ಈ ಕಟುಸತ್ಯವ ಮರೆಯಬಾರದು ಅಣ್ಣ


ಕೆಟ್ಟವರ ಸಂಗಡ ಬೆರೆತರೆ
ಬಾಳ ಪಯಣವು ಬಗ್ಗಡದ ಹೆಗ್ಗುರುತು
ಈ ಕಟುಸತ್ಯವ ಮರೆಯಬಾರದು ಅಣ್ಣ
|
ಅವರೆಸೆವ ಕಶ್ಟವು ನೆಮ್ಮದಿಯ ನುಂಗುವುದು
ನಗೆಗಡಲು ಬತ್ತುವುದು
ಒಳಿತೆಲ್ಲವು ಮೋಸದ ಅಂಚಿನಲಿ ಕೊಳೆವುದು
ತೆರೆಮರೆಯ ಆಟದ ಕಾಟಕೆ ಜೀವ ಮಣಿಯುವುದು
ಸೇರದಿರು ಅಣ್ಣ, ಸೇರಿ ಸೆರೆಯಾಗದಿರು ಅಣ್ಣ
|
ಬಾಳ ಗುಲಾಬಿಗೆ ಬೇನೆ ಸಿಂಚಕರು, ಆ ವಂಚಕರು
ನೋಟವೆಲ್ಲ ಮಾಟವಾಗಿ ಕುಣಿವುದು
ಬಾಳ ನಾವೆ ತೂತುಗಳ ಸೆರೆಯಾಗುವುದು
ಅನುಬವದ ಮಾತನ್ನು ಕಡೆಗಣಿಸಬಾರದು
ಬೆರೆಯದಿರು ಅಣ್ಣ, ಬೆರೆತು ಬೇರೆಯಾಗದಿರು ಅಣ್ಣ

youtube ಚಾನಲ್ಗೆ ಕಳುಹಿಸಿದ ಕೆಲವು ಪ್ರಯೋಗದ, ಸಾಹಿತ್ಯದ ತುಣುಕುಗಳ ಕೊಂಡಿಗಳು



ಇಶ್ಟವಾದರೆ ನನ್ನ ಮೊಬಯ್ಲ್ ಸಂಕ್ಯೆಗೆ ಕರೆಮಾಡಿ/ಗೆಳೆಯ-ಗೆಳತಿಯರೊಂದಿಗೆ ಹಂಚಿಕೊಳ್ಳಿ ದಯವಿಟ್ಟು.

…ಕೇಳೀರ್ ಕೇಳ್ರಣ್ಣ ಕೇಳ್ರವ್ವೋ
https://www.youtube.com/watch?v=8afkNwzXFkI

…ಕೋಪ ಹಿಂಸೆ ಕೇಡ ಬಿಟ್ಟು
https://www.youtube.com/watch?v=1Zg08v1gCpU

…ಹಿಂಗೆ ಇಲ್ಲಿ ಬದುಕಿ ನಾನು
https://www.youtube.com/watch?v=-VsCrAC7604

…ನೀನು ನೀನಾಗಿಯೇ ಇರಲು
https://www.youtube.com/watch?v=GAC1sMh1dcY

…ನೀನು ನೀನಾಗಿಯೇ ಇರಲು
https://www.youtube.com/watch?v=GAC1sMh1dcY

…ಎಲ್ಲರು ಎಲ್ಲರೊಂದಿಗೆ
https://www.youtube.com/watch?v=TizD-YlFO_k

…ಕರುಣೆಯ ತೋರಯ್ಯ ಮಳೆರಾಯ
https://www.youtube.com/watch?v=iyRXPn5ySXg

…ಹೀಗಾಯಿತು ನಮ್ಮಿಬ್ಬರ ಮದುವೆ
https://www.youtube.com/watch?v=kTp1ff0W8sM

…ಚುರುಕು ಮಗು
https://www.youtube.com/watch?v=xsxpgvvXcuU

ಕನ್ನಡಿಯ ಬಿಂಬವಿದು ಗರ್ವಬಿಡು ನರಮನುಶ



||ಪ|| ಕನ್ನಡಿಯ ಬಿಂಬವಿದು ಗರ್ವಬಿಡು ನರಮನುಶ

||1|| ನಿನ್ನೊಳಗೆ ಕಡುಹಗೆಯು ಅಣಕಿಸುತ ಕೂತಿರಲು
ಅನುಗಾಲ ನಿನ್ನೊಡನೆ ನಾಹೇಗೆ ಜೀವಿಸಲಿ?
ಅನುಗಾಲ ನನ್ನೊಡನೆ ಹರುಶದಲಿ ಜೀವಿಸಲು
ಒಳಗಿರುವ ಕಡುಹಗೆಯ ಕೊನೆಗೊಳಿಸಿ ಬಿಳಿಯಾಗು.

||2|| ನಿನ್ನದೇ ಆರ‍್ಬಟವು ನನ್ನನ್ನು ಮುಚ್ಚಿರಲು
ಗುಡಿಗಡಿಯ ಜಗಳಗಳ ನಡುವಲ್ಲಿ ನಾನೇಕೆ ಜೀವಿಸಲಿ?
ಅನುದಿನವು ನನ್ನೊಡನೆ ಒಂದಾಗಿ ಜೀವಿಸಲು.
ಗುಡಿಗಡಿಯ ಜಗಳಗಳ ಆರ‍್ಬಟವ ಕೊನೆಗೊಳಿಸು.

||3|| ನಿನ್ನದೇ ಹಸಿರೆಲ್ಲ ನನ್ನಲ್ಲಿ ಉಸಿರಿಲ್ಲ
ರೋಗವನು ಕಕ್ಕುತ್ತ ಎಲ್ಲೆಲ್ಲಿ ಪಯಣಿಸಲಿ?
ಸುದೆಬೆರೆತ ದಾರಿಯೊಳು ನನ್ನೊಡನೆ ಪಯಣಿಸಲು
ನನ್ನದೇ ಹಸಿರನ್ನು-ಉಸಿರನ್ನು ನೆಲೆಗೊಳಿಸು.

||4|| ನನ್ನದೇ ದ್ಯಾನಕ್ಕೆ ನಿನ್ನದೇ ನಿಯಮಗಳು
ತಪಹೊತ್ತ ಅರಿವಿಲ್ಲ ಯಾವಾಗ ನಾಬರಲಿ?
ನಾನಿರುವ ಒಂತನದ ಲೋಕಕ್ಕೆ ನೀಬರಲು
ತಪಹೊತ್ತ ಅರಿವನ್ನು ನೀಮೊದಲು ಗುರುತಿಸಿಕೊ.

||5|| ತನುಮನವ ಬೆಳಗೆಂದು ನನ್ನನ್ನು ಪೂಜಿಸುವೆ
ನಿನ್ನದೇ ತನುಮನವ ಬೆಳಗೋಕೆ ನಾಯಾರು?
ಕೆಡಕುಗಳ ಬಯಸುವುದ ನೀಮೊದಲು ಬಿಟ್ಟುಬಿಡು
ತನ್ತಾನೆ ತನುಮನವು ಒಳಿತಲ್ಲಿ ಹೊಳೆಯುವುದು.

