ಜೀವಿತದಲ್ಲಿ ಓದುಗೆಗೆ ಸಿಕ್ಕ ಮಹನೀಯ ಶ್ರೀ ಬೈರಪ್ಪ:

 

ಬೈರಪ್ಪ ರವರ ಸಾಹಿತ್ಯ ಪರಿಚಯ ಹೀಗಾಯಿತು:

ನಾನು ಶಾಲಾ ಹಂತದಲ್ಲೇ ಆಗಿರಲಿ ಅಥವಾ PUC ಹಂತದಲ್ಲೇ ಆಗಿರಲಿ ಬೈರಪ್ಪರವರ ಬರಹಗಳನ್ನು ಓದಿದವನಲ್ಲ. ಮಾಧ್ಯಮಗಳ ಮೂಲಕ ಇವರ ಹೆಸರನ್ನು ಕೇಳಿದವನಲ್ಲ. ಒಟ್ಟಾರೆ ಅವರು ಬೌದ್ಧಿಕವಾಗಿ ನನ್ನ ಸಂಪರ್ಕಕ್ಕೆ ಯಾವ ರೀತಿಯಲ್ಲೂ ಬಂದವರಾಗಿರಲಿಲ್ಲ.

ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ B.A ಪದವಿಯಲ್ಲಿ ನಾನು ಐಛಿಕ ಕನ್ನಡ, ಸಮಾಜಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವಾಗ ಐಛಿಕ ಕನ್ನಡ ವಿಷಯದಲ್ಲಿ "ಸ್ಥಳೀಕರಣ ಮತ್ತು ಜಾಗತೀಕರಣ" ಕುರಿತಾಗಿ ಪಠ್ಯವಿತ್ತು. ಇದರಲ್ಲಿ

೧. ನಮ್ಮ ಭಾರತದ ಪ್ರತಿಭೆ ವಿದೇಶಗಳಲ್ಲಿ ಬೆಳಗುತ್ತಿರುವ ಬಗೇಗೆ ತಲ್ಲಣ.

೨. ಸಿರಿ ಧಾನ್ಯಗಳ ಅವನತಿ.

೩. ಗಾಂಧೀಜಿಯವರ ಅರ್ಥಶಾಸ್ತ್ರದಲ್ಲಿರುವ ವಿಚಾರಗಳಲ್ಲಿ ವ್ಯಕ್ತವಾಗಿರುವ ದೇಶಿ ಉತ್ಪನ್ನಗಳ ಬಳಕೆ ಮತ್ತು ಖಾದಿ ಬಟ್ಟೆಗಳ ಬಳಕೆ.

ಈ ಘಟಕವನ್ನು ಬೋಧಿಸುವಾಗ ಡಾ ಎಲ್.ಜಿ ಮೀರಾ ಮೇಡಮ್‌ ರವರು ">‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ಕೂಡ ಈ ದೇಶಿ ಚಿಂತನೆಗೆ ಹತ್ತಿರವಿದೆ. ತಾವು ಓದಬಹುದೆಂದು ತಿಳಿಸಿದ್ದರು.

ದೇಶಿ ಚಿಂತನೆಗೆ ಪ್ರೇರಣೆಯಾಗಬಲ್ಲ ವಿಚಾರವನ್ನು ೧೦ನೇ ತರಗತಿಯಲ್ಲಿದ್ದಾಗ ಅರ್ಥಶಾಸ್ತ್ರ ವಿಷಯವನ್ನು ಭೋಧಿಸುತ್ತಿದ್ದ ಸಿ.ಬಿ ಮಂಜುನಾಥ್ ಗುರುಗಳು ರಾಜೀವ್‌ ದೀಕ್ಷಿಥ್‌ ರವರ "ಆಝಾದಿ ಬಚಾವೊ" ಆಂದೋಲನದ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ರಾಘವೇಂದ್ರ ಜೋಶಿ ರವರಿಂದ ರಚಿತವಾದ ಪುಸ್ತಕವನ್ನು ಓದಿದ್ದರು.

 ರಾಜೀವ್‌ ದೀಕ್ಷೀಥ್‌ ರವರ ಚಿಂತನೆಗಳನ್ನ್ನು ಓದುತ್ತಿದ್ದ ನನಗೆ ಇದೇ ಆಶಯವುಳ್ಳ B.A ತರಗತಿಯಲ್ಲಿ ಪಠ್ಯವಿದ್ದದ್ದು ಮತ್ತು L.G ಮೀರಾ ಮೇಡಮ್‌ ರವರು '>‘ತಬ್ಬಲಿಯು ನೀನಾದೆ ಮಗನೆ' ಓದಬಹುದೆಂದು ತಿಳಿಸಿದಾಗ ನಿಜಕ್ಕೂ ನನಗೆ ಆನಂದವಾಯಿತು. ತರಗತಿ ಮುಗಿದ ಬಳಿಕ ಮೇಡಮ್‌ ರವರನ್ನು ಕೇಳಿದಾಗ ಅವರು "ಚಲನಚಿತ್ರವಾಗಿದೆ. ನೀನು ಕೇಳಬಹುದು." ಎಂದರು. ಬಳಿಕ ಸ್ವಪ್ನಾ ಪುಸ್ತಕ ಮಳಿಗೆಯಲ್ಲಿ ಚಲನಚಿತ್ರವನ್ನು ಖರೀದಿಸಿ ಕೇಳಿದೆ. ಚಲನಚಿತ್ರಕ್ಕಿಂತ ಕಾದಂಬರಿಯನ್ನೇ ಓದಬೇಕೆಂದುಕೊಂಡು ಅಂಧರಿಗೆ ಕೇಳು ಪುಸ್ತಕವನ್ನು ಸಿದ್ಧಪಡಿಸುವ ಮಿತ್ರ ಜ್ಯೋತಿ ಸಂಸ್ಥೆಯಲ್ಲಿ ವಿಚಾರಿಸಿದೆ. ಅದೃಷ್ಟಕ್ಕೆ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿ ದೊರೆಯಿತು.

ತದ ನಂತರ ಬೈರಪ್ಪ ರವರ ಯಾನ, ಧರ್ಮಶ್ರೀ ಮತ್ತು ಗೃಹಬಂಗ ಕಾದಂಬರಿಗಳನ್ನು ಮಿತ್ರಜ್ಯೋತಿ ಸಂಸ್ಥೆಯಿಂದಲೇ ಖರೀದಿಸಿ ಓದಿದೆ. ಮಿತ್ರ ಜ್ಯೋತಿ ಸಂಸ್ಥೆಯು ಅಂಧರ ಅರಿವಿನ ಹೊಳೆಯಾಗಿ ಜ್ಞಾನವನ್ನು ಅಂಧರಿಗೆ ನಿರಂತರವಾಗಿ ಒದಗಿಸುತ್ತಿದೆ. ಭಾರತ ಹಕ್ಕು ಸ್ವಾಮ್ಯ ಅಧಿನಿಯಮ-1957, ತಿದ್ದುಪಡಿ-2012 ಈ ಕಾಯ್ದೆಯು ಸಂಸ್ಥೆಯ ಕೆಲಸಗಳಿಗೆ ಸಹಕಾರಿಯಾಗಿದೆ. ಈ ಕಾಯ್ದೆ ಇರದಿದ್ದಲ್ಲಿ ಕನ್ನಡ ಸಾಹಿತ್ಯವನ್ನು ಗ್ರಹಿಸಲು ತೊಡಕಾಗುತ್ತಿತ್ತು.

