ಬಿಕ್ಶಕರೊಂದಿಗೆ ಸಮಾಜಕಾರ‍್ಯ ಆಚರಣೆಯ ಅನುಬವಾತ್ಮಕ ದ್ರುಶ್ಟಿಕೋನಕ್ಕೆ ಸಂಬಂದಪಟ್ಟ ಕೆಲವು ಕೇಳ್ವಿಗಳು ಮತ್ತು ಹೇಳ್ವಿಗಳು


ಬೆಂಗಳೂರಿನಲ್ಲಿರುವ ನಿರಾಶ್ರಿತರ ಪುನರ‍್ವಸತಿ ಕೇಂದ್ರದಲ್ಲಿನ  ಸಮಲೋಚಕರಿಂದ ಪಡೆದ ಹೇಳ್ವಿಗಳನ್ನು ಈ ಕೆಳಗೆ ಬರೆಯಲಾಗಿದೆ.

೧. ಮಹಿಳೆಯರು ಹಾಗೂ ಪುರುಶರು ಯಾವಯಾವ ಕಾರಣಗಳಿಗಾಗಿ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆಂದು ನಿಮಗೆ ಅನಿಸಿದೆ? ಮತ್ತು ಸಮಾಜಕಾರ‍್ಯದ ಹಿನ್ನಲೆಯಲ್ಲಿ ಹೇಗೆ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದೀರಿ?
ಉ: ಮಹಿಳೆಯರು ಹೆಚ್ಚಾಗಿ ಪುರುಶರ ದವ್ರ‍್ಜನ್ಯದಿಂದ, ರೋಗ ಗ್ರಸ್ತಳಾದಾಗ ಮತ್ತು ಮಕ್ಕಳ ಅಸಡ್ಡೆತನದಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಿದ್ದಾರೆಂದು ತಿಳಿದುಕೊಂಡಿದ್ದೇನೆ.
 ಇನ್ನು ಪುರುಶರು ಕುಡಿಯುವ ಚಟ, ಮಯ್ಗಳ್ಳತನ
 ಮತ್ತು ಇತರೆ ಕಾರಣಗಳಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆ.
   ಸಮಾಜಕಾರ‍್ಯದಲ್ಲಿನ  ಆಪ್ತಸಮಾಲೋಚನೆ ಮತ್ತು ಪುನರ‍್ವಸತಿಯ ಸಯ್ದಾಂತಿಕ ಮಾರ‍್ಗದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ನಯ್ತಿಕ ಮಾತುಗಳನ್ನು ಹೇಳುವುದರೊಂದಿಗೆ ಅವರು ಮತ್ತೆ ಬಿಕ್ಶೆ ಬೇಡದಂತೆ ಮಾಡಬಹುದು.

೨. ಎಂತಹ ಬಿಕ್ಶಕರಿಗೆ ಕಡಿಮೆ ಅವದಿಯಲ್ಲಿ ಆಪ್ತಸಮಲೋಚನೆಯನ್ನು ಮಾಡುವ ಮೂಲಕ ಪುನರ‍್ವಸತಿಯನ್ನು ಕಲ್ಪಿಸಬಹುದು? ವ್ರುತ್ತಿಪರ ಬಿಕ್ಶಕರಿಗೋ ಅತವಾ ಪರಿಸ್ತಿತಿಯ  ಕಯ್ಗೊಂಬೆಯಾದವರಿಗೋ?
ಉ: ಸಮಾಜಕಾರ‍್ಯ ಕರ‍್ತ ಬಿಕ್ಶಕರೊಂದಿಗೆ ಕಾರ‍್ಯನಿರ‍್ವಹಿಸಬೇಕಾದರೆ ಈ ವ್ರುತ್ತಿಪರ ಬಿಕ್ಶಕರನ್ನು ಮನವಲಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಹೆಚ್ಚಾಗಿ ಯಾರು ಪರಿಸ್ತಿತಿಯ ಕಯ್ಗೊಂಬೆಯಾಗಿ ಅಂದರೆ, ಅನಿವಾರ‍್ಯವಾಗಿ ಬಿಕ್ಶೆ ಬೇಡುತ್ತಿರುತ್ತಾರೋ ಅವರಿಗೆ  ಕಡಿಮೆ ಅವದಿಯಲ್ಲಿ ಆಪ್ತಸಮಾಲೋಚನೆಯನ್ನು ನೀಡುವ ಮೂಲಕ ಪುನರ‍್ವಸತಿಯನ್ನು ಕಲ್ಪಿಸಬಹುದು.