ಯಾರು ಯಾವುದಕ್ಕಾಗಿ ತುಡಿಯುತ್ತಿರುತ್ತಾರೋ ಅವರು ಅದರಲ್ಲೇ ಬೆರೆತು ಇತರರಿಗೆ ಬೆಳಕಾಗುತ್ತಾರೆ


ಚಂದ್ರಕುಮಾರ್ ಗುರುಗಳೊಟ್ಟಿಗೆ ಅಷ್ಟಾಗಿ ನನಗೆ ಒಡನಾಟವಿಲ್ಲ. ಅವರು ನನಗೆ ಪರಿಚಯವಾಗಿದ್ದು ಅಂದಾಜು ಎರಡು ವರ್ಷಗಳಿಂದೀಚೆಗೆ ಇರಬಹುದು. ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಕುರುಡ ವಿದ್ಯಾರ್ಥಿಗಳಲ್ಲಿನ ಸಂಗೀತ ಪ್ರತಿಭೆಯನ್ನು ಸ್ಪರ್ಧೆಗೆ ಒಡ್ಡುವ ಮೂಲಕ ಅವರಿಗೆ ತಕ್ಕನಾದ ಅವಕಾಶವನ್ನು ಒದಗಿಸುವ ಕಾರ್ಯಕ್ರಮದಲ್ಲಿ ಹಾಗೆ ಸುಮ್ಮನೆ ಮಾತನಾಡುವಾಗ ನನಗೆ ಅವರ ಸಂಕ್ಷಿಪ್ತ ಪರಿಚಯವಾಗಿತ್ತು.
                "ಸೂರ್ಯೋದಯ" ಸಂಸ್ಥೆಯ ಮೂಲಕ ಅವರು ಸಂಗೀತ ಚಟುವಟಿಕೆಗಳನ್ನು ಎಡಬಿಡದೆ ನಡೆಸುಕೊಂಡು ಬರುತ್ತಿರುವಾಗಲೇ, ಇತ್ತ ನನ್ನ ಮನಸ್ಸಿನಲ್ಲಿ ಕುರುಡರಿಂದಲೇ ಬರೆದ ಕವಿತೆಗಳನ್ನು ಹಾಡಾಗಿಸಿ audio c.d ರೂಪದಲ್ಲಿ ಹೊರತರಬೇಕು ಎನ್ನುವ ಆಸೆ ಚಿಗುರತೊಡಗಿತ್ತು. ಮುದಿಗೆರೆ ರಮೇಶ್ ಕುಮಾರ್ ಮತ್ತು ಅವರ ಗೆಳೆಯರ ಬಳಗವು ಕುರುಡ ವ್ಯಕ್ತಿಗಳಲ್ಲಿರುವ ಸಾಹಿತ್ಯ ಅಭಿರುಚಿಯನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ, ಅದರಿಂದ "ತಮದೊಡಲ ಜೀವಿಗಳು" ಎನ್ನುವ ಬೆಳೆಯನ್ನು ಹೊತ್ತಗೆಯ ಬುಟ್ಟಿಯಲ್ಲಿ ಅನುಕ್ರಮವಾಗಿ ಸೇರಿಸಿ, ಅಳಿಯದಂತೆ ಉಳಿಸಿ, ಲೋಕವಾಗಿಸಿದರು.
         ಇನ್ನು audio cd ಮುಂದಿನ ಹೆಜ್ಜೆ ಆಗಲೇ ಬೇಕು ಎಂದು ನಿಶ್ಚಯಿಸಿಕೊಂಡು, ಸರಿಯಾದ ವ್ಯಕ್ತಿಯೊಡನೆ ಮನದ ಆಸೆಯನ್ನು ಹಂಚಿಕೊಳ್ಳಬೇಕೆಂದು ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿರುವಾಗಲೇ, ಕೇಶವಮೂರ್ತಿ ನೆನಪಿಗೆ ಬಂದರು. ನಾನು ಯಾವುದೇ ಸಾಹಿತ್ಯ ಕಮ್ಮಟಗಳಿಗೆ ಹೋದರು ಅವರು ತಪ್ಪದೇ ಅಲ್ಲಿ ಇರುತ್ತಿದ್ದರು. ‘ನಾವೇ ಬರೆದ ಕವಿತೆಗಳನ್ನು audio cd ರೂಪದಲ್ಲಿ ಹೊರತರಬೇಕು ಅಂತ ಒಂದು ಆಸೆ ಇದೆ. ಈಗಾಗಲೆ ಹೊತ್ತಗೆಯ ರೂಪದಲ್ಲಿ "ತಮದೊಡಲ ಜೀವಿಗಳು" ಬಂದಿದೆ. ಮುಂದಿನ ಹೆಜ್ಜೆ audio cd ಸರಿ ಅಂತ ಅನಿಸಿದೆ. ನೋಡಿ ನಿಮಗೆ ಗೊತ್ತಿರುವವರೆಲ್ಲರನ್ನು ಕೇಳಿ. ನಮ್ಮದೇ ದುಡ್ಡು, ನಮ್ಮದೇ ಬರವಣಿಗೆ ಅಂತ ತಪ್ಪದೇ ಅವರಿಗೆಲ್ಲರಿಗೂ ಹೇಳಿ. ಯಾರ್ ಯಾರ್ ಒಪ್ತಾರೋ ಅವರೆಲ್ಲರೂ ಸೇರಿ ಇದರಲ್ಲಿ ತೊಡಗೋಣ’ ಎಂದು ಕೇಶವಮೂರ್ತಿ ಬಳಿ ಹೇಳಿಕೊಂಡೆ. ಅವರು ‘ರಮೇಶ್ ಕುಮಾರ್, ಶ್ರೀನಿವಾಸ್ಲು ಇವರೆಲ್ಲರನ್ನೂ ಕೇಳ್ತೀನಿ. ನೀವು ನಿಮ್ ಗೊತ್ತಿರುವವರೆಲ್ಲರನ್ನು ಕೇಳಿ’ ಎಂದರು. ಬರವಣಿಗೆಯಲ್ಲಿ ಯಾರೆಲ್ಲಾ ತೊಡಗಿದ್ದಾರೋ ಅವರೆಲ್ಲರೊಂದಿಗೆ ಮಾತನಾಡಿದೆ. ಕೇಶವಮೂರ್ತಿ ಯವರು ಕೂಡ ಪರಿಚಯವಿರುವವರೆಲ್ಲರೊಂದಿಗೆ ಮಾತನಾಡಿ ಆಸಕ್ತರನ್ನು ಸೇರಿಸಿದರು. ನಮ್ಮಿಬ್ಬರಿಗೆ ಸ್ಪಂದಿಸಿ ಈ ಹೆಜ್ಜೆಗೆ ಸೇರಿದವರು ಹರ್ಷ, ವಿನೋದ್ ಪ್ರಕಾಶ್, ಯೋಗೇಶ್, ಸುದರ್ಶನ್, ನೇತ್ರಾವತಿ, ಮಾರುತಿ ಮೊಗೇರ, ಅಶೋಕ ಕೆ, ಅರವಿಂದ್, ರಮೇಶ A.R, ರವಿ.S ಹಾಗೂ ರಾಘವೇಂದ್ರ.
