್ತಿತ್ವದಲ್ಲಿರಲೇಬೇಕು. ಕನ್ನಡ ಭಾಷೆ ಇಂದು ಇಂಗ್ಲೀಷಿನ ವ್ಯಾಪಕ ಬಳಕೆಯಿಂದಾಗಿ
ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಪ್ರಬಂಧದಲ್ಲಿ ಕನ್ನಡ ನಾಡ ನುಡಿಯ ರಕ್ಷಣೆ,
ಸವಾಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆಯಲಾಗಿದೆ.

ಕನ್ನಡ, ಕರುನಾಡು ಇತ್ತೀಚಿನದೆ?_
ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ
ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಇನ್ನು ಕರುನಾಡು
ಯಾವಾಗಿನಿಂದ ಇದೆ ನೀವೆ ಊಹಿಸಿಕೊಳ್ಳಿ.

    ಹಳೆಯ ಇಂಗ್ಲೀಷ್ ಭಾಷೆ ಸುಮಾರು ಕ್ರಿ.ಶ. ೧೦೦೦ ರಲ್ಲಿ ಜನರಿಂದ
ಬಳಸಲ್ಪಡುತ್ತಿತ್ತು. ಬರಹದಲ್ಲಿ ಇಂಗ್ಲೀಷ್ ಪ್ರಭುದ್ಧಮಾನಕ್ಕೆ ಬಂದಿದ್ದು ಎಷ್ಟೋ
ವರ್ಷಗಳು ಕಳೆದ ಬಳಿಕ. ನಡು ಇಂಗ್ಲೀಷ್ ಕ್ರಿ.ಶ. 1400 ರಲ್ಲಿ ಆಡು ಮತ್ತು ಬರಹದ
ರೂಪದಲ್ಲಿ ಬಳಸಲ್ಪಟ್ಟಿತು. ಆಧುನಿಕ ಇಂಗ್ಲೀಷ್ ೧೫ ಅಥವಾ ೧೬ ನೆ ಶತಮಾನದಿಂದೀಚೆಗೆ
ಬಹುತೇಕ ರಾಷ್ಟ್ರಗಳಲ್ಲಿ ಜನರಿಂದ ವ್ಯವಹಾರಕ್ಕಾಗಿ, ಜ್ಞಾನಕ್ಕಾಗಿ, ತಾಂತ್ರಿಕ
ಕಾರಣಗಳಿಗಾಗಿ, ಆಡಳಿತಕ್ಕಾಗಿ, ಮತ್ತು ಪರಸ್ಪರ ಸಂಬಂಧಹೊಂದುವ ಸಲುವಾಗಿ
ಬಳಸಲ್ಪಡುತ್ತಿದೆ.

    ಕನ್ನಡದ ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು
ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು
ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ
ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ. ಈ
ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು. ಐದನೆಯ ಶತಮಾನದ
ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ
ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು
ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. ಕುಮುದೇಂದು ಮುನಿ ರಚಿಸಿದ ‘ಸಿರಿಭೂವಲಯ’
ಗ್ರಂಥದಲ್ಲಿ ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ
ಇದೆ ಎಂದು ಸಾಭೀತುಪಡಿಸಿದ್ದಾರೆ. ಆದರೆ, ಅವರ ಗ್ರಂಥವನ್ನು ಜನ ಸಾಮಾನ್ಯರಿಗೆ ದೊರಕುವ
ಹಾಗೆ ಸರ್ಕಾರ ಗಮನಹರಿಸಿಲ್ಲ. ಕನ್ನಡ ವೇದಗಳ ಕಾಲದಿಂದಲೂ ಬಳಕೆಯಲ್ಲಿದ್ದಿತು ಹಾಗೂ
ಅದು  ನಾಡ ರಕ್ಷಣೆಯ ಸಲುವಾಗಿ ಗುಪ್ತ ಭಾಷೆಯಾಗಿ ಬಳಕೆಯಾಗಿತ್ತೆಂದು ಕೆಲವು
ಶಾಸನಗಳಲ್ಲಿ ಉಲ್ಲೇಖವಾಗಿದೆ.