೩. ಹಿರಿಯರಿಗೆ ತಿಳುವಳಿಕೆಯನ್ನು ಹೇಳುವ ಸಂದರ‍್ಬದಲ್ಲಿನ ಮುಜುಗರಕ್ಕೆ ಪರಿಹಾರ?
ಉ: ಮೊದಮೊದಲು ಎಂತಹ ವ್ರುತ್ತಿಪರ ಸಮಾಜಕಾರ‍್ಯಕರ‍್ತರಿಗೆ ತನಗಿಂತ ಹಿರಿಯರಿಗೆ  ತಿಳುವಳಿಕೆಯನ್ನು ಹೇಳುವಾಗ ಮುಜುಗರವಾಗುತ್ತಿರುತ್ತದೆ. ವ್ರುತ್ತಿಯಲ್ಲಿನ ಅನುಬವವು ಇದಕ್ಕೆ ಪರಿಹಾರ.

೪. ಬಿಕ್ಶಾಟನೆಯು ಬೂಗತ ದೊರೆಗಳಿಗೆ ಆದಾಯವನ್ನು ತರುವ ಉದ್ಯಮವಾಗಿರುತ್ತಿರುವ ಈ ಸನ್ನಿವೇಶದಲ್ಲಿ ಸಮಾಜಕಾರ‍್ಯಕರ‍್ತರು ಎದರಿಸಬಹುದಾದ ಸಂದಿಗ್ದತೆಯನ್ನು ಮತ್ತು ಇದಕ್ಕೆ ಪರಿಹಾರಕವಾಗಿ ಸಮಾಜಕಾರ‍್ಯದ ಆಚರಣೆಯಲ್ಲಿನ ಹೊಸ ಸಾದ್ಯತೆಯನ್ನು ಗುರುತಿಸಿ.
ಉ: ಬೂಗತ ದೊರೆಗಳಿಗೆ ಇದು ಒಂದು ಆದಾಯ ಮೂಲ. ಸಮಾಜಕಾರ‍್ಯಕರ‍್ತರಿಗೆ ಇಂತವರು  ಕೊಲೆ ಬೆದರಿಕೆಯನ್ನು ಹಾಕುವ ಸಾದ್ಯತೆ ಇರುತ್ತದೆ. ಇದೆ ಹೆಚ್ಚಾಗಿ ಸಮಾಜಕಾರ‍್ಯಕರ‍್ತರನ್ನು ಸಂದಿಗ್ದತೆಗೆ ಈಡು ಮಾಡುವಂತದ್ದು ಆಗುತ್ತಿದೆ.
    ಸಮಾಜಕಾರ‍್ಯ ವಿಶಯದಲ್ಲಿರುವ ವ್ಯಕ್ತಿಗತ ಕಾರ‍್ಯದ ವಿದಾನದಲ್ಲಿ ಅಪರಾದಶಾಸ್ತ್ರದ ಕೆಲವು ಸಾರವನ್ನು ಸೇರ‍್ಪಡೆ ಮಾಡಿದರೆ  ಸಮಾಜಕಾರ‍್ಯದ ಆಚರಣೆಯನ್ನು ಇನ್ನು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಇಂತಹ ಸಂದಿಗ್ದತೆಯ ಮುಕ್ತತೆಗೆ ಇದು ಒಂದು ಉತ್ತಮ ಪರಿಹಾರವಾಗುತ್ತದೆ.