                 ಬರವಣಿಗೆಯಲ್ಲಿದ್ದವರನ್ನು ಹೇಗೋ ಸೇರಿಸಿಕೊಂಡಿದ್ದಾಯಿತು. ಇನ್ನು ನಮ್ಮ ಸಮುದಾಯದಲ್ಲಿ ಹಾಡುಗಾರಿಕೆಯ ಕ್ಷೇತ್ರದಲ್ಲಿ ತೊಡಗಿರುವವರನ್ನು ಪತ್ತೆಹಚ್ಚಬೇಕಾಗಿತ್ತು. ‘ಚಂದ್ರಕುಮಾರ್ ರವರನ್ನ ದ್ವನಿ ಪರೀಕ್ಷಕರನ್ನಾಗಿ ಮಾಡಿಕೊಳ್ಳೋಣ. ಅವರ ಬಳಿ ಕಂಪ್ಯೂಟರ್ ಮತ್ತು ಸ್ಟುಡಿಯೋಗಳಲ್ಲಿರುವ ಒಂದಷ್ಟು ವಸ್ತುಗಳು ಇವೆ. ಬೇರೆ ಕಡೆಗಳಲ್ಲಿ ದ್ವನಿ ಪರೀಕ್ಷೆಗೆ ಸಮಯ-ದುಡ್ಡು ಸುಮ್ನೆ ವ್ಯರ್ಥವಾಗುತ್ತೆ’ ಎಂದು ಕೇಶವಮೂರ್ತಿ ಹೇಳಿದಾಗ, ನನಗೂ ಚಂದ್ರಕುಮಾರ್ ರವರ ಮೂಲಕ ದ್ವನಿ ಪರೀಕ್ಷೆಯನ್ನು ಮಾಡಿಸಬೇಕೆನಿಸಿತು. ಸ್ವಲ್ಪ ದಿನಗಳ ಬಳಿಕ ‘ಚಂದ್ರಕುಮಾರ್ ರವರು ಒಪ್ಪಿದ್ದಾರೆ. ಅಂದು ಬರುವ ಎಲ್ಲಾ ವ್ಯಕ್ತಿಗಳಿಗೂ ಊಟದ ಏರ್ಪಾಟನ್ನು ಮಾಡ್ತೀನಿ ಅಂತನೂ ಹೇಳುದ್ರು. ಮತ್ತೆ ಎಷ್ಟು ಆಗುತ್ತೋ ಅಷ್ಟು ಹಾಡಲು ಬರುವ ವ್ಯಕ್ತಿಗಳನ್ನು ಸೇರಿಸಿ, ನನಗೆ ತಿಳಿಸಿ. ನಾನು ಮೂರು ಹಾಡುಗಳನ್ನು ದ್ವನಿ ಪರೀಕ್ಷೆಗೆಂದು ಸೂಚಿಸ್ತೀನಿ ಅಂತ ಅವರು ಹೇಳಿದ್ದಾರೆ’ ಎಂದು ಕೇಶವಮೂರ್ತಿ ಯವರು ಹೇಳಿದಾಗ, ನನಗೆ ಇನ್ನಷ್ಟು ಸಂತೋಶವಾಯ್ತು. Sms ಹಾಗೂ ಕರೆಗಳ ಮೂಲಕ ೨೬ಕ್ಕೂ ಹೆಚ್ಚು ಹಾಡುಗಾರರನ್ನು ದ್ವನಿ ಪರೀಕ್ಷೆಗೆ ಆಯ್ಕೆ ಮಾಡಿಕೊಂಡ ಬಳಿಕ ಕೇಶವಮೂರ್ತಿ ಮತ್ತು ನಾನು ಚಂದ್ರಕುಮಾರ್ ರವರೊಂದಿಗೆ ಯಾವ ಯಾವ ಹಾಡುಗಳಿಗೆ ಆಯ್ಕೆಯಾದವರು ಅಣಿಗೊಳ್ಳಬೇಕು ಎನ್ನುವ ಸಲುವಾಗಿ ಮಾತನಾಡುವಾಗ ‘ಹುಡುಗರು ಎದೆ ತುಂಬಿ ಹಾಡಿದೆನು, ನೂರೊಂದು ನೆನಪು ಹಾಡುಗಳನ್ನ ಹಾಡಲಿ. ಹುಡುಗಿಯರು ಭಾನಲ್ಲು ನೀನೆ, ಎದೆ ತುಂಬಿ ಹಾಡುಗಳನ್ನ ಹಾಡಲಿ’ ಅಂತ ಚಂದ್ರಕುಮಾರ್ ರವರು ಹೇಳಿದರು. ನಮಗಿಬ್ಬರಿಗೂ ಈ ಹಾಡುಗಳೇ ಸರಿ ಎಂದು ಅನಿಸಿ ಆಯ್ಕೆಯಾದವರಿಗೆ ಈ ಹಾಡುಗಳಿಗೆ ಅಣಿಯಾಗಿ ಬರುವಂತೆ ಸೂಚಿಸಿದೆವು.
         ದ್ವನಿಪರೀಕ್ಷಾ ದಿನ ಬಂತು. ಅಂದು ಚಂದ್ರಕುಮಾರ್ ರವರು ತಾಳ್ಮೆಯಿಂದ ೨೬ ವ್ಯಕ್ತಿಗಳ ಹಾಡುಗಾರಿಕೆಯನ್ನು ಆಲಿಸಿ, ತಪ್ಪಿದ್ದಲ್ಲಿ ತಿದ್ದಿ, ಈ ಯೋಜನೆಗೆ ತಕ್ಕನಾದ ದ್ವನಿಗಳನ್ನು ಸೂಚಿಸಿದರು. ಹುಡುಗಿಯರಲ್ಲಿ ಹಾಡಿದ ಶಾಝಿಯಾ ಸಲಿಮ್ ಮಾತ್ರವೇ ಆಯ್ಕೆಯಾಗಿದ್ದು. ಹುಡುಗರಲ್ಲಿ ಬಸವರಾಜ kr, ಬಸವರಾಜ ಗುಡಿಹಾಳ್, ಸದಾಶಿವ, ಮತ್ತು ಶ್ರೀನಿವಾಸ್ಲು ಆಯ್ಕೆಯಾದರು.
         ನಾವು ಬರೆದಿಟ್ಟುಕೊಂಡಿದ್ದ ಹಾಡುಗಳನ್ನು ಚಂದ್ರಕುಮಾರ್ ರವರು ಪರಿಶೀಲಿಸಿ ಹನ್ನೆರಡೇ ಹಾಡುಗಳು ಸಾಕೆಂದು ತಿಳಿಸಿದರು. ನಾನು ಹೇಮಂತ್ ಕುಮಾರ್ b.r ರವರು ಈ ಹನ್ನೇರಡು ಹಾಡುಗಳನ್ನು ಸಂಗೀತಕ್ಕೆ ಒಳಪಡಿಸಲು ಒಪ್ಪಿದ್ದಾರೆಂದು ಹೇಳಿದಾಗ, ‘ಓಹ್! ತುಂಬಾ ಚೆನ್ನಾಗಿ ರಾಗ ಹಾಕ್ತಾರೆ. ಅವರು ಸ್ವಲ್ಪ ತುಂಟ, ಮಯ್ಗಳ್ಳ. ಸಾಹಿತ್ಯಕ್ಕೆ ರಾಗ ಸರಿಯಾಗಿ ಹಾಕಿಲ್ಲಾ ಅಂತ ಅಂದ್ರೆ ಅವರು ಏನೋ ಹೇಳಿ ಸುಮ್ನಾಗ್ತಾರೆ. ನೀವು ಹಟ ಹಿಡುದ್ರೆ ನಿಮ್ಗಿಂತ್ಲೂ ಹೆಚ್ಚಾಗಿ ಹುಮ್ಮಸ್ಸಿನಿಂದ ಕೆಲ್ಸ ಮಾಡ್ಕೊಡ್ತಾರೆ. ನಾನೂ ಕೂಡ ಒಂದಾನೊಂದು ಕಾಲದಲ್ಲಿ ಅವರ ತಂಡದಲ್ಲಿ ಕೀಬೋರ್ಡ್ ಪ್ಲೇಯರ್ ಆಗಿದ್ದೆ. ನಮ್ ಮನೆಗೆ ವೈಲಿನ್ ಹಿಡ್ಕೊಂಡು ಬರ್ತಿದ್ರು’ ಎನ್ನುತ್ತಾ ಅವರು ಹಳೆಯ ನೆನಪಿಗೆ ಜಾರಿದರು.         ಸರ್ ನಾಳೆ ಎಲ್ಲಾ ಹಾಡುಗಳಿಗೆ ಹಾಕಿರುವ ಟ್ಯೂನ್ ಕೇಳ್ಸ್ತಾರೆ ಅವರು’ ಅಂತ ನಾನು ಹೇಳಿದ್ದಕ್ಕೆ ‘ಒಳ್ಳೆದಾಗ್ಲಿ ಎಂದು ಹಾರೈಸಿದರು.
