ನಿರುದ್ಯೋಗ ನಿವಾರಣೆ ಮತ್ತು ಉದ್ಯೋಗ ಖಾತ್ರಿಯ ಭರವಸೆ: ನೂತನ ಆಲೋಚನೆ----

ಈ ನನ್ನ ಅನಿಸಿಕೆಗಳನ್ನು ತಾವು ಓದಿದಲ್ಲಿ ಮತ್ತು ಇಷ್ಟವೆಂದು ಅನಿಸಿದರೆ ಆಡಳಿತ ವರ್ಗಕ್ಕೆ ತಲುಪಿಸಿ ಮತ್ತು ಯುವಶಕ್ತಿಯು ಪ್ರಭಲವೆಂದು ಸಾರಿರಿ. 


ಇಂದು ನಮ್ಮ ದೇಶದ ಯುವಕರು ಶೈಕ್ಷಣಿಕ ಯಶಸ್ಸು ಮತ್ತು ವೃತ್ತಿಜೀವನದ ಆರಂಭದ ನಡುವೆ ಒಂದು ದೊಡ್ಡ ಕಂದಕವನ್ನು ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಅರ್ಹತಾ ಪದವಿಗಳನ್ನು ಗಳಿಸಿ ಹೊರಬರುತ್ತಿದ್ದರೂ, ಅವರು ಭಯಾನಕ ನಿರುದ್ಯೋಗ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು:

1. ನಿಯಮಿತ ಮತ್ತು ಸಾಕಷ್ಟು ಉದ್ಯೋಗಗಳ ಸೃಜನೆ ಆಗದಿರುವುದು.

2. ನೇಮಕಾತಿ ಪ್ರಕ್ರಿಯೆಗಳಲ್ಲಿನ ವಿಳಂಬ ಮತ್ತು ಪಾರದರ್ಶಕತೆಯ ಕೊರತೆ.

ಈ ಸವಾಲನ್ನು ನಿವಾರಿಸಲು, ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ಸರ್ಕಾರವು ಯುವಜನರಲ್ಲಿ ಭರವಸೆ ಮೂಡಿಸುವಂತಹ ದಿಟ್ಟ ಸುಧಾರಣೆಗಳನ್ನು ಜಾರಿಗೆ ತರುವುದು ಅಗತ್ಯವಿದೆ.

ಪರಿಣಾಮಕಾರಿ ಪರಿಹಾರಗಳಿಗಾಗಿ ಪ್ರಮುಖ ಅನಿಸಿಕೆಗಳು:

1. ಸಕಾಲಿಕವಾಗಿ ಉದ್ಯೋಗಗಳನ್ನು ಭರ್ತಿಗೊಳಿಸುವುದು ಮತ್ತು ನೇಮಕಾತಿ ಕ್ಯಾಲೆಂಡರ್ ಪ್ರಕಟಿಸುವುದು.

ಪ್ರತಿಯೊಂದು ಸರ್ಕಾರಿ ಇಲಾಖೆಗಳು ತಮ್ಮಲ್ಲಿ ಖಾಲಿಯಾಗುವ ಅಥವಾ ಖಾಲಿಯಾಗಲಿರುವ ಹುದ್ದೆಗಳ ಮಾಹಿತಿಯನ್ನು ಸಮಗ್ರ ನೇಮಕಾತಿ ಕ್ಯಾಲೆಂಡರ್ ಮೂಲಕ ಪ್ರತಿ ವರ್ಷ ಪ್ರಕಟಿಸಬೇಕು. ಈ ಕ್ಯಾಲೆಂಡರ್ ಪ್ರಕಾರವೇ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮತ್ತು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಇದು ವಿಳಂಬ ಮತ್ತು ಅನಗತ್ಯ ಗೊಂದಲಗಳನ್ನು ನಿವಾರಿಸುತ್ತದೆ.

2. ಅರ್ಹತಾ ಅಂಕ ಮತ್ತು 'ಭಾವಿತ (Notional) ನೇಮಕಾತಿ' ನೀತಿಯನ್ನು ಅನುಷ್ಠಾನಗೊಳಿಸುವುದು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾದ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ನೀಡಲು 'ಭಾವಿತ (Notional) ನೇಮಕಾತಿ' ಎಂಬ ಹೊಸ ನೀತಿಯನ್ನು ಅಳವಡಿಸಬೇಕು.