೫. ಬಿಕ್ಶಕರೊಂದಿಗೆ ವ್ಯವಹರಿಸುವಾಗ ಕಂಡುಬರುವ ಸಮಾಜಕಾರ‍್ಯದ ಆಚರಣೆಯಲ್ಲಿನ ಮೂರು ಲೋಪವನ್ನು ಗುರುತಿಸಿ.
ಉ: ಸಮಾಜಕಾರ‍್ಯದ ಆಚರಣೆಯಲ್ಲಿನ ಲೋಪವೆಂದರೆ, ೧. ವ್ಯವಸ್ತೆಯ ವಿರುದ್ದ ಹೋಗದಂತೆ ಇರುವ ಮಾರ‍್ಗದರ‍್ಶನ. ೨. ವ್ಯಕ್ತಿಯು ತನ್ನದೇ ಆದ ಸಿದ್ದಾಂತಕ್ಕೆ ಅಂಟಿಕೊಂಡಿರುವುದರಿಂದ ಸಮಾಜಕಾರ‍್ಯದ ಮೂಲಕ ಅತವಾ ಇನ್ಯಾವ ವಿದಾನದ ಮೂಲಕ ಆತನಿಗೆ ತಿಳುವಳಿಕೆಯ ಮಾತನ್ನು ಹೇಳಿದರೂ ಆತನನ್ನು ಬದಲಾಯಿಸಲು ಸಾದ್ಯವಾಗದಿರೋದು. ೩. ಸಮುದಾಯದವರ ಅಸಹಕಾರವಿದ್ದರೆ ಸಮಾಜಕಾರ‍್ಯವು ಅಸ್ತಿತ್ವದಲ್ಲಿರುವುದಿಲ್ಲ.

೬. ಬಿಕ್ಶಕರೊಡನೆ  ಸಮಾಜಕಾರ‍್ಯವನ್ನು ಪರಿಣಾಮಕಾರಿಯಾಗಿ ಆಚರಿಸಲು ಪ್ರಶಿಕ್ಶಣಾರ‍್ತಿಗಳಿಗೆ ಕೆಲವು ಸಲಹೆಗಳನ್ನು ನೀಡಿ.
ಉ: ೧. ಪರಿಸ್ತಿತಿಯನ್ನು ವಿವಿದ ದ್ರುಶ್ಟಿಕೋನದ ಮೂಲಕ ವಿಶ್ಲೇಶಣೆ ಮಾಡುವ ಕವ್ಶಲ್ಯವನ್ನು ರೂಡಿಸಿಕೊಳ್ಳಬೇಕು. ೨. ಸಮಾಜಕ್ಕೆ ತನ್ನ ಕಾಣಿಕೆ ಹೇಗಿರಬೇಕು ಮತ್ತು ಅದರಿಂದ ಸಮಸ್ಯೆಯು ನಿವಾರಣೆ ಆಗುತ್ತದೆಯೇ ಎಂಬುವುದನ್ನು ಅರಿತು ಕಾರ‍್ಯ ಯೋಜನೆಯನ್ನು ಹಾಕಿಕೊಳ್ಳಬೇಕು. ೩. ಕೇವಲ ಸಮಾಜಕಾರ‍್ಯದ ವಿಶಯಕ್ಕೆ ಅಂಟುಕೊಳ್ಳದೆ ಸಾಮಾಜಿಕ ವಿಜ್ನಾನಗಳ ಅರಿವನ್ನು ಹೊಂದಬೇಕು. ೪. ಚಿಕ್ಕವರಿರಲಿ ದೊಡ್ಡವರಿರಲಿ ಅವರು ನೀಡುವ ಉತ್ತಮ ಸಲಹೆಗಳನ್ನು ಸ್ವೀಕರಿಸಿ ಅವುಗಳ  ಸಾದಕ ಬಾದಕವನ್ನು ವಿಶ್ಲೇಶಿಸಿ ಮುಂದಿನ ಹೆಜ್ಜೆಯನ್ನು ಇಡಬೇಕು.