        ಸಂಗೀತ ನಿರ್ದೇಶಕರಾದ ಹೇಮಂತ್ ಕುಮಾರ್ b.r ರವರು ನಾವು ನೀಡಿದ್ದ ಹನ್ನೆರಡು ಹಾಡುಗಳಿಗೆ ರಾಗವನ್ನು ಹಾಕಿ ಕೇಳಿಸಿದರು. ಕೇಶವಮೂರ್ತಿ ಯವರು ಬರೆದಿದ್ದ "ಕೆಲ್ಸ್ದಿಂದ ಬರ್ತಿದ್ದೆ" ಎನ್ನುವಂತಹ ಸಾಮಾಜಿಕ ಹಾಡಿಗೆ ‘ಕುಡುಕರಂತೆ ಇರುವ ದ್ವನಿ ಇದ್ದರೆ ಚೆನ್ನಾಗಿರುತ್ತೆ. ಒಂದ್ ಸಲ ಚಂದ್ರಕುಮಾರ್ ರವರನ್ನ ಕೇಳು ಕೇಶವ್’ ಎಂದು ಶ್ರೀನಿವಾಸ್ಲು ಹೇಳಿದಾಗ, ಕೇಶವಮೂರ್ತಿ ಯವರು ಸಮ್ಮತಿಸಿದರು. ನಾನು ‘ದ್ವನಿಪರೀಕ್ಷೆ ಮಾಡಿದವರು ಹಾಡೋದು ಬೇಡ. ಬೇಕಾದ್ರೆ ಈಗ ಯಾರು ಆಯ್ಕೆಯಾಗಿದ್ದಾರೋ ಅವರಲ್ಲೇ ಒಬ್ಬರನ್ನು ಚಂದ್ರಕುಮಾರ್ ರವರು ಆಯ್ಕೆ ಮಾಡ್ಲಿ’ ಎಂದೆ. ಇದಕ್ಕೆ ಇಬ್ಬರಲ್ಲೂ ಅಸಮ್ಮತಿಯ ಸುಳಿವು ಕಾಣಿಸಿತು. ಕೊನೆಗೂ ಅವರು "ಕೆಲ್ಸ್ದಿಂದ ಬರ್ತಿದ್ದೆ" ಹಾಡನ್ನು ಹಾಡುವುದು ಖಾತ್ರಿಯಾಯಿತು.          ಆಯ್ಕೆಯಾಗದ ಒಂದಷ್ಟು ವ್ಯಕ್ತಿಗಳು ಚಂದ್ರಕುಮಾರ್ ರವರು ಹಾಡುತ್ತಿರುವ ವಿಷಯವನ್ನು ತಿಳಿದು ಆಕ್ಷೇಪಣೆಯನ್ನು ಈ ಯೋಜನೆಗೆ ಸಂಬಂಧಪಡದವರ ಬಳಿಯೂ ತೋಡಿಕೊಂಡರು. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ ನಾವೆಲ್ಲರು ನಮ್ಮ ಪ್ರಯತ್ನದಲ್ಲಿ ತೊಡಗಿಕೊಂಡೆವು. ಚಂದ್ರಕುಮಾರ್ ರವರು ಹಾಡನ್ನು ಹಾಡಲು ಹಿಂಜರಿದರು. ಕೇಶವಮೂರ್ತಿ ಚಂದ್ರಕುಮಾರ್ ರವರ ಮನವೊಲಿಸುವಲ್ಲಿ ಯಶಕಂಡರು.
         "ಕೆಲ್ಸ್ದಿಂದ ಬರ್ತಿದ್ದೆ" ಈ ಹಾಡನ್ನು ಹಾಡಲು ಚಂದ್ರಕುಮಾರ್ ರವರು ಸ್ಟ್ಯೂಡಿಯೋಗೆ ಬಂದರು. ಹೇಮಂತ್ ಕುಮಾರ್ ರವರು ತುಂಬಾ ಹಿಂದಿನ ಗೆಳೆಯನನ್ನು ಮತ್ತೆ ನೋಡಿದ ಮುಗುಳ್ನಗೆಯಲ್ಲಿ, ‘ಊ ಚಂದ್ರು ಇವತ್ತು ಹಾಡಿನ ಹಬ್ಬ ಮಾಡ್ಬೇಕು ನೀನು’ ಎಂದು ಹುಮ್ಮಸ್ಸಿನಿಂದ ಹೇಳಿ ಚಂದ್ರಕುಮಾರ್ ರವರಲ್ಲೂ ಇನ್ನಷ್ಟು ಹುರುಪನ್ನು ತುಂಬಿದರು.
         ಕೇಶವಮೂರ್ತಿಯವರು ಬರೇದಿದ್ದ ಈ ಹಾಡು ತುಂಬಾ ಆಡುನುಡಿಯ ಚೌಕಟ್ಟಿನಲ್ಲಿದ್ದುದ್ದರಿಂದ ಚಂದ್ರಕುಮಾರ್ ರವರು ಹಾಡುವಾಗ ಅಕ್ಷರಗಳನ್ನು ಬರೆದಂತೆ ಉಲಿಯುತ್ತಿರಲಿಲ್ಲ. ಈ ರೀತಿಯ ತೊಡರು ಎಲ್ಲಾ ಹಾಡುಗಾರರಿಗೂ ಆಗುವುದು ಸಹಜ. ಚಂದ್ರಕುಮಾರ್ ರವರು ಆರ್ಕೇಸ್ಟ್ರಾ ಕಲಾವಿಧರು ಅಷ್ಟೆ. ಅವರು ನೇರ ಸ್ಟೂಡಿಯೋ ಕಲಾವಿಧರಲ್ಲವಾದ್ದರಿಂದ ಹಾಡುಗಾರಿಕೆಯ ಲಯದಲ್ಲಿ ತಪ್ಪು ಮಾಡುತ್ತಿರುವಾಗಲೇ ತಕ್ಷಣವೇ ತಿದ್ದುಕೊಂಡು ಹಾಡುತ್ತಿದ್ದರು. ಅವರು ಹಾಡಿದ ಸಾಲುಗಳು ಸರಿ ಇದ್ದಾಗ್ಯೂ ಅವರಿಗೆ ಇಷ್ಟವಾಗದಿದ್ದಾಗ ಎಲ್ಲರ ಕ್ಷಮೆ ಕೋರಿ ಇನ್ನಷ್ಟು ಮನದುಂಬಿ ಹಾಡುತ್ತಿದ್ದರು.
         ಗುಡಿಹಾಳ ಬಸವರಾಜ್ ಮತ್ತೊಬ್ಬ ಹಾಡುಗಾರರು. ತುಸು ಮಟ್ಟಿಗೆ ಹಾಡುಗಳಿಗೆ ರಾಗವನ್ನು ಅಳವಡಿಸಬಲ್ಲ ವ್ಯಕ್ತಿ. ಈ ಯೋಜನೆಯಲ್ಲಿನ "ಜೀವನ ಎಂಬೀ" ಎನ್ನುವಂತಹ ಹಾಡಿಗೆ ಆಗಷ್ಟೇ ದ್ವನಿ ನೀಡಿದ್ದರು. ಇವರು ಕೂಡ ಚಂದ್ರಕುಮಾರ್ ರವರು ಹಾಡನ್ನು ಹಾಡಲು ಬರಬಾರದಿತ್ತೆಂದು ನನ್ನದೇ ಅನಿಸಿಕೆಯನ್ನು ಹೊಂದಿದ್ದರು. ಇದು ನ್ಯಾಯೋಚಿತವೂ ಆಗಿತ್ತು. ಆದರೆ ಯೋಜನೆಯ ಯಶಸ್ವಿಗೆ ಕೈ ಜೋಡಿಸಿದ ವ್ಯಕ್ತಿಯೇ ತನ್ನ ಹಾಡನ್ನು ಇಂತವರೇ ಹಾಡಲಿ ಎನ್ನುತ್ತಿರುವಾಗ ತಕರಾರು ಯಾಕೆ ಮಾಡಬೇಕು? ಎಂದು ಅವರನ್ನು ಸುಮ್ಮನಿರಿಸಿದ್ದೆ. ತುರ್ತು ಕೆಲಸವಿದ್ದರಿಂದ ಹೇಮಂತ್ ಕುಮಾರ್ ರವರು ಅರ್ಧದಲ್ಲೇ ‘ಚಂದ್ರು ಕ್ಷಮಿಸಪ್ಪ. ನೀನೇ ಇದನ್ನ ನಿಭಾಯಿಸು. ನಿನ್ಗೆ ಇವೆಲ್ಲಾ ಗೊತ್ತಲ್ಲ? ಬಾಲು ಟೆಕ್ನಿಕಲ್ ನೋಡ್ಕೊಳ್ತಾನೆ.’ ಎಂದು ಅವಸರದಲ್ಲಿ ಸ್ಟೂಡಿಯೋದಿಂದ ತೆರಳಿದರು.