 

ನನ್ನ ಬದುಕಿನೊಳಗೆ ಬೈರಪ್ಪರವರ ಬರಹ:-

ಅಂಗವಿಕಲ ಮಕ್ಕಳನ್ನು ಹೆತ್ತ ಪೋಷಕರ ಕಷ್ಟಗಳು ವಿಭಿನ್ನ ಸವಾಲಿನಿಂದ ಕೂಡಿದವು. ಬಹುಶಃ ಕನ್ನಡ ಸಾಹಿತ್ಯದಲ್ಲಿ ಅಂಗವಿಕಲ ಮಕ್ಕಳನ್ನು ಸಲಹಿದ ಪೋಷಕರ ಕಷ್ಟಗಳನ್ನು ಮತ್ತು ತಲ್ಲಣಗಳನ್ನು ಹಿಡಿದಿಟ್ಟ ಕಥೆಗಳು ಅಥವಾ ಕಾದಂಬರಿಗಳು ಪ್ರಕಟವಾಗಿವೆಯೋ ನನಗೆ ಇಲ್ಲಿತನಕವೂ ತಿಳಿದಿಲ್ಲ.

ಗೃಹಬಂಗ ಕಾದಂಬರಿಯ ನಂಜಮ್ಮ ಅನುಭವಿಸಿದ ಕಷ್ಟಗಳನ್ನೇ ನನ್ನ ತಾಯಿಯೂ ಕೂಡ ಅನುಭವಿಸಿದ್ದಾರೆ. ಮದುವೆಯಾದ ಬಳಿಕ b.a ಪದವಿ ಮತ್ತು b.ED ಶಿಕ್ಷಣವನ್ನು ಪಡೆದಿದ್ದಾರೆ. ಅಕ್ಕ-ತಂಗಿಯರ ಮದುವೆ ಮಾಡಿದ್ದಾರೆ. ನನ್ನ ಮದುವೆಯನ್ನು ಕೂಡ ನಾ ಒಪ್ಪಿದ ಹುಡುಗಿಯೊಂದಿಗೆ ನೆರವೇರಿಸಿದ್ದಾರೆ.

ನನ್ನನ್ನು ಸಲಹುವ ಆ ಹೊತ್ತಿನಲ್ಲಿ ಸುತ್ತಮುತ್ತಲಿನ ಕೊಂಕು ಮಾತುಗಳಿಗೆ ಮತ್ತು ವರ್ತನೆಗಳನ್ನು ಕಡೆಗಣಿಸಿ ನನ್ನನ್ನು ಬೆಳೆಸಿದ್ದಾರೆ.

ನನ್ನ ತಂದೆ ನಿವೇಶನಗಳ ಖರೀದಿಯಲ್ಲಿ ಮತ್ತು ಜಮೀನಿನ ವ್ಯವಹಾರದಲ್ಲಿ ಸಮಸ್ಯೆಗೆ ಈಡಾದಾಗ ಸಜ್ಜನರ ನೆರವು ಪಡೆದು ಕುಟುಂಬವನ್ನು ಸರಿದಾರಿಯಲ್ಲಿ ನಡೆಸುತ್ತಿದ್ದಾರೆ.

ಾಕಾರ, ಬಣ್ಣ, ಸ್ವರೂಪ ಮತ್ತು ಬಳಕೆಯಲ್ಲಿ ನೀರು ನಮ್ಯತೆಯನ್ನು ಹೊಂದಿರುವಂತೆಯೇ, ಈ ಕಾದಂಬರಿಯು ಎಲ್ಲಾ ದೇಶಗಳಲ್ಲಿರುವ ಕುಟುಂಬ, ಮನುಜನ ಸಾಂಸಾರಿಕ ವರ್ತನೆ, ಜವಬ್ದಾರಿ, ತಳಮಳ ಮತ್ತು ಸೋಂಬೇರಿತನದ ಗುಣಗಳನ್ನು ಮನುಕುಲವಿರುವ ತನಕವೂ ಸತ್ಯವನ್ನು ಸಾರುವಂತದ್ದಾಗಿದೆ. ಘಟನೆ ಮತ್ತು ಹಿನ್ನೆಲೆ ಇವುಗಳು ವ್ಯತ್ಯಾಸವಾಗಬಹುದು. ಆದರೆ ಕಾದಂಬರಿಯು ವ್ಯಕ್ತಪಡಿಸುವ ಸಂದೇಶ ಎಂದಿಗೂ ಶಾಶ್ವತವಾಗಿರುವಂತದ್ದು.

 

ಧರ್ಮಶ್ರೀ ಕಾದಂಬರಿಯು ಮತಾಂತರ ಕುರಿತ ಸಾಹಿತ್ಯಿಕ ಅಂಶವನ್ನು ಹೊಂದಿದೆ. ನನ್ನ ಅನುಭವಕ್ಕೂ ಕೂಡ ಮತಾಂತರದ ಬೇಡಿಕೆ ಬಂದಿತ್ತು. ಕೆಲವು ಗೆಳೆಯರು ಅಂಧತ್ವದ ನಿವಾರಣೆಗಾಗಿ ಮತ್ತೊಂದು ಧರ್ಮದ ಆಚಾರ-ವಿಚಾರವನ್ನು ಅಳವಡಿಸಿಕೊಂಡಲ್ಲಿ ದೃಷ್ಟಿ ಬರಬಹುದೆಂದು ತಿಳಿಸಿದ್ದರು.

