ಒಲವಿನ ಅಮಲಿನ ಹಳೇಬೀಡು

ಬೆಡಗಿನ ಕಾನನ
ವಯ್ಯಾರದ ತೋರಣ
ಸಡಗರದಿ ಕೂಡಿದ ಒಲವಿನ ಅಮಲಿನ ಕಲೆಯ ಬಲೆ ಹಳೇಬೀಡು.

ರತಿ ಮನ್ಮತ ಸೇರಿ
ಒಲವಿನುಳುಮೆಯ ಮಾಡಲು ತೊಡಗಿ
ನೋಡಿದವರ ಕಣ್-ಮನ ನೆಲಕೆ
ಒಲುಮೆಯ ಬೀಜವ ಬೆಸೆದು
ನಲಿವನು ನಿಮಿರಿಸುವ ಸೋಜಿಗವ ಮಾಡುತಿಹರು.

ಒಲವಿನ ಲೀಲೆಯ
ಸಲೀಲದಿ ತೋರಿಸಿ
ರೋಮದ ಅಂಚಿಗೆ ರೋಮಾನ್ಚನವ ಹೆಣೆದುಕೊಂಡು
ನೆಮ್ಮದಿಯ ಮುಗಿಲಿಗೆ ಕಯ್ಹಿಡಿದು ಕರೆದೊಯ್ಯಲು
ಶಿಲ್ಪಿಗಳ ಅಣತಿಯಂತೆ ಇಲ್ಲಿ ನಿಂತಿಹರು ಕಲೆಯ ಬಾಲೆಯರು.

ಬ್ರೈಲ್‌ ಲಿಪಿ, ಸಿರಿಭೂವಲಯ ಮತ್ತು ಯುನಿಕೋಡ್‌ ಶಿಷ್ಠತೆ

ಲೂಯಿ ಬ್ರೈಲ್ ರವರ ಕುರಿತು ನಿಮಗೆ ಜಾಲತಾಣಗಳಲ್ಲಿ ಮಾಹಿತಿ ದೊರಕುತ್ತದೆ. ಇಲ್ಲಿ ನಾನು ನಿಮಗೆ ಬ್ರೈಲ್ ಪರಿಕಲ್ಪನೆಯ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.
ಇಷ್ಟವಾದರೆ ಪರಿಚಯದವರೊಂದಿಗೂ ಹಂಚಿಕೊಳ್ಳಿರಿ.