         ಚಂದ್ರಕುಮಾರ್ ರವರು ಹಾಡುವಾಗ ಗು.ಬಸವರಾಜ್ ಸ್ವರದ ಮೂಲಕ ಚಂದ್ರಕುಮಾರ್ ರವರಿಗೆ ಹಾಡಿಗೆ ಅಳವಡಿಸಿದ್ದ ರಾಗದ ಮಟ್ಟಿನ ಸುಳಿವನ್ನು ನೀಡುತ್ತಿದ್ದರು. ತಪ್ಪುಗಳನ್ನು ಪತ್ತೆಹಚ್ಚಲಿಕ್ಕಾಗದು ಎನ್ನುವ ಕಾರಣಕ್ಕೋ ಎನೋ ಒಟ್ಟಿನಲ್ಲಿ ‘ಅವರಿಗೆ ಸುಮ್ಮನಿರೋಕೆ ಹೇಳಿ’ ಎಂದು ಕೇಶವಮೂರ್ತಿಯವರು ನನಗೆ ಹೇಳಿದರು. ನಾನು ಗು.ಬಸವರಾಜ್ ರವರಿಗೆ ಸುಮ್ಮನಿರಲು ಹೇಳಿದೆ, ಅವರು ಸುಮ್ಮನಾದರು. ನನಗೆ ರಾಗದ ಮಟ್ಟಿನ ಬಗ್ಗೆ ಅರಿವು ಇಲ್ಲದ ಕಾರಣ, ಸಾಹಿತ್ಯದ ತಪ್ಪುಗಳನ್ನು ಮಾತ್ರವೇ ತಿದ್ದುತ್ತಿದ್ದೆ. ಕೇಶವಮೂರ್ತಿಯವರು ತಿಳಿದ ಮಟ್ಟಿಗೆ rough-tune ಇದ್ದ ಕಡತವನ್ನು ಅನುಮಾನಗಳು ಬಂದಾಗಲೆಲ್ಲಾ ಕೇಳಿಸಿಕೊಳ್ಳುತ್ತಲೇ ತಿದ್ದುತ್ತಿದ್ದರು.
        ಇನ್ನೇನೂ ಹಾಡು ಮುಗಿಯುತ್ತಿರುವಂತೆ "ಗಂಡಸ್ರು ಹೆಂಡ್ರು ಕಾಲ್ ಮುಟ್ಬಾರ್ದು ದಮ್ಮಯ್ಯ ಅಂತೀನಿ ನನ್ ಕಾಲ್ನ ಮುಟ್ಬ್ಯಾಡ್ರಿ ನರ್ಕಕ್ಕೆ ಹೋಯ್ತೀನಿ ನಾನು" ಎನ್ನುವಂತಹ ಸಾಲಿಗೆ ಹಾಡುಗಾರ್ತಿಯ ದ್ವನಿ ಬೇಕಾಗಿತ್ತು. ಮತ್ತೆ ಅವರಿವರಿಂದ ಹಾಡಿಸುವುದೇಕೆ ಎನ್ನುವ ಯೋಚನೆ ಅಲ್ಲಿದ್ದ ನಮಗೆಲ್ಲರಿಗೂ ಬಂತು. ಆಗ ಕೇಶವಮೂರ್ತಿ ಚಂದ್ರಕುಮಾರ್ ರವರ ಮಗಳಾದ ದೇವಕಿ ಯವರಿಗೆ ‘ನೀವ್ ಒಂದ್ ಸಲ ಹಾಡಿ’ ಎಂದರು. ಆಗ ಅವರು ‘ಅಭ್ಯಾಸವಿಲ್ಲ. ರಿದಮ್ಪ್ಯಾಡ್ ಅಷ್ಟೆ ಗೊತ್ತಿರೋದು’ ಎಂದು ಹೇಳಿದರು. ‘ಬಾ ಹಾಡು ಒಂದ್ ಸಲ. ಈ ರೀತಿಯ ಅವಕಾಶ ಸಿಗೋದು ಕಷ್ಟ. ದಾಖಲೆಗೂ ಆಗುತ್ತೆ.’ ಎಂದು ಚಂದ್ರಕುಮಾರ್ ಹೇಳಿದಾಗ, ದೇವಕಿ ಹಾಡಲು ಆಸಕ್ತಿ ತೋರಿದರು. ದೇವಕಿ ಹಾಡಲಿರುವ ಸಾಲನ್ನು ಹೇಗೆ ಹಾಡುವುದು ಎಂದು ಕೇಶವಮೂರ್ತಿ ಹಾಗೂ ಚಂದ್ರಕುಮಾರ್ ರವರಿಗೆ ತೋಚಲಿಲ್ಲ. ನಾನು ಗು.ಬಸವರಾಜ್ ರವರಿಗೆ ‘ಸ್ವಲ್ಪ ತೋರ್ಸು ಹಾಡೋದನ್ನ’ ಎಂದು ವಿನಂತಿಸಿಕೊಂಡೆ. ಅವರು ಹಾಡಿ ತೋರಿಸಲು ಹಿಂಜರಿದರು. ಚಂದ್ರಕುಮಾರ್ ರವರು ದೂರದಲ್ಲಿದ್ದುದ್ದರಿಂದ ನಾವಿಬ್ಬರು ಏನನ್ನು ಮಾತನಾಡಿದೆವೂ ಎನ್ನುವುದು ಕೇಳಿಸಿಕೊಳ್ಳದೆ, ‘ಸ್ವಲ್ಪ ಜೋರಾಗಿ ಹೇಳಿ ಬಸವರಾಜ್" ಎಂದು ವಿನಯ ಪೂರ್ವಕವಾಗಿ ಕೇಳಿಕೊಂಡರು. ಗು.ಬಸವರಾಜ್ ಹಾಡಿ ತೋರಿಸಿದರು. ದೇವಕಿಯವರು ಆ ಸಾಲಿಗೆ ನೀಡಿರುವ ದ್ವನಿಯು ಹಳ್ಳಿ ಹೆಂಗಸಿನ ದ್ವನಿಯಂತೆಯೇ ಮೂಡಿತು. ಚಂದ್ರಕುಮಾರ್ ರವರು ಮಗಳ ಹಾಡಿದ್ದನ್ನು ಕೇಳಿ ತುಂಬಾನೇ ಸಂತಸಪಟ್ಟರು.
         ಅಂತೂ ಚಂದ್ರಕುಮಾರ್ ರವರು ಕೇಶವಮೂರ್ತಿಯವರು ಬರೆದಿದ್ದ ಹಾಡಿಗೆ ದ್ವನಿ ನೀಡಿ ಮುಗುಳ್ನಗೆ ಬೀರುತ್ತಾ ‘ಇದು ನನ್ನ ಜೀವನದ ಅವಧಿಯಲ್ಲೇ ಮೊದಲನೆ ಸಲ ಸ್ಟೂಡಿಯೋದಲ್ಲಿ ಹಾಡನ್ನು ಹಾಡಿದ್ದು. ಇದಕ್ಕೆ ಅವಕಾಶ ನೀಡಿದ ಎಲ್ಲರಿಗೂ ನಾನು ನನ್ನ ಮಗಳು ಇಬ್ಬರೂ ರುಣಿ.’ ಎನ್ನುತ್ತಾ ಧನ್ಯತಾ ಭಾವವನ್ನು ಅರ್ಪಿಸಿದರು. ಟೆಕ್ನಿಶನ್ ಬಾಲುರವರು ಹಾಡಿನ ರೆಕಾರ್ಡಿಂಗ್ ಮುಗಿದ ಬಳಿಕ ಎಲ್ಲರಿಗೂ ಟೀ ನೀಡಿ ಬೀಳ್ಕೊಟ್ಟರು.