ಈಗ ಕನ್ನಡ_
ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂತೆಯೆ
ಕನ್ನಡವೂ ಸಹ ಇಂಗ್ಲೀಷ್ ವ್ಯಾಮೋಹಿ ಕನ್ನಡಿಗರಿಂದ ನಿರಾಕರಿಸಲ್ಪಡುತ್ತಿದೆ. ಕನ್ನಡದ
ರಕ್ಷಣೆ ಕೇವಲ ಹಳ್ಳಿಗರದು ಎಂಬ ಗೊಡ್ಡು ಮಾತು ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ
ಓದಿದವರ ಹಾಗೂ ಓದುತ್ತಿರುವವರಿಂದ  ಹೊರಹೊಮ್ಮುತ್ತಿದೆ. ಕನ್ನಡವನ್ನು ಅನ್ನದ
ಭಾಷೆಯಾಗಿಸಲು ಕೇವಲ ಕೆಲವೆ ಜನರು ಪ್ರಯತ್ನಿಸುತ್ತಿದ್ದಾರೆ. ಕನ್ನಡದ ಪರ ಹೋರಾಟಗಾರರು
ಎಂದು ಸೋಗು ಹಾಕಿರುವವರು ಕೇವಲ ಚಳುವಳಿಗಳನ್ನು ಮಾತ್ರ ಮಾಡಿಕೊಂಡು ಕನ್ನಡದ ಉಳಿವಿಗೆ
ಮಾಡಬೇಕಾದ್ದನ್ನು ಮಾಡದೆ ವ್ಯರ್ಥವಾಗಿ  ಇತರರ ಪ್ರಯತ್ನವನ್ನು
ಹಾಳುಗೆಡವುತ್ತಿದ್ದಾರೆ.

    ೧೯೬೩ರ ಅಕ್ಟೋಬರ್ ೧೦ ರಂದು ಕರ್ನಾಟಕ ರಾಜ್ಯಭಾಷಾ ಅಧಿನಿಯಮವನ್ನು ಸರ್ಕಾರ ಜಾರಿ
ಮಾಡಿತು. ಆದರೆ,  ಸಮರ್ಪಕವಾಗಿ ಕನ್ನಡ ಇನ್ನೂ ಆಡಳಿತ ಭಾಷೆಯಾಗಿಲ್ಲ. ಬ್ರಿಟೀಷರು
ಕನ್ನಡಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಇಂದಿನ ಸರ್ಕಾರ ನೀಡುತ್ತಿಲ್ಲ.
ವ್ಯವಹಾರಿಕವಾಗಿ ಕನ್ನಡವನ್ನು ಬಳಸುವುದನ್ನು ಜನರು ದಿನದಿಂದ ದಿನಕ್ಕೆ ಕಡಿಮೆ
ಮಾಡುತ್ತಿದ್ದಾರೆ. ಉದ್ಯೋಗದ ಕಾರಣಗಳಿಗಾಗಿ, ಬಹುತೇಕ ಜನರು ಇಂಗ್ಲೀಷನ್ನೆ ಅನ್ನದ
ಭಾಷೆಯಾಗಿಸಿಕೊಳ್ಳುತ್ತಿದ್ದಾರೆ.