ನೇಮಕಾತಿ ಪರೀಕ್ಷೆಯ ಒಟ್ಟು ಹುದ್ದೆಗಳಿಗೆ ಸಮನಾಗಿ ಅರ್ಹತಾ ಅಂಕವನ್ನು ನಿಗದಿಪಡಿಸಬೇಕು.

ಈ ಅರ್ಹತಾ ಅಂಕಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲಾ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಿ, ಅವರಿಗೆ ತಕ್ಷಣವೇ ಭಾವಿತ ನೇಮಕಾತಿ (Notional Appointment ) ಆದೇಶವನ್ನು ನೀಡಬೇಕು. ಇದು ಅವರಿಗೆ ಉದ್ಯೋಗ ಅವಕಾಶವನ್ನು ಖಾತ್ರಿಪಡಿಸಿದಂತೆ ಆಗುವುದು.

 ಯಾವುದೇ ಒಂದು ಹುದ್ದೆಯು ನಿವೃತ್ತಿ, ರಾಜೀನಾಮೆ, ಅಥವಾ ಮರಣದಿಂದ ಖಾಲಿಯಾದಾಗ ಸರತಿ ಸಾಲಿನಲ್ಲಿರುವ ಭಾವಿತ ನೇಮಕಾತಿ ಪಡೆದ ಅಭ್ಯರ್ಥಿಗಳಿಗೆ ಆ ದಿನಾಂಕದಿಂದಲೇ ಜಾರಿಗೆ ಬರುವಂತೆ ವಾಸ್ತವ (Actual) ನೇಮಕಾತಿ ಆದೇಶವನ್ನು ನೀಡಬೇಕು.

ಈ ನೀತಿಯು ಅರ್ಹ ಅಭ್ಯರ್ಥಿಗಳಲ್ಲಿ ಹತಾಶೆಯನ್ನು ನಿವಾರಿಸಿ, ವಿಶ್ವಾಸವನ್ನು ಹೆಚ್ಚಿಸುತ್ತದೆ.

3. ಭಾವಿತ ನೇಮಕಾತಿಯ ವರ್ಗಾವಣೆ ನಿಯಮವೂ ಸಹ ಅನುಷ್ಠಾನಗೊಳ್ಳಬೇಕು.

ಭಾವಿತ ನೇಮಕಾತಿಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಲು, ಒಂದು ಪ್ರಮುಖ ನಿಯಮವನ್ನು ಪಾಲಿಸಬೇಕು:

ಅ. ಒಬ್ಬ ಅಭ್ಯರ್ಥಿಯು ಒಂದು ಭಾವಿತ ನೇಮಕಾತಿಯನ್ನು ಪಡೆದ ನಂತರ, ಮತ್ತೊಂದು ಉತ್ತಮ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ, ಅಲ್ಲಿಯೂ ಭಾವಿತ ನೇಮಕಾತಿ ಪಡೆದರೆ, ಹಿಂದಿನ ಭಾವಿತ ನೇಮಕಾತಿಯನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಬೇಕು.

ಆ. ಈ ರದ್ದಾದ ಹುದ್ದೆಯ ಭಾವಿತ ನೇಮಕಾತಿಯ ಅವಕಾಶವು ಅನುಕ್ರಮವಾಗಿ ಸರತಿಯಲ್ಲಿರುವ ಇತರೇ ಅರ್ಹ ಅಭ್ಯರ್ಥಿಗಳಿಗೆ ತಕ್ಷಣವೇ ವರ್ಗಾವಣೆಯಾಗಬೇಕು.

ಇ. ಅದೇ ರೀತಿ, ಭಾವಿತ ನೇಮಕಾತಿ ಪಡೆದ ಅಭ್ಯರ್ಥಿಯು ಮೃತರಾದರೂ ಇದೇ ನಿಯಮವನ್ನು ಪಾಲಿಸಬೇಕು.

ಈ ಕ್ರಮವು ಉದ್ಯೋಗದ ಅವಕಾಶಗಳು ಎಲ್ಲರಿಗೂ ಹಂಚಿಹೋಗುವಂತೆ ಖಚಿತಪಡಿಸುತ್ತದೆ.