ಹಿನ್ನೆಲೆ ಇಂತಿದೆ. ೨೦೦೩ರಲ್ಲಿ ೯ನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಅಂದು ಏಪ್ರಿಲ್‌ ರಜೆಯಲ್ಲಿ ಚಲನವಲನ ತರಬೇತಿ ಪಡೆಯಲು ಒಂದು ಸಂಸ್ಥೆಯಲ್ಲಿದ್ದೆ. ಆ ಹೊತ್ತಲ್ಲಿ ಒಬ್ಬ ಗೆಳೆಯ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಧರ್ಮದ ಪ್ರಾರ್ಥನಾ ತಂಡವು ಕೆಲವು ದೈವ ವಾಣಿಯನ್ನು ಭೋಧಿಸಿತ್ತು. ಆಗ ದೃಷ್ಟಿ ಬರುತ್ತದೆಂದು ಭರವಸೆಯನ್ನು ಮುಖ್ಯಸ್ಥರು ನೀಡಿದ್ದರು. ಪ್ರತಿ ವಾರವೂ ಬರುವಂತೆಯೂ ತಿಳಿಸಿದ್ದರು. ತರಬೇತಿ ಮುಗಿಯುವ ತನಕವೂ ಹೋಗುತ್ತಿದ್ದೆ. ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಕೆಲವು ಗೆಳೆಯರು "ದೃಷ್ಟಿ ಇಲ್ಲವಾದ ಮೇಲೆ ಮತ್ತೆ ದೃಷ್ಟಿ ಬರೋದು ತಾಂತ್ರಿಕ ಅಥವಾ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಅಥವಾ ಅಹಾರ ಪದ್ಧತಿಯ ಸಮತೋಲನದ ಮೂಲಕ. ಅದರಲ್ಲೂ ಜನ್ಮತಃ ಅಂಧರಿಗೆ ಪ್ರಾರ್ಥನೆಯಿಂದ ದೃಷ್ಟಿ ದೊರೆಯುವುದು ಅಸಾಧ್ಯ ಎಂದಿದ್ದರು. ನನ್ನೊಡನೆ ಬರುತ್ತಿದ್ದ ಒಬ್ಬ ಗೆಳೆಯ ಮೊಟ್ಟೆ ಪಪ್ಸ್‌ ತಿನ್ನೋಕೆ ಅಷ್ಟೇ ಬರುತ್ತಿದ್ದೇನೆ ಎಂದು ಮುಖ್ಯಸ್ಥರಿಗೂ ಕೇಳುವಂತೆ ಹೇಳುತ್ತಿದ್ದ. ದೃಷ್ಟಿ ಬರಬಹುದೆಂಬ ಆಸೆಯಿಂದ ನಾನು ಬದ್ಧನಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಿದ್ದೆ. ರಾಮನಗರದಲ್ಲಿರುವ ಬಾಲಗಂಗಾಧರ ಸ್ವಾಮಿಗಳ ಅಂಧರ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೂ ಚನ್ನಪಟ್ಟಣದಿಂದಲೂ ಧರ್ಮ ಭೋಧಿಸಲು ಸುಮಾರು ಮೂರು ತಿಂಗಳ ಕಾಲ 10ನೇ ತರಗತಿಯಲ್ಲಿದ್ದಾಗ ಬಂದಿದ್ದರು. ದೃಷ್ಟಿ ಬರಲಿಲ್ಲ. ಕೆಲವು ಗೆಳೆಯರು ಮತಾಂತರವಾಗಿರುವ ನೈಜ ನಿದರ್ಶನಗಳು ಇವೆ.

ಅಂಧ ಸಮುದಾಯದಲ್ಲಿಯೂ ಒಂದು ಧರ್ಮದವರು ಮತ್ತೊಂದು ಧರ್ಮದವರನ್ನು ಮದುವೆಯಾಗಿದ್ದಿದೆ. ಅಂದರೆ ಲಿಲ್ಲಿ ಮತ್ತು ಸತ್ಯನಾರಾಯಣ ಪಾತ್ರಗಳಂತೆ. ಎಷ್ಟರಮಟ್ಟಿಗೆ ನಶೆ ಏರಿದೆ ಎಂದರೆ, ಕೆಲವರು ಭಾವಗೀತೆಗಳಿಗೂ ರಾಗ ಸಂಯೋಜಿಸದೆ ಕೇವಲ ಮತ್ತೊಂದು ಧರ್ಮದ ದೈವಗೀತೆಗಳಿಗೆ ಮಾತ್ರ ರಾಗಜೋಡಿಸುವುದಾಗಿ ವಾದವನ್ನು ಮಂಡಿಸುತ್ತಾರೆ.

ಮುಖ್ಯವಾಹಿನಿಯಲ್ಲಿರುವ ಕೆಲವು ಸಾಹಿತಿಗಳು ಈ ಕಾದಂಬರಿಯನ್ನು ನೈಜಗಣ್ಣಿನಿಂದ ನೋಡಿ ವಿಮರ್ಶಿಸಬೇಕೇ ಹೊರತು ನಿಂದಿಸುವ ದೃಷ್ಟಿಕೋನಗಳಿಂದಲ್ಲ. ಅಸ್ಮಿತೆಯನ್ನು ಉಳಿಸಿಕೊಂಡಾಗಲೇ ಸ್ವಂತಿಕೆ ಜೀವಂತವಾಗಿರಲು ಸಾಧ್ಯ.

ಮತ್ತೊಂದು ಧರ್ಮಕ್ಕೆ ಜನರ ಮನಸ್ಸನ್ನು ಪರಿವರ್ತಿಸಿಕೊಂಡು ಧಾರ್ಮಿಕ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಬದಲು ಮಾನವೀಯ ಗುಣಗಳನ್ನೇ ಧರ್ಮದ ತಳಹದಿಯನ್ನಾಗಿಸಬೇಕು. ಓಲೈಕೆ ಅಥವಾ ಒತ್ತಾಯ ಪೂರ್ವಕವಾಗಿ ರೀತಿರಿವಾಜುಗಳನ್ನು ಬದಲಿಸುವುದು ಸ್ವಾರ್ಥ ಆಸೆಯ ವಿಸ್ತರಣೆಯಾಗಿದೆ. ಸಾಮರಸ್ಯಕ್ಕೆ ಯಾವುದು ಪೂರಕವೋ ಅದರ ಶ್ರೇಯಸ್ಸಿಗೆ ಶ್ರಮಿಸಬೇಕೆನ್ನುವುದನ್ನು ಅರಿತು ನಡೆಯಬೇಕು. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯನ್ನು ಓದಿದ ಬಳಿಕ ಇದರ ಆಶಯವನ್ನು ಗುರುತಿಸಿಕೊಂಡು ಬಾಳಬೇಕೆನಿಸಿತು. ಅದಕ್ಕಾಗಿಯೇ ಧರ್ಮದ ವಿಚಾರದಲ್ಲಿ ನನ್ನ ಪರಿಕಲ್ಪನೆಯನ್ನು "ಜಾತ್ಯತೀತ ನಾಡಿಗೆ ಪ್ರಜ್ಞಾಪೂರ್ವಕ ನಡಿಗೆ" ಈ ಲೇಖನದಲ್ಲಿ ತಿಳಿಸಿರುತ್ತೇನೆ.

--

ಜಾತ್ಯತೀತ ನಾಡಿಗೆ ಪ್ರಜ್ಞಾಪೂರ್ವಕ ನಡಿಗೆ_

ಭಾರತವು ವಿವಿಧ ಧರ್ಮಗಳ ಮತ್ತು ಜಾತಿಗಳ ಆಗರವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಾನು ನಿಮಗೆ ವಿನೂತನ ಚಿಂತನೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಅದೇನೆಂದರೆ, ಬಹುತೇಕ ಧರ್ಮಗಳ ಮತ್ತು ಜಾತಿಗಳ ಪದಗಳಲ್ಲಿ ಸಮಾಜವನ್ನು ಬೆಸೆಯುವ ಸಾರವಿರುತ್ತದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಂದು ಎಲ್ಲರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕೆಳಗೆ ವಿವಿಧ ಧರ್ಮಗಳ ಹಾಗೂ ಜಾತಿಗಳ ಪದಗಳ ಒಳ ಸಾರವನ್ನು ನಾವು ಹೇಗೆ ಗ್ರಹಿಸಿ ಸಮಾಜವನ್ನು ನೋಡಬೇಕೆಂಬ ಅನ್ವೈಕೆಯ ದೃಷ್ಟಿಕೋನವನ್ನು ತಿಳಿಸಲು ಪ್ರಯತ್ನಿಸಿದ್ದೇನೆ.