೭. ಇಶ್ಟು ದಿನದ ವ್ರುತ್ತಿ ಅನುಬವದ ಮೂಲಕ  ನಿಮ್ಮಲ್ಲಾದ ಪರಿವರ‍್ತನೆ?
ಉ: ೧. ತಾಳ್ಮೆಯ ಮೂಲಕ ಕೆಟ್ಟ ವ್ಯವಸ್ತೆಗೆ  ಬಾಹ್ಯವಾಗಿ ಹೊಂದಿಕೊಂಡು ವ್ಯವಸ್ತೆಯನ್ನು ತಳಮಟ್ಟದಿಂದ ಸುದಾರಿಸುವ ಕವ್ಶಲ್ಯವು  ಸಮಾಜಕಾರ‍್ಯಕರ‍್ತರದಾಗಿರಬೇಕು ಎಂಬುವುದನ್ನು ತಿಳಿದುಕೊಂಡು ಕಾರ‍್ಯನಿರ‍್ವಹಿಸುತ್ತಿರುವುದು. ೨. ಸಮಾಜಕಾರ‍್ಯಕರ‍್ತ ತನ್ನ ಕಾರ‍್ಯಕ್ಕೆ ಸೀಮಿತನಾಗದೆ ಅವಶ್ಯವೆನಿಸಿದಾಗ ಇತರೆ ಕಾರ‍್ಯವನ್ನು ಕಯ್ಗೊಳ್ಳಬೇಕು ಎಂಬುವುದನ್ನು ತಿಳಿದು ಅದರಂತೆ ಕಾರ‍್ಯನಿರ‍್ವಹಿಸುತ್ತಿರುವುದು.

೩/೧೨ ಬೆಸೆದುಕೊಂಡಿರುವ ಸಂತಸ, ದುಕ್ಕ


1884 ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಹಾಗೂ 1889 ರಲ್ಲಿ ಕುದಿರಾಮ್ ಬೋಸ್ ಹುಟ್ಟಿದರು.
1979 ರಲ್ಲಿ ಹಾಕಿ ಆಟದ ರುವಾರಿ ದ್ಯಾನ್ ಚಂದ್ ತೀರಿಕೊಂಡರು.
ಬಾರತದಲ್ಲಿ ಕಟ್ಟಲೆ ಅರಿಗರ ದಿನವನ್ನಾಗಿ ಆಚರಿಸಲಾಗುವುದು.
೧೯೮೪ ರಲ್ಲಿ ಬೋಪಾಲ್ನಲ್ಲಿ ಅನಿಲದ ದುರಂತ.
ಒಟ್ಟಾರೆ ಸಂತಸ, ದುಕ್ಕ ಗಳೊಟ್ಟಿಗೆ ವಿಶ್ವ ಅಂಗವಿಕಲರ ದಿನವನ್ನೂ ಬಾರತದಲ್ಲಿ ಆಚರಿಸಲಾಗುತ್ತದೆ.