         ಕೇಶವಮೂರ್ತಿಯವರು ಬರೆದ ಈ ಹಾಡು ಸಾಮಾಜಿಕ ಕಾಳಜಿಯನ್ನು ಹೊಂದಿದ್ದರೂ, ಚಂದ್ರಕುಮಾರ್ ರವರು ಹಾಡಿದ ವೈಖರಿಯಿಂದಾಗಿ ಅಷ್ಟಾಗಿ ಜನಮನ್ನಣೆ ಪಡೆಯುವುದಿಲ್ಲ ಅನ್ನುವ ಅನಿಸಿಕೆ ನನ್ನಲ್ಲಿ, ಗು.ಬಸವರಾಜ್ ಹಾಗೂ ಟೆಕ್ನಿಶನ್ ಬಾಲು ರವರಲ್ಲಿ ಇದ್ದುದ್ದಷ್ಟೇ ಅಲ್ಲಾ, ಸ್ವತಹ ಕೇಶವಮೂರ್ತಿಯವರಲ್ಲೂ ಹಾಗೂ ಚಂದ್ರಕುಮಾರ್ ರವರಲ್ಲೂ ಇತ್ತು. ಇರುವ ತಾಂತ್ರಿಕ ಸವಲತ್ತುಗಳನ್ನು ಔಚಿತ್ಯವಾಗಿ ಬಳಸಿ ಹೇಮಂತ್ ಕುಮಾರ್ ಮತ್ತು ಅವರ ತಂಡ ಇರುವ ಹನ್ನೆರಡು ಹಾಡುಗಳಲ್ಲೇ ಉತ್ತಮ ಸ್ಥಾನಕ್ಕೆ ನಿಲ್ಲಿಸಿದರು.
         ಒಟ್ಟು ಹನ್ನೆರಡು ಹಾಡುಗಳನ್ನು ಸಿದ್ಧಪಡಿಸಿಕೊಂಡು ‘ಭಾವಗುಚ್ಚ’ ಎನ್ನುವ ಹೆಸರನ್ನು ಇಟ್ಟಿದ್ದು ಆಯಿತು. ಸಿ.ಡಿ ಗಳನ್ನು ಪ್ರಿಂಟ್ ಮಾಡಿಸಬೇಕಾಗಿತ್ತು. ಸ್ವತಹ ಚಂದ್ರಕುಮಾರ್ ರವರು ಮಾರ್ಗದರ್ಶನ ಮಾಡಿದರು. ಅಂತೂ ಸಿ.ಡಿ ಯನ್ನು ಎಲ್ಲರ ನೆರವಿನಿಂದ ಸಮಾಜದಲ್ಲಿ ಹೆಸರು ಮಾಡಿದ ವ್ಯಕ್ತಿಗಳಿಂದ ಬಿಡುಗಡೆ ಮಾಡಿಸಿದೆವು. ಚಂದ್ರಕುಮಾರ್ ರವರು ‘ಇಷ್ಟು ದಿನ ಸಂಗೀತ ಕ್ಷೇತ್ರದಲ್ಲಿದ್ದು ನಾನೇನೂ ಮಾಡಲಿಕ್ಕಾಗಿಲ್ಲ. ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ಸಮುದಾಯದಲ್ಲಿರುವ ಯಾರೆಲ್ಲಾ ವ್ಯಕ್ತಿಗಳಿಗೆ ಸಂಗೀತ ಇನ್ಸ್ಟ್ರುಮೆಂಟ್ ನುಡಿಸಲು-ಬಾರಿಸಲು ಬರುತ್ತದೆಯೋ ಅವರನ್ನೆಲ್ಲಾ ಸೇರಿಸಿ ಹೊಸದಾದ ರೀತಿಯಲ್ಲಿ ರಾಗ ಜೋಡನೆ ಮಾಡಿ ಜುಗಲ್ಬಂಧಿ ಕಾರ್ಯಕ್ರಮವನ್ನ ಏರ್ಪಡಿಸಬೇಕು. ನೋಡೋಣ ಆಗುತ್ತದೋ ಇಲ್ಲವೋ, ಒಟ್ನಲ್ಲಿ ಪ್ರಯತ್ನ ಮಾಡಿಯೇಮಾಡ್ತೀನಿ.’ ಎಂದು ನಿಖರತೆಯಲ್ಲೇ ತಮ್ಮ ಮನದ ಅಭಿಲಾಶೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
         ಕಾಲನಿಗೆ ಇವರ ಅಭಿಲಾಶೆಯನ್ನು ಪೂರ್ತಿಗೊಳಿಸಲು ಮನಸ್ಸು ಇರಲಿಲ್ಲವೇನೋ ಅನಿಸುತ್ತೆ. ಅದಕ್ಕಾಗಿಯೇ ಅವರನ್ನು ತನ್ನ ಲೋಕದೊಳಕ್ಕೆ ದಿಡೀರ್ನೆ ಎಳೆದುಕೊಂಡು, ಒಡನಾಡಿಗಳಿದ್ದ ಲೋಕದ ಜನರಲ್ಲಿ ನೆನಪಾಗಿಸಿಬಿಟ್ಟ ಆತನು. ಈಗಲೂ ಇವರು ಹಾಡಿದ ಹಾಡನ್ನು ಪದೇಪದೆ ಕೇಳುವಾಗ ಅಂದು ರೆಕಾರ್ಡಿಂಗ್ ಮಾಡುವಾಗ ಅವರು ತೋರುತ್ತಿದ್ದ ತಾಳ್ಮೆ, ದ್ವನಿಪರೀಕ್ಶೆಯನ್ನು ಮಾಡುವಾಗ ಅವರು ಗಾಯಕರಿಗೆ ಹೇಳುತ್ತಿದ್ದ ಪರಿಹಾರಗಳು ಮತ್ತು ಭಾವಗುಚ್ಚ ಸಿ.ಡಿ ಲೋಕವಾಗುವ ತನಕ ಅವರು ನೀಡುತ್ತಿದ್ದ ಮಾರ್ಗದರ್ಶನ ಎಲ್ಲವೂ ನೆನಪಾಗುತ್ತಿರುತ್ತದೆ. ಇದರ ಜೊತೆಗೆ ಇಷ್ಟೆಲ್ಲಾ ನೆರವು ನೀಡಿದಂತಹ ಅನುಭವಿಗಳನ್ನು ಹಾಡಲು ತಡೆದುಬಿಟ್ಟಿದ್ದರೆ ಯಾರೊಬ್ಬರೂ ನನ್ನನ್ನು ಕ್ಷಮಿಸುತ್ತಿರಲಿಲ್ಲವೇನೋ ಎನ್ನುವ ಪಾಪಪ್ರಜ್ಞೆ ನನ್ನಲ್ಲಿ ಅಳಿಯದೆ ಉಳಿದುಬಿಡುವ ಸಂಭವವಿತ್ತು. ಸಧ್ಯ ನನ್ನಿಂದ ಆ ರೀತಿಯ ತಪ್ಪು ಆಗಲಿಲ್ಲವಲ್ಲಾ ಅನ್ನುವ ಸಮಾಧಾನ ಮಾತ್ರ ನನ್ನಲ್ಲಿ ಉಳಿದುಕೊಂಡಿದೆ.
         "ಯಾರು ಯಾವುದಕ್ಕಾಗಿ ತುಡಿಯುತ್ತಿರುತ್ತಾರೋ ಅವರು ಅದರಲ್ಲೇ ಬೆರೆತು ಇತರರಿಗೆ ಬೆಳಕಾಗುತ್ತಾರೆ" ಅಂತ ಅದಾವ ವ್ಯಕ್ತಿ ಅಂದದ್ದೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಹೇಳಿಕೆಯು ಇವರಿಗೂ ಅನ್ವಯವಾಗಿದೆ, ಪ್ರತಿಯೊಬ್ಬ ಸಾಧಕರಿಗೂ ಅನ್ವಯವಾಗುತ್ತದೆ. ಇದೇ ಹೇಳಿಕೆಯು ಸಾಧನೆಯ ಮೆಟ್ಟಿಲನ್ನು ಏರಲು ಇರಬೇಕಾದ ಪ್ರೇರಣೆಯ ಹಿಂದಿನ ಶಕ್ತಿ ಅನ್ನುವ ದೃಢ ನಿಲುವು ಚಂದ್ರಕುಮಾರ್ ರವರೊಂದಿಗಿನ ಇಷ್ಟು ದಿನದ ಒಡನಾಟದಿಂದ ನನ್ನಲ್ಲಿ ಮೂಡಿದೆ ಮತ್ತು ಗಟ್ಟಿಗೊಳ್ಳುತ್ತಲೂ ಇದೆ.