ಈಗಾಗಲೇ  ಸರ್ಕಾರಿ ಸೇವಾ ನಿಯಮಾವಳಿಗಳಲ್ಲಿ ಭಾವಿತ ಆಧಾರಿತ ಕೆಲವು ನಿಯಮಗಳು ಮತ್ತು ಸವಲತ್ತುಗಳಿದ್ದು, ಇದೇ ಕಲ್ಪನೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೂ ಅನ್ವಯಿಸಬಹುದಲ್ಲವೆ? ಯೋಜಿಸಿ, ಯೋಚಿಸಿ!

4. ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆಯ ನಡುವೆ ಸಮನ್ವಯ ಸಾಧಿಸಲು ಕ್ರಮವಹಿಸುವುದು ಇಂದಿನ ಆಧ್ಯತೆಯಾಗಿರಲಿ.

ಪ್ರತಿಯೊಂದು ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸುವ ಕೋರ್ಸುಗಳು ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿರಬೇಕು.

ಕೇವಲ ಪದವಿಗಳನ್ನು ನೀಡುವುದಲ್ಲದೆ, ಪ್ರತಿ ಕೋರ್ಸ್‌ಗೆ ತಕ್ಕಂತೆ ಔದ್ಯೋಗಿಕ ಅವಕಾಶಗಳು ಅಥವಾ ಉದ್ಯಮಶೀಲತೆಯ ಸೃಜನೆಯನ್ನು ಖಾತ್ರಿಪಡಿಸಬೇಕು.

 ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ನಿಯಮಿತ ಸಹಭಾಗಿತ್ವವನ್ನು ಕಡ್ಡಾಯಗೊಳಿಸಬೇಕು. ಇದು ಪದವಿ ಮುಗಿಸಿದ ತಕ್ಷಣ ವಿದ್ಯಾರ್ಥಿಗಳಿಗೆ ಉದ್ಯೋಗ ಸಿದ್ಧತೆಯನ್ನು ಒದಗಿಸುತ್ತದೆ.

5. ಮೋಸ ಮತ್ತು ವಂಚನೆಯ ನಿಯಂತ್ರಣ ಮತ್ತು ಆರ್ಥಿಕ ಸುಭದ್ರತೆಗೆ ಕ್ರಮವಹಿಸುವುದು.

ಮೇಲಿನ ಪರಿಹಾರಗಳಾದ ಭಾವಿತ ನೇಮಕಾತಿ, ವರ್ಗಾವಣೆ ನಿಯಮಗಳು, ಮತ್ತು ಸಕಾಲಿಕ ನೇಮಕಾತಿಗಳನ್ನು ಜಾರಿಗೆ ತಂದರೆ, ಖಂಡಿತವಾಗಿಯೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಮೋಸ ಮತ್ತು ಅಕ್ರಮಗಳನ್ನು ಗಣನೀಯವಾಗಿ ನಿಯಂತ್ರಿಸಲು ಸಾಧ್ಯ. ಏಕೆಂದರೆ, ಅರ್ಹತಾ ಅಂಕ ಪಡೆದವರಿಗೆ ಖಾತ್ರಿ ಇದ್ದಾಗ, ಅನೈತಿಕ ದಾರಿಗಳ ಮೊರೆಹೋಗುವ ಪ್ರವೃತ್ತಿ ಕಡಿಮೆಯಾಗುತ್ತದೆ. 

ಉದ್ಯೋಗ ಖಾತ್ರಿ ದೊರೆತರೆ, ಶಿಕ್ಷಣ ಮತ್ತು ಕೌಶಲ್ಯದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ.

ಉದ್ಯೋಗಗಳಿಗಾಗಿ ಹಂಬಲಿಸುವ ಕ್ರಿಯಾಶೀಲ ಯುವಜನರ ನಿರೀಕ್ಷೆಗಳು ಈಡೇರಿದಾಗ, ಅವರಲ್ಲಿನ ಹತಾಶೆ ಮತ್ತು ಅಸಮಾಧಾನ ದೂರವಾಗುತ್ತದೆ.

********

ಈ ನನ್ನ ಅನಿಸಿಕೆಗಳನ್ನು ತಾವು ಓದಿದಲ್ಲಿ ಮತ್ತು ಇಷ್ಟವೆಂದು ಅನಿಸಿದರೆ ಆಡಳಿತ ವರ್ಗಕ್ಕೆ ತಲುಪಿಸಿ ಮತ್ತು ಯುವಶಕ್ತಿಯು ಪ್ರಭಲವೆಂದು ಸಾರಿರಿ. 

-------ವಂದನೆಗಳು