1. ಇಸ್ಲಾಮ್ ಎಂಬ ಅರಬಿ ಪದದ ಅರ್ಥ ‘ಶಾಂತಿ’, ‘ಸಮರ್ಪಣೆ’ ಎಂದಾಗಿದೆ.

ನಾವೆಲ್ಲರು ಸಮಾಜದ ಶಾಂತಿಗಾಗಿ ಸಮರ್ಪಿತರಾಗಿರುವುದರಿಂದ ನಾವೂ ಸಹ ಮುಸಲ್ಮಾನರು.

2. ವೀರಶೈವ ಅಥವಾ ಲಿಂಗಾಯತ ಎಂದರೆ ಜ್ಞಾನದಲ್ಲಿ ರಮಿಸುವ ಶಿವಭಕ್ತ ಎಂದು.

ನಾವೂ ಸಹ  ಜ್ಞಾನದಲ್ಲಿ ರಮಿಸುವ  ಸಮಾಜಶಿವನ ಭಕ್ತರು.

3. ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿಯಾಗಿ ಕರ್ನಾಟಕ ಗೆಜೆಟಿಯರ್ (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field!

ಸಾಮಾಜಿಕ ಹೊಲದ  ನಿವಾಸಿಗಳಾಗಿರುವ ನಾವೂ ಸಹ ಹೊಲೆಯರು.

4. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದಾಗುತ್ತದೆ.

ಮೂಲಭೂತ ಅವಶ್ಯಕತೆಗಳಿಗಾಗಿ ಮತ್ತು ಜ್ಞಾನಕ್ಕಾಗಿ ಸದಾ ಹುಡುಕಾಡುವ ನಾವೂ ಸಹ ಕುರುಬರು.

5. ಜೈನ ಎಂದರೆ 'ಜಿನ'ಎಂಬ  ಶಬ್ದವಾಗಿದ್ದು ಜಿನ ಎಂದರೆ' ಗೆದ್ದವನು' ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆಯುವ ಮಾರ್ಗವೇ ಜೈನವಾಗಿದೆ.

ಸಮ ಸಮಾಜದ ಒಳಿತಿಗಾಗಿ ಪೂರ್ವಾಪರವಿಲ್ಲದೆ ಶ್ರಮವಹಿಸುತ್ತಿರುವ ನಾವೂ ಸಹ ಜೈನರು.

ಇನ್ನೂ ಬಹುತೇಕ ಜಾತಿಗಳ ಹಾಗೂ ಧರ್ಮಗಳ ಪದಗಳ ಒಳ ಸಾರವನ್ನು ಅರಿತುಕೊಳ್ಳಬೇಕಾಗಿರುವುದರಿಂದ ತಾವೆಲ್ಲರು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅಂತೆಯೆ ಈ ದೃಷ್ಟಿಕೋನಕ್ಕೆ ಸಂಬಂಧಪಟ್ಟಂತೆ ಸಲಹೆಯನ್ನು ನೀಡಬೇಕೆಂದು ಸಹ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

-----

 

'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯು, ಧರಣಿ ಮಂಡಲ ಮಧ್ಯದೊಳಗೆ…… ಪದ್ಯದೊಂದಿಗೆ ಆರಂಭವಾಗುತ್ತದೆ. ಈ ಪದ್ಯಕ್ಕೆ ಶಾಲೆಯ ಹಂತದಲ್ಲಿದ್ದಾಗಲೇ ಪುಣ್ಯಕೋಟಿ ಹಸುವಿನ ಜೊತೆಗಾರರಾಗಿದ್ದ ಒಂದು ಹಸುವಿನ ಪಾತ್ರದಲ್ಲಿ ನಾನು ನೃತ್ಯ ಮಾಡಿದ್ದೆ. ಈ ಪದ್ಯದ ಬೆಳಕು ನನ್ನ ಮೇಲೆ ಬೀರಿದ್ದರ ಫಲವಾಗಿಯೋ ಏನೋ ಸ್ವದೇಶಿ ಚಿಂತನೆಗೆ ನನ್ನನ್ನು ತೊಡಗಿಸಿಕೊಂಡಿರುವೆ. ಮಾಂಸವನ್ನು ತಿನ್ನುತ್ತಿನಾದರೂ, ಅದು ಇರದಿದ್ದರೆ ಬಾಳಲಾರೆ ಎನ್ನುವ ಕಟುತನವನ್ನು ಹೊಂದಿಲ್ಲ.

ಸಿರಿಧಾನ್ಯದ ಪ್ರೇಮಿಯಾಗಿ ಡಾ ಖಾದರ್‌ ರವರ ಭಾಷಣಗಳನ್ನು ಆಲಿಸಿ, ಅವರನ್ನು ಭೇಟಿ ಮಾಡಿ ಮದುವೆಯಲ್ಲೂ ಕೂಡ ಅಕ್ಕಿಯ ಬದಲಿಗೆ ಕೊರ್ಲೆ ಸಿರಿಧಾನ್ಯವನ್ನು ಆಶಿರ್ವಾದಕ್ಕಾಗಿ ಬಳಸಿಕೊಂಡಿದ್ದೆ. ಮದುವೆಯಾಗುವ ಪರಿಚಯವಿರುವವರಿಗೂ ಈ ಚಿಂತನೆಯನ್ನು ತಿಳಿಸುತ್ತೇನೆ.

 ಹಸುವಿನ ಮಾಂಸವನ್ನು ಅಹಾರಕ್ಕೆ ಬಳಸಿಕೊಳ್ಳುವ ಪದ್ಧತಿಗಿಂತಲೂ ದೈನಂದಿನ ಬದುಕಿನಲ್ಲಿ ನಾವು ಬಳಸುವ ಎಷ್ಟೋ ಉತ್ಪನ್ನಗಳು ಪ್ರಾಣಿಗಳ ದೇಹಗಳಿಂದ ಪಡೆದ ಅಂಶಗಳಿಂದ ತಯಾರಿಸಲ್ಪಡುತ್ತಿವೆ ಎನ್ನುವ ಸತ್ಯವು ವೈಜ್ಞಾನಿಕ ತಂತ್ರಜ್ಞಾನವನ್ನು ಕೂಡ ಬಳಸಬಾರದೆಂಬ ಕೀಳರಿಮೆ ಉಂಟಾಗಿದೆ. ಆದರೆ, ಈ ದುರ್ವಿಧಿ ಹೆಣೆದುಕೊಂಡು ಸನ್ನಿವೇಶಕ್ಕೆ ಹೊಂದಿಕೊಂಡು ಬಾಳುವ ಅನಿವಾರ್ಯತೆ ಇದೆ.

ಕಾದಂಬರಿಯಿಂದ ಸ್ಪೂರ್ತಿ ಪಡೆದು ನಾನು ಕವಿತೆಯನ್ನು ಕೂಡ ರಚಿಸಿದ್ದೆ. ಅದನ್ನು ನಿಮ್ಮ ಓದಿಗಾಗಿ ನೀಡುತ್ತಿದ್ದೇನೆ.