ಗಾಂದಿ ಕೇಳೋರಿಲ್ಲ; ಸೇಂದಿ ಮಾತಾಡೋರೇ ಎಲ್ಲ


(k.s ಪುಟ್ಟಣ್ಣಯ್ಯನವರು ವಿದಾನಸಬೆಯಲ್ಲಿ ಒಂದು ದಿನ ಹೇಳಿದ ಕೆಲವು ಹೇಳಿಕೆಯನ್ನು ಆದರಿಸಿ ಬರೆದ ಹಾಡು)

ಡಾಕ್ಟ್ರು ಪ್ರತಿಬಟನೆ ನಡ್ಸುದ್ರೆ ಕರ‍್ದು ಮಾತಾಡ್ತೀರಿ
 ಹೆಂಡುದ್ ಅಂಗ್ಡಿ ಬಾಗ್ಲು ಹಾಕಿದ್ರೆ ಏನ್ ಸಮಸ್ಯೆ ಅಂತೀರಿ
ಗಾಂದಿ ಪೋಟೊ ಇಟ್ಕೊಂಡು ಕೂರೋ ರಯ್ತ್ರು ನಿಮ್‌ ಕಣ್ಗೆ ಬೀಳೋದೇ ಇಲ್ಲ
 ಗಾಂದೀನ್ ಮಾತಾಡ್ಸೋರು ಯಾರೂ ಇಲ್ಲ; ಸೇಂದೀಯಲ್ ಮಾತಾಡೋರೇ ಎಲ್ಲ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
 ಗಾಂದೀನ್ ಮಾತಾಡ್ಸೋರು ಯಾರೂ ಇಲ್ಲ; ಸೇಂದೀಯಲ್ ಮಾತಾಡೋರೇ ಎಲ್ಲ

ಸೂಟು ಹಾಕ್ಕೊಂಡು ಬರೋ ಅಮೇರಿಕ್ದೋರ‍್ಗೆ ಕರ‍್ದು ನಮ್ ನೆಲಾನ್ ಕೊಡ್ತೀರಿ.
ರಾಜ್ಯುದ್ ಹಳ್ಳಿಗಳ್ಗೆ ಕಂದಾಯ ಗ್ರಾಮ್ದ ಸ್ತಾನ್ಮಾನ ನೀಡ್ರಿ ಅಂದ್ರೆ, ಇಲ್ದ ನೆಪ ಹೇಳ್ತೀರಿ
ಗುಡ್ಸ್ಲೇ ಇರದ ಕರ‍್ನಾಟಕುದ್ ಬಗ್ಗೆ ಮಾತಾಡ್ತೀರಿ
ನಾನೂರ್ ಮನೆ ಕೇಳುದ್ರೆ ನಾಲ್ಕು ಮನೆ ಕೊಡ್ತೀರಿ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ನಾನೂರ್ ಮನೆ ಕೇಳುದ್ರೆ ನಾಲ್ಕು ಮನೆ ಕೊಡ್ತೀರಿ

ಪಟ್ಟಣದ ಜನಕ್ಕೆ ದಿನ್ದಿನಾಲು ತಲ್ತಲೆಗು ನೂರ‍್ಮೂವತ್ತಯ್ದ್ ಲೀಟ್ರು ನೀರು ಕೊಡ್ತೀವಿ ಅಂತೀರಿ
ನಮ್ ಹಳ್ಳಿ ಜನಕ್ಕೆ ಯಾಕೆ ದಿನ್ದಿನಾಲು ತಲ್ತಲೆಗೆ 85 ಲೀಟ್ರು ನೀರ್ನ ಕೊಡ್ತೀರಿ
ಹಾಲು-ನೀರು ಎಲ್ಲಾ ಲೀಟ್ರುಗಟ್ಲೆ ಪಟ್ಣುದೋರ್ಗೇ ನೋಡ್ರಿ
ನಮ್ ಹಳ್ಳಿಗಳಿಂದ್ ಎಲ್ಲಾ ಕೀಳ್ತಾವ್ರೇ ನೋಡ್ರಿ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ನಮ್ ಹಳ್ಳಿಗಳಿಂದ್ ಎಲ್ಲಾ ಕೀಳ್ತಾವ್ರೇ ನೋಡ್ರಿ