ಭವಿಷ್ಯದ ಆತಂಕ_
 ಇಂಗ್ಲೀಷ್ ಜಗತ್ತಿನ ಭಾಷೆಯಾಗಿದ್ದೇ ಇಂಗ್ಲೀಷ್ಗರ ಆಕ್ರಮಣಕಾರಿ ನೀತಿಯಿಂದ. ಮೊದಲು
ಅಮೇರಿಕದಲ್ಲಿ ಇಂಗ್ಲೀಷ್ ಭಾಷೆಯೇ ಇರಲಿಲ್ಲ. ಕಾಲಾಂತರದಲ್ಲಿ ಬ್ರಿಟೀಷರ ಅಧಿಕಾರಶಾಹಿ
ಹಾಗೂ ವಸಾಹತುಶಾಹಿ ನೀತಿಯಿಂದಾಗಿ ಇಂದು ಅಮೇರಿಕಾದಲ್ಲಿ ಇಂಗ್ಲೀಷ್ ಜನರ
ನಾಡಿಯಾಗಿದೆ. ಒಂದು ವೇಳೆ ಕನ್ನಡವನ್ನು ಬಳಸದೇ ಹೋದಲ್ಲಿ ಇಂಗ್ಲೀಷ್ ಭಾಷೆಯೆ
ಭವಿಷ್ಯದಲ್ಲಿ ನಮ್ಮ ಭಾಷೆಯಾಗುವ ಮೂಲಕ ನಮ್ಮ ನಾಡು ಬ್ರಿಟನ್ ಅಥವಾ ಅಮೇರಿಕ ದೇಶಗಳ
ರಾಜ್ಯಗಳ ಪಟ್ಟಿಯಲ್ಲಿ ಸೇರುವುದರಲ್ಲಿ ಯಾವ ಸಂಶಯ ಬೇಡ. ಈ ನಾಡು ಇಂಗ್ಲೀಷ್ ಮಯವಾದರೆ,
ಕನ್ನಡದಲ್ಲಿರುವ ಜನಪದ ಸಾಹಿತ್ಯಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ನೋಡುವಂತಾಗುತ್ತದೆ.
ಈಗಾಗಲೆ, ಈ ರೀತಿಯ ಸಾಹಿತ್ಯಗಳು ಕಣ್ಮರೆಯಾಗುತ್ತಿದ್ದು ಪಾಪ್ ಗೀತೆಗಳು ಜನಪದದ
ಸ್ಥಾನವನ್ನು ಆಕ್ರಮಿಸುತ್ತಿದೆ.

ರಕ್ಷಣಾತ್ಮಕ ಕಾರ್ಯಗಳು_
ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ, ನಾವು ಪಡೆದುಕೊಂಡ
ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಭಾಷೆ ಮೊದಲು ಕನ್ನಡವಾಗಿ ನಂತರ ಇತರೆ
ಭಾಷೆಯಾಗಿರಬೇಕು. ಕನ್ನಡದಲ್ಲಿ ಲಭ್ಯವಿರದ್ದನ್ನು ಲಭ್ಯವಾಗುವ ಹಾಗೆ ನಮ್ಮ ಕೌಶಲ್ಯ
ಹಾಗೂ ಸಾಮರ್ಥ್ಯ ರೂಪುಗೊಳ್ಳಬೇಕು. ಇದಕ್ಕಾಗಿ ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ
ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ ಬಳಕೆಯ
ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮಾಡಬೇಕು.
    ಉದಾ: ಒಬ್ಬ ವ್ಯಕ್ತಿ ಕಂಪ್ಯೂಟರ್ ಶಿಕ್ಷಣವನ್ನು ಇಂಗ್ಲೀಷ್ ಭಾಷೆಯಲ್ಲಿ ಪಡೆದು
ಉದ್ಯೋಗಕ್ಕೆ ಸೇರುವುದು ಅನಿವಾರ್ಯವೇ ಆದರು, ಕನ್ನಡದಲ್ಲಿ ತಾನು ಇಂಗ್ಲೀಷ್
ಭಾಷೆಯಲ್ಲಿ ಪಡೆದ ಕಂಪ್ಯೂಟರ್ ಶಿಕ್ಷಣವನ್ನು ಕನ್ನಡದಲ್ಲೂ ಲಭ್ಯವಾಗುವ ಹಾಗೆ ಆತ
ಮಾಡಬೇಕು.

ಇಂದು ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ  ಹೆಚ್ಚು ಇಂಗ್ಲೀಷ್ ಭಾಷೆಯೆ
ಬಳಕೆಯಾಗುತ್ತಿದೆ. ನಂತರದ ಸ್ಥಾನಗಳಲ್ಲಿ, ಫ್ರೆಂಚ್, ಜರ್ಮನ್, ರಷ್ಯನ್ ಮತ್ತು ಇತರೆ
ಭಾಷೆಗಳು ಬಳಸಲ್ಪಡುತ್ತಿದೆ. ನಮ್ಮ ಕನ್ನಡ ಉಳಿಯಬೇಕೆಂದರೆ ನಮ್ಮ ಪ್ರಯತ್ನವು ಸಹ
ಕನ್ನಡ ಮುಖಿಯಾಗಿರಬೇಕು.