---

                                                ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

|||| ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

 ||1|| ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ

ಸೊಗಸನು ನೀ ಹಡಿವೆ, ಗರಗಸವ ನಾ ಹಿಡಿವೆ

ಸುಕದುಕ್ಕದಲಿ ನೀ ಚಿಗುರುತ್ತಲೇ ಉಳಿವೆ, ಸೊಕ್ಕುಸಿಕ್ಕುಗಳಲ್ಲಿ ನಿನ್ನನ್ನು ಚಿವುಟುತ್ತಾ ನಾ ಬದುಕುತ್ತಲೇ ಅಳಿವೆ

ನೀನು ಅಳಿಯದೆ ಬೆಳಗುವ ತಾರೆ, ನಾನು ಅಳಿಯುವ ತಳುಕಿನ ತಾರೆ

ನನ್ನ ಮೊರೆಯ ಆಲಿಸು ತಾಯೇ

ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

 ||2|| ಹಲತನಗಳ ಬಲೆಯಲ್ಲಿ ಒಗ್ಗಟ್ಟಿನದ್ದು ನಿನ್ನಯ ಉಸಿರು, ಹಸಿರು

ಮೇಲು-ಕೀಳುಗಳ ಕೆಂಡದ ಬಲೆಯಲ್ಲಿ ಬಿಕ್ಕಟ್ಟಿನದ್ದು ನನ್ನಯ ಕೆಸರು, ಪಿಸುರು

ಬಾಳ ಪಯಣಕ್ಕೆ ನಿನ್ನಯ ನಡಿಗೆ, ಗೋಳಪಯಣಕ್ಕೆ ನನ್ನಯ ನಡಿಗೆ

ನನ್ನದೇನೂ ಸರಿಯಿಲ್ಲ, ನಿನ್ನತ್ತ ನನಗೆ ಸರಿದುಬರಲು ಆಗುತ್ತಿಲ್ಲ

ಇದಕ್ಕೆ ದಯವಿಟ್ಟು ತಾಯೇ

ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

 ||3|| ಕೊಳೆತಾಗಲೂ ಹೋರಾಟದಲ್ಲೇ ಪುಟಿದೇಳುವೆ ನೀನು, ಹೋರಾಟದಲ್ಲೇ ಕೊಳೆತು ಪುಟಿದುಬೀಳುವೆ ನಾನು

ಸಿಪ್ಪೆ ತೊಪ್ಪೆಯ ತಿಂದರೂ ಅರಗಿಸಿಕೊಳ್ಳುವ ಗಟ್ಟಿಗಿತ್ತಿ ನೀನು, ಸೊಪ್ಪು ಗೆಡ್ಡೆಯ ತಿಂದರೂ ಬೆಳೆಯದ ಗಬ್ಬು ಗೊಡ್ಡು ನಾನು

ನನ್ನ ತಪ್ಪೆಲ್ಲವು ನನ್ನ ಸರಿಯ ಗುರುತು, ನಿನ್ನ ಸರಿಗಳೆಲ್ಲವು ನಿನ್ನ ಸಿರಿಯ ಗುರುತು

ನನ್ನಯ ಮೋಸದ ಬೇರುಗಳನ್ನು ನಿನ್ನ ಕಡೆಗೆ ಚಾಚಿದರೂ, ನೀನು ನಿನ್ನತನವ ಕಳೆದುಕೊಳ್ಳಲಾರದ ತಾಯೇ

ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

---

 

ಯಾನ ಕಾದಂಬರಿಯು ನನ್ನಲ್ಲಿ ಅನ್ವೇಶಣಾತ್ಮಕ ಮತ್ತು ಪ್ರಾಯೋಗಿಕ ಮನೋಭಾವವನ್ನು ಬೆಳೆಸಿತು. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಲು ಶುರು ಮಾಡಿದಾಗ "ಎಕ್ಸ್ಪರಿಮೆಂಟಲ್‌ ಎಕ್ಸ್ಪ್ರೆಸ್"‌ ಎಂಬ ಸಾಲನ್ನು ಮಾತ್ರ ಧ್ಯೇಯವನ್ನಾಗಿ ಬರೆದಿದ್ದೆ. ಆದರೆ ಈ ಕಾದಂಬರಿಯನ್ನು ಗ್ರಹಿಸಿದ ಬಳಿಕ "ಸಮಸ್ತ ವಿಸ್ಮಯವನ್ನು ಅರಿಯಲು ಅನುಭವದ ಬಲೆಯೊಳಗೆ ನಾನು ಎಕ್‌ಸ್ಪರಿಮೆಂಟಲ್‌ ಎಕ್ಸ್ಪ್ರೆಸ್‌" ಎಂಬಂತೆ ಮಾರ್ಪಾಟುಗೊಳಿಸಿಕೊಂಡೆ. ಬಳಿಕ ಈ ಅಸ್ತ್ರದ ಮೂಲಕ “ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು, ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” ಎಂಬ ಜೀವನ ಧ್ಯೇಯವನ್ನು ಕಂಡುಕೊಂಡಿರುತ್ತೇನೆ. ಈ ಮೂಲಕ "ಲೋಕವಾಗೋಣ" ಎನ್ನುವ ಒಂದೇ ಪದದ ಆಶಯವನ್ನು ಕೂಡ ಹೊಂದಲು ಸಾಧ್ಯವಾಗಿದೆ.

ಯಾನ ಕಾದಂಬರಿಯು ವೈಜ್ನಾನಿಕ ಆಧಾರದ ಕಾದಂಬರಿಯಾಗಿದ್ದರೆ ನನಗೆ ಅಷ್ಟೇನೂ ಆಪ್ತವಾಗುತ್ತಿರಲಿಲ್ಲ. ಆದರೆ ಇದು ವೈಜ್ಞಾನಿಕ ಸಹಿತದ ಭವಿಶ್ಯವನ್ನು ನುಡಿಯಬಲ್ಲ ಮತ್ತು ಭವಿಷ್ಯತ್ತಿನಲ್ಲಿ ನೈಜತೆಯನ್ನು ತಾಳಬಲ್ಲ ಕಾದಂಬರಿಯಾಗಿರುವುದರಿಂದ ನನಗೆ ಹೆಚ್ಚು ಆಪ್ತವಾಗಿದೆ.

ಆಕಾಶ್ ಹಾಗೂ ಮೇದಿನಿ ಸಹೋದರ-ಸಹೋದರಿ ಮದುವೆಯಾಗುವ ನಿದರ್ಶನ ನಮ್ಮ ರಾಜ್ಯದಲ್ಲಿಯೋ /ದೇಶದಲ್ಲಿಯೋ/ ಮತ್ತಿನ್ನೆಲ್ಲೋ ನಡೆದಿದ್ದಾಗಿರುತ್ತದೆ. ಇಂತಹ ಘಟನೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಹರೆಯದಲ್ಲಿಯೂ ಕೂಡ ಸಹೋದರ-ಸಹೋದರಿಯರ ನಡುವೆ ಲೈಂಗಿಕ ಆಕರ್ಶನೆ ಮೂಡಿದ ಪುರಾವೆಗಳೂ ಕೂಡ ದೊರೆಯುತ್ತವೆ. ನೈತಿಕ ಶಿಕ್ಷಣ ನೀಡಿದಾಗ ಇಂತಹ ಭಾವನೆಗಳು ಅಳಿಯುತ್ತವೆ.