ಹಳ್ಳಿಗಳಲ್ಲಿ ಚರಂಡಿ ಮಾಡೋದು ತಾಲ್ಲೂಕು ಪಂಚಾಯ್ತಿ.
ಅದ್ರ ಮೇಲೆ ದಾರಿ ಮಾಡೋದು ಜಿಲ್ಲಾ ಪಂಚಾಯ್ತಿ.
ಚರಂಡಿಗೆ ನೀರು ಬಿಡೋದು ಗ್ರಾಮ್ ಪಂಚಾಯ್ತಿ.
ವರ್ಶ್ದಿಂದ ಪಂಚಾಯ್ತಿಗಳ್ ಕೆಲ್ಸ ನಿಂತಲ್ಲೇ ನಿಂತವೆ
ಮರಿ ಕದ್ದು ಪಾಲು ಹಕ್ಕೊಂಡ್ರಂತೆ. ಹಂಗ್ ಆಗಯ್ತೆ ನೋಡ್ರಪ್ಪೋ ಇವ್ರ್ ಕೆಲ್ಸ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ಮರಿ ಕದ್ದು ಪಾಲು ಹಕ್ಕೊಂಡ್ರಂತೆ. ಹಂಗ್ ಆಗಯ್ತೆ ನೋಡ್ರಪ್ಪೋ ಇವ್ರು ಮಾಡೋ ಕೆಲ್ಸ

ಕನ್ನಡ ಭಾಷೆನ್ ಉಳಿಸಿ ಅನ್ನೋದು, ಕಾನ್ವೆಂಟ್‌ ಶಾಲೆಗೆ ಪರ್‌ಮಿಶನ್‌ ಕೊಡೋದು,
ಮದ್ಯಪಾನ ಆರೋಗ್ಯಕ್ಕೆ ಕೆಟ್ಟುದ್ದು ಅನ್ನೋದು, ಹೆಂಡ ಮಾರೋಕೆ ಲೈಸೆನ್ಸ್‌ ಕೊಡೋದು
ಹವ್ದ್ ಅಲ್ವೆ ಸರ್ಕಾರುದ್ ನೀತಿ?
ದಿಟನೇ ತಾನೆ ನಾ ಹೇಳಿದ್ದು?

ಭೂಮಿ ಜ್ಞಾನ ಇಲ್ದೋರು ಬೂಮ್ಗೆ ಬೆಲೆ ಕಟ್ತಾರೆ
ಆ ಪಕ್ಶುದ್ ಸರ್ಕಾರ ರಯ್ತರನ್ ಬಿಸ್ಲುಗೆ ತಳ್ತು
ಈ ಪಕ್ಶುದ್ ಸರ್ಕಾರ ಸುಗ್ರೀವಾಜ್ಞೆಯಿಂದ ರಯ್ತರನ್ ಬೆಂಕಿಗೆ ನೂಕ್ತು
ಯಾರ್ ಹತ್ರ ಹೇಳೋಣ ನಮ್ ಸಮಸ್ಯೆಯ?
ನೀವೇ ಹೇಳಿ
ಯಾರ್ ಹತ್ರ ಹೇಳೋಣ ನಮ್ ಸಮಸ್ಯೆಯ?

ಬನ್ನಿರಿ ಬನ್ನಿರಿ ನಾಡ ನಾಡಿಗಳೆ
ಒಗ್ಗಟ್ಟಲ್ಲಿ ಹೆಜ್ಜೆ ಹಾಕೋಣ,
ಎಡ ಬಲ ಬಿಡೋಣ,
ನೇರ ದಾರಿಯಲ್ಲಿ ಸಾಗೋಣ,
ಏಳಿಗೆಯ ಹೊಂದೋಣ

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

||ಪ|| ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ
    ||1|| ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ
ಸೊಗಸನು ನೀ ಹಡಿವೆ, ಗರಗಸವ ನಾ ಹಿಡಿವೆ
ಸುಕದುಕ್ಕದಲಿ ನೀ ಚಿಗುರುತ್ತಲೇ ಉಳಿವೆ, ಸೊಕ್ಕುಸಿಕ್ಕುಗಳಲ್ಲಿ ನಿನ್ನನ್ನು ಚಿವುಟುತ್ತಾ ನಾ ಬದುಕುತ್ತಲೇ ಅಳಿವೆ
ನೀನು ಅಳಿಯದೆ ಬೆಳಗುವ ತಾರೆ, ನಾನು ಅಳಿಯುವ ತಳುಕಿನ ತಾರೆ
ನನ್ನ ಮೊರೆಯ ಆಲಿಸು ತಾಯೇ
ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ
    ||2|| ಹಲತನಗಳ ಬಲೆಯಲ್ಲಿ ಒಗ್ಗಟ್ಟಿನದ್ದು ನಿನ್ನಯ ಉಸಿರು, ಹಸಿರು
ಮೇಲು-ಕೀಳುಗಳ ಕೆಂಡದ ಬಲೆಯಲ್ಲಿ ಬಿಕ್ಕಟ್ಟಿನದ್ದು ನನ್ನಯ ಕೆಸರು, ಪಿಸುರು
ಬಾಳ ಪಯಣಕ್ಕೆ ನಿನ್ನಯ ನಡಿಗೆ, ಗೋಳಪಯಣಕ್ಕೆ ನನ್ನಯ ನಡಿಗೆ
ನನ್ನದೇನೂ ಸರಿಯಿಲ್ಲ, ನಿನ್ನತ್ತ ನನಗೆ ಸರಿದುಬರಲು ಆಗುತ್ತಿಲ್ಲ
ಇದಕ್ಕೆ ದಯವಿಟ್ಟು ತಾಯೇ
ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ
    ||3|| ಕೊಳೆತಾಗಲೂ ಹೋರಾಟದಲ್ಲೇ ಪುಟಿದೇಳುವೆ ನೀನು, ಹೋರಾಟದಲ್ಲೇ ಕೊಳೆತು ಪುಟಿದುಬೀಳುವೆ ನಾನು
ಸಿಪ್ಪೆ ತೊಪ್ಪೆಯ ತಿಂದರೂ ಅರಗಿಸಿಕೊಳ್ಳುವ ಗಟ್ಟಿಗಿತ್ತಿ ನೀನು, ಸೊಪ್ಪು ಗೆಡ್ಡೆಯ ತಿಂದರೂ ಬೆಳೆಯದ ಗಬ್ಬು ಗೊಡ್ಡು ನಾನು
ನನ್ನ ತಪ್ಪೆಲ್ಲವು ನನ್ನ ಸರಿಯ ಗುರುತು, ನಿನ್ನ ಸರಿಗಳೆಲ್ಲವು ನಿನ್ನ ಸಿರಿಯ ಗುರುತು
ನನ್ನಯ ಮೋಸದ ಬೇರುಗಳನ್ನು ನಿನ್ನ ಕಡೆಗೆ ಚಾಚಿದರೂ, ನೀನು ನಿನ್ನತನವ ಕಳೆದುಕೊಳ್ಳಲಾರದ ತಾಯೇ
ನನ್ನಲ್ಲಿರುವ ಕೇಡುಗಳನ್ನು ಇನ್ನಿಲ್ಲವಾಗಿಸು/ ನನ್ನನ್ನು ಸುಟ್ಟು ಹಾಕು
ಆಗದಿದ್ದರೆ ದಯವಿಟ್ಟು ತಾಯೇ
ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ
-----