ವಿಶ್ವಸಂಸ್ತೆಯು 15% ರಶ್ಟು ಜಗತ್ತಿನಲ್ಲಿ ಅಂಗವಿಕಲರು ಇರುವುದನ್ನು ಮನಗಂಡು 1981ರ ವರ‍್ಶವನ್ನು ವಿಶ್ವ ಅಂಗವಿಕಲರ ವರ‍್ಶವನ್ನಾಗಿ ಗೋಶಿಸಿ ೧೯೯೨ ರಿಂದ ಪ್ರತಿ ವರ‍್ಶ ೩/೧೨ರ ದಿನವನ್ನು ಅಂಗವಿಕಲರ ದಿನವನ್ನಾಗಿ ಹೋಬಳಿಯಿಂದ ಇಡಿದು ವಿಶ್ವ ಮಟ್ಟದ ತನಕ ಆಚರಿಸಲು ಎಲ್ಲಾ ದೇಶಗಳಿಗೂ ಕರೆ ನೀಡಿತು. ಅಂದಿನಿಂದ ಅಂಗವಿಕಲರ ಸಮಸ್ಯೆಗಳನ್ನು, ಪರಿಹಾರಗಳನ್ನು ಹಾಗೂ ಅಂಗವಿಕಲರ ಸಾದನೆಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಹಲವು ಬಗೆಯ ಕಾರ‍್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ದಿನದ ವಿಶೇಶ:
೧. ಅಂಗವಿಕಲರ ಏಳಿಗೆಗೆ ದುಡಿದ ಅಂಗವಿಕಲರಿಗೆ ಹಾಗೂ ಅಂಗವಿಕಲರಿಗಾಗಿ ದುಡಿದ ಅಂಗವಿಕಲರಲ್ಲದ ವ್ಯಕ್ತಿಗಳ ಸಾದನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವುದು.
೨. ಅಂಗವಿಕಲರ ಪ್ರತಿಬೆಗಳ ಅನಾವರಣಗಳಿಗೆ ವೇದಿಕೆಯನ್ನು ಒದಗಿಸುವುದು.
೩. ಆಟಗಳ ಪೋಟಿಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡುವುದು.
೪. ಅಂಗವಿಕಲರ ಶಿಕ್ಶಣಕ್ಕೆ ದುಡಿಯುತ್ತಿರುವ ಶಾಲೆಗಳನ್ನು ಗುರುತಿಸಿ ರಾಜ್ಯ ಹಾಗೂ ರಾಶ್ಟ್ರ ಪ್ರಶಸ್ತಿಗಳನ್ನು ನೀಡುವುದು.
೫. ಸರ‍್ಕಾರಗಳ ಯೋಜನೆಗಳನ್ನು ವಿಮರ‍್ಶೆಗೆ ಒಳಪಡಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಾಡಿಕೊಳ್ಳುವುದು.
೬. ನೆಲದವ್ವಳ ಹಲತನವನ್ನು ಒಪ್ಪುವ ಮೂಲಕ ಅಸಮಾನತೆ ಹಾಗೂ ತಾರತಮ್ಯ ನಿಲುವುಗಳನ್ನು ತಾಳದಿರಲು ಅಂಗವಿಕಲರಲ್ಲದವರಲ್ಲಿ ಮನವಿ ಮಾಡಿಕೊಳ್ಳುವಂತಹ ನಡಿಗೆಗಳನ್ನು ಏರ‍್ಪಡಿಸುವುದು.

ಬಾರತವು Convention on the Rights of Persons with Disabilities ಗೆ ಒಪ್ಪಿಕೊಂಡು ವಿಶ್ವಸಂಸ್ತೆಯು ಅಂಗವಿಕಲರ ಏಳಿಗೆಗೆ ರೂಪಿಸುವಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿರುವಾಗಿನಿಂದ ತುಸು ಅಂಗವಿಕಲರ ಜೀವನ ಮಟ್ಟ ಏರಿಕೆ ಕಂಡಿದೆ. ವಿವಿದ ಕ್ಶೇತ್ರಗಳಲ್ಲಿಯೂ ಅಂಗವಿಕಲರ ಇರುವಿಕೆಯನ್ನು ಕಾಣಬಹುದಾಗಿದೆ.