----

ನಾಲಿಗೆ-ಬುದ್ಧಿ-ನಡವಳಿಕೆ ಸರಿಯಿದ್ದಲ್ಲಿ, ಒಂದಲ್ಲಾ ಒಂದು ದಿನ ಯಶಸ್ಸು ದೊರೆಯಬಲ್ಲದು ಎನ್ನುವುದಕ್ಕೆ ಭಿತ್ತಿ ಆತ್ಮ ಕಥೆಯು ಉತ್ತಮ ಪುರಾವೆಯಾಗಿದೆ. ಎಷ್ಟೇ ಕಷ್ಟಗಳು ಒದಗಿದಾಗ ಧೃತಿಗೆಡಬಾರದು ಎಂದು ಸಾರುವ ನೈಜ ಕಥೆಯಾಗಿದೆ.

"ನಾನು ಜಾತಿಯಲ್ಲಿ ಉನ್ನತದವನಾಗಿರಬಹುದು, ಬಡತನ ಜಾತಿಯನ್ನು ಮೀರಿದ್ದಾಗಿದೆ. ಎಲ್ಲಾ ಜಾತಿಗಳಲ್ಲಿಯೂ ಬಡತನವಿದೆ-ಸಿರಿತನವಿದೆ." ಎನ್ನುವ ಸತ್ಯಾಂಶವನ್ನು ಇದು ತಿಳಿಯಪಡಿಸಿದೆ. "ಸರ್ಕಾರಗಳು ಕೂಡ ಆರ್ಥಿಕ ಸ್ಥಿತಿಗನುಗುಣವಾಗಿ ಶೈಕ್ಷಣಿಕ-ಔದ್ಯೋಗಿಕ ಮೀಸಲಾತಿಯನ್ನು ಘೋಷಿಸಬೇಕು." ಎನ್ನುವ ಭಾವನೆ ಬೈರಪ್ಪನವರು ಮೈಸೂರಿನ ಶಾರದವಿಲಾಸ ಶಾಲೆಯಲ್ಲಿ, ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮೂಡಿದ್ದಿರಬಹುದು. ನನಗೂ ಕೆಲವೊಮ್ಮೆ ಹೀಗೆಯೇ ಅನಿಸಿದ್ದಿದೆ.

ಬ್ಯಾಂಕ್‌ ಉದ್ಯೋಗಿ ೫೦ರೂಗಳನ್ನು ನೀಡುವ ಬದಲು ೫೦೦ರೂಗಳನ್ನು ನೀಡಿದಾಗ ಶ್ರೀಯುತರು ಮರಳಿ ಬ್ಯಾಂಕ್‌ ಮ್ಯಾನೇಜರ್‌ ರವರಿಗೆ ನೀಡಿದ ಸಂಗತಿಯು "ಬಡತನ ಕೇವಲ ಆರ್ಥಿಕವಾಗಿ ಮನುಜನನ್ನು ಕಾಡಿದರೂ, ನೈತಿಕ ಮೌಲ್ಯಗಳಿಗೆ ಅಪವರ್ತಿಯಾಗಿ ಬಾಳಬಾರದು" ಎಂದು ಸಾರಿದೆ. ಈ ಹಿನ್ನೆಲೆಯಲ್ಲಿ ಯಾರೇ ಒಂದು ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದಾಗ ಅವರನ್ನು ಪ್ರೋತ್ಸಾಹಿಸಬೇಕೆಂಬ ಮತ್ತು ಪ್ರಾಮಾಣಿಕವಾಗಿ ಬಾಳಬೇಕೆಂಬ ತುಡಿತ ಮೂಡಿದೆ.

ಚಿಕ್ಕಪ್ಪ, ಸ್ವಾಮಿ ಮೇಷ್ಟ್ರು, ಅವರ ಹೆಂಡತಿ, ಶ್ರೀನಿವಾಸ ಅಯ್ಯಂಗಾರರು, ರಾಮಕೃಷ್ಣಯ್ಯನವರು, ರಾಂಪುರದ ಕಲ್ಲೇಗೌಡರು, ರಾಜ, ಕೃಷ್ಣ, ಗೋವಿಂದರಾಯರು, ಜಾವಡೇಕರ್, ಯಮುನಾಚಾರ್ಯ, ಶಾಂತಮ್ಮ, ಶಾಂತಮ್ಮ ರವರ ತಂದೆ, NCERT ಪ್ರಾಂಪ್ಷುಪಾಲರಾದ CV ಗೋವಿಂದರಾಯರು, AK ಶರ್ಮ, ಕಾಡುಮಲ್ಲೇಶ್ವರ ಕಾಲೇಜಿನ ಸಹ ಒಡನಾಡಿಗಳು, ಡಿ.ಎಸ್ ಕರ್ಕಿ, ಶೇಶಾದ್ರಿ, ಮುಕರ್ಜಿ, ಓಮ್‌ ಪ್ರಕಾಶ್‌, SV.C ಅಯ್ಯ, ವಿದ್ಯಾರ್ಥಿನಿಲಯಗಳು ಮತ್ತು ಹೀಗೆ ಸಕರಾತ್ಮಕ ಗುಣವುಳ್ಳ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಶ್ರೀಯುತ ಬೈರಪ್ಪ ರವರ ಯಶಸ್ಸಿಗೆ ನೆರವಾದಂತೆ ನನ್ನ ಜೀವನದಲ್ಲಿಯೂ ಬಹುತೇಕ ಗೆಳೆಯರು-ಗೆಳತಿಯರು, ಗುರು ಹಿರಿಯರು ಮತ್ತು ಸಂಘ ಸಂಸ್ಥೆಗಳು ನೆರವಾಗುತ್ತಿವೆ. ಇದರಿಂದ ಕಂಡುಕೊಂಡ ಸತ್ಯ "ವ್ಯಕ್ತಿ ಋಣಕ್ಕೆ ದಾಸನಾಗಬೇಕು." ಎನ್ನುವ ಸಂಕಲ್ಪವನ್ನು ತೊಡಲು ಅನುವಾಗಿದೆ.

ಸಕರಾತ್ಮಕ ಅಂಶಗಳು ಯಶಸ್ಸಿಗೆ ಕಾರಣವಾದಷ್ಟೇ ನಕರಾತ್ಮಕ ಪಾತ್ರಗಳು ಛಲವನ್ನು ಬಿತ್ತಲು ಇದ್ದೇ ಇರುತ್ತವೆ. ಕೊರಳಿದ್ದ ಮೇಲೆ ನೆರಳು ಇರಲೇಬೇಕಲ್ಲವೆ? ನೆರಳಿನ ಪಾತ್ರ ಕೇವಲ ಎತ್ತಿ ತೋರಿಸುವುದಷ್ಟೆ ತಿದ್ದಿ ತೀಡುವುದಕ್ಕಲ್ಲ. ಆದರೆ ಕೊರಳಿರುವುದು ಅಭಿವ್ಯಕ್ತಿಗೆ, ತಿದ್ದಿ ತೀಡುವುದಕ್ಕೆ. ಹಾಗಾಗಿ ಈ ಆತ್ಮ ಕಥೆಯು ಬಡತನದಲ್ಲಿ ನೊಂದು ಜೀವನವನ್ನು ಅರ್ಧಕ್ಕೆ ಮುಗಿಸಿಕೊಳ್ಳುವ ವ್ಯಕ್ತಿಗಳಿಗೆ ದಾರಿದೀಪವಾಗಬಲ್ಲದು. ಮನಸ್ಸಿನೊಳಗೆ ಸ್ಥೈರ್ಯ ತುಂಬಬಲ್ಲದು. "ಕೊರತೆಯನ್ನು ಮತ್ತು ದೌರ್ಬಲ್ಯವನ್ನು ಮುಚ್ಚುಮರೆಯಿಲ್ಲದೆ ಸ್ಪಂದನಾಶೀಲ ಗುಣವುಳ್ಳವರೊಡನೆ ಹೇಳಿಕೊಳ್ಳಬೇಕು. ಆಗ ಏಳಿಗೆಯನ್ನು ಬಯಸುವ ಮನಸ್ಸುಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ." ಎನ್ನುವ ಸತ್ಯವನ್ನು ಇದು ಸಾರಿದೆ.

