ಮನುಜ ಹಿಂಗೆ ಮಾಡಿ ನೋಡ


||ಪ|| ಮನುಜ ಹಿಂಗೆ ಮಾಡಿ ನೋಡ
ನೀನು ಮುಕುತಿ ಪಡೆವೆ ನೋಡ

||1|| ಜಂಬ ತೋರಿ ಬದುಕ ಬ್ಯಾಡ
ಇರುಳ ಒಳಗೆ ಬದುಕ ಬ್ಯಾಡ
ಅರಿವ ಹಂಚಿ ಬದುಕಿ ನೋಡ
ನಲಿವ ನೀನು ಪಡೆವೆ ನೋಡ

||2|| ಹಣದ ಹಿಂದೆ ಓಡ ಬ್ಯಾಡ
ಸುಮ್ನೆ ಕುಂತು ಇರಲು ಬ್ಯಾಡ
ಬುದ್ದಿ ಬಳಸಿ ದುಡಿದು ನೋಡ
ಮನಕೆ ಹರುಶ ಪಡೆವೆ ನೋಡ

||3|| ಸುಳ್ಳು ನಂಜು ಮುಟ್ಟ ಬ್ಯಾಡ
ಬೇದ ಮಾಡಿ ಸಾಯ ಬ್ಯಾಡ
ದಿಟದ ಹೆಜ್ಜೆ ಹಾಕಿ ನೋಡ
ತಿರುಳ ಬದುಕ ಪಡೆವೆ ನೋಡ

||4|| ಸುಮ್ನೆ ಹೊತ್ತ ಕಳೆಯ ಬ್ಯಾಡ
ಕಳೆಯ ತಿಂದು ಕೊಳೆಯ ಬ್ಯಾಡ
ಗುರಿಗೆ ಕಣ್ಣು ನೆಟ್ಟಿ ನೋಡ
ಯಶವ ಪಡೆವೆ ನೀನು ನೋಡ

||5|| ಹುಚ್ಚು-ಕಿಚ್ಚು ಹಚ್ಚ ಬ್ಯಾಡ
ದಿಗಿಲ ಕದವ ತೆರೆಯ ಬ್ಯಾಡ
ಸ್ನೇಹ ಜೀವಿ ಆಗಿ ನೋಡ
ಮುಕ್ತಿ ಪಡೆವೆ ನೀನು ನೋಡ

ಉತ್ತರ ಹೇಳಿರೋ ಅವನ ಸತ್ಯದ ಬುಗ್ಗೆಯ ಪತ್ತೆಮಾಡಿರೋ



(ಉತ್ಪಲಮಾಲಾ ವ್ರುತ್ತದಲ್ಲಿ)

ಉತ್ತರ ಹೇಳಿರೋ ಅವನ ಸತ್ಯದ ಬುಗ್ಗೆಯ ಪತ್ತೆಮಾಡಿರೋ

ಆಗಸದಲ್ಲಿ ಸೂರ್ಯನಿಗೆ ಅಡ್ವಿರೊ ಗೋಡೆಯ ಕಂಡು ಹೇಳಿರೋ
ಬೂಮಿಯೊಳಕ್ಕೆ ನೀ ತೆರಳಿ ಮಾಗುವೆಯೋ ನರನೇ ತಿಳಿಸ್ಬಿಡೋ
ಗಾಳಿಯ ಹಿಡ್ದು ನಾವ್ ಉಸಿರು ಇಲ್ಲದೆ ಬಾಳಲು ಬಿಡ್ಸಿ ಹೇಳಿರೋ
ಹೂವು ನಗೋದ ಹೇಳಿಕೊಡು ಮಾನವ ಬೇಡದ ಜಾಣ್ಮೆ ಬೇಡವೋ

ಸಾವಿಗೆ ಸೆಡ್ಡುಹೊಡ್ದವರ ಹೆಜ್ಜೆಯ ತೋರಿಸು ಪೂಜೆಮಾಡುವೇನ್
ಕಾಣದ ಬೆಂಕಿಯಿಂದ್ ಬಿಡಿಸು ನಮ್ಮನು ಮಾನವ ಪೂಜೆಮಾಡುವೇನ್
ಜಂಬವ ತೋರಿ ನೀ ಒಲವ ಬಿತ್ತದೆ ಮೋಸವ ಬೆಳ್ದೆ ಹೇಗೆ ಹೇಳ್
ಆಕಳು ನೀಡುವಂತ ಸಿರಿ ನೀಡುವ ಜಾಣ್ಮೆಯ ತೋರುಮನ್ಶನೇ