ಬ್ರೈಲ್ ಲಿಪಿಯು ಚೌಕದೊಳಗೆ ಆರು ಚುಕ್ಕಿಗಳನ್ನು ೬೩ ಕಾಂಬಿನೇಶನ್ಗಳಲ್ಲಿ ಅಕ್ಷರಗಳನ್ನು ಸಮ್ಯೋಜಿಸಿರುವ ಒಂದು ವ್ಯವಸ್ಥಿತ ಲಿಪಿಯಾಗಿದೆ. ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಈ ಲಿಪಿಯ ಮೂಲಕ ಸಂವಹನ ಮಾಡಬಹುದಾಗಿದೆ.
ಇನ್ನೂ ನಿಮಗೆ ಸುಲಭವಾಗಿ ತಿಳಿಸಬೇಕೆಂದರೆ, ನಿಮಗೆ ಕುಮುದೇಂದು ಮುನಿ ಬರೆದಿರುವ ಸಿರಿಭೂವಲಯ ಎಂಬ ಕನ್ನಡದ ಅಂಕ ಕಾವ್ಯ ಗೊತ್ತಿದ್ದರೆ ಬ್ರೈಲ್ ಲಿಪಿಯನ್ನು ಸುಲಭವಾಗಿ ಗ್ರಹಿಸಬಹುದಾಗಿದೆ.
ಸಿರಿಭೂವಲಯ ಗ್ರಂಥವು 1 ರಿಂದ 64 ಅಂಕಿಗಳನ್ನು ಬಳಸಿ ರಚಿಸಲಾಗಿದೆ. 27×27 729 ಚೌಕಾಕಾರದ ಮನೆಗಳಲ್ಲಿ ಜೋಡಿಸಿ ಒಂದು ಚಕ್ರ ರಚಿಸಲಾಗಿದೆ. ಇಂತಹ 1270 ಚಕ್ರಗಳೇ ಈ ಗ್ರಂಥವೆನಿಸಿದೆ. ಅಂಕಿಗಳು ಹೊರಹೊಮ್ಮಿಸುವ ಧ್ವನಿಗಳಿಂದ ಸಾಹಿತ್ಯ ಹೊರಹೊಮ್ಮುತ್ತದೆ. ಗ್ರಂಥದಲ್ಲಿ ಹೇಳಿರುವಂತೆ ಒಂದು ರೀತಿಯಿಂದ ಓದಿದರೆ ಕನ್ನಡ ಸಾಂಗತ್ಯ ಛಂದಸ್ಸಿನಲ್ಲಿ ಸಾಹಿತ್ಯವಾಗುತ್ತದೆ.ಅನೇಕ ತೆರನಾಗಿ ಈ ಚಕ್ರಗಳನ್ನು ಓದಬಹುದು. ಚಕ್ರದ ಅಂಕಿಗಳನ್ನು ಅಕ್ಷರಗಳನ್ನಾಗಿ ಪರಿವರ್ತಿಸಿ ಬಂದ ಕನ್ನಡ ಸಾಂಗತ್ಯ ಪದ್ಯ ಬರೆದುಕೊಂಡು ಪ್ರತಿ ಪದ್ಯದ ಮೊದಲ ಅಕ್ಷರ ಓದುತ್ತಾ ಹೋದರೆ ‘’ಪ್ರಾಕೃತ ಭಾಷೆ’’ ಸಾಹಿತ್ಯ ರಚಿತವಾಗುತ್ತದೆ. ಪ್ರತಿ ಪದ್ಯದ ಮಧ್ಯಾಕ್ಷರ ಓದುತ್ತಾ ಹೋದರೆ ‘’ಸಂಸ್ಕೃತ ಭಾಷೆ’’ ಸಾಹಿತ್ಯವಾಗುತ್ತದೆ. ಹೀಗೆ ಅನೇಕ ರೀತಿಯ ಅಕ್ಷರ ಸಂಯೋಜನೆಯಿಂದ ತಮಿಳು, ತೆಲುಗು, ಮರಾಠಿ ಇತ್ಯಾದಿ ಹಲವು ಭಾಷಾ ಸಾಹಿತ್ಯ ರಚನೆಯಾಗುತ್ತದೆ.
ಬ್ರೈಲ್ ಲಿಪಿಯೂ ಕೂಡ ೬೩ ಕಾಂಬಿನೇಶನ್ ಹೊಂದಿದ್ದು, ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಅಂಕೀಯ ಸಂಕೇತವಿರುತ್ತದೆ.ಉದ: ಅ ಅಕ್ಷರಕ್ಕೆ ೧, ಆ ಅಕ್ಷರಕ್ಕೆ ೩ ೪ ೫ ಹೀಗೆ. ಇದೇ ಅಂಕೀಯ ಸಂಕೇತವು ಭಾರತೀಯ ಎಲ್ಲಾ ಭಾಷೆಗೂ ಅನ್ವೈಸುತ್ತದೆ.ಇಂಗ್ಲೀಶ್ ಭಾಷೆಯ ಅಕ್ಷರಗಳಿಗೆಮಾತ್ರ ಅಂಕೀಯ ಸಂಕೇತವು ಬೇರೆಯಾಗಿರುತ್ತದೆ. ಕನ್ನಡದ ಬ ಅಕ್ಷರಕ್ಕೆ ೧ ೨ ಎಂಬ ಅಂಕೀಯ ಸಂಕೇತವಿದ್ದರೆ, ಇಂಗ್ಲೀಶ್ನ b ಅಕ್ಷರಕ್ಕೆ ೧ ೨ ಆಗಿರುತ್ತದೆ.