ಸೈನಿಕರು ನಾಡ ರಕ್ಷಣೆಗೆ ದುಡಿದರೆ, ಆಯಾ ಭಾಷಿಕರು ಆಯಾ ಭಾಷೆಯನ್ನು ರಕ್ಷಿಸುವ
ಸಲುವಾಗಿ ದುಡಿಯಬೇಕು. ‘ಭಾರತಕರ್ನಾಟಕ’ ದ ನಿವಾಸಿಯಾಗಿ ಮನಸ್ಸು ಇಂಗ್ಲೀಷ್
ಆಗಿರಬಾರದು. ಬದಲಾಗಿ ನಾಡ ನಿವಾಸಿಯಾಗಿ ‘ಕನ್ನಡ’ ದ ಮನಸ್ಸಾಗಿರಬೇಕು. ಬೇರೆ
ಭಾಷೆಗಳನ್ನು ಗೌರವಿಸಬೇಕು ಹಾಗು ನಮ್ಮನ್ನು ನಾವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ,
ಆರ್ಥಿಕವಾಗಿ, ತಾಂತ್ರಿಕವಾಗಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ, ಹೀಗೆ
ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ನಾಡನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳಬೇಕು.

ಕೊನೆಯ ಮಾತು:
ಕಣ್ಣಿಗೆ ಕಾಡಿಗೆ ಬೇಕು
ಕಾಡಿಗೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ ಬೇಕು
ಮರ-ಗಿಡ-ಬಳ್ಳಿ, ಪ್ರಾನಿ-ಪಕ್ಷಿಗಳಿಗೆ ನೀರು-ಗಾಳಿ-ಬೆಳಕು ಬೇಕು
ನೀರು-ಗಾಳಿ-ಕಾಡು-ನೆಲದ ರಕ್ಷಣೆಗೆ ಮಾನವನ ಪರಿಸರಾತ್ಮಕ ಬದುಕು ಬೇಕು
ನಮ್ಮ ಅಬಿವ್ಯಕ್ತಿ-ಸಾಂಸ್ಕೃತಿಕ-ಆಡಳಿತ-ಸಾಹಿತ್ಯ-ತಾಂತ್ರಿಕ-ಜ್ಞಾನ ಹೀಗೆ ಮುಂತಾದ
‘ಆತ್ಮಕ’ ವುಗಳಿಗೆ ಏನು ಬೇಕು?
‘ಕನ್ನಡ ನಾಡ ನುಡಿ’ ಎಂಬ ಆತ್ಮ ಬೇಕು.

ಕುಡಿತದಲ್ಲಿ ಮುಳುಗಿರುವವರಿಗೆ ಹನಿಗವನದ ಮೂಲಕ ಎಚ್ಚರಿಕೆ

ಮದ್ಯವನ್ನ ಹೀರು ಎಂದೀತು ಬಾಟಲು,
ತುಂಡನ್ ತಿನ್ನೂ ಎಂದೀತು ಬೊಟ್ಟಲು,
ವಾಲಾಡು ನಶೆಯಲ್ಲಿ ಎಂದೀತು ನಶೆಯ ತೊಟ್ಟಿಲು,
ತಕತಕ, ದಿಮಿತಕ, ಈವ್ ಏವ್ ಎಂದೀತು ಕೈ ಕಾಲು, ಹೊಠ್ಠೆ ಗಂಠಲು,
ಸಾಯುವ ಮುನ್ನ ಹಾಸಿಗೆ ಹಾಸಿ ಬಾಬಾ ಎಂದಾತು ಉಶಾರ್! ಹಾಸ್ಪೆಟ್ಲು.