ಸಾಹಿತ್ಯ ಸೃಷ್ಟಿಯು ಸಂಘರ್ಷದ ಬಲೆಯೊಳಗೆ ಸಿಲುಕಬಾರದು. ಸಿಲುಕಿದರೆ, ವ್ಯಕ್ತಿಗತ ಹೀಗೆಳೆತ ಮಾತ್ರ ಅದರಿಂದ ಪಡೆಯಬಹುದೇ ಹೊರತು ಒಳ್ಳೆಯ ತಿರುಳಲ್ಲ. ಬರವಣಿಗೆಯು ಸಿದ್ದಾಂತ, ಲಿಂಗ ಮತ್ತು ಧರ್ಮ-ಜಾತಿ ಇವುಗಳ ಆಧಾರದಲ್ಲಿ ಪಂಗಡಗಳು ಉಂಟಾಗಿ ಒಬ್ಬರ ಸಾಹಿತ್ಯ ಕಲ್ಪನೆಯನ್ನು ಹೀಗೆಳೆಯುವ ನಿಲುವುಗಳು ವ್ಯಕ್ತವಾಗಿದ್ದು ಮತ್ತು ಇಂದಿಗೂ ದಿನಂಪ್ರತಿ ಪ್ರಕಟಗೊಳ್ಳುತ್ತಿರುವುದು ಅಕ್ಷರಸ್ಥರೊಳಗಿನ ಅಹಂಕಾರದ ಸಂಕೇತವೆಂದು ನನಗೆ ಅನಿಸಿದೆ.

ಪ್ರತಿಯೊಬ್ಬರೂ ಪ್ರತಿಯೊಬ್ಬರ ಏಳಿಗೆಯನ್ನು ಬಯಸಬೇಕು ಮತ್ತು ಒಳಿತಿಗಾಗಿ ಹಾರೈಸಬೇಕು. ಆಗ ಮಾತ್ರ ಸಾಹಿತ್ಯ ವಲಯವು ನಿಶ್ಕಲ್ಮಷವಾಗಿ ಮತ್ತು ಸಂಘರ್ಷವಿಲ್ಲದೆ ಬೆಳಗಲು ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯವನ್ನು ಒಗ್ಗಟ್ಟಿನ ಚೌಕಟ್ಟಿನಲ್ಲಿ ಕಟ್ಟುವುದು ಅಗತ್ಯವಿದೆ. ಸಾಹಿತ್ಯವನ್ನು ರಾಜಕಾರಣದಿಂದ ದೂರವಿಡಬೇಕು. ಇಲ್ಲವಾದಲ್ಲಿ ಓಲೈಕೆಯ ಸಾಹಿತ್ಯ ಸೃಷ್ಟಿಯಾಗುತ್ತದೆ.

ದಲಿತ, ಬಂಡಾಯ ನವ್ಯ ಈಗೆಲ್ಲಾ ಈ ಪ್ರಕಾರದ ಸಾಹಿತ್ಯ ಅಳಿವಿನ ಅಂಚಿಗೆ ಸರಿಯುತ್ತಿವೆ. ಭವಿಶತ್ತಿನಲ್ಲಿ ವೃದ್ದರ ತಲ್ಲಣಗಳು, ಮಕ್ಕಳ ಒಂಟಿತನ ಮತ್ತು ಪುರುಷ-ಮಹಿಳೆಯರ ಅನಾರೋಗ್ಯದ ಸಮಸ್ಯೆಗಳು, ಹೀಗೆ ಹಲವಾರು ವಿಚಾರಗಳು ಸಾಹಿತ್ಯ ವಲಯದಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ ಇದೆ.

ಬಡತನ ನಿರ್ಮೂಲನೆಗೆ ಮತ್ತು ತಾರತಮ್ಯದ ಅಳಿವಿಗೆ ನೆರವಾಗಬಲ್ಲ ವಾತಾವರಣವನ್ನು ಸಾಹಿತ್ಯದ ಮೂಲಕ ಮತ್ತು ಯೋಜನೆಗಳ ಮೂಲಕ ನಿರ್ಮಿಸುವೆವೋ ಆಗ ಮಾತ್ರ ಸಾಹಿತ್ಯದ ನೈಜ ಸ್ವಾದ ಸಹೃದಯಿಗೆ ದೊರೆಯುತ್ತದೆ. ಇಲ್ಲವಾದಲ್ಲಿ, ಸಂಘರ್ಷ ಜೀವಂತವಿರುತ್ತದೆ.

ಈ ಭಿತ್ತಿ ಆತ್ಮ ಕಥೆಯಲ್ಲಿ ಸಾಹಿತಿಗಳು ಪರಸ್ಪರ ಏಳಿಗೆಗೆ ಕೈಜೋಡಿಸದೆ ಆತ್ಮರಥಿ ಧೋರಣೆಗಳನ್ನು ತಾಳಿದ ಘಟನೆಗಳ ಉಲ್ಲೇಖವಿದೆ. ಪ್ರಜ್ಞಾವಂತರೇ ಹೀಗೆ ವರ್ತಿಸಿದರೆ, ಸಾಮಾನ್ಯರ ಮನಸ್ಸಿನಲ್ಲಿ ಇವರ ಬಗೇಗೆ ಎಂತಹ ನಿಲುವು ಮೂಡುತ್ತದೆನ್ನುವುದನ್ನು ಊಹಿಸಿಕೊಂಡರೇ, ಅಂತವರು ರಚಿಸಿದ ಸಾಹಿತ್ಯವು ಕೇವಲ ಸಂವೇದನೆಯನ್ನು ಅಭಿವ್ಯಕ್ತಿಸುವುದಕ್ಕಲ್ಲ, ಏಳಿಗೆಯ ದುರಾಸೆಯನ್ನು ಬಯಸಿ ಬರೆದವೆಂದು ಅರ್ಥೈಸಿಕೊಳ್ಳಲು ಸಾಕಷ್ಟು ಕುರುಹುಗಳು ದೊರೆಯುತ್ತವೆ.