ಸಮಾಜ ಒಳ್ಳೆಯವರೊಂದಿಗೂ ಇರುವಂತೆ ಕೆಟ್ಟವರೊಂದಿಗೂ ಇರುತ್ತದೆ. ಆದರೆ ಯಾರು ದ್ರುತಿಗೆಟ್ಟು ತಮ್ಮ ಬಾವನೆಗಳನ್ನು ಹೇಳಿಕೊಳ್ಳದೆ ಒಳಒಳಗೆ ಕೊರಗುತ್ತಿರುತ್ತಾರೋ ಅಂತವರ ನೆರವಿಗೆ ಬಾರದು ಎಂಬ ಸತ್ಯವನ್ನು ಅಂಗವಿಕಲರು ತಿಳಿದುಕೊಂಡಿದ್ದರಿಂದಲೇ ವಿಶಿಶ್ಟ ಸಾದಕರಾಗುತ್ತಿರುವುದು. ಎತ್ತುಗೆಗೆ: ಕುರುಡರು ಬಳಸುವ JAWS ಹಾಗೂ NVDA ಪರದೆ ಓದುಗ (screenreader) ಮೆದು ಜಾಣು (software) ಅಣಿಗೊಳಿಸಲು ಕುರುಡರೇ ಮೊದಮೊದಲು ತೊಡಗಿಕೊಂಡ ಬಳಿಕ ಕುರುಡರಲ್ಲದವರು ನೆರವಿಗೆ ಬಂದು ಜಯ್ವಿಕ ದ್ರುಶ್ಟಿಯ ಬದಲಾಗಿ ಚಳಕದ ದ್ರುಶ್ಟಿಯನ್ನು ನೀಡುವಲ್ಲಿ ಕೊಡುಗೆ ನೀಡಿದ್ದಾರೆ.

ಬಾರತದಲ್ಲಿ ಅಂಗವಿಕಲರ ಕಾಯ್ದೆಯನ್ನು ಜಾರಿಗೆ ತಂದು ಹತ್ತಿರ ಎರಡು ದಶಕಗಳೇ ಕಳೆದಿದ್ದರೂ, ಕಾಯ್ದೆಯು ಇಡಿಯಾಗಿ ಅನುಶ್ಟಾನವಾಗಿಲ್ಲವಾಗ್ಯೂ ಕೆಲವು ಕಟ್ಟಲೆ ಅರಿಗರು ಅಂಗವಿಕಲರ ಕಾಯ್ದೆಗಳನುಸಾರ ಅಂಗವಿಕಲರಿಗೆ ಎಲ್ಲಾ ರಂಗಗಳಲ್ಲಿ ಸವಲತ್ತುಗಳನ್ನು ನೀಡುವಂತೆ ನ್ಯಾಯಾಲಯಗಳ ಮೂಲಕ ನ್ಯಾಯವನ್ನು ಕೊಡಿಸುತ್ತಿದ್ದಾರೆ. ಇಂದು ಅಂಗವಿಕಲರು ಬೆಳಕನ್ನು ಕಂಡಿದ್ದೇ ಹವ್ದಾಗಿದ್ದರೆ ಅದು ನ್ಯಾಯಾಲಯಗಳ ಮೂಲಕವೇ ಹೊರತು ರಾಜಕಾರಣಿಗಳ ಮೂಲಕವಲ್ಲ. IAS, KAS, PDO, SDA, FDA ಗಳಾಗಿ ಕೆಲಸ ಮಾಡುತ್ತಿರುವುದು ಈ ತೆರನ ವ್ಯಕ್ತಿಗಳ ಪ್ರಯತ್ನದಿಂದ.

"ಹಕ್ಕು ಇರುವುದು ಪಡೆಯುವುದಕ್ಕೆ. ಅಂತೆಯೆ, ಕರ‍್ತವ್ಯವಿರುವುದು ಸಮಾಜಕ್ಕೆ ತಮ್ಮಿಂದಾಗುವ ನೆರವನ್ನು ನೀಡುವುದಕ್ಕೆ. ರಾಜಕಾರಣಿಗಳಲ್ಲಿ ಕಯ್ ಚಾಚುವ ಬದಲು ನ್ಯಾಯಾಲಯಗಳಲ್ಲಿ ಅನ್ಯಾಯಗಳ ಎದುರಾಗಿ ಮೊರೆ ಹೋಗುವುದು ಒಳಿತು." ಎಂದು ಆಗಾಗ ಅಂಗವಿಕಲರ ಏಳಿಗೆಗೆಂದು ದುಡಿಯುತ್ತಿರುವವರು ಆಗಾಗ್ಗೆ ಹೇಳುವ ಮಾತು.