ಗಡಿಯಾರದ ಗಡಿಯಲ್ಲಿ, ಮಾನವನ ಸಮಾಜದ ಗಡಿಯಲ್ಲಿ


ಸ್ನೇಹಿತರೆ, ನಿಮಗೆ ಗೊತ್ತು ಗಡಿಯಾರದಲ್ಲಿ ಮೂರು ಮುಳ್ಳುಗಳಿರುತ್ತವೆ ಎಂದು. ಯಾವ ಯಾವ ಮುಳ್ಳುಗಳೆಂದು ತಮಗೆ ಈಗಾಗಲೆ ತಿಳಿದಿಯೇ ಇದೆ ಅಲ್ಲವೆ? ಅಂತೆಯೆ ಮಾನವನು ರೂಪಿಸಿಕೊಂಡಿರುವ ಸಮಾಜದ ವ್ಯವಸ್ಥೆಯೂ ಸಹ ಮೂರು ಶ್ರೇಣಿಗಳಲ್ಲಿ ಆರ್ಥಿಕ ಉದ್ದೇಶಗಳಿಗಾಗಿ ರೂಪುಗೊಂಡಿವೆ. ಗಡಿಯಾರದಲ್ಲಿ ಹೆಚ್ಚು ಚಟುವಟಿಕೆಯಿಂದ ಸೆಕೆಂಡ್ ಮುಳ್ಳು ಇರುವಂತೆ ಮಾನವನ ಸಮಾಜದ ಗಡಿಯಲ್ಲಿ ಬಡವರು ತಮ್ಮ ಹೊಟ್ಟೆಪಾಡಿಗಾಗಿ ಹೆಚ್ಚು ಚಟುವಟಿಕೆಯಿಂದ ಇದ್ದರೂ ಹೊಟ್ಟೆಗೆ ಸಾಕಾಗದಂತೆಯೇ   ತಿಂದು ಶ್ರೀಮಂತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ದುಡಿಯುವುದು ಅನಿವಾರ್ಯವೇ ಆಗಿದೆ. ಇನ್ನು ಮಧ್ಯಮ ವರ್ಗದವರು ನಿಮಿಷದ ಮುಳ್ಳು ಇದ್ದಂತೆ ಅಷ್ಟೇನು ಗಡಿಬಿಡಿಯಾಗಿ ಕೆಲಸ ಮಾಡದೆ ತಮಗಾಗುವಷ್ಟು ಹೊಟ್ಟೆಗೆ ಸಂಗ್ರಹಿಸಿಕೊಳ್ಳುತ್ತಾರೆ. ಗಡಿಯಾರದಲ್ಲಿನ ಮೂರು ಮುಳ್ಳುಗಳು ತಮ್ಮ ವ್ಯಾಪ್ತಿಯನ್ನು ಮೀರಲಾರರು. ಆದರೆ ಮಾನವನ ಸಮಾಜದಲ್ಲಿ ಈ ಮೂರು ವ್ಯವಸ್ಥೆಗಳ ಜನರು ತಮ್ಮ ವ್ಯಾಪ್ತಿಯನ್ನು ಮೀರಬಲ್ಲರು. ಆದರೆ ಮಾನವನ ಸಮಾಜದ ಗಡಿಯಾರವು ನಿಯಂತ್ರಿಸುವುದು ಪ್ರಕೃತಿಯಾಗಿರುವುದರಿಂದ ವಾಸ್ತವಿಕವಾಗಿ  ಗಡಿಯಾರದ ಮುಳ್ಳುಗಳಂತೆಯೇ ಮಾನವನ ಸಮಾಜದಲ್ಲಿನ ಈ ಮೂರು ವ್ಯವಸ್ಥೆಗಳು ಸಾಮರಸ್ಯದಿಂದ ಕೆಲಸ ಮಾಡಬೇಕು. ನಾವೆಲ್ಲರು ನಮ್ಮೊಳಗಣ ಅಹಂಕಾರವನ್ನು ಬಿಡಲು ಮೊದಲು ಶ್ರಮಿಸೋಣ. ಬಳಿಕ ಸಾಮರಸ್ಯದೆಡೆಗೆ ದಾರಿ ಸುಗಮವಾಗುತ್ತದೆ.