ನಿಮಗೆ ಯುನಿಕೋಡ್ ಶಿಷ್ಠತೆಯ ಕುರಿತು ಮಾಹಿತಿ ಇದ್ದರೂ ಕೂಡ ಬ್ರೈಲ್ ಲಿಪಿಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬಹುದು.
ಯುನಿಕೋಡ್ನ 0C80 ಸಂಕೇತದಿಂದ 0CFF ಸಂಕೇತದ ವರೆಗಿನ ಅಕ್ಷರಗಳು ಕನ್ನಡಕ್ಕೆ ಅಳವಡಿಸಿರುವಂತೆ, ಪ್ರತೀ ಭಾಷೆಗೂ ಯುನಿಕೋಡ್ನಲ್ಲಿ ಸಂಕೇತವನ್ನು ಅಳವಡಿಸಿರುವಂತೆ ಬ್ರೈಲ್ ಲಿಪಿಯಲ್ಲೂ ಕೂಡ ಪ್ರತಿಯೊಂದೂ ಬಾಷೆಯ ಅಕ್ಷರಗಳಿಗೂ ಒಂದೊಂದು ಸಂಕೇತವನ್ನು ಅಳವಡಿಸಲಾಗಿರುತ್ತದೆ.
ಈ ಲಿಪಿ ಕೂಡ ಈ ಹಿಂದೆ ಸೈನಿಕ ದಳಗಳ ಗುಪ್ತ ಸಂವಹನಕ್ಕೆ ಬಳಕೆಯಾಗುತ್ತಿತ್ತು. ಈಗಲೂ ನಕ್ಷೆಗಳನ್ನು ಹಂಚಿಕೊಳ್ಳುವಾಗ ಈ ಲಿಪಿಯನ್ನು ತುಸು ಮಾರ‍್ಪಾಟುಗೊಳಿಸಿ ಬಳಸಲಾಗುತ್ತಿದೆ. ಸಾಮಾನ್ಯವಾಗಿ ನೀವು ಅಕ್ಷರಗಳನ್ನು ಬರೆಯುವಾಗ ಪೆನ್ನು ಪೇಪರ‍್ ಬಳಸುವ ಹಾಗೆ ಬ್ರೈಲ್ ಲಿಪಿಯನ್ನು ಬಳಸಲು ಅಂಧರಾದ ನಾವು ಸ್ಟೈಲಸ್, ಪೇಪರ‍್ ಮತ್ತು ಇಂಟರ‍್ ಪಾಯ್ಂಟ್ ಎಂಬ ಸ್ಲೇಟನ್ನು ಬಳಸುತ್ತೇವೆ.
ಸ್ಲೇಟಿನಂತೆ ಇರುವ ಇಂಟರ‍್ ಪಾಯ್ಂಟ್ ನಡುವೆ ಪೇಪರ‍್ ಹಾಕಿ, ಸ್ಲೇಟಿನಲ್ಲಿರುವ ಚೌಕದ ಮೂಲಕ ಚೂಪಾದ ಮೊಳೆಯಂತೆ ಕಾಣುವ ಸ್ಟೈಲಸ್ನಿಂದ ಪೇಪರ‍್ಗೆ ಚುಚ್ಚಿದಾಗ ಪೇಪರ‍್ನಲ್ಲಿ ಚುಚ್ಚಿದ ಉಬ್ಬು ಮೂಡುತ್ತದೆ. ನಮ್ಮ ಕೈಗೆ ಸೊಳ್ಳೆ ಕಡಿದಾಗ ಸಣ್ಣ ಗುಳ್ಳೆ ಮೂಡುವುದೋ ಹಾಗೆ ಪೇಪರ‍್ನ ಸ್ವರೂಪಕ್ಕೆ ತಕ್ಕಂತೆ ಮತ್ತು ಸ್ಟೈಲಸ್ನಲ್ಲಿರುವ ಮೊಳೆಯ ಸ್ವರೂಪಕ್ಕೆ ತಕ್ಕಂತೆ ಉಬ್ಬಿದ ಚುಕ್ಕೆ ಮೂಡುತ್ತದೆ.
ಈಗೀಗ ಆಧುನಿಕ ತಂತ್ರೋಪಕರಣಗಳು ಕೂಡ ಬ್ರೈಲ್ ಲಿಪಿಯನ್ನು ಒಳಗೊಂಡು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಲಿಫ್ಟ್,ಎ.ಟಿ.ಎಮ್, ರೈಲು, ವಿಮಾನ, ಬಸ್ಸು, ಎಲೆಕ್ಶನ್ ಬಾಕ್ಸ್ ಹೀಗೆ ದಿನೋಪಯೋಗಿ ಯಂತ್ರಗಳಲ್ಲಿ ಬ್ರೈಲ್ ಲಿಪಿ ಬಳಕೆಯಾಗುತ್ತಿದೆ.ಮ್ಯಾಪ್, ಚಿತ್ರಗಳನ್ನು ಕೂಡ ಬ್ರೈಲ್ ಲಿಪಿಯಲ್ಲಿ ಮೂಡಿಸಬಹುದು.