ಕೆಲವು ಹಣಮನೆಗಳು ಅಂಗವಿಕಲರಿಗೆ ಸಾಲವನ್ನು ಕೊಡಲು ನಿರಾಕರಿಸುತ್ತಿರುವುದನ್ನು ಮನಗಂಡು ಕೇಂದ್ರ ಸರ‍್ಕಾರ ಅಂಗವಿಕಲರ ಚಳುವಳಿಗಳನ್ನು ಗವ್ರವಿಸಿ National Handicapped Finance and Development Corporation (NHFDC) ಯನ್ನು ಸ್ತಾಪಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಇದರಿಂದ ಸಾಲವನ್ನು ಪಡೆದ ಅಂಗವಿಕಲರು ಬೇರೆಯವರಿಗೂ ಕೆಲಸವನ್ನು ನೀಡಿದ್ದಾರೆ.
ಇದರ ಮಿಂಬಲೆ: www.nhfdc.nic.in/

ಅಂಗವಿಕಲರನ್ನು ಹಾಗೂ ಅಂಗವಿಕಲರಲ್ಲದವರನ್ನು ಅಂಗವಿಕಲರು ಮದುವೆಯಾಗಿ ಬಾಳ ದೋಣಿಯಲ್ಲಿ ಸಾಗುತ್ತಿದ್ದಾರೆ. ಅಂಗವಿಕಲರು ಕೂಡ ಗಂಡು-ಹೆಣ್ಣು ಹುಡುಕಾಟಕ್ಕಾಗಿ www.jeevansathi.com ತೆರನ ಮಿಂಬಲೆಯ ಸವಲತ್ತುಗಳನ್ನು ಪಡೆಯಲು ಆಗಿರುವಂತೆಯೇ ಕುಂದು ಕೊರತೆಗಳ ಬಗೆಗೆ ಚರ‍್ಚಿಸಲು www.sayeverything.org/ ಹಾಗೂ accessindia.org.in/ ತೆರನ ಮಿಂಚು ಕೂಟಗಳನ್ನು ಮಾಡಿಕೊಂಡಿದ್ದಾರೆ.

ಅಂಗವಿಕಲರು ಅಡೆ ತಡೆ ಇಲ್ಲದಂತೆ ಬದುಕಲು ಹಲವಾರು ತೆರನ ಚಳಕಗಳು ನೆರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವರು "ಯಾರ ಮೆದಳು ಕೆಲಸ ಮಾಡಲು ಸೋತಿರುತ್ತದೋ ಅಂತವರನ್ನು ಮಾತ್ರ ಅಂಗವಿಕಲರು" ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಒಟ್ಟಾರೆ  ಎಲ್ಲಾ ರಂಗಗಳಲ್ಲಿ ಸಾದನೆ ಮಾಡುತ್ತಾ ಸಂತಸ-ದುಕ್ಕ ಗಳೊಟ್ಟಿಗೆ ಅಂಗವಿಕಲರ ಬದುಕು ಸಾಗಿದೆ ಎಂದಶ್ಟೇ ಹೇಳಬಹುದು.

ಹೆಚ್ಚಿನ ಅರಿವಿಗೆ:
ರಾಜಕೀಯಕ್ಕೆ: http://en.wikipedia.org/wiki/List_of_physically_disabled_politicians
ವಿಜ್ನಾನಕ್ಕೆ: www.reddisability.org/
ಕಟ್ಟಲೆಗೆ: wwwsocialjustice.nic.in/pwdact1995.php