ಭಿತ್ತಿ ಓದುವಾಗಲೇ, ಕಲಿಯುಗದ ಕೆಲವು ಸಂಗತಿಗಳನ್ನು ವಿಡಂಭಿಸಲು ಒಂದು ಲಾವಣಿಯನ್ನು ಕೂಡ ಬರೆದಿದ್ದೇನೆ.

--

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

--ಶ್ರೀನಿವಾಸಮೂರ್ತಿ

 

|| ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

ಕೇಳೀರ್ ಕೇಳ್ರವ್ವ ಕೇಳ್ರಣ್ಣೋ

ಇರೋದನ್ ಹೇಳ್ತೀನ್ರೋ

ತಪ್ ಇದ್ರೆ ತಿದ್ ನಡ್ಸ್ರೋ

|1| ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು

ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು

|2| ನಾಲ್ಕು ವರ‍್ಣಾಶ್ರಮ್ನ ಸಾಯ್ಸಿ ನಾಲ್ಕು ಕೆಲ್ಸುದ್ ಗುಂಪನ್ ಹುಟ್ಸುದ್ರು

ಅವ್ವವೇ ಕೆಲ್ಸ ತುಸು ಬ್ಯಾರೆ ಮಾಡಿ ಬ್ಯಾರೆ ಹೆಸ್ರುನ್ ಇಟ್ರು

|3| ವಿದ್ಯೆ ಅಕ್ಸರದಿಂದ್ ಬರುತ್ ಎಂದ್ರು

ನಮ್ ನೆಲ ಅಕ್ಸರದಿಂದ್ ದುಡ್ಡನ್ ಕೀಳೋ ಬೀಡಾಯ್ತು

|4| ಅವ್ರು ಇವ್ರುನ್ ಕೊಲ್ತಾರೆ

ಇವ್ರು ಅವ್ರುನ್ ಕೊಲ್ತಾರೆ

ಅವ್ರು ಅವ್ರನ್ನೇ ಕೊಲ್ತಾರೆ

ಇವ್ರು ಇವ್ರನ್ನೇ ಕೊಲ್ತಾರೆ

ಹುಟ್ಸೋದು ಸಾಯ್ಸೋದು ಇಲ್ಲಿ ಕಸುಬ್ ಆಗಯ್ತೆ

|5| ಜಾತಿ‌ -ದರ್ಮಕೂ ಕತ್ತಿ

ನುಡಿ-ಗುಡಿಗೂ ಕತ್ತಿ

ಮರ ಕಡಿಲಾಕೂ ಕತ್ತಿ

ನಾಡು-ನಾಡಿಯನ್ ಬ್ಯಾರೆ ಮಾಡೋಕು ಕತ್ತಿ

|6| ಬೆಳ್ಕಿಂದ್ ಕೊಳ್ಕು ಕಾಣ್ಸ್ತಾವೋ

ಕೊಳ್ಕಿಂದ್ ಕತ್ಲು ಕಾಣ್ಸ್ತಾವೋ

ಗೊತ್ತು ಗೊತ್ತಿದ್ರು ಕತ್ಲಿಗ್ ಬೀಳ್ತಾವ್ರೋ

|7| ಕಾಡು ನಾಡಿಗೆ ಪಿರಾಣ ಅಂತಾವ್ರೋ

ಪಿರಾಣವನ್ನೆ ಬರ‍್ಬಾತ್ ಮಾಡ್ತಾವ್ರೋ

ಉಸ್ರಿಗೂ ಊಸೇ ಮಾಡೋವ್ರೋ

|8| ಬಡ್ತನ ಗಿಡ್ತನ ಏನೂ ಇರಂಗಿಲ್ಲ್ ಅಂತಾರೋ

ಗೆಲ್ಸೀ ಗೆಲ್ಸಿ ಅಂತ್ ಬೇಡ್ತಾರೋ

ಯುವ್ವೇ! ಗೆದ್ ಮ್ಯಾಗೆ ಗಿಡುಗನಿಗಿಂತ್ ಅತ್ಲತ್ತಾನೋ

|9| ಸಮಾನತೆ ತರೋಣ್ ಬಂದ್ರೋ ಅವರ‍್ನ್ ನಂಬ್ ಬ್ಯಾಡ್ರೋ

ಯೇ ಸಮಾನತೆ ಕನ್ಸಿನ್ ಮಾತೋ ಅವರ‍್ನ್ ನಂಬ್ ಬ್ಯಾಡ್ರೋ

ಅಂತ್ ಕೂಗ್ ಕೂಗಿ ತಲೆ ಕೆಡ್ಸ್ತಾವ್ರೋ

|10| ತಬ್ಬು ತಬ್ಬಿಗೂ ಚಿನ್ನಾ ರನ್ನಾ ಎಂದ್ ಗುನುಗುತಾರೋ

ಮೋಜಿನ ಹಣ್ಣು ಬಿಡೋ ಹೊತ್ನಾಗೆ

ಇವ್ನ್/ ಇವ್ಳ್ದೆ ತಪ್ಪೆಂದು ತಿಪ್ಪೆ ಬಳಿತಾರೋ

ಜಗಳ್ ಬಯ್ಗುಳ್ ಆಗ್ತಯ್ತ್ರೋ/

ಒಪ್ಪುದ್ರೆ ನಂಟಿನ್ ಗಂಟ್ ಕುದುರ‍್ತಯ್ತ್ರೋ/

ಇಲ್ವೆ ದುಡ್ಡಿನ್ ಗಂಟ್ ಬಿಚ್ಬೇಕ್ರೋ

ಇಲ್ಲಿ ಮೂಲ್ಮೂಲೆಗೂ ಮಾಮೂಲ್ ಆಗಯ್ತ್ರೋ

|11| ನಿನ್ ಪಾಡ್ ನಿನ್ಗೆ

ನನ್ ಪಾಡ್ ನನ್ಗೆ

ಅಂತ್ ಗಂಡ್ಹೆಂಡೀರ್ ಕೂಸ್ನ ಬಿಕಾರಿ ಮಾಡ್ತಾವ್ರೋ

|12| ಯಾರ‍್ನ್ ನಂಬ್ ಯಾರ್ ತೆಕ್ಕೆಗ್ ಬೀಳ್ತಾವ್ರೋ

ಒಂದೂ ತಿಳಿದಂಗ್ ಆಗಯ್ತ್ರೋ

ಇವರದ್ ಮೋಸ್ದ್ ಮೋರೆ ನೋಡ್ರೋ

 

ಇರೋದನ್ ಹಾಂಗೆ ಹೇಳೀನ್ರೋ

ತಪ್ ಇದ್ರೆ ತಿದ್ ನಡ್ಸ್ರೋ

ಅಯ್ಯಾ ಅಕ್ಕಾ

ತಪ್ ಇದ್ರೆ ತಿದ್ ನಡ್ಸ್ರೋ

ಕಲಿ ಯುಗ್ದಾಗೆ ಕಲಿಲೇಬೇಕ್ರೋ

ಇನ್ನೂ ಅದಾವ್ ಕಾಣ್ರೋ

ಕಂಡಾಗ್ ಹಾಂಗೆ ತಿಳ್ಸ್ತೀನ್ರೋ

ತಪ್ ಇದ್ರೆ ತಿದ್ ನಡ್ಸ